ಕರಾವಳಿ

ಕುಂದಾಪುರ: ಪರಿವರ್ತನಾ ಯಾತ್ರೆ ಬ್ಯಾನರ್ ವಿಚಾರದಲ್ಲಿ ಬಣ ರಾಜಕೀಯ!

Pinterest LinkedIn Tumblr

ಕುಂದಾಪುರ: ಇದೇ ನವೆಂಬರ್ 13 ರಂದು ಕುಂದಾಪುರಕ್ಕೆ ನವಕರ್ನಾಟಕ ನಿರ್ಮಾಣಕ್ಕಾಗಿ ಪರಿವರ್ತನಾ ಯಾತ್ರೆ ಆಗಮಿಸಲಿದ್ದು ಇದಕ್ಕೆ ಸಕಲ ತಯಾರಿಗಳು ನಡೆಯುತ್ತಿರುವ ಬೆನ್ನಲ್ಲೇ ಬ್ಯಾನರ್ ವಿಚಾರದಲ್ಲಿ ಬಿಜೆಪಿಯೊಳಗಿನ ಭಿನ್ನಮತ ಮತ್ತಷ್ಟು ಬುಗಿಲೆದ್ದಿದೆ.

ರ್‍ಯಾಲಿಗೆ ಸ್ವಾಗತ ಕೋರುವ ಬ್ಯಾನರ್‌ಗಳಲ್ಲಿ ಕುಂದಾಪುರ ಪಕ್ಷೇತರ ಶಾಸಕ ಹಾಲಾಡಿ ಶ್ರೀನಿವಾಸ್ ಶೆಟ್ಟಿ ಫೋಟೋಗಳನ್ನು ಹಾಕಿದ್ದು ಇದು ಮೂಲ ಬಿಜೆಪಿಗರೆಂದು ಗುರುತಿಸಿಕೊಂಡ ಒಂದು ಬಣದ ಸಿಟ್ಟಿಗೆ ಕಾರಣವಾಗಿದೆ. ಪಕ್ಷೇತರ ಶಾಸಕರ ಫೋಟೋ ಹಾಕುವ ಅಗತ್ಯವೇನಿತ್ತು ಎಂಬ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಬಿಸಿಬಿಸಿ ಚರ್ಚೆಯೂ ನಡೆಯುತ್ತಿದೆ. ಆದರೇ ತಾನು ಯಾರಿಗೂ ಫೋಟೋ ಅಳವಡಿಸಲು ಹೇಳಿಲ್ಲ. ಅಭಿಮಾನದಿಂದ ಅವರು ಫೋಟೋ ಹಾಕಿದ್ದು ತೆಗೆಯುವಂತೆ ಹೇಳುವುದು ಸರಿಯಲ್ಲ ಎಂದು ಹಾಲಾಡಿ ಸ್ಪಷ್ಟನೆ ನೀಡಿದ್ದಾರೆ. ತಾಂತ್ರಿಕ ಕಾರಣಗಳಿಂದ ಪಕ್ಷಕ್ಕೆ ಅಧಿಕೃತವಾಗಿ ಸೇರುವುದು ಕಷ್ಟವಾಗಿದ್ದು ಪರಿವರ್ತನಾ ರ್‍ಯಾಲಿ ಕಾರ್ಯಕ್ರಮಕ್ಕೆ ಆಗಮಿಸುವೆ ಆದರೇ ವೇದಿಕೆ ಏರಲ್ಲ ಎಂದು ಅವರು ತಿಳಿಸಿದ್ದಾರೆ. ಅಲ್ಲದೇ ತನ್ನ ತೀರ್ಮಾನವನ್ನು ಒಂದೆರಡು ದಿನಗಳಲ್ಲಿ ಪತ್ರಿಕಾಗೋಷ್ಠಿ ನಡೆಸಿ ಬಹಿರಂಗಪಡಿಸುವೆ ಎಂದರು.

ಇತ್ತೀಚೆಗಷ್ಟೇ ಪಕ್ಷಕ್ಕೆ ಬಂದ ಮಾಜಿ ಸಚಿವ ಕೆ. ಜಯಪ್ರಕಾಶ್ ಹೆಗ್ಡೆ ಭಾವಚಿತ್ರವನ್ನು ಕೆಲವು ಬ್ಯಾನರುಗಳಲ್ಲಿ ಹಾಕಿಲ್ಲ ಎಂಬ ಬಗ್ಗೆ ಹೆಗ್ಡೆ ಬೆಂಬಲಿಗರು ಕೂಡ ಗರಂ ಆಗಿದ್ದಾರೆ.

ಒಟ್ಟಿನಲ್ಲಿ ಬಿಜೆಪಿ ಒಳಗಿನ ಆಂತರಿಕ ಕಲಹವು ರ್‍ಯಾಲಿಯ ಮೇಲೆ ಪರಿಣಾಮ ಬೀರುವ ಸಾಧ್ಯತೆಗಳಿದ್ದು ಇದನ್ನು ಹಿರಿಯ ಮುಖಂಡರು ಹೇಗೆ ಬಗೆಹರಿಸುತ್ತಾರೆಂಬುದು ಈಗಿರುವ ಯಕ್ಷ ಪ್ರಶ್ನೆಯಾಗಿದೆ.

 

Comments are closed.