ಕರಾವಳಿ

ಮಂಗಳೂರಿನಲ್ಲಿ ಸ್ಕಿಲ್‌ಗೇಮ್‌, ಜುಗಾರಿ ಕ್ಲಬ್ ಹಾಗೂ ಮಸಾಜ್‌ ಪಾರ್ಲರ್‌ ಸ್ಥಗಿತಕ್ಕೆ ಸೂಚನೆ

Pinterest LinkedIn Tumblr

dcp-sanjeev_patil

ಮಂಗಳೂರು: ಪೊಲೀಸ್‌ ಕಮಿಷನರೇಟ್‌ ವ್ಯಾಪ್ತಿಯಲ್ಲಿ ಕಾರ್ಯಾಚರಿಸುತ್ತಿದ್ದ ಸ್ಕಿಲ್‌ಗೇಮ್‌, ಜುಗಾರಿ ಕ್ಲಬ್ ಮತ್ತು ಮಸಾಜ್‌ ಪಾರ್ಲರ್‌ ವಿರುದ್ಧ ಕಠಿನ ಕ್ರಮಕೈಗೊಳ್ಳಲು ಎಲ್ಲ ಠಾಣೆಗಳಿಗೆ ಸೂಚನೆ ನೀಡಲಾಗಿದ್ದು, ಸ್ಥಗಿತಗೊಳಿಸಲಾಗಿರುವ ಬಗ್ಗೆ ವರದಿ ನೀಡಿದ್ದಾರೆ ಎಂದು ಸಂಚಾರ ಮತ್ತು ಅಪರಾಧ ವಿಭಾಗದ ಡಿಸಿಪಿ ಡಾ | ಸಂಜೀವ್‌ ಪಾಟೀಲ್‌ ಹೇಳಿದ್ದಾರೆ.

ಸ್ಕಿಲ್‌ಗೇಮ್‌ ಮತ್ತು ಮಸಾಜ್‌ಪಾರ್ಲರ್‌ಗಳಿಂದ ಯುವ ಸಮುದಾಯ, ಕಾಲೇಜು ವಿದ್ಯಾರ್ಥಿಗಳು ಅನೈತಿಕ ಚಟುವಟಿಕೆಗಳಿಗೆ ಬಲಿಯಾಗುತ್ತಿರುವ ಬಗ್ಗೆ ಮಾಧ್ಯಮ ಹಾಗೂ ಸಾರ್ವಜನಿಕರು ದೂರು ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಕಮಿಷನರ್‌ ಚಂದ್ರಶೇಖರ್‌ ಅವರ ಸೂಚನೆ ಮೇರೆಗೆ ಕಠಿಣ ಕ್ರಮಕೈಗೊಳ್ಳಲಾಗಿದೆ. ಮಹಾನಗರಪಾಲಿಕೆ ಯಾವುದೇ ಸ್ಕಿಲ್‌ಗೇಂ ಮತ್ತು ಮಸಾಜ್‌ಪಾರ್ಲರ್‌ಗೆ ಅನುಮತಿ ನೀಡುತ್ತಿಲ್ಲವಾಗಿದ್ದು, ಈ ರೀತಿಯ ಯಾವುದೇ ಚಟುವಟಿಕೆ ನಡೆದರೂ ಅಪರಾಧವಾಗಿದೆ. ಎಲ್ಲ ಠಾಣೆಗಳಿಗೆ ಸೂಚನೆ ನೀಡಿ ಅಕ್ರಮಗಳನ್ನು ನಿಲ್ಲಿಸಲಾಗಿದೆ ಎಂದು ಅವರು ಸುದ್ಧಿಗಾರರಿಗೆ ತಿಳಿಸಿದ್ದಾರೆ.

ಅಧಿಕಾರಿಗಳ ಮೇಲೂ ಕ್ರಮ :

ಸ್ಕಿಲ್‌ಗೇಂ ಮತ್ತು ಮಸಾಜ್‌ ಪಾರ್ಲರ್‌ಗಳ ಕಾರ್ಯಾನಿರ್ವಹಣೆಯಲ್ಲಿ ಯಾವುದೇ ಅಧಿಕಾರಿಗಳು ಕೂಡಾ ಶಾಮೀಲಾಗಿರುವ ಬಗ್ಗೆ ಮಾಹಿತಿ ದೊರೆತಲ್ಲಿ ಅವರ ವಿರುದ್ಧ ಕೂಡಾ ಇಲಾಖಾ ಕ್ರಮಕೈಗೊಳ್ಳಲಾಗುವುದು ಎಂದು ಡಿಸಿಪಿ ಹೇಳಿದ್ದಾರೆ.

ಮಾಹಿತಿದಾರರ ಬಗ್ಗೆ ಗೌಪ್ಯತೆ ಕಾಪಾಡಲಾಗುವುದು :

ಈ ರೀತಿಯ ದಂಧೆಗಳನ್ನು ಮಟ್ಟಹಾಕುವ ದೃಷ್ಟಿಯಿಂದ ಕಾರ್ಯಾಚರಣೆಗೆ ತಂಡ ರಚನೆ ಮಾಡಲಾಗುತ್ತದೆ. ನಗರದ ಯಾವುದೇ ಪ್ರದೇಶದಲ್ಲಿ ಸ್ಕಿಲ್‌ಗೇಂ ಮತ್ತು ಮಸಾಜ್‌ ಪಾರ್ಲರ್‌ ಚಟುವಟಿಕೆ ನಡೆಯುತ್ತಿರುವ ಬಗ್ಗೆ ಕಂಡುಬಂದರೆ ಸಾರ್ವಜನಿಕರು ಕೂಡಲೇ ಪೊಲೀಸ್‌ ಕಮಿಷನರ್‌ ಕಚೇರಿ : 0824 – 2220801 ಅಥವಾ ಕಂಟ್ರೋಲ್‌ ರೂಂ. 0824 – 2220800 ಮಾಹಿತಿ ನೀಡಬಹುದು. ಸಾರ್ವಜನಿಕರ ನೀಡಿದ ಮಾಹಿತಿಯನ್ನು ಗೌಪ್ಯವಾಗಿಡಲಾಗುವುದು ಎಂದು ಡಿಸಿಪಿ ತಿಳಿಸಿದ್ದಾರೆ.

Comments are closed.