ಕರಾವಳಿ

ಸಿದ್ದರಾಮಯ್ಯ ಸರಕಾರ ಅವಧಿಗೆ ಮೊದಲೇ ಪತನ : ಕಾಂಗ್ರೆಸ್‌ನ ಹಿರಿಯ ನಾಯಕ ಪೂಜಾರಿ ಭವಿಷ್ಯ

Pinterest LinkedIn Tumblr

pujary_press_cm_1

ಮಂಗಳೂರು, ಅ.31: ರಾಜ್ಯದ ಕಾಂಗ್ರೆಸ್ ವಲಯದಲ್ಲಿ 20 ಶಾಸಕರು ಸಿದ್ದರಾಮಯ್ಯರ ವಿರುದ್ಧ ಅತೃಪ್ತಿ ಹೊಂದಿದ್ದಾರೆ ಮತ್ತು ಬಂಡಾಯ ಏಳುವ ಸ್ಥಿತಿಯಲ್ಲಿದ್ದಾರೆ ಎನ್ನುವ ಬಗ್ಗೆ ಮಾಧ್ಯಮಗಳ ಮೂಲಕ ವರದಿಯಾಗಿದೆ. ಇದು ನಿಜವಾದಲ್ಲಿ ಸಿದ್ದರಾಮಯ್ಯ ಸರಕಾರ ಪೂರ್ಣ ಅವಧಿಗೆ ಮೊದಲೇ ಪತನಗೊಳ್ಳಬಹುದು. ಮುಂದಿನ ಅವಧಿಗೆ ರಾಜ್ಯದಲ್ಲಿ ಕಾಂಗ್ರೆಸ್ ಮುಕ್ತ ಕರ್ನಾಟಕದ ಮೋದಿ ಕನಸು ನಿಜವಾಗಬಹುದು ಎಂದು ಕಾಂಗ್ರೆಸ್ ನ ಹಿರಿಯ ನಾಯಕ ಹಾಗೂ ಮಾಜಿ ಕೇಂದ್ರ ಸಚಿವ ಬಿ.ಜನಾರ್ಧನ ಪೂಜಾರಿ ಭವಿಷ್ಯ ನುಡಿದಿದ್ದಾರೆ.

ನಗರದ ಪತ್ರಿಕಾ ಭವನದಲ್ಲಿ ಸೋಮವಾರ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಟಿ.ವಿ. ಮಾಧ್ಯಮ ಸಂಸ್ಥೆಯೊಂದು ಇತ್ತೀಚೆಗೆ ನಡೆಸಿದ ಸಮೀಕ್ಷೆಯ ಪ್ರಕಾರ ಮುಂದಿನ ಚುನಾವಣೆಯಲ್ಲಿ ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರ ಕಳೆದುಕೊಳ್ಳಲಿದೆ ಎಂಬ ವರದಿ ಮಾಡಿದೆ. ಕಾಂಗ್ರೆಸ್ ಮುಖಂಡರು ಈ ಬಗ್ಗೆ ಎಚ್ಚೆತ್ತು ಕಾರ್ಯನಿರ್ವ ಹಿಸಬೇಕಾಗಿದೆ. ಸಿದ್ದರಾಮಯ್ಯರ ನೇತೃತ್ವದಲ್ಲಿ ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ರಾಜ್ಯದಲ್ಲಿ ಅಧಿಕಾರ ಹಿಡಿಯುವುದು ಕಷ್ಟ ಎಂಬ ಅಭಿಪ್ರಾಯ ಸಾರ್ವಜನಿಕ ವಲಯದಿಂದಲೂ ವ್ಯಕ್ತವಾಗುತ್ತಿದೆ.

pujary_press_cm_2

ರಾಜ್ಯದಲ್ಲಿ ಈ ಪರಿಸ್ಥಿತಿ ಬರಬಾರದು ಎಂದಾದರೆ ಈ ಕೂಡಲೇ ಸಿದ್ದರಾಮಯ್ಯ ಮುಖ್ಯಮಂತ್ರಿ ಸ್ಥಾನಗೆ ರಾಜೀನಾಮೆ ನೀಡಬೇಕು. ಅದರ ಬದಲಿಗೆ ದಲಿತ ನಾಯಕ ಡಾ.ಜಿ.ಪರಮೇಶ್ವರ ಅವರನ್ನು ಮುಖ್ಯಮಂತ್ರಿಯನ್ನಾಗಿಸುವ ಬಗ್ಗೆ ಕಾಂಗ್ರೆಸ್ ಶಾಸಕರು ತೀರ್ಮಾನಿಸಬೇಕು. ಇನ್ನೂಳಿದ ಅವಧಿಯಲ್ಲಿ ಡಾ.ಜಿ.ಪರಮೇಶ್ವರ್ ಅವರು ಮುಖ್ಯಮಂತ್ರಿಯಾದರೆ ಮಾತ್ರ ರಾಜ್ಯದಲ್ಲಿ ಮತ್ತೆ ಕಾಂಗ್ರೆಸ್ ಮರಳಿ ಅಧಿಕಾರ ಪಡೆಯಲು ಸಾದ್ಯ ಎಂದು ಹೇಳಿದರು.

ಭೂ ಹಗರಣ ಆರೋಪ : ಎಚ್.ಡಿ.ಕೆ ವಿರುದ್ಧ ತನಿಖೆಗೆ ನಡೆಯಲಿ:

ರಾಜ್ಯದಲ್ಲಿ ಸಾಮಾಜಿಕ ಕಾರ್ಯಕರ್ತ ಆರ್.ಸಿ.ಹಿರೇಮಠರವರು 200 ಎಕ್ರೆ ಗೋಮಾಳ ಭೂಮಿಯ ಅಕ್ರಮ ಹಗರಣದ ಬಗ್ಗೆ ಎಚ್.ಡಿ.ಕುಮಾರಸ್ವಾಮಿ ಅವರ ವಿರುದ್ಧ ಮಾಡಿರುವ ಆರೋಪಕ್ಕೆ ಸಂಬಂಧಿಸಿದಂತೆ ಸರಕಾರ ತನಿಖೆ ನಡೆಸಲಿ. ಜೆಡಿಎಸ್ ಅಧ್ಯಕ್ಷ ಎಚ್.ಡಿ.ದೇವೇಗೌಡ ಈ ಬಗ್ಗೆ ರಾಜ್ಯದ ಜನತೆಗೆ ಉತ್ತರ ನೀಡಲಿ ಎಂದು ಜನಾರ್ದನ ಪೂಜಾರಿ ಆಗ್ರಹಿಸಿದರು.

ಮಾಜಿ ಶಾಸಕ ವಿಜಯ ಕುಮಾರ್ ಶೆಟ್ಟಿ, ಕಾಂಗ್ರೆಸ್ ಮುಖಂಡರಾದ ಕಳ್ಳಿಗೆ ತಾರಾನಾಥ ಶೆಟ್ಟಿ, ಕರುಣಾಕರ ಶೆಟ್ಟಿ ಮೊದಲಾದವರು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

Comments are closed.