ಕರಾವಳಿ

ಚಂಡಮಾರುತಕ್ಕೆ ಸಿಲುಕಿದ್ದ ತಮಿಳುನಾಡು,ಅಸ್ಸಾಂ ಹಾಗೂ ಕೇರಳದ ಮೀನುಗಾರರ ರಕ್ಷಣೆ : ಕಮಾಂಡರ್ ಎಸ್.ಎಸ್. ದಸಿಲಾ

Pinterest LinkedIn Tumblr

ಮಂಗಳೂರು, ಡಿಸೆಂಬರ್. 6: ಉಡುಪಿ ಜಿಲ್ಲೆಯ ಮಲ್ಪೆ ಆಳ ಸಮುದ್ರದಲ್ಲಿ ಓಖಿ ಚಂಡಮಾರುತಕ್ಕೆ ಸಿಲುಕಿ ಅಪಾಯದ ಸ್ಥಿತಿಯಲ್ಲಿದ್ದ ತಮಿಳುನಾಡಿನ ಕನ್ಯಾಕುಮಾರಿಯ 9 ಮಂದಿ, ಅಸ್ಸಾಂನ ಒಬ್ಬ ಹಾಗೂ ಕೇರಳದ ಮೂವರು ಕಾರ್ಮಿಕರು ಸೇರಿದಂತೆ 13 ಮಂದಿ ಮೀನುಗಾರರನ್ನು ರಕ್ಷಿಸಲಾಗಿದೆ ಎಂದು ಕರ್ನಾಟಕ ಕರಾವಳಿ ಕಾವಲು ಪಡೆಯ ಕಮಾಂಡರ್ ಎಸ್.ಎಸ್. ದಸಿಲಾ ಅವರು ತಿಳಿಸಿದ್ದಾರೆ.

ಬುಧವಾರ ತಮ್ಮ ಕಚೇರಿಯಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ ಅವರು, ಮಲ್ಪೆಯಿಂದ 10 ನಾಟಿಕಲ್ ಮೈಲು ದೂರದ ಆಳ ಸಮುದ್ರದಲ್ಲಿ ಮೀನುಗಾರಿಕಾ ಬೋಟ್ನಲ್ಲಿದ್ದ 13 ಮಂದಿ ಮೀನುಗಾರರು ಅಪಾಯದಲ್ಲಿದ್ದಾರ ಎಂಬ ಬಗ್ಗೆ ಬುಧವಾರ ಬೆಳಿಗ್ಗೆ ಕಾವಲು ಪಡೆಗೆ ಮಾಹಿತಿ ಸಿಕ್ಕಿದ ಕೂಡಲೇ ಕ್ಷಿಪ್ರ ಕಾರ್ಯಾಚರಣೆ ನಡೆಸಿ ರಕ್ಷಿಸಿರುವುದಾಗಿ ಹೇಳಿದರು.

ಕೇರಳದ ಕೊಚ್ಚಿಯಿಂದ ನವೆಂಬರ್ 7ರಂದು ಬಾರಾಕುಡ ಎಂಬ ಹೆಸರಿನ ಬೋಟ್ ಮೀನುಗಾರಿಕೆಗೆಂದು ಸಮುದ್ರಕ್ಕಿಳಿದಿತ್ತು. ಮೀನುಗಾರಿಕೆ ಮಾಡುತ್ತಾ ಕರ್ನಾಟಕದ ಸೀಮೆ ದಾಟಿ ಬರುವಾಗ ಓಖಿ ಚಂಡಮಾರುತದ ಪ್ರಭಾವ ಜೋರಾಯಿತು. ನ.27ರಂದು ಕಡಲಲೆಗಳ ಅಬ್ಬರ ಜೋರಾಗಿ, ಬಿರುಗಾಳಿಗೆ ಬೋಟ್ ಸಿಲುಕಿತ್ತು.

ಡಿ.2ರಂದು ಬೋಟ್ ಒಳಗೆ ನೀರು ನುಗ್ಗಲಾರಂಭಿಸಿತು. ಅಪಾಯ ಅರಿತ ಕಾರ್ಮಿಕರು ಮುನ್ನೆಚ್ಚರಿಕೆಯಾಗಿ ತಮ್ಮಲ್ಲಿದ್ದ ಪರಿಕರಗಳಿಂದ ಬೋಟಿನಲ್ಲಿ ಸೇರುತ್ತಿದ್ದ ನೀರನ್ನು ಹೊರ ಹಾಕಲು ಪ್ರಾಂಭಿಸಲಾಗಿದೆ. ಬೋಟ್ನ ಎಂಜಿನ್ನ ಕಾರ್ಯ ಸ್ಥಗಿತಗೊಂಡಿಕು. ವೈರ್ಲೆಸ್ ಸಂಪರ್ಕವೂ ಕಡಿತದು ಹೋಯಿತು. ಇದಾಗಿ ನಾಲ್ಕು ದಿನಗಳ ಬಳಿಕ ಅಚಾನಕ್ಕಾಗಿ ಸಿಕ್ಕಿದ ಮೊಬೈಲ್ ಸಿಗ್ನಲ್ನಿಂದಾಗಿ ಕೇರಳದಲ್ಲಿದ್ದ ತಮ್ಮ ಮೀನುಗಾರ ಸ್ನೇಹಿತರನ್ನು ಸಂಪರ್ಕಿಸಿದರು. ಕೂಡಲೆ ಅವರು ಕೇರಳದ ಕೋಸ್ಟ್ಗಾರ್ಡ್ ಸಿಬ್ಬಂದಿಗೆ ವಿಷಯ ತಿಳಿಸಿ, ಅಲ್ಲಿಂದ ಕರ್ನಾಟಕ ಕೋಸ್ಟ್ ಗಾರ್ಡ್ಗೆ ಕರೆ ಬಂತು ಎಂದು ಕಮಾಂಡರ್ ಎಸ್.ಎಸ್. ದಸಿಲಾ ವಿವರಿಸಿದರು.

ಬುಧವಾರ ಬೆಳಗ್ಗೆ 7.15ರ ವೇಳೆಗೆ ನಮಗೆ ಮಾಹಿತಿ ಸಿಕ್ಕಿತು. ತಕ್ಷಣ ಕಾರ್ಯ ಪ್ರವೃತ್ತರಾಗಿ ಅಮರ್ತ್ಯ ರಕ್ಷಣಾ ಹಡಗನ್ನು ಸ್ಥಳಕ್ಕೆ ಕಳುಹಿಸಲಾಯಿತು. 2 ಗಂಟೆಗಳಲ್ಲಿ 10 ನಾಟಿಕಲ್ ಮೈಲು ದೂರದಲ್ಲಿದ್ದ ಬೋಟ್ ಇದ್ದ ಸ್ಥಳ ತಲುಪಿ ಎಲ್ಲ 13 ಮಂದಿ ಕಾರ್ಮಿಕರನ್ನು ರಕ್ಷಿಸಲಾಗಿದೆ. ಬಳಿಕ ಕಾರ್ಮಿಕರನ್ನು ರಕ್ಷಿಸಿದ ಬಳಿಕ ಮೀನುಗಾರಿಕಾ ಬೋಟ್ನ್ನು ಮಲ್ಪೆ ಖಾಸಗಿ ಬೋಟ್ನ ನೆರವಿನಿಂದ ಮಲ್ಪೆ ತೀರಕ್ಕೆ ತರಲಾಯಿತು ಎಂದವರು ತಿಳಿಸಿದರು.

ಅಮಾರ್ತ್ಯ ರಕ್ಷಣಾ ಹಡಗಿನ ಕ್ಯಾಪ್ಟನ್ ಕಮಾಂಡೆಂಟ್ ಅನಿಕೇತ್ ಸಿಂಗ್, ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದ ಕೋಸ್ಟ್ ಗಾರ್ಡ್ ಸಿಬ್ಬಂದಿ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

Comments are closed.