ಕರಾವಳಿ

ತೆಂಗಿನ ಎಲೆ ತಿನ್ನುವ ಹುಳುಗಳ ನಿಯಂತ್ರಣ ಮಾಡುವ ಕ್ರಮಗಳು

Pinterest LinkedIn Tumblr

ಮ0ಗಳೂರು ಫೆಬ್ರವರಿ.8 : ಎಲೆ ತಿನ್ನುವ ಕಪ್ಪುತಲೆ ಹುಳು (ಒಪಿಸಿನಾ ಅರೆನೋಸೆಲ್ಲ) ಇದನ್ನು ‘ತೆಂಗಿನ ಎಲೆ ತಿನ್ನುವ ಹುಳು’ ಅಥವಾ ಕಪ್ಪುತಲೆ ಹುಳು ಎಂದು ಕರೆಯುತ್ತಾರೆ. ಈ ಕೀಟ ಮರಿ ಹುಳುವಿನ ಹಂತದಲ್ಲಿ (ಕ್ಯಾಟರ್ ಪಿಲ್ಲರ್) ಹಾನಿ ಉಂಟು ಮಾಡುವುದು. ಈ ಮರಿ ಹುಳುಗಳು ಎಲೆಯ ತಳಭಾಗದಲ್ಲಿ ಸೇರಿಕೊಂಡು ಎಲೆಯ ಹಸಿರು ಭಾಗವನ್ನು ಕೆರೆದು ತಿನ್ನುತ್ತದೆ. ಸಾಮಾನ್ಯವಾಗಿ ಈ ಹುಳುವಿನ ಬಾಧೆ ಜನವರಿಯಿಂದ ಪ್ರಾರಂಭವಾಗಿ ಬೇಸಿಗೆ ತಿಂಗಳುಗಳಲ್ಲಿ ತೀವ್ರವಾಗುತ್ತದೆ. ಮಳೆಗಾಲ ಪ್ರಾರಂಭವಾದಂತೆ ತೀವ್ರತೆ ಕಡಿಮೆಯಾಗುತ್ತದೆ. 

ನಿಯಂತ್ರಣ ಮಾಡುವ ಕ್ರಮಗಳು:

ಗರಿ ತಿನ್ನುವ ಹುಳುವಿನ ಹಾನಿಯನ್ನು ಕಡಿಮೆ ಮಾಡಲು ಬಾಧೆಗೆ ತುತ್ತಾದ ಗರಿಗಳನ್ನು ತೆಗೆದು ಸುಡಬೇಕು. ತೆಂಗಿನ ಕಪ್ಪುತಲೆ ಹುಳುವನ್ನು ನಿಯಂತ್ರಿಸಲು ಪರೋಪಜೀವಿಗಳನ್ನು ಬಿಡುಗಡೆ ಮಾಡುವುದರಿಂದ ನಿಯಂತ್ರಿಸಬಹುದು.

ಕಪ್ಪುತಲೆ ಹುಳು ಮರಿ ಹುಳುವಿನ ಹಂತದಲ್ಲಿದ್ದಾಗ ಗೋನಿಯೋಜಸ್ ನೆಫಾಂಟಿಡಿಸ್ ಎಂಬ ಪರೋಪ ಜೀವಿಯನ್ನು ಪ್ರತಿ ಕೀಟಬಾಧಿತ ಮರಕ್ಕೆ ಸುಮಾರು 10 ಅಥವಾ ಬ್ರಾಕೋನ್ ಬ್ರೆವಿಕೊರ್ನಿಸ್ ಸುಮಾರು 15 ರಂತೆ ಪ್ರತಿ 15 ದಿನಗಳಿಗೊಮ್ಮೆ ಕನಿಷ್ಠ 4 ಬಾರಿ ಬಿಡುಗಡೆ ಮಾಡಬೇಕು.

ಸೂಕ್ತವಾಗಿ ನೀರಿನ ನಿರ್ವಹಣೆಯನ್ನು ಮಾಡುವುದು ಮತ್ತು ಮಣ್ಣಿನಲ್ಲಿ ನೀರಿನ ತೇವಾಂಶವನ್ನು ಕಾಪಾಡಲು ಸಾವಯವ ಹೊದಿಕೆಯನ್ನು ಅಳವಡಿಸುವುದು. ಸಮತೋಲನ ಸಾರಜನಕ, ರಂಜಕ, ಪೋಟ್ಯಾಶ್ ಮತ್ತು ಟ್ರೈಕೊಡರ್ಮಾ, ಬೇವಿನ ಹಿಂಡಿ ಹಾಗೂ ಕೊಟ್ಟಿಗೆ ಗೊಬ್ಬರವನ್ನು ಪ್ರತೀ ವರ್ಷಕ್ಕೆ 5 ಕೆಜಿಯಂತೆ ಪ್ರತೀ ಮರಕ್ಕೆ ಹಾಕುವುದು. ಸಾವಯವ ಜೀವರಾಶಿಯ ಮರುಬಳಕೆಯನ್ನು, ಹಸಿರು ಬೆಳೆಗಳಾದ ಅಲಸಂಡೆ ಹಾಗೂ ಶುಂಠಿ ತೆಂಗಿನ ಮರದ ಬುಡದಲ್ಲೇ ಬೆಳೆಸಿ, ಇದನ್ನು ಮಣ್ಣಿಗೆ ಸೇರುವಂತೆ ಮಾಡುವುದರಿಂದ ಹೆಚ್ಚಿಸಬಹುದಾಗಿದೆ ಎಂದು ಉಪನಿರ್ದೇಶಕರು, ತೋಟಗಾರಿಕೆ ಇಲಾಖೆ ಅವರ ಪ್ರಕಟಣೆ ತಿಳಿಸಿದೆ.

Comments are closed.