ಕರಾವಳಿ

ಕೊಲೆ ಮಾಡಿ ಚಿನ್ನಾಭರಣ ದೋಚಿದ್ದ ಖತರ್ನಾಕ್ ಆರೋಪಿಯ ಸೆರೆ

Pinterest LinkedIn Tumblr

ಉಡುಪಿ: ಇತ್ತೀಚೆಗೆ ಗ್ಯಾಂಗ್ ವಾರಿನಲ್ಲಿ ಕೊಲೆಯಾದ ವರ್ವಾಡಿಯ ಪ್ರವೀಣ್ ಕುಲಾಲ್ ತಾನು ಕೊಲೆಯಾಗುವ ಮೊದಲು ಕೊಲೆ ಮಾಡಿದ್ದ ಹಿರಿಯಡಕ ಸಣ್ಣಕ್ಕಿಬೆಟ್ಟು ಸಂತೋಷ್ ನಾಯಕ್ ಪ್ರಕರಣಕ್ಕೆ ಸಂಬಂಧಿಸಿ ಚಿನ್ನಾಭರಣ ದೋಚಿದ್ದ ಖತರ್ನಾಕ್ ಆರೋಪಿಯನ್ನು ಉಡುಪಿ ಡಿಸಿಐಬಿ ಪೊಲೀಸರು ಬಂಧಿಸಿದ್ದಾರೆ.

ಮಂಗಳೂರು ಅತ್ತಾವರ ಜೈನ್ ಕಾಂಪೊಂಡ್ ನಿವಾಸಿ ರಾಜೇಶ್ ಆಚಾರ್ಯ ಬಂಧಿತ ಆರೋಪಿಯಾಗಿದ್ದಾನೆ. ಆತನ ಬಳಿ ದರೋಡೆ ಮಾಡಿದ್ದ ಚಿನ್ನದ ಕರಿಮಣಿ ಸರ, ಚಿನ್ನದ ಬೆಂಡೋಲೆ ಹಾಗೂ ಜುಮಕಿಗಳನ್ನು ಸ್ವಾಧೀನಪಡಿಸಿಕೊಳ್ಳಲಾಗಿದ್ದು ಈ ಚಿನ್ನಾಭರಣಗಳ ಒಟ್ಟು ಮೌಲ್ಯ 80,500/- ರೂಪಾಯಿ ಎನ್ನಲಾಗಿದೆ. ಆರೋಪಿಯನ್ನು ಸ್ವತ್ತುಗಳೊಂದಿಗೆ ಮಣಿಪಾಲ ಠಾಣೆಗೆ ಹಸ್ತಾಂತರಿಸಲಾಗಿದೆ.

ಡಿ.2 ರಂದು ಹಿರಿಯಡ್ಕ ಸಣ್ಣಕ್ಕಿಬೆಟ್ಟು ಸಂತೋಷ ನಾಯಕ್ ಎಂಬವರನ್ನು ಅಪಹರಿಸಿ ಪೆರ್ಣಂಕಿಲ ಬಳಿ ಕಾಡಿನಲ್ಲಿ ಕೊಲೆ ಮಾಡಿ,ನಂತರ ಅದೇ ದಿನ ರಾತ್ರಿ ಸಂತೋಷ ನಾಯಕ್ ನ ಮನೆಗೆ ಬಂದ ಆರೋಪಿ ರಾಜೇಶ್ ಮನೆಯವರನ್ನು ಹೆದರಿಸಿ ಮನೆಯ ಕಪಾಟನ್ನು ಒಡೆದು ಹಣಕ್ಕಾಗಿ ಹುಡುಕಾಡಿದ್ದು, ನಂತರ ದೇವರ ಗುಡಿಯ ನೆಲ ಅಗೆದು ಅಲ್ಲಿ ಕೂಡಾ ಹಣಕ್ಕಾಗಿ ಹುಡುಕಾಡಿ ಹಣ ಸಿಗದೇ ಇದ್ದಾಗ, ಸಂತೋಷ ನಾಯಕ್‌ನ ಹೆಂಡತಿ, ಮಕ್ಕಳು, ತಮ್ಮ, ತಮ್ಮನ ಹೆಂಡತಿ ಮತ್ತು ತಾಯಿಯವರನ್ನು ಕಿಡ್ನಾಪ್ ಮಾಡಿ ಕಾರಿನಲ್ಲಿ ಕರೆದುಕೊಂಡು ಹೋಗಿ ಚಿನ್ನಾಭರಣಗಳನ್ನು ದರೋಡೆ ಮಾಡಿದ್ದ.

ಕಾರ್ಯಾಚರಣೆ ತಂಡ…
ಈ ಪತ್ತೆ ಕಾರ್ಯದಲ್ಲಿ ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕ ಕೆ.ಟಿ.ಬಾಲಕೃಷ್ಣ ನಿರ್ದೇಶನದಲ್ಲಿ, ಉಡುಪಿ ಜಿಲ್ಲಾ ಹೆಚ್ಚುವರಿ ಪೊಲೀಸ್ ಅಧೀಕ್ಷಕ ವಿಷ್ಣುವರ್ಧನ ಮಾರ್ಗದರ್ಶನದಲ್ಲಿ ಉಡುಪಿ ಡಿಸಿಐಬಿ ಪೊಲೀಸ್ ನಿರೀಕ್ಷಕ ಸಂಪತ್ ಕುಮಾರ್ ಎ ಹಾಗೂ ಡಿಸಿಐಬಿ ತಂಡದ ಎಎಸ್‌ಐ ರೊಸಾರಿಯೋ ಡಿ’ಸೋಜ ಹಾಗೂ ಸಿಬ್ಬಂದಿಯವರಾದ ರವಿಚಂದ್ರ, ರಾಮು ಹೆಗ್ಡೆ, ಚಂದ್ರ ಶೆಟ್ಟಿ, ಸುರೇಶ, ಸಂತೋಷ ಕುಂದರ್, ರಾಘವೇಂದ್ರ ಉಪ್ಪುಂದ, ಪ್ರವೀಣ, ರಾಜ್‌ಕುಮಾರ್, ದಯಾನಂದ ಪ್ರಭು, ಶಿವಾನಂದ ಮತ್ತು ಚಾಲಕ ರಾಘವೇಂದ್ರ ಸಹಕರಿಸಿರುತ್ತಾರೆ.

Comments are closed.