ಕರಾವಳಿ

ಬೋಳಾರ ನಾರಾಯಣ ಶೆಟ್ಟಿ ಸಂಸ್ಮರಣೆ – ಪ್ರಶಸ್ತಿ ಪ್ರದಾನ : ಸಂಪಾಜೆ ಶಿಸ್ತುಬದ್ಧ ಕಲಾವಿದ : ಒಡಿಯೂರು ಶ್ರೀ

Pinterest LinkedIn Tumblr

ಮಂಗಳೂರು : ‘ಕಲಾವಿದರ ಜೀವನದಲ್ಲಿ ಶಿಸ್ತು ಮತ್ತು ಕರ್ತವ್ಯ ನಿಷ್ಠೆ ಬಹು ಮುಖ್ಯ. ಸಂಪಾಜೆ ಶೀನಪ್ಪ ರೈ ಯವರಲ್ಲಿ ಇವೆರಡೂ ಇವೆ. ಅವರು ಶಿಸ್ತುಬದ್ಧ ಕಲಾವಿದರು. ಕಲೆಯನ್ನು ಆರಾಧಿಸಿದವರು. ಜೇಡ ಬಲೆ ಹೆಣೆದರೂ ಬಲೆಯೊಳಗೆ ಸಿಕ್ಕಿ ಬೀಳುವುದಿಲ್ಲ. ಅಂತೆಯೇ ರೈ ಅವರು ಯಕ್ಷಗಾನ ಕ್ಷೇತ್ರದಲ್ಲಿ 60 ವರ್ಷಗಳ ದಾಖಲೆ ಸೇವೆ ಸಲ್ಲಿಸಿಯೂ ಯಾವುದೇ ಜಂಟಾಟಗಳಿಗೆ ಸಿಲುಕಿಲ್ಲ’ ಎಂದು ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದ ಶ್ರೀ ಗುರುದೇವಾನಂದ ಸ್ವಾಮೀಜಿ ಹೇಳಿದ್ದಾರೆ.

ದಿ| ಬೋಳಾರ ನಾರಾಯಣ ಶೆಟ್ಟಿ ಯಕ್ಷ ಪ್ರತಿಷ್ಠಾನದ ವತಿಯಿಂದ ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದ ಜ್ಞಾನಮಂದಿರದಲ್ಲಿ ಜರಗಿದ ೮ನೇ ವರ್ಷದ `ಬೋಳಾರ ನಾರಾಯಣ ಶೆಟ್ಟಿ ಸಂಸ್ಮರಣೆ ಮತ್ತು ಪ್ರಶಸ್ತಿ ಪ್ರದಾನ’ ಸಮಾರಂಭದಲ್ಲಿ ಹಿರಿಯ ಯಕ್ಷಗಾನ ಕಲಾವಿದ ಸಂಪಾಜೆ ಶೀನಪ್ಪ ರೈ ಯವರಿಗೆ ೨೦೧೬-೧೭ನೇ ಸಾಲಿನ ‘ಬೋಳಾರ ಪ್ರಶಸ್ತಿ’ ಪ್ರದಾನ ಮಾಡಿ ಅವರು ಆಶೀರ್ವಚನ ನೀಡಿದರು. ಮಾಣಿಲ ಶ್ರೀಧಾಮ ಶ್ರೀ ಲಕ್ಷ್ಮೀ ಕ್ಷೇತ್ರದ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ ಸಾನಿಧ್ಯ ವಹಿಸಿದ್ದರು.

ಬೋಳಾರ ಸಂಸ್ಮರಣೆ ಗೈದ ವಿಶ್ವಸ್ಥ ಮಂಡಳಿ ಸದಸ್ಯ ಪ್ರೊ| ಭಾಸ್ಕರ ರೈ ಕುಕ್ಕುವಳ್ಳಿ ಮಾತನಾಡಿ `ತೆಂಕುತಿಟ್ಟು ಯಕ್ಷಗಾನದ ಕನ್ನಡ ಮತ್ತು ತುಳು ಪ್ರಸಂಗಗಳ ನಾಯಕ ಹಾಗೂ ಖಳನಾಯಕ ಪಾತ್ರಗಳಿಗೆ ಮಾದರಿ ಶಿಲ್ಪವನ್ನೊದಗಿಸಿದ ದೈತ್ಯ ಪ್ರತಿಭೆ ಬೋಳಾರ ನಾರಾಯಣ ಶೆಟ್ಟರು. ಅವರ ಕಂಸ, ಭಸ್ಮಾಸುರ, ಹಿರಣ್ಯಕಶ್ಯಪ, ರಾವಣ, ಭೀಮ, ಬಾಹುಬಲಿ, ಕೋಟಿ, ಕೋರ್‍ದಬ್ಬು, ದೇವುಪೂಂಜ, ಕೊಡ್ಸರಾಳ್ವ, ದಳವಾಯಿ ದುಗ್ಗಣ್ಣ ಪಾತ್ರಗಳು ಜನಮಾನಸದಲ್ಲಿ ಚಿರಸ್ಥಾಯಿಯಾಗಿವೆ. ಶತಮಾನ ಕಳೆದರೂ ಅವರು ಕಟೆದ ಪಾತ್ರಶಿಲ್ಪ ಯಕ್ಷರಂಗದ ಇತಿಹಾಸದಲ್ಲಿ ದಾಖಲೆಯಾಗಿ ಉಳಿಯುತ್ತದೆ’ ಎಂದು ನುಡಿದರು.

ಸಮ್ಮಾನಕ್ಕೆ ಉತ್ತರಿಸಿದ ಸಂಪಾಜೆ ಶೀನಪ್ಪ ರೈ ಅವರು `ಕಳೆದ ಬಾರಿ ತಾನು ಮುಖ್ಯಮಂತ್ರಿಯವರಿಂದ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಸ್ವೀಕಾರ ಮಾಡಿದ್ದರೂ ಬೋಳಾರರ ಹೆಸರಿನ ಪ್ರಶಸ್ತಿ ಅದಕ್ಕಿಂತ ಹೆಚ್ಚಿನದು’ ಎಂದರು.

ವಿಶ್ವ ಹಿಂದೂ ಪರಿಷತ್ ಜಿಲ್ಲಾಧ್ಯಕ್ಷ ಜಗದೀಶ ಶೇಣವ, ಮುಂಬಯಿ ಗುರುಸೇವಾ ಬಳಗದ ಅಧ್ಯಕ್ಷ ಕೃಷ್ಣ ಎಲ್. ಶೆಟ್ಟಿ, ಮುಂಬಯಿ ನೆರೂಳ್ ಅಯ್ಯಪ್ಪ ಸ್ವಾಮಿ ದೇವಸ್ಥಾನದ ಅಧ್ಯಕ್ಷ ಕಿಶೋರ್ ಕುಮಾರ್ ಎಂ. ಶೆಟ್ಟಿ, ದೋಹಾ ಕತಾರ್‌ನ ಉದ್ಯಮಿ ಹಾಗೂ ಬೋಳಾರ ಪ್ರತಿಷ್ಠಾನದ ಸಂಚಾಲಕ ಬೋಳಾರ ಕರುಣಾಕರ ಶೆಟ್ಟಿ, ಗೀತಾ ಕರುಣಾಕರ ಶೆಟ್ಟಿ, ಟ್ರಸ್ಟ್ ಸದಸ್ಯರಾದ ವಾಸುದೇವ ಆರ್. ಕೊಟ್ಟಾರಿ, ಕಿಶನ್ ಶೆಟ್ಟಿ, ಕೀರ್ತನ್ ಶೆಟ್ಟಿ ಉಪಸ್ಥಿತರಿದ್ದರು.

ಒಡಿಯೂರು ಶ್ರೀ ಗುರುದೇವ ಗ್ರಾಮ ವಿಕಾಸ ಯೋಜನೆಯ ಸಂಚಾಲಕ ಟಿ. ತಾರಾನಾಥ ಕೊಟ್ಟಾರಿ ಸ್ವಾಗತಿಸಿದರು. ಕದ್ರಿ ನವನೀತ ಶೆಟ್ಟಿ ಪ್ರಶಸ್ತಿ ಪುರಸ್ಕೃತರನ್ನು ಅಭಿನಂದಿಸಿದರು. ದಿನಕರ ಶೆಟ್ಟಿ ಪ್ರಶಸ್ತಿ ಪತ್ರ ವಾಚಿಸಿದರು. ಅಧ್ಯಾಪಕ ಜಯಪ್ರಕಾಶ್ ಶೆಟ್ಟಿ ವಂದಿಸಿದರು. ಗ್ರಾಮ ವಿಕಾಸ ಯೋಜನೆಯ ಮೇಲ್ವಿಚಾರಕ ಸದಾಶಿವ ಅಳಿಕೆ ಕಾರ್ಯಕ್ರಮ ನಿರೂಪಿಸಿದರು. ರಾತ್ರಿ ಪ್ರತಿಷ್ಠಾನದ ವತಿಯಿಂದ ಎಡನೀರು ೨ನೇ ಮೇಳದ ಕಲಾವಿದರಿಂದ ‘ಮಧುಚಕ್ರ – ಗರುಡೋದ್ಭವ’ ಬಯಲಾಟ ಜರಗಿತು.

Comments are closed.