ಕರಾವಳಿ

ಪಲ್ಗುಣಿ ನದಿಯಲ್ಲಿ ಆಟ ಆಡಲು ತೆರಳಿದ ಐವರು ಬಾಲಕರು ನಾಪತ್ತೆ : ಓರ್ವನ ಶವ ಪತ್ತೆ

Pinterest LinkedIn Tumblr

ಬಂಟ್ವಾಳ, ನವೆಂಬರ್. 7: ಬಂಟ್ವಾಳ ತಾಲೂಕಿನ ಅರಳ ಗ್ರಾಮದ ಮುಲಾರಪಟ್ನದಲ್ಲಿನ ಪಲ್ಗುಣಿ ನದಿಯಲ್ಲಿ ಆಟ ಆಡಲು ತೆರಳಿದ ಐವರು ಬಾಲಕರು ನಾಪತ್ತೆಯಾಗಿರುವ ಘಟನೆ ನಡೆದಿದ್ದು, ಓರ್ವನ ಮೃತದೇಹ ಪತ್ತೆಯಾಗಿದೆ.

ನಾಪತ್ತೆಯಾದ ಬಾಲಕರನ್ನು ಮುಲಾರಪಟ್ನ ಶುಂಟಿಹಿತ್ಲು ನಿವಾಸಿ ಗಳಾದ ಆಶ್ರಫ್ ಎಂಬವರ ಪುತ್ರ ಅಸ್ಲಾಮ್ (17), ಶರೀಫ್ ಎಂಬವರ ಪುತ್ರ ರಮೀಝ್ (17), ಹಂಝ ಎಂಬವರ ಪುತ್ರ ಅಜಮಾತ್ (18), ಶರೀಫ್ ಎಂಬವರ ಪುತ್ರ ಮುಬಶ್ಶಿರ್ (17) ಎಂದು ಹೆಸರಿಸಲಾಗಿದೆ.

ಮೃತ ಬಾಲಕನನ್ನು ಮಹಮ್ಮದ್ ಎಂಬವರ ಪುತ್ರ ಸವಾದ್(17) ಎಂದು ಗುರುತಿಸಲಾಗಿದೆ.

ಶಾಲೆಗೆ ರಜೆಯಾದ ಕಾರಣ ಐವರು ಒಟ್ಟು ಸೇರಿ ಸೋಮವಾರ ಮಧ್ಯಾಹ್ನದ ಬಳಿಕ ಪಲ್ಗುಣಿ ನದಿಯಲ್ಲಿ ಆಟ ಆಡಲು ತೆರಳಿದ್ದರು ಎನ್ನಲಾಗಿದ್ದು, ಈ ಮಕ್ಕಳು ನದಿಯಲ್ಲಿ ಆಟ ಆಡುತ್ತಾ ಇದ್ದದ್ದನ್ನು ಇಲ್ಲಿನ ಸ್ಥಳೀಯರು ಗಮನಿಸಿದ್ದಾರೆ.

ಆಟವಾಡಲು ತೆರಳಿದ್ದ ಐವರು ಬಾಲಕರು ರಾತ್ರಿಯಾದರೂ ಮನೆಗೆ ಬಾರದೆ ಇದ್ದುದರಿಂದ ಫೋಷಕರು ಮಕ್ಕಳಿಗೆ ಫೋನ್ ಮಾಡಿದ್ದಾರೆ. ಮಕ್ಕಳು ಕರೆ ಸ್ವೀಕಾರ ಮಾಡದೆ ಇದ್ದುದ್ದರಿಂದ ಆತಂಕಗೊಂಡ ಮನೆಮಂದಿ ಹುಡುಕಾಡಲು ಆರಂಭಿಸಿದ್ದಾರೆ. ಈ ವೇಳೆ ಮಕ್ಕಳ ಮೊಬೈಲ್ ಫೋನ್ ಮತ್ತು ಬಟ್ಟೆಗಳು ನದಿಯ ಬದಿಯಲ್ಲಿ ಪತ್ತೆಯಾಗಿವೆ.

ಇಂದು ಮುಂಜಾನೆ ಮತ್ತೆ ಹುಡುಕಾಟ ಆರಂಭಿಸಿದಾಗ ನೀರುಪಾಲದ ಸವಾದ್ ಎಂಬಾತನ ಮೃತದೇಹ ಪತ್ತೆಯಾಗಿದೆ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ಬಂಟ್ವಾಳ ಗ್ರಾಮಾಂತರ ಪೊಲೀಸ್ ಉಪನಿರೀಕ್ಷಕ ಪ್ರಸನ್ನ ಮತ್ತು ಅವರ ತಂಡ ಸ್ಥಳಕ್ಕೆ ಭೇಟಿ ನೀಡಿ ಮಕ್ಕಳ ಪತ್ತೆ ಕಾರ್ಯಾಚರಣೆ ಮುಂದುವರಿಸಿದ್ದಾರೆ.

Comments are closed.