ಕುಂದಾಪುರ: ರೈಲಿನಲ್ಲಿ ಪ್ರಯಾಣಿಕರ ಮೊಬೈಲ್ ಕಳವು ಪ್ರಕರಣಕ್ಕೆ ಸಂಬಂಧಿಸಿ ಓರ್ವ ಆರೋಪಿಯನ್ನು ಬೈಂದೂರು ಪೊಲೀಸರು ಬಂಧಿಸಿ, ಮೂರು ಮೊಬೈಲ್ಗಳನ್ನು ವಶಪಡಿಸಿಕೊಂಡಿದ್ದಾರೆ.

ಐರೋಡಿ ಗ್ರಾಮದ ಸಾಸ್ತಾನ ಗೋಳಿಬೆಟ್ಟು ನಿವಾಸಿ ಪ್ರಹ್ಲಾದ್(32) ಬಂಧಿತ ಆರೋಪಿ. ಆ.2ರಂದು ರೊಬಿನ್ ಫೆರ್ನಾಂಡಿಸ್ ಎನ್ನುವರು ಮಂಗಳೂರಿನಿಂದ ಮಡಗಾಂವ್ ರೈಲಿನಲ್ಲಿ ಪ್ರಯಾಣಿಸುತ್ತಿದ್ದು ಬೆಳಗಿನ ಜಾವ 2 ಸುಮಾರಿಗೆ ಬೈಂದೂರು ರೈಲು ನಿಲ್ದಾಣದ ಬಳಿ ಅವರಲ್ಲಿದ್ದ 17,000ರೂ. ಮೌಲ್ಯದ ಮೊಬೈಲ್ ಫೋನ್ ರೈಲಿನಲ್ಲಿದ್ದ ವ್ಯಕ್ತಿಯು ಕಳವು ಮಾಡಿಕೊಂಡು ಹೋಗಿರುವುದಾಗಿ ದೂರಲಾಗಿತ್ತು.
ಆರೋಪಿ ಕಳವು ಮಾಡಿದ ಮೊಬೈಲ್ನಲ್ಲಿ ಯುಪಿಐ ಮೂಲಕ ಒಟ್ಟು 19,847ರೂ. ಹಣವನ್ನು ಅಕ್ರಮವಾಗಿ ವರ್ಗಾವಣೆ ಮಾಡಿಕೊಂಡಿರುವುದಾಗಿ ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಈ ಕುರಿತು ಬೈಂದೂರು ವೃತ್ತದ ಪೊಲೀಸ್ ನಿರೀಕ್ಷಕ ಶಿವಕುಮಾರ್ ಬಿ. ತನಿಖೆ ನಡೆಸಿ, ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾದರು. ಬಂಧಿತನಿಂದ ಪೊಲೀಸರು ಒಟ್ಟು ಮೂರು ಮೊಬೈಲ್ಗಳನ್ನು ವಶಪಡಿಸಿಕೊಂಡಿದ್ದಾರೆ.
ಆರೋಪಿ ಪ್ರಹ್ಲಾದ್ ಜೋಶಿ ನಾರಾಯಣ ನಾಯಕ್ ಎಂಬಾತನ ಜೊತೆ ಸೇರಿ ಬೈಂದೂರು ಸಮೀಪ ಆ.2, ಅ.13 ಮತ್ತು ಮಾ.6ರಂದು ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಪ್ರಯಾಣಿಕರ ಮೊಬೈಲ್ ಕಳವು ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ.
ಅಲ್ಲದೇ ಪ್ರಹ್ಲಾದ್ ವಿರುದ್ಧ ಕಾರವಾರ ಗ್ರಾಮೀಣ ಪೊಲೀಸ್ ಠಾಣೆ, ಬಂಟ್ವಾಳ ನಗರ ಪೊಲೀಸ್ ಠಾಣೆ, ಉಡುಪಿ ನಗರ ಪೊಲೀಸ್ ಠಾಣೆ, ಬ್ರಹ್ಮಾವರ ಪೊಲೀಸ್ ಠಾಣೆ, ಕೋಟ ಪೊಲೀಸ್ ಠಾಣೆ ಮತ್ತು ಕುಂದಾಪುರ ನಗರ ಪೊಲೀಸ್ ಠಾಣೆಗಳಲ್ಲಿ ವಿವಿಧ ಪ್ರಕರಣಗಳು ದಾಖಲಾಗಿವೆ.
ಈ ಕಾರ್ಯಾಚರಣೆಯಲ್ಲಿ ಬೈಂದೂರು ಉಪನಿರೀಕ್ಷಕರಾದ ಸುನಿಲ್ ಕುಮಾರ್ ಬಿ.ವೈ., ಮಹೇಶ್ ಪೂಜೇರ ಹಾಗೂ ಸಿಬ್ಬಂದಿ ಜಯರಾಮ, ಚಿದಾನಂದ ಮತ್ತು ಮಾಲಪ್ಪ ದೇಸಾಯಿ ಭಾಗವಹಿಸಿದ್ದಾರೆ. ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಲಯವು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ.
Comments are closed.