ಕರಾವಳಿ

ಕಟೀಲು ಆಸ್ರಣ್ಣ ಮನೆ ದರೋಡೆ ಪ್ರಕರಣ : ಮತ್ತೆ ನಾಲ್ವರ ಬಂಧನ :ಚಿನ್ನಾಭರಣ ಹಾಗೂ ರಿವಾಲ್ವರ್, ಮಾರಕಾಸ್ತ್ರ ವಶ

Pinterest LinkedIn Tumblr

police_press_meet_1

ಮಂಗಳೂರು, ಅ.31: ಮಂಗಳೂರು ಸಿಸಿಬಿ ಪೊಲೀಸರು ಹಾಗೂ ಬಜ್ಪೆ ಪೊಲೀಸರು ನಡೆಸಿದ ಜಂಟಿ ಕಾರ್ಯಾಚರಣೆಯಲ್ಲಿ ಕಟೀಲು ದೇವಳದ ಅರ್ಚಕ ವಾಸುದೇವ ಆಸ್ರಣ್ಣ ಅವರ ಮನೆ ದರೋಡೆ ಪ್ರಕರಣಕ್ಕೆ ಪ್ರಕರಣಕ್ಕೆ ಸಂಬಂಧಿಸಿ ಮತ್ತೆ ನಾಲ್ವರು ಪ್ರಮುಖ ಆರೋಪಿಗಳನ್ನು ಬಂಧಿಸಿದ್ದಾರೆ.

kateelu_accused

ಕಾರ್ಕಳ ಭಂಡಾರಿಬೆಟ್ಟು ಬೈಲು ಮನೆ ನಿವಾಸಿ ಭರತ್ ಶೆಟ್ಟಿ (30), ಮೆಲ್ಕಾರ್ ನಿವಾಸಿ ಮುಹಮ್ಮದ್ ಅಲಿ(35), ಹಳೆಯಂಗಡಿ ಪಾವಂಜೆ ನಿವಾಸಿ ಪುರುಷೋತ್ತಮ(44) ಮತ್ತು ಸೋಮೇಶ್ವರ ಸಂಕೊಲಿಗೆ ನಿವಾಸಿ ಹರೀಶ್ ಗಟ್ಟಿ(41) ಬಂಧಿತ ಆರೋಪಿಗಳಾಗಿದ್ದಾರೆ ಎಂದು ಮಂಗಳೂರು ನಗರ ಪೊಲೀಸ್ ಆಯುಕ್ತ ಎಂ.ಚಂದ್ರಶೇಖರ್ ಅವರು ತಿಳಿಸಿದ್ದಾರೆ.

police_press_meet_2 police_press_meet_3

ಸೋಮವಾರ ತಮ್ಮ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಕಟೀಲು ದೇವಳದ ಅರ್ಚಕ ವಾಸುದೇವ ಆಸ್ರಣ್ಣ ಅವರ ಮನೆಯಿಂದ ಲಕ್ಷಾಂತರ ರೂ. ವೌಲ್ಯದ ನಗ-ನಗದು ದೋಚಿದ ಪ್ರಕರಣಕ್ಕೆ ಸಂಬಂಧಿಸಿ ಮತ್ತೆ ನಾಲ್ವರು ಪ್ರಮುಖ ಆರೋಪಿಗಳನ್ನು ಬಂಧಿಸಲಾಗಿದ್ದು, ಬಂಧಿತ ಆರೋಪಿಗಳಿಂದ 450 ಗ್ರಾಂ ಚಿನ್ನಾಭರಣವನ್ನು ವಶಪಡಿಸಿಕೊಳ್ಳಲಾಗಿದೆ. ಅಲ್ಲದೇ ದರೋಡೆಗೆ ಬಳಸಿದ ಪಿಸ್ತೂಲ್ , ರಿವಾಲ್ವರ್ ಹಾಗೂ ಮಾರಕಾಸ್ತ್ರಗಳನ್ನು ಆರೋಪಿಗಳಿಂದ ವಶಪಡಿಸಿಕೊಳ್ಳಲಾಗಿದೆ ಎಂದು ತಿಳಿಸಿದರು.

police_press_meet_4 police_press_meet_5

ಕಳೆದ ಅ.4ರಂದು ಗಿಡಿಗೆರೆಯಲ್ಲಿನ ಅಸ್ರಣ್ಣರ ಮನೆಗೆ ಮಧ್ಯರಾತ್ರಿಯ ಸುಮಾರು ನುಗ್ಗಿದ್ದ ಎಂಟು ಮಂದಿ ದರೋಡೆಕೋರರ ತಂಡ ತಲವಾರು, ಬಂದೂಕು, ರಾಡ್ ತೋರಿಸಿ ಮನೆಮಂದಿಯನ್ನು ಬೆದರಿಸಿದ್ದಲ್ಲದೆ 82 ಪವನ್ ಚಿನ್ನಾಭರಣ, 50 ಸಾವಿರ ರೂ. ನಗದು ದೋಚಿ ಪರಾರಿಯಾಗಿದ್ದರು.

ಪ್ರಕರಣಕ್ಕೆ ಸಂಬಂಧಿಸಿ ತನಿಖೆ ಕೈಗೆತ್ತಿಕೊಂಡಿರುವ ಬಜ್ಪೆ ಠಾಣಾ ಪೊಲೀಸರು ಮಂಗಳೂರು ಸಿಸಿಬಿ ಪೊಲೀಸರ ಸಹಕಾರದೊಂದಿಗೆ ಪ್ರಕರಣದ ಪ್ರಮುಖ ಆರೋಪಿ ಸುರೇಂದ್ರ ಭಟ್ ಎಂಬಾತ ಸೇರಿದಂತೆ ಏಳು ಮಂದಿಯನ್ನು ಈಗಾಗಲೇ ಬಂಧಿಸಿದ್ದಾರೆ.

police_press_meet_6

ಈ ಪ್ರಕರಣವನ್ನು ಭೇದಿಸಿದ ಸಿಸಿಬಿ ಮತ್ತು ಬಜ್ಪೆ ಪೊಲೀಸ್ ತಂಡಕ್ಕೆ ಕಮಿಷನರ್ ಎಂ.ಚಂದ್ರಶೇಖರ್ ಅವರು ತಲಾ 10 ಸಾವಿರ ರೂ. ನಗದು ಬಹುಮಾನವನ್ನು ಘೋಷಿಸಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಡಿಸಿಪಿ ಡಾ. ಸಂಜೀವ ಎಮ್ ಪಾಟೀಲ್ ಉಪಸ್ಥಿತರಿದ್ದರು.

===============================

ಸಂಪೂರ್ಣ ವಿವರ

ನಾಂಕ 04-10-2016 ರಂದು ಕಟೀಲು ಅಸ್ರಣ್ಣರವರ ಮನೆಯಲ್ಲಿ ದರೋಡೆ ಮಾಡಿದ ಆರೋಪಿಗಳ ಪೈಕಿ ಪ್ರಮುಖ 4 ಜನರನ್ನು ಬಂಧಿಸುವಲ್ಲಿ ಹಾಗೂ ದರೋಡೆ ಮಾಡಿದ ಚಿನ್ನಾಭರಣಗಳು ಮತ್ತು ದರೋಡೆ ಸಮಯದಲ್ಲಿ ಉಪಯೋಗಿಸಿದ ಪಿಸ್ತೂಲು, ರಿವಾಲ್ವರ್ ಹಾಗೂ ಮಾರಾಕಾಸ್ತ್ರ ಗಳನ್ನು ಸ್ವಾಧೀನಪಡಿಸುವಲ್ಲಿ ಮಂಗಳೂರು ಸಿಸಿಬಿ ಪೊಲೀಸರು  ಯಶಸ್ಸಿಯಾಗಿರುತ್ತಾರೆ. 

ದಸ್ತಗಿರಿ ಮಾಡಿದ  ಆರೋಪಿಗಳ ಹೆಸರು ವಿಳಾಸ

  • ಭರತ್ ಶೆಟ್ಟಿ 30 ವರ್ಷ ತಂದೆ: ದಿವಂಗತ ಬಾಲಕೃಷ್ಣ ಶೆಟ್ಟಿ, ವಾಸ: ಬೈಲು ಮನೆ, ಭಂಡಾರಿಬೆಟ್ಟು ಪಳ್ಳಿ ಅಂಚೆ ಮತ್ತು ಗ್ರಾಮ, ಕಾರ್ಕಳ ತಾಲೂಕು.
  • ಮೊಹಮ್ಮದ್ ಆಲಿ, ಪ್ರಾಯ 35 ವರ್ಷ ತಂದೆ: ದಿವಂಗತ ಖಾದರ್, ವಾಸ: ಚಂದ್ರಕಾಂತರವರ ಬಾಡಿಗೆ ಮನೆ, ದುರ್ಗಾಪರಮೇಶ್ವರಿ ಭಜನಾ ಮಂದಿರವ ಎದುರು, ಮೆಲ್ಕಾರ್, ಬಂಟ್ವಾಳ ತಾಲೂಕು
  • ಪುರುಷೋತ್ತಮ 44 ವರ್ಷ ತಂದೆ: ದಿವಂಗತ ಸೋಮಪ್ಪ ಸುವರ್ಣ, ವಾಸ: ಶಿವದೇವಿ ಕೃಪ ಪಾವಂಜೆ, ಹಳೆಯಂಗಡಿ ಅಂಚೆ, ಮಂಗಳೂರು ತಾಲೂಕು.
  • ಹರೀಶ್ ಗಟ್ಟಿ, 41 ವರ್ಷ ತಂದೆ: ದಿವಂಗತ ಕೆ.ಶೇಖರ ಗಟ್ಟಿ, ವಾಸ: ಗುರುಕೃಪ ಮನೆ, ಸಂಕೊಲಿಗೆ ಸೋಮೇಶ್ವರ  ಗ್ರಾಮ,  ಉಚ್ಚಿಲ ಅಂಚೆ, ಮಂಗಳೂರು ತಾಲೂಕು

ದಿನಾಂಕ 04-10-2016 ರಂದು ಬೆಳಗ್ಗಿನ ಜಾವ ಕಟೀಲು ಅಸ್ರಣ್ಣರವರ ಮನೆಗೆ 7-8 ಅಪರಿಚಿತರು ಮಾರಾಕಾಯುಧ ಮತ್ತು ರಿವಾಲ್ವರ್ ಗಳೊಂದಿಗೆ ಅಕ್ರಮವಾಗಿ ಮನೆಯೊಳಗೆ ನುಗ್ಗಿ ಮನೆಯಲ್ಲಿದ್ದ ಅಸ್ರಣ್ಣರವರ ಮಗ ದೇವಿಕುಮಾರ ಅಸ್ರಣ್ಣ ಹಾಗೂ ಮನೆಯಲ್ಲಿದ್ದವರನ್ನು ಕಟ್ಟಿ ಹಾಕಿ  ಒಟ್ಟು ಅಂದಾಜು 80 ಪವನ್ ಚಿನ್ನಾಭರಣಗಳನ್ನು ಹಾಗೂ ನಗದು ಹಣವನ್ನು ದರೋಡೆ ಮಾಡಿಕೊಂಡು ಹೋಗಿದ್ದು ಎಂಬಿತ್ಯಾದಿಯಾಗಿದ್ದು, ಈ ಕುರಿತು ಬಜಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

ಪ್ರಕರಣದಲ್ಲಿ ಆರೋಪಿ ಮತ್ತು ಸೊತ್ತು ಪತ್ತೆಯ ಬಗ್ಗೆ ಮಾನ್ಯ ಪೊಲೀಸ್ ಕಮಿಷನರ್ ರವರು ತಂಡಗಳನ್ನು ರಚಿಸಿದ್ದು,  ಈಗಾಗಲೇ  ಒಟ್ಟು 7 ಜನರನ್ನು ದಸ್ತಗಿರಿ ಮಾಡಲಾಗಿದೆ.

ಮೇಲಾಧಿಕಾರಿಯವರ ಆದೇಶದಂತೆ ಮಂಗಳೂರು ಸಿಸಿಬಿ ಘಟಕದ ಪೊಲೀಸ್ ಇನ್ಸ್ ಪೆಕ್ಟರ್                  ಸುನಿಲ್ ವೈ ನಾಯಕ್ ರವರು ಪ್ರಕರಣದಲ್ಲಿ  ತಲೆಮರೆಸಿಕೊಂಡಿರುವ  ಆರೋಪಿಗಳ ಪತ್ತೆಯ ಬಗ್ಗೆ ತನ್ನ ತಂಡದೊಂದಿಗೆ ಹೊರರಾಜ್ಯವಾದ ಮಹಾರಾಷ್ಟ್ರ (ಪನ್ವೆಲ್, ಥಾಣೆ, ಅಂದೇರಿ, ದೊಂಬಿವಿಲಿ,ಪೂಣಾ) ಗೋವಾ,ಹಾಗೂ ಹೊರಜಿಲ್ಲೆಗಳಾದ ಚಿಕ್ಕಮಂಗಳೂರು, ಉಡುಪಿ  ಮೊದಲಾದ ಕಡೆಗಳಲ್ಲಿ ಸಂಚರಿಸಿ ಆರೋಪಿ ಪತ್ತೆಯ ಬಗ್ಗೆ ಶ್ರಮಿಸಿದ್ದು,  ಕಾರ್ಕಳದ ಭರತ್ ಶೆಟ್ಟಿ ಎಂಬವನು ದೀಪಾವಳಿ ಹಬ್ಬದ ಪ್ರಯುಕ್ತ ಊರಿಗೆ ಬಂದಿರುವ ಬಗ್ಗೆ ಖಚಿತ ಮಾಹಿತಿ ಸಂಗ್ರಹಿಸಿದ್ದು ದಿನಾಂಕ         30-10-2016 ರಂದು  ಕಾರ್ಕಳ ತಾಲೂಕಿನ ಪಳ್ಳಿ ಗ್ರಾಮದಲ್ಲಿರುವ ಭರತ್ ಶೆಟ್ಟಿಯ ಮನೆಯಿಂದ ಭರತ್ ಶೆಟ್ಟಿಯನ್ನು ವಶಕ್ಕೆ ಪಡೆದಿದ್ದು, ಈತನಿಂದ ಈ ಕೆಳಗಿನ ಸೊತ್ತುಗಳನ್ನು ಸ್ವಾಧೀನಪಡಿಸಲಾಯಿತು.

  • 455 ಗ್ರಾಂ ತೂಕದ  ಚಿನ್ನಾಭರಗಳು,
  • ಒಂದು ರಿವಾಲ್ವರ್
  • ನಾಲ್ಕು ಸಜೀವ ಗುಂಡುಗಳು.
  • ಮೊಬೈಲ್ ಪೋನ್ ಒಂದು

ನಂತರ  ಭರತ್ ಶೆಟ್ಟಿಯು ನೀಡಿದ ಮಾಹಿತಿಯಂತೆ ಬಂಟ್ವಾಳ ತಾಲೂಕಿನ ಮೆಲ್ಕಾರು ಎಂಬಲ್ಲಿಯ ವಾಸಿ ಮೊಹಮ್ಮದ್ ಆಲಿಯನ್ನು  ಆತನ ಮನೆಯಿಂದ  ವಶಕ್ಕೆ ಪಡೆದು  ಆತನಿಂದ ಈ ಕೆಳಗಿನ ಸೊತ್ತುಗಳನ್ನು ಸ್ವಾಧೀನಪಡಿಸಲಾಯಿತು.

  • ಪಿಸ್ತೂಲು ಒಂದು
  • ಸಜೀವ ಗುಂಡುಗಳು ನಾಲ್ಕು
  • ಮೊಬೈಲ್ ಪೋನ್ ಒಂದು

ನಂತರ  ಭರತ್ ಶೆಟ್ಟಿಯು ನೀಡಿದ ಮಾಹಿತಿಯಂತೆ ಹಳೆಯಂಗಡಿ ವಾಸಿ ಪುರುಷೋತ್ತಮ ಮತ್ತು ಸೋಮೇಶ್ವರ ಗ್ರಾಮದ ಸಂಕೊಲಿಗೆ ವಾಸಿ ಹರೀಶ್ ಗಟ್ಟಿ ಎಂಬವರುಗಳನ್ನು ಬಿಜೈ ಕಾಪಿಕಾಡಿನಿಂದ ವಶಕ್ಕೆ ಪಡೆಯಲಾಗಿದೆ.

ಪುರುಷೋತ್ತಮ ಎಂಬವನ ವಶದಿಂದ ಈ ಕೆಳಗಿನ ಸೊತ್ತುಗಳನ್ನು ಸ್ವಾಧೀನಪಡಿಸಲಾಯಿತು.

1) ಬ್ರೀಚ್  ಲೋಡಿಂಗ್ ಬಂದೂಕು ಒಂದು

2) ಕತ್ತಿ ಒಂದು

3) ಮೊಬೈಲ್ ಪೋನ್  ಎರಡು

ಹರೀಶ್ ಗಟ್ಟಿ ಎಂಬವನ ವಶದಿಂದ ಈ ಕೆಳಗಿನ ಸೊತ್ತುಗಳನ್ನು ಸ್ವಾಧೀನಪಡಿಸಲಾಯಿತು.

1) ಬ್ರೀಚ್  ಲೋಡಿಂಗ್ ಬಂದೂಕಿನ ಸಜೀವ ಮದ್ದುಗುಂಡುಗಳು – ಮೂರು

2) ಮೊಬೈಲ್ ಪೋನ್ ಎರಡು

ಭರತ್ ಶೆಟ್ಟಿಯ ವಿರುದ್ಧ ಕಾರ್ಕಳದಲ್ಲಿ ಸುಲೈಮಾನ್ ಕೊಲೆ ಪ್ರಕರಣ, ಲಿಯೋ ಪಿರೇರಾ ಎಂಬವರ  ಅಪಹರಣ ಪ್ರಕರಣ ಹಾಗೂ ಮುಂಬಾಯಿಯ ವೀಟಿ ಪೊಲೀಸ್ ಠಾಣೆಯಲ್ಲಿ ಶಸ್ತ್ರಾಸ್ತ್ರ ಕಾಯ್ದೆ ಪ್ರಕರಣ ದಾಖಲಾಗಿದ್ದು, ಈ ಪ್ರಕರಣದಲ್ಲಿ ಈತನು ಮಾನ್ಯ ನ್ಯಾಯಾಲಯಕ್ಕೆ ಹಾಜರಾಗದೇ ತಲೆಮರೆಸಿಕೊಂಡಿದ್ದು, ಈಗ ವಾರಂಟು ಜ್ಯಾರಿಯಲ್ಲಿರುತ್ತದೆ.  ಈ ಪ್ರಕರಣದಲ್ಲಿ ಉಳಿದ ಮೂರು ಜನರು ಕೂಡ ಬಾಗಿಯಾಗಿದ್ದು ತನಿಖೆಯಲ್ಲಿ ಕಂಡುಬರುತ್ತದೆ.

ಪೊಲೀಸ್ ಕಮೀಷನರ್ ಶ್ರೀ ಎಂ ಚಂದ್ರಶೇಖರ್ ರವರ ಆದೇಶದಂತೆ ಕಾನೂನು ಮತ್ತು ಸುವ್ಯವಸ್ಥೆಯ ಡಿ.ಸಿ.ಪಿ            ಶ್ರೀ.-ಕೆ.ಎಂ. ಶಾಂತರಾಜು, ಹಾಗೂ ಅಪರಾಧ ಹಾಗೂ ಸಂಚಾರ ವಿಭಾಗದ ಡಿ.ಸಿ.ಪಿ ಯವರಾದ ಡಾ: ಸಂಜೀವ್ ಎಂ. ಪಾಟೀಲ್ ರವರ ಮಾರ್ಗದರ್ಶನದಲ್ಲಿ ಸಿ.ಸಿ.ಬಿ ಘಟಕದ ಇನ್ಸಪೆಕ್ಟರ್ ಶ್ರೀ. ಸುನೀಲ್ ವೈ ನಾಯಕ್, ಪಿಎಸ್ ಐ ಶ್ಯಾಮ್ ಸುಂದರ್ ರವರು ಹಾಗೂ ಸಿಬ್ಬಂದಿ ಯವರಾದ  ರಾಮಪೂಜಾರಿ, ಶೀನಪ್ಪ, ಗಣೇಶ್ ಕಲ್ಲಡ್ಕ, ಚಂದ್ರಶೇಖರ, ಚಂದ್ರಹಾಸ, ಚಂದ್ರ.ಕೆ, ಯೋಗೀಶ, ಪ್ರಶಾಂತ್ ಶೆಟ್ಟಿ, ದಾಮೋದರ, ಶಾಜು.ಕೆ.ನಾಯರ್, ರಾಜೇಂದ್ರ ಪ್ರಸಾದ್, ಮಣಿ.ಎಂ.ಎನ್, ಸುಧೀರ್ ಶೆಟ್ಟಿ, ಅಬ್ದುಲ್ ಜಬ್ಬಾರ್, ಸುನೀಲ್ ಕುಮಾರ್, ಇಸಾಕ್, ಆಶಿತ್ ವಿಶಾಲ್ ಡಿ’ಸೋಜ, ತೇಜಕುಮಾರ್, ಮತ್ತು ಕಂಪ್ಯೂಟರ್ ವಿಭಾಗದ  ಸಿಬ್ಬಂದಿಯವರಾದ ಮನೋಜ್ ಕುಮಾರ್ ಪತ್ತೆಕಾರ್ಯದಲ್ಲಿ ಭಾಗವಹಿಸಿದ್ದರು.

Comments are closed.