ಕರಾವಳಿ

ಕರಾವಳಿ ಕಾವಲು ಪಡೆಯ ಕ್ಷಿಪ್ರ ಕಾರ್ಯಾಚರಣೆ : ಮಲ್ಪೆ ಬಳಿ ಓಖಿ ಚಂಡಮಾರುತಕ್ಕೆ ಸಿಲುಕಿದ್ದ 13 ಮಂದಿ ಮೀನುಗಾರರ ರಕ್ಷಣೆ

Pinterest LinkedIn Tumblr

ಮಂಗಳೂರು, ಡಿಸೆಂಬರ್. 6: ಓಖಿ ಚಂಡಮಾರುತಕ್ಕೆ ಸಿಲುಕಿ ಆಳ ಸಮುದ್ರದಲ್ಲಿ ಅಪಾಯದ ಸ್ಥಿತಿಯಲ್ಲಿದ್ದ 13 ಮಂದಿ ಮೀನುಗಾರರನ್ನು ಕರಾವಳಿ ಕಾವಲು ಪಡೆ ಸಿಬ್ಬಂದಿಗಳು ರಕ್ಷಿಸಿದ್ದಾರೆ.

ಉಡುಪಿ ಸಮೀಪದ ಮಲ್ಪೆ ಆಳ ಸಮುದ್ರದಲ್ಲಿ ಓಖಿ ಚಂಡಮಾರುತಕ್ಕೆ ಸಿಲುಕಿ ಅಪಾಯದ ಸ್ಥಿತಿಯಲ್ಲಿದ್ದ ಕೇರಳ ಮೀನುಗಾರಿಕಾ ಬೋಟ್ನಲ್ಲಿದ್ದ ಮೀನುಗಾರರನ್ನು ಬುಧವಾರ ಬೆಳಿಗ್ಗೆ ಕರಾವಳಿ ಕಾವಲು ಪಡೆ ಸಿಬ್ಬಂದಿಗಳು ಕ್ಷಿಪ್ರ ಕಾರ್ಯಾಚರಣೆ ನಡೆಸಿ ರಕ್ಷಿಸಿದ್ದಾರೆ.

ಮಲ್ಪೆಯಿಂದ 10 ನಾಟಿಕಲ್ ಮೈಲು ದೂರದ ಆಳ ಸಮುದ್ರದಲ್ಲಿ ಮೀನುಗಾರಿಕಾ ಬೋಟ್ನಲ್ಲಿದ್ದ 13 ಮಂದಿ ಮೀನುಗಾರರು ಅಪಾಯದಲ್ಲಿದ್ದಾರ ಎಂಬ ಬಗ್ಗೆ ಕಾವಲು ಪಡೆಗೆ ಮಾಹಿತಿ ಸಿಕ್ಕಿದ್ದು, ಕೂಡಲೇ ಕಾರ್ಯಪ್ರವೃತರಾದ ಕರಾವಳಿ ಕಾವಲು ಪಡೆ ಸಿಬ್ಬಂದಿಗಳು ಕಾರ್ಯಾಚರಣೆ ನಡೆಸಿ 13 ಮಂದಿ ಮೀನುಗಾರರನ್ನು ರಕ್ಷಿಸಿದ್ದಾರೆ.

ಕೇರಳದ ಕೊಚ್ಚಿಯಿಂದ ನವೆಂಬರ್ 7ರಂದು ಬಾರಾಕುಡ ಎಂಬ ಹೆಸರಿನ ಬೋಟ್ ಮೀನುಗಾರಿಕೆಗೆಂದು ಸಮುದ್ರಕ್ಕಿಳಿದಿತ್ತು. ಮೀನುಗಾರಿಕೆ ಮಾಡುತ್ತಾ ಕರ್ನಾಟಕದ ಸೀಮೆ ದಾಟಿ ಬರುವಾಗ ಓಖಿ ಚಂಡಮಾರುತದ ಪ್ರಭಾವ ಜೋರಾಯಿತು.

ನ.27ರಂದು ಕಡಲಲೆಗಳ ಅಬ್ಬರ ಜೋರಾಗಿ, ಬಿರುಗಾಳಿಗೆ ಬೋಟ್ ಸಿಲುಕಿತ್ತು. ಡಿ.2ರಂದು ಬೋಟ್ ಒಳಗೆ ನೀರು ನುಗ್ಗಲಾರಂಭಿಸಿತು. ಈ ವೇಳೆ ಅಪಯದಂಚಿನಲ್ಲಿದ್ದ ಮೀನುಗಾರರ ಬಗ್ಗೆ ಮಾಹಿತಿ ಸಿಕ್ಕಿದ ತಕ್ಷಣ ಕರಾವಳಿ ಕಾವಲು ಪಡೆ ಸಿಬ್ಬಂದಿಗಳು ಸ್ಥಳಕ್ಕೆ ತೆರಳಿ ಮೀನುಗಾರರನ್ನು ರಕ್ಷಿಸಿದ್ದಾರೆ.

ಆಹಾರ ಸಿಗದೆ ಕಂಗಾಲು :ಬೋಟ್ನ ಸಹ ಮಾಲಕ ಸ್ಟಾಲಿನ್

ನ.27ರಂದು ಬೋಟ್ ಬಿರುಗಾಳಿಗೆ ಸಿಲುಕಿತ್ತು. ನಮಗೆ ಯಾವುದೇ ಸಂಪರ್ಕ ಸಾಧ್ಯವಾಗಲಿಲ್ಲ. ಮೂರ್ನಾಲ್ಕು ದಿನ ಕಳೆದಾಗ ನೀರು ಬೋಟ್ನೊಳಗೆ ನುಗ್ಗಲು ಪ್ರಾರಂಭಿಸಿತು. ನಾವು ಬದುಕುಳಿಯುವ ಭರವಸೆ ಕ್ಷೀಣಿಸತೊಡಗಿತು. ಕೆಲವು ದಿನಗಳ ಕಾಲ ನಿರಂತರ ಬೋಟ್ನಿಂದ ನೀರು ಹೊರ ಚೆಲ್ಲುತ್ತಲೇ ಇದ್ದೆವು.

ಇನ್ನೊಂದು ಕಡೆ ಚಂಡಮಾರುತಕ್ಕೆ ಬೋಟ್ ಸಿಲುಕಿದ ಬಳಿಕ ನಮ್ಮಲ್ಲಿದ್ದ ಆಹಾರ ಖಾಲಿಯಾಗಿತ್ತು. ಆಹಾರ ಸಿಗದೆ ಕಂಗಾಲಾದೆವು. ಈ ನಡುವೆ ಹಸಿದ ಹೊಟ್ಟೆಯಲ್ಲೇ ಬೋಟ್ನೊಳಗೆ ಸೇರುತ್ತಿದ್ದ ನೀರನ್ನು ಹೊರಹಾಕುವುದೇ ನಮಗೆ ತ್ರಾಸದಾಯಕವಾಗಿತ್ತು ಎಂದು ಅಪಾಯಕ್ಕೆ ಸಿಲುಕಿದ್ದ ಬೋಟ್ನ ಸಹ ಮಾಲಕ ಸ್ಟಾಲಿನ್ ಹೇಳಿದ್ದಾರೆ.

Comments are closed.