ಕರಾವಳಿ

ಬಾಬರಿ ಮಸೀದಿ ಧ್ವಂಸ ದಿನ ಹಿನ್ನೆಲೆ : ಕಾಸರಗೋಡಿನಲ್ಲಿ ಕಿಡಿಗೇಡಿಗಳ ಅಟ್ಟಹಾಸ : ಬಸ್ಸ್‌ಗಳಿಗೆ ಕಲ್ಲು ತೂರಾಟ

Pinterest LinkedIn Tumblr

ಮಂಗಳೂರು, ಡಿಸೆಂಬರ್.6 : ಅಯೋಧ್ಯೆಯಲ್ಲಿ ಬಾಬರಿ ಮಸೀದಿ ಧ್ವಂಸ ಮಾಡಿದ ದಿನವಾದ ಇಂದು ಕಾಸರಗೋಡಿನಲ್ಲಿ ಕಿಡಿಗೇಡಿಗಳು ಅಟ್ಟಹಾಸ ಮೆರೆದಿದ್ದು, ಜಿಲ್ಲೆಯ ಉಪ್ಪಳ ಮತ್ತು ಕುಂಬಳೆಯಲ್ಲಿ ಬಸ್ ಮತ್ತು ವಾಹನಗಳ ಮೇಲೆ ಕಲ್ಲೆಸೆದಿದ್ದಾರೆ.

ತಲಪಾಡಿಯಿಂದ ಹೊಸಂಗಡಿ ಮೂಲಕ ಆನೆಕಲ್ಲಿಗೆ ತೆರಳುತ್ತಿದ್ದ ಖಾಸಗಿ ಬಸ್ಸಿಗೆ ಕಡಂಬಾರ್ ಕಿಲೇರಿ ಎಂಬಲ್ಲಿ ಕಿಡಿಗೇಡಿಗಳು ಕಲ್ಲೆಸೆದ ಘಟನೆ ನಡೆದಿದ್ದು, ಬಸ್ಸಿನಲ್ಲಿದ್ದ ಪ್ರಯಾಣಿಕರು ಅಪಾಯದಿಂದ ಪಾರಾಗಿದ್ದಾರೆ.

ಉಪ್ಪಳ ಹಿದಾಯತ್‌ನಗರದಲ್ಲಿ ಮಂಗಳೂರು ಕಡೆಗೆ ತೆರಳುತ್ತಿದ್ದ ಲಾರಿ ಮೇಲೆ ದುಷ್ಕರ್ಮಿಗಳು ಕಲ್ಲೆಸೆದ ಘಟನೆ ಬೆಳಗ್ಗೆ ನಡೆದಿದೆ. ಉಪ್ಪಳ ಕೈಕಂಬದಲ್ಲಿ ಬೈಕಿನಲ್ಲಿ ಬಂದ ತಂಡವು ಕರ್ನಾಟಕ ಕೆಎಸ್‌ಆರ್‌ಟಿಸಿ ಬಸ್ಸಿಗೆ ಕಲ್ಲೆಸೆದು ಪರಾರಿಯಾಗಿದೆ.

ಬಸ್ಸಿನ ಗಾಜು ಹುಡಿಯಾಗಿದ್ದು, ಪ್ರಯಾಣಿಕರು ಅಪಾಯದಿಂದ ಪಾರಾಗಿದ್ದಾರೆ. ಕುಂಬಳೆ ಆರಿಕ್ಕಾಡಿಯಲ್ಲಿ ಬೈಕ್‌ನಲ್ಲಿ ಬಂದ ತಂಡ ಮಿನಿಬಸ್ಸಿಗೆ ಕಲ್ಲೆಸೆದ ಘಟನೆ ನಡೆದಿದೆ. ಉಪ್ಪಳ-ಬಾಯಾರು ರೂಟಿನಲ್ಲಿ ಬಸ್ಸು ಸಂಚಾರ ಸಂಪೂರ್ಣ ಸ್ಥಗಿತಗೊಂಡಿದೆ.

ಉಳಿದ ರೂಟ್‌ಗಳಲ್ಲಿ ಬಸ್ಸು ಸಂಚಾರ ವಿರಳವಾಗಿದೆ. ಅಹಿತಕರ ಘಟನೆ ಮರುಕಳಿಸದಂತೆ ಉಪ್ಪಳ, ಕುಂಬಳೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪೊಲೀಸರು ಮುಂಜಾಗ್ರತಾ ಕ್ರಮ ತೆಗೆದುಕೊಂಡಿದ್ದಾರೆ.

Comments are closed.