ಕರ್ನಾಟಕ

ರಾಜ್ಯದ ಖಾಸಗಿ ಉದ್ಯಮಗಳಲ್ಲಿ ಕನ್ನಡಗರಿಗೆ ಶೇ.70ರಷ್ಟು ಮೀಸಲಾತಿ!

Pinterest LinkedIn Tumblr

lad-26
ಬೆಂಗಳೂರು: ರಾಜ್ಯದ ಖಾಸಗಿ ಉದ್ಯಮಗಳಲ್ಲಿ ಸ್ಥಳೀಯರಿಗೆ ಉದ್ಯೋಗಾವಕಾಶ ಸೃಷ್ಟಿಸುವ ಉದ್ದೇಶದಿಂದ ರಾಜ್ಯ ಸರ್ಕಾರ ಕನ್ನಡಿಗರಿಗೆ ಶೇ. 70 ರಷ್ಟು ಮೀಸಲಾತಿ ಕಲ್ಪಿಸಲು ಕರಡು ಮಸೂದೆ ಸಿದ್ದಪಡಿಸಲಾಗಿದ್ದು, ಇನ್ನೆರಡು ತಿಂಗಳಲ್ಲಿ ಸಚಿವ ಸಂಪುಟದ ಮುಂದೆ ತಂದು ಒಪ್ಪಿಗೆ ಪಡೆಯಲಾಗುವುದು ಎಂದು ಕಾರ್ಮಿಕ ಸಚಿವ ಸಂತೋಷ್ ಲಾಡ್ ಅವರು ಸೋಮವಾರ ಹೇಳಿದ್ದಾರೆ.
ಇಂದು ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಂತೋಷ್ ಲಾಡ್, ಸರ್ಕಾರ ಸಿದ್ಧಪಡಿಸಿರುವ ಕರಡು ಮಸೂದೆ ಕಾನೂನು ಇಲಾಖೆಯಲ್ಲಿ ಪರಿಶೀಲನೆಯಲ್ಲಿದೆ. ಇಲಾಖೆ ಒಪ್ಪಿಗೆ ದೊರೆತ ನಂತರ ಸಂಪುಟದ ಮುಂದೆ ಮಂಡಿಸಿ ಒಪ್ಪಿಗೆ ಪಡೆಯಲಾಗುವುದು. ಆ ನಂತರ ಇದನ್ನು ಜಾರಿಗೆ ತರಲಾಗುವುದು ಎಂದು ತಿಳಿಸಿದರು.
ಕೈಗಾರಿಕೆಗಳಲ್ಲಿ ಕನ್ನಡಿಗರಿಗೆ ಸಿ ಮತ್ತು ಡಿ ಹುದ್ದೆಗಳಲ್ಲಿ ಶೇ. 50 ರಷ್ಟು, ಎ ಮತ್ತು ಬಿ ದರ್ಜೆಯ ಹುದ್ದೆಗಳ ಪೈಕಿ ಶೇ. 20 ರಷ್ಟು ಹುದ್ದೆಗಳನ್ನು ಮೀಸಲಿಡಬೇಕು. ಒಟ್ಟಾರೆ ಶೇ. 70 ರಷ್ಟು ಹುದ್ದೆಗಳು ಕನ್ನಡಿಗರಿಗೆ ಸಿಗಬೇಕು ಎಂಬ ಷರತ್ತನ್ನು ಮಸೂದೆಯಲ್ಲಿ ಅಳವಡಿಸಲಾಗಿದೆ ಎಂದರು.
ಇದೇ ವೇಳೆ ಐಟಿ-ಬಿಟಿ ಕಂಪನಿಗಳ ಮೇಲೆ ನಿರ್ಬಂಧ ಹೇರಲು ಸದ್ಯಕ್ಕೆ ಸಾಧ್ಯವಾಗುತ್ತಿಲ್ಲ ಎಂದ ಸಚಿವರು, ಮುಂಬರುವ ದಿನಗಳಲ್ಲಿ ಈ ಬಗ್ಗೆಯೂ ಪರಿಶೀಲಿಸಲಾಗುವುದು ಎಂದು ತಿಳಿಸಿದರು,
ಕನ್ನಡಿಗರಿಗೆ ಕಡ್ಡಾಯವಾಗಿ ಶೇ. 70 ರಷ್ಟು ಉದ್ಯೋಗಾವಕಾಶಗಳನ್ನು ಕೊಡದಿದ್ದರೆ ಅಂತಹ ಕೈಗಾರಿಕೆಗಳಿಗೆ ಸರ್ಕಾರ ನೀಡಿರುವ ವಿನಾಯ್ತಿ ಮತ್ತಿತರ ಸೌಲಭ್ಯಗಳನ್ನು ಹಿಂಪಡೆಯಬೇಕು ಎಂಬ ಉದ್ದೇಶ ಸರ್ಕಾರಕ್ಕಿಲ್ಲ. ಕರಡು ಮಸೂದೆ ಕಾಯ್ದೆಯಾಗಿ ಜಾರಿಗೆ ಬಂದ ನಂತರ ನಿಯಂತ್ರಣ ಹೇರುವ ಕುರಿತು ಪರಿಶೀಲಿಸಲಾಗುವುದು ಎಂದರು.

Comments are closed.