ಮಂಗಳೂರು : ನಾಪತ್ತೆಯಾದ ಯುವತಿಯೊಬ್ಬಳು ಪ್ರಿಯಕರನೊಂದಿಗೆ ಕುತ್ತಾರಿನ ಮನೆಯೊಂದರಲ್ಲಿ ಇದ್ದಾಳೆ ಎಂಬ ಗುಮಾನಿಯಿಂದ ಯುವತಿಯ ಕಡೆಯ ಗುಂಪೊಂದು ಕುತ್ತಾರಿನ ಮನೆಗೆ ಅಕ್ರಮ ಪ್ರವೇಶಗೈದು ದಾಂಧಲೆ ಮಾಡಿದ ಘಟನೆ ನಿನ್ನೆ ನಡೆದಿದ್ದು, ಪ್ರಕರಣಕ್ಕೆ ಸಂಬಂಧ ಪಟ್ಟಂತೆ ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ.
ಬರ್ಕೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಾಪತ್ತೆಯಾದ ಯುವತಿಯನ್ನು ಪ್ರೀತಿಸುತ್ತಿದ್ದ ಯುವಕನೊಬ್ಬ ಆಕೆಯನ್ನು ಅಪಹರಿಸಿ ಕುತ್ತಾರಿನ ಮನೆಯೊಂದರಲ್ಲಿ ಅಕ್ರಮವಾಗಿ ಇರಿಸಿದ್ದಾನೆ ಎಂಬ ಸುದ್ದಿ ಹರಡಿದ್ದು, ಇದನ್ನು ತಿಳಿದ ನಾಲ್ಕು ಕಾರುಗಳಲ್ಲಿ ಬಂದ 15 ಮಂದಿಯ ತಂಡವೊಂದು ಮನೆಯೊಳಗೆ ಜೋಡಿ ಅಡಗಿ ಕುಳಿತಿದೆ ಎಂಬ ಸಂಶಯದಿಂದ ಕುತ್ತಾರು ಕಾಮತ್ ಕಾಂಪೌಂಡಿನಲ್ಲಿರುವ ವಿಕ್ಟರ್ ಲೋಬೊ ಎಂಬವರ ಮನೆಗೆ ನುಗ್ಗಿ ದಾಂಧಲೆ ನಡೆಸಿದೆ.
ಕೂಡಲೇ ಮನೆ ಮಾಲೀಕ ಉಳ್ಳಾಲ ಪೊಲೀಸರಿಗೆ ಮಾಹಿತಿ ನೀಡಿದ್ದು, ಕಳೆದ ಕೆಲವು ದಿನಗಳಿಂದ ಉಳ್ಳಾಲ ವ್ಯಾಪ್ತಿಯಲ್ಲಿ ನಡೆಯುತ್ತಿರುವ ಅಹಿತಕರ ಘಟನೆಗಳ ಹಿನ್ನೆಲೆ ಗಸ್ತು ತಿರುಗುತ್ತಿದ್ದ ಪೊಲೀಸರು ಸ್ಥಳಕ್ಕೆ ಧಾವಿಸಿದ್ದಾರೆ.ಘಟನೆಗೆ ಸಂಬಂಧಿಸಿ ಮಂಜೇಶ್ವರದ ಸಿಹಾಬ್ (26) ಮತ್ತು ಮಂಜನಾಡಿಯ ಮಜೀದ್ (26) ಎಂಬವರನ್ನು ಬಂಧಿಸಲಾಗಿದ್ದು, ಆರೋಪಿಗಳು ಬಂದಿದ್ದರು ಎನ್ನಲಾದ ಎರಡು ಕಾರುಗಳನ್ನು ಪೊಲೀಸರು ವಶ ಪಡೆದುಕೊಂಡಿದ್ದಾರೆ. ಉಳಿದ ಆರೋಪಿಗಳು ಎರಡು ಕಾರುಗಳಲ್ಲಿ ಪರಾರಿಯಾಗಿದ್ದಾರೆ ಎನ್ನಲಾಗಿದೆ..
ಬರ್ಕೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸುನೈನಾ (20) ಎಂಬ ಯುವತಿ ನಾಪತ್ತೆಯಾದ ಬಗ್ಗೆ ಎರಡು ದಿನಗಳ ಹಿಂದೆ ದೂರು ದಾಖಲಾಗಿತ್ತು. ಯುವತಿಯ ಕಡೆಯವರಿಗೆ ಆಕೆ ಬಳಸುತ್ತಿದ್ದ ಮೊಬೈಲ್ ಸಿಗ್ನಲ್ ಲೊಕೇಶನ್ ಕುತ್ತಾರು ಪೆಟ್ರೋಲ್ ಬಂಕ್‌ನ ಎದುರು ರಸ್ತೆಯಲ್ಲಿರುವ ಕಾಮತ್ ಕಾಂಪೌಂಡಿನ ಲೋಬೋ ಅವರ ಮನೆಯ ಪ್ರದೇಶವನ್ನು ತೋರಿಸುತ್ತಿದೆ ಎಂಬ ಮಾಹಿತಿ ದೊರೆತಿತ್ತು. ಇದು ಎಲ್ಲರ ಸಂಶಯಕ್ಕೆ ಕಾರಣವಾಗಿತ್ತು.
ಈ ಮಾಹಿತಿ ನಂಬಿದ ಯುವತಿಯ ಕಡೆಯ 15 ಕ್ಕೂ ಹೆಚ್ಚು ಜನರಿದ್ದ ತಂಡ ನಾಲ್ಕು ಕಾರಿನಲ್ಲಿ ಸಂಜೆ ಕಾಮತ್ ಕಾಂಪೌಂಡಿನ ಲೋಬೋ ಅವರ ಮನೆಗೆ ಅಕ್ರಮ ಪ್ರವೇಶಗೈದು ದಾಂಧಲೆ ನಡೆಸಿದ್ದಾರೆ. ಲೋಬೋ ಅವರ ಮನೆಗೆ ಬಂದ ತಂಡ ಸುನೈನಾ ಎಲ್ಲಿ ಎಂದು ಪ್ರಶ್ನಿಸುತ್ತಾ ದಾಂಧಲೆ ನಡೆಸಿದ್ದಾರೆ.
ಮಂಗಳೂರು ದಕ್ಷಿಣ ವಿಭಾಗದ ಎಸಿಪಿ ಶೃತಿ, ಉಳ್ಳಾಲ ಠಾಣಾ ಇನ್ಸ್‌ಪೆಕ್ಟರ್ ಗೋಪಿಕೃಷ್ಣ, ಕ್ರೈಂ ಎಸ್ಐ ರಾಜೇಂದ್ರ, ಸಿಸಿಬಿ ಸಬ್‌ಇನ್ಸ್‌ಪೆಕ್ಟರ್ ಶ್ಯಾಮ್ ಸುಂದರ್ ಸ್ಥಳಕ್ಕೆ ಭೇಟಿ ನೀಡಿದ್ದು ತನಿಖೆ ಕೈಗೊಂಡಿದ್ದಾರೆ. ಉಳ್ಳಾಲ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.