ಕರಾವಳಿ

ಮೆಸ್ಕಾಂ ಕಾಮಗಾರಿಯಲ್ಲಿ ನಡೆದಿರುವ ಅವ್ಯಹಾರ ಹಾಗೂ ಹಗರಣಗಳ ಬಗ್ಗೆ ಸಮಗ್ರ ತನಿಖೆಗೆ ಆಗ್ರಹ

Pinterest LinkedIn Tumblr

zp_meet_photo_3

ಮಂಗಳೂರು ,ಡಿ.26: ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು ಅವರ ಅಧ್ಯಕ್ಷತೆಯಲ್ಲಿ ದ.ಕ ಜಿಲ್ಲಾ ಪಂಚಾಯತ್‌ನ ನೇತ್ರಾವತಿ ಸಭಾಂಗಣದಲ್ಲಿ ಸೋಮವಾರ ನಡೆದ 4ನೆ ಸಾಮಾನ್ಯ ಸಭೆಯಲ್ಲಿ ಮೆಸ್ಕಾಂ ಕಾಮಗಾರಿಗಳಲ್ಲಿ ಸಾಕಷ್ಟು ಅವ್ಯಹಾರಗಳು ನಡೆದಿರುವ ಬಗ್ಗೆ ಚರ್ಚೆ ನಡೆದವು.

ಈ ಹಗರಣಗಳ ಬಗ್ಗೆ ಸಮಗ್ರ ತನಿಖೆಯಾಗಬೇಕು ಎಂದು ಜಿಲ್ಲಾ ಪಂಚಾಯತ್ ಸದಸ್ಯ ತುಂಗಪ್ಪ ಬಂಗೇರ ಸಭೆಯಲ್ಲಿ ಆಗ್ರಹಿಸಿದರು.

ಮೆಸ್ಕಾಂನಿಂದ 700 ಟಿ.ಸಿಗಳ ಅಳವಡಿಕೆಯ ಸಂದರ್ಭದಲ್ಲಿ ಸರಕಾರದ ನಿಗದಿತ ದರ (ಎಸ್.ಆರ್ )ಕ್ಕಿಂತ ಹೆಚ್ಚಿನ ದರಕ್ಕೆ ಟೆಂಡರ್ ನೀಡಲಾಗಿದೆ. ಇದರಿಂದ ಸರಕಾರದ ದರಕ್ಕಿಂತ ಲಕ್ಷಾಂತರ ರೂ ಹೆಚ್ಚಿನ ಮೊತ್ತ ಪಡೆಯಲಾಗಿದೆ . ಇಲ್ಲಿ ಅವ್ಯವಹಾರ ನಡೆದಿದ್ದು, ಈ ಬಗ್ಗೆ ಮಾಹಿತಿ ಹಕ್ಕಿನ ಪ್ರಕಾರ ಅರ್ಜಿ ಸಲ್ಲಿಸಿ ಮಾಹಿತಿ ಕೋರಿದಾಗ ಅರ್ಜಿದಾರರ ಭಾವಚಿತ್ರವನ್ನು ಲಗತ್ತಿಸಬೇಕು ಎಂದು ಮೆಸ್ಕಾಂ ಅಧಿಕಾರಿಗಳು ತಿಳಿಸಿದ್ದಾರೆ ಎಂದು ಜಿಲ್ಲಾ ಪಂಚಾಯತ್ ಸದಸ್ಯ ತುಂಗಪ್ಪ ಬಂಗೇರ ಆರೋಪಿಸಿದರು.

zp_meet_photo_1 zp_meet_photo_2 zp_meet_photo_4

ಈ ಬಗ್ಗೆ ಸಭೆಯಲ್ಲಿ ಉತ್ತರ ನೀಡಿದ ಮೆಸ್ಕಾಂ ಅಧಿಕಾರಿಗಳು ಮಾಹಿತಿ ಹಕ್ಕಿನ ಪ್ರಕಾರ ಕೇಳಿದ ಮಾಹಿತಿ ದೊಡ್ಡ ಪ್ರಮಾಣದಲ್ಲಿದ್ದ ಕಾರಣ ಕಚೇರಿಗೆ ಆಹ್ವಾನಿಸಿ ಕಡತಗಳನ್ನು ಪರಿಶೀಲಿಸಿ ಮಾಹಿತಿ ಪಡೆದುಕೊಳ್ಳಲು ಸೂಚಿಸಲಾಗಿತ್ತು . ಅರ್ಜಿದಾರರ ಗುರುತು ಹೊಂದಿರುವ ಭಾವಚಿತ್ರವನ್ನು ಲಗತ್ತಿಸಲು ತಿಳಿಸಲಾಗಿತ್ತು ಎಂದು ಮೆಸ್ಕಾಂ ಅಧಿಕಾರಿಗಳು ಸಭೆಗೆ ತಿಳಿಸಿದರು.

ಮೆಸ್ಕಾಂ ಇಲಾಖೆಯ ಅಧಿಕಾರಿಗಳ ಮಾತಿನಿಂದ ತೃಪ್ತರಾಗದ ತುಂಗಪ್ಪ ಬಂಗೇರ ಖುದ್ದಾಗಿ ಮೆಸ್ಕಾಂ ಎಂ.ಡಿ ಸಭೆಗೆ ಹಾಜರಾಗಿ ಉತ್ತರ ನೀಡಬೇಕೆಂದು ಜಿಲ್ಲಾ ಪಂಚಾಯತ್ ಸಭೆಯಲ್ಲಿಂದು ಪಟ್ಟು ಹಿಡಿದರು.

ಈ ಬಗ್ಗೆ ಮೆಸ್ಕಾಂ ಎಂ.ಡಿಯವರನ್ನು ಮುಂದಿನ ಸಭೆಗೆ ಖುದ್ದಾಗಿ ಹಾಜರಾಗಿ ವಿವರಣೆ ನೀಡಲು ಸೂಚಿಸುವುದಾಗಿ ಹಾಗೂ ಮೆಸ್ಕಾಂ ಅಧಿಕಾರಿಗಳು ಮಾಹಿತಿ ಹಕ್ಕಿನ ನಿಯಮಾನುಸಾರ ಮಾಹಿತಿ ಕೋರಿ ಬರುವ ಗ್ರಾಹಕರಿಗೆ ಮಾಹಿತಿ ನೀಡಲು ಜಿಲ್ಲಾ ಪಂಚಾಯತ್ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಎಂ.ಆರ್.ರವಿ ತಿಳಿಸಿದರು.

ಸರ್ವಶಿಕ್ಷಣ ಅಭಿಯಾನದಿಂದ ಪ್ರಸಕ್ತ ಎರಡು ವರ್ಷಗಳಿಂದ ಕೇಂದ್ರದಿಂದ ಮಂಜೂರಾದ ಅನುದಾನಗಳು ಬರುತ್ತಿಲ್ಲ . ಕಳೆದ ಎರಡು ವರ್ಷಗಳಿಂದ 14 ಶಾಲೆಗಳ ದುರಸ್ತಿ ಹಾಗೂ ಒಂದು ಹೊಸ ಕಟ್ಟಡಕ್ಕೆ ಸುಮಾರು 50ಲಕ್ಷ ಅನುದಾನ ಮಂಜೂರಾಗಿದ್ದರೂ ಇದುವರೆಗೆ ಹಣ ಬಿಡುಗಡೆ ಆಗಿಲ್ಲ ಎಂದು ಶಿಕ್ಷಣ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.

ಗ್ರಾಮೀಣ ಪ್ರದೇಶದಲ್ಲಿ ಕುಡಿಯುವ ನೀರಿನ ಮೂಲದ 500 ಮೀಟರ್ ವ್ಯಾಪ್ತಿಯೊಳಗೆ ಯಾವೂದೇ ಕೊಳವೆ ಬಾವಿ ಕೊರೆಯಲು ನಿಷೇಧವಿದೆ. ಆದರೆ ಈ ಆದೇಶವಿದ್ದರೂ ಗ್ರಾಮ ಪಂಚಾಯತ್ ಅನುಮತಿ ಪಡೆದು ಕೊಳವೆ ಬಾವಿ ಕೊರೆಯಲು ಜಿಲ್ಲಾ ಪಂಚಾಯತ್ನಲ್ಲಿ ನಿರ್ಣಯ ಮಾಡಿ ಸರಕಾರಕ್ಕೆ ಸಲ್ಲಿಸಲು ಈ ಹಿಂದಿನ ಜಿಲ್ಲಾ ಪಂಚಾಯತ್ ಸಭೆಯಲ್ಲಿ ನಿರ್ಣಯವಾಗಿತ್ತು . ಆದರೆ ಈ ಬಗ್ಗೆ ಸರಕಾರದಿಂದ ಯಾವೂದೇ ಉತ್ತರ ಬರಲಿಲ್ಲ .

ಕೆಲವು ಗ್ರಾಮ ಪಂಚಾಯತ್ಗಳಲ್ಲಿ ಕೆಲವು ಪಿಡಿಓಗಳು ತಮಗೆ ಬೇಕಾದವರಿಗೆ ಕೊಳವೆ ಬಾವಿ ತೆರೆಯಲು ಅನುಮತಿ ನೀಡುತ್ತಿದ್ದಾರೆ ಎಂದು ಜಿ.ಪಂ ಸದಸ್ಯ ಪಿ.ಪಿ ವರ್ಗೀಸ್ ಆರೋಪಿಸಿದರು.

ಬಡ ಕೃಷಿಕರಿಗೆ ಮಾತ್ರ ತೊಂದರೆಯಾಗುತ್ತಿದೆ. ಕೆಲವು ಶ್ರೀಮಂತರು ಅವರಿಗೆ ಬೇಕಾದಂತೆ ಕೊಳವೆ ಬಾವಿ ತೆಗೆದುಕೊಳ್ಳುತ್ತಿದ್ದಾರೆ. ಈ ರೀತಿಯ ತಾರತಮ್ಯ ನೀತಿ ಆಗಬಾರದು ಎಂದು ಸದಸ್ಯ ಜನಾರ್ದನ ಗೌಡ,ಸುಚರಿತ ಶೆಟ್ಟಿ ಆಗ್ರಹಿಸಿದರು.

ಈ ಬಗ್ಗೆ ಸೂಕ್ತ ನಿರ್ಧಾರ ಶಿಘ್ರವಾಗಿ ಕೈ ಗೊಳ್ಳಬೇಕು ಎಂದು ಸಭೆಯಲ್ಲಿ ಚರ್ಚೆ ಯಾಯಿತು. ಜಿಲ್ಲಾ ಪಂಚಾಯತ್ನ ನಿರ್ಣಯ ಅಕ್ಟೋಬರ್ ತಿಂಗಳಲ್ಲಿ ಆಗಿದೆ. ಆದರೆ ಆ ನಿರ್ಣಯವನ್ನು ಒಂದೂವರೆ ತಿಂಗಳ ನಂತರ ಸರಕಾರಕ್ಕೆ ವಿಳಂಬವಾಗಿ ಸಲ್ಲಿಸಲಾಗಿದೆ. ಈ ವಿಳಂಬ ಅಧಿಕಾರಿಗಳಿಂದಾಗಿದೆ ಎಂದು ಜಿಲ್ಲಾ ಪಂಚಾಯತ್ ಸದಸ್ಯರಾದ ಎಂ.ಎಸ್.ಮುಹಮ್ಮದ್,ಜನಾರ್ದನ ಗೌಡ, ಹರೀಶ್ ಕಂಜಿಪಿಲಿ ಮೊದಲಾದವರು ಆರೋಪಿಸಿದರು.

ಈ ಬಗ್ಗೆ ಉತ್ತರ ನೀಡಿದ ನೂತನ ಜಿಲ್ಲಾ ಪಂಚಾಯತ್ನ ಕಾರ್ಯನಿರ್ವಹಣಾಧಿಕಾರಿ ಡಾ.ಎಮ್.ಆರ್.ರವಿ ಮತನಾಡುತ್ತಾ ಅಧಿಕಾರಿಗಳಿಂದ ಆಗಿರುವ ವಿಳಂಬವನ್ನು ಒಪ್ಪಿಕೊಂಡು ಮುಂದೆ ಹೀಗಾಗದಂತೆ ಸರಿಪಡಿಸುವುದಾಗಿ ಭರವಸೆ ನೀಡಿದರು.

ಗ್ರಾಮ ಪಂಚಾಯತ್ಗಳಲ್ಲಿ ಗ್ರಾಮ ಮಟ್ಟದ ಅಧಿಕಾರಿಗಳು ಕಡ್ಡಾಯವಾಗಿ ಹಾಜರಿರಬೇಕು. ಪ್ರಸಕ್ತ ಜಿಲ್ಲೆಯಲ್ಲಿ 80 ಪಿಡಿಓಗಳು, 35 ಕಾರ್ಯದರ್ಶಿ ಗ್ರೇಡ್-1ಮತ್ತು 44 ಕಾರ್ಯದರ್ಶಿ ಗ್ರೇಡ್ -2 ಕೊರತೆ ಇದೆ . ಶೀಘ್ರದಲ್ಲಿ ಖಾಲಿ ಹುದ್ದೆಗಳ ನೇಮಕಾತಿ ಆಗಲಿದೆ. ತಾಲೂಕು ಮಟ್ಟದ ಅಧಿಕಾರಿಗಳು ಸಭೆಗೆ ಹಾಜರಾಗಬೇಕಾದರೆ ಮುಂಚಿತವಾಗಿ ಅವರಿಗೆ ತಿಳಿಸಿ ಆಹ್ವಾನಿಸುವಂತೆ ಜಿಲ್ಲಾ ಪಂಚಾಯತ್ನ ಉಪ ಕಾರ್ಯದರ್ಶಿ ಗ್ರಾಮ ಪಂಚಾಯತ್ ಅಧಿಕಾರಿಗಳಿಗೆ ಸೂಚನೆ ನೀಡುವುದಾಗಿ ತಿಳಿಸಿದರು.

ಕಿನ್ನಿಗೋಳಿ ಬಹು ಗ್ರಾಮ ಕುಡಿಯುವ ನೀರಿನ ಯೋಜನೆಗೆ ಮರು ಟೆಂಡರ್ ಕರೆದು ಉಳಿಕೆ ಕಾಮಗಾರಿ ಪೂರ್ಣಗೊಳಿಸಿ ಯೋಜನೆಗೆ ಚಾಲನೆ ನೀಡಲಾಗುವುದು ಎಂದು ಮುಖ್ಯ ಕಾರ್ಯನಿರ್ವಹಣಾಧಿಕಾರಿ ತಿಳಿಸಿದರು.

ಮಹಿಳಾ ಗ್ರಾಮ ಪಂಚಾಯತ್ ಹಾಗೂ ಮಕ್ಕಳ ಗ್ರಾಮ ಸಭೆಗಳು ಕಾಟಾಚಾರದ ಸಭೆಗಳಾಗುತ್ತಿವೆ. ಇಲ್ಲಿ ಅಧಿಕಾರಿಗಳ ಕೊರತೆ ಇದೆ. ಅದರಿಂದಾಗಿ ಮಾಹಿತಿ ದೊರೆಯುತ್ತಿಲ್ಲ ಎಂದು ಜಿಲ್ಲಾ ಪಂಚಾಯತ್ ಸದಸ್ಯೆ ಧನಲಕ್ಷ್ಮೀ ಗಟ್ಟಿ ಸಭೆಯ ಗಮನ ಸೆಳೆದರು.

ಸಭೆಯಲ್ಲಿ ಜಿಲ್ಲಾ ಪಂಚಾಯತ್ ಉಪಾಧ್ಯಕ್ಷ ಕಸ್ತೂರಿ ಪಂಜ,ಸ್ಥಾಯಿ ಸಮಿತಿ ಅಧ್ಯಕ್ಷರಾದ ಆಶಾ ತಿಮ್ಮಪ್ಪ ಗೌಡ,ಶಾಹುಲ್ ಹಮೀದ್, ಸರ್ವೋತ್ತಮ ಗೌಡ ಮೊದಲಾದವರು ಉಪಸ್ಥಿತರಿದ್ದರು.

ವರದಿ ಕೃಪೆ : ವಾರ್ತಾ ಭಾರತಿ

Comments are closed.