ಕರಾವಳಿ

ಕುಂಬಳೆ ಸುಂದರ ರಾಯರಿಗೆ ‘ಯಕ್ಷಾಂಗಣ ಪ್ರಶಸ್ತಿ-2016’ ಪ್ರದಾನ

Pinterest LinkedIn Tumblr

kumble_yashkshgan_arwad

ಮಂಗಳೂರು : `ಯಕ್ಷಗಾನ ಕಲೆ ತನಗೆ ಹೆಸರು, ಬದುಕು, ಸ್ಥಾನ-ಮಾನ ಎಲ್ಲವನ್ನೂ ಕೊಟ್ಟಿದೆ. ಈ ರಂಗದಲ್ಲಿ ತಾನು ಕೊಟ್ಟಿರುವುದಕ್ಕಿಂತ ಪಡೆದಿರುವುದು ಹೆಚ್ಚು’ ಎಂದು ಹಿರಿಯ ಯಕ್ಷಗಾನ ಕಲಾವಿದ, ಮಾಜಿ ಶಾಸಕ ಕುಂಬ್ಳೆ ಸುಂದರ ರಾವ್ ಹೇಳಿದ್ದಾರೆ.

‘ಯಕ್ಷಾಂಗಣ ಮಂಗಳೂರು’ ಯಕ್ಷಗಾನ ಚಿಂತನ-ಮಂಥನ ಮತ್ತು ಪ್ರದರ್ಶನ ವೇದಿಕೆಯು ಕನ್ನಡ ರಾಜ್ಯೋತ್ಸವ ಕಲಾ ಸಂಭ್ರಮವಾಗಿ ನಡೆಸಿದ ನಾಲ್ಕನೇ ವರ್ಷದ ‘ಯಕ್ಷಗಾನ ತಾಳಮದ್ದಳೆ ಸಪ್ತಾಹ-2016’ ಅಂಗವಾಗಿ ಕೊಡಮಾಡಿದ ‘ಯಕ್ಷಾಂಗಣ ಪ್ರಶಸ್ತಿ-2016’ ಸ್ವೀಕರಿಸಿ ಅವರು ಮಾತನಾಡಿದರು.

ಅನಾರೋಗ್ಯ ನಿಮಿತ್ತ ಸಮಾರಂಭದಲ್ಲಿ ಪಾಲ್ಗೊಳ್ಳಲಾಗದ ಕಾರಣ ‘ಯಕ್ಷಾಂಗಣ’ದ ಪದಾಧಿಕಾರಿಗಳು ನಗರದ ಪಂಪ್‌ವೆಲ್ ಬಳಿಯ ಅವರ ‘ಯಕ್ಷಾನುಗ್ರಹ’ ನಿವಾಸಕ್ಕೆ ತೆರಳಿ ಪ್ರಶಸ್ತಿಯನ್ನು ಹಸ್ತಾಂತರಿಸಿರು. ‘ಸುಂದರ ಅರ್ಥಸರಣಿಯ ಮೂಲಕ ತನಗೆ ಬಹಳ ದೊಡ್ಡ ಗೌರವ ಸಲ್ಲಿಸಿದ ಯಕ್ಷಾಂಗಣಕ್ಕೆ ತಾನು ಆಭಾರಿ’ ಎಂದು ಭಾವುಕರಾಗಿ ನುಡಿದ ಸುಂದರ ರಾಯರು ತನ್ನ ಉಸಿರಿರುವವರೆಗೆ ಯಕ್ಷಗಾನದ ಸೇವೆ ಮಾಡುವುದಾಗಿ ತಿಳಿಸಿದರು.

ಉದ್ಯಮಿ ಕುದ್ರಾಡಿಗುತ್ತು ಅಶೋಕ ಮಾಡ ಅವರು ಕುಂಬಳೆ ಸುಂದರ ರಾವ್ ಮತ್ತು ಸುಶೀಲ ಸುಂದರ ರಾವ್ ದಂಪತಿಗೆ ಯಕ್ಷಾಂಗಣ ಪ್ರಶಸ್ತಿ ಪ್ರದಾನ ಮಾಡಿದರು. ಹರಿದಾಸ ದೇವಕೀತನಯ ಕೂಡ್ಲು, ಕೆ. ರವೀಂದ್ರ ಶೆಟ್ಟಿ ಉಳಿದೊಟ್ಟು, ತೀರ್ಥಹಳ್ಳಿ ವಿಶ್ವನಾಥ ಶೆಟ್ಟಿ, ಕೆ. ಲಕ್ಷ್ಮೀನಾರಾಯಣ ರೈ ಹರೇಕಳ ಸಹಕರಿಸಿದರು. ಪ್ರಧಾನ ಕಾರ್ಯದರ್ಶಿ ಡಾ. ದಿನಕರ ಎಸ್. ಪಚ್ಚನಾಡಿ ಪ್ರಶಸ್ತಿ ಫಲಕ ವಾಚಿಸಿದರು.

`ಯಕ್ಷಾಂಗಣ’ದ ಕಾರ್ಯಾಧ್ಯಕ್ಷ ಭಾಸ್ಕರ ರೈ ಕುಕ್ಕುವಳ್ಳಿ ಅಭಿನಂದನಾ ನುಡಿಗಳನ್ನಾಡಿ ಸ್ವಾಗತಿಸಿದರು. `ಕುಂಬಳೆ ಸುಂದರರಾಯರು ಇರಾ ಕುಂಡಾವು, ಸುರತ್ಕಲ್ ಮತ್ತು ಧರ್ಮಸ್ಥಳ ಮೇಳಗಳಲ್ಲಿ ನಾಲ್ಕು ದಶಕಗಳ ಸೇವೆ ಸಲ್ಲಿಸಿ ಮುಂದೆ ಸುರತ್ಕಲ್ ಕ್ಷೇತ್ರದ ಶಾಸಕರಾಗಿ, ಯಕ್ಷಗಾನ ಬಯಲಾಟ ಅಕಾಡೆಮಿಯ ಅಧ್ಯಕ್ಷರಾಗಿ, ಸಂಸ್ಕಾರ ಭಾರತಿಯ ರಾಜ್ಯಾಧ್ಯಕ್ಷರಾಗಿ ವಿವಿಧ ಮಗ್ಗುಲುಗಳಲ್ಲಿ ಕೆಲಸ ಮಾಡಿದ್ದಾರೆ.

ಶುದ್ಧ, ಪ್ರಾಸಬದ್ಧ ಭಾಷಾ ಸೊಗಡಿನ ಅವರ ಅರ್ಥಗಾರಿಕೆ ಕನ್ನಡದ ಮೌಖಿಕ ಸಾಹಿತ್ಯಕ್ಕೆ ಅತ್ಯುತ್ತಮ ಕೊಡುಗೆ. ಆದ್ದರಿಂದಲೇ ಈ ಬಾರಿಯ ಸಪ್ತಾಹದಲ್ಲಿ ಅವರು ನಿರ್ವಹಿಸಿದ ನಾಯಕ ಪಾತ್ರ ಕೇಂದ್ರಿತ ಏಳು ಪ್ರಸಂಗಗಳನ್ನು `ಸುಂದರ ಅರ್ಥಸರಣಿ’ ಎಂಬ ಪರಿಕಲ್ಪನೆಯಲ್ಲಿ ಪೋಣಿಸಲಾಗಿದ್ದು, ಅವು ಕಲಾಭಿಮಾನಿಗಳಿಂದ ಮೆಚ್ಚುಗೆ ಗಳಿಸಿದೆ’ ಎಂದವರು ನುಡಿದರು.

ಕೋಶಾಧಿಕಾರಿ ತೋನ್ಸೆ ಪುಷ್ಕಳ ಕುಮಾರ್ ಕಾರ್ಯಕ್ರಮ ಸಂಯೋಜಿಸಿದರು. ಸುಧಾಕರ ರಾವ್ ಪೇಜಾವರ ವಂದಿಸಿದರು. ಈ ಸಂದರ್ಭದಲ್ಲಿ ಕುಂಬಳೆಯವರ ಮಕ್ಕಳಾದ ಪ್ರಸನ್ನಕುಮಾರ್, ಪ್ರವೀಣ್ ಕುಮಾರ್, ಶಾಂತಾ ಶಿಶಿಧರನ್, ಸಬಿತಾ ಸತ್ಯನಾರಾಯಣ, ಮಮತಾ ಶ್ರೀಧರನ್ ಮತ್ತು ಅಳಿಯ ಸತ್ಯನಾರಾಯಣ ಉಪಸ್ಥಿತರಿದ್ದರು.

Comments are closed.