ರಾಷ್ಟ್ರೀಯ

ಭೋಪಾಲ್ ಜೈಲ್ ನಿಂದ ಪರಾರಿಯಾದ 8 ಸಿಮಿ ಉಗ್ರರ ಹತ್ಯೆ

Pinterest LinkedIn Tumblr

eklp

ಭೋಪಾಲ್: ಭೋಪಾಲ್ ಕೇಂದ್ರೀಯ ಕಾರಾಗೃಹದಿಂದ ಸೋಮವಾರ ಬೆಳಗಿನ ಜಾವ ಪರಾರಿಯಾಗಿದ್ದ ನಿಷೇಧಿತ ಸಿಮಿ ಸಂಘಟನೆಯ 8 ಉಗ್ರರನ್ನು ಪೊಲೀಸರು ಎನ್ ಕೌಂಟರ್ ನಲ್ಲಿ ಹತ್ಯೆ ಮಾಡಿದ್ದಾರೆ.

ಇಂದು ಬೆಳಗಿನ ಜಾವ 4.30ರ ಸುಮಾರಿಗೆ ಜೈಲಿನ ಮುಖ್ಯ ಪೇದೆಯನ್ನು ಕೊಂದು ಪರಾರಿಯಾಗಿದ್ದ ಎಂಟು ಮಂದಿ ಉಗ್ರರನ್ನು ಭೋಪಾಲ್ ಹೊರವಲಯದ ಐಂತಿಕೇಡಿ ಗ್ರಾಮದಲ್ಲಿ ಹತ್ಯೆ ಮಾಡಲಾಗಿದೆ.

ಕೇಂದ್ರ ಕಾರಾಗೃಹದ ಗಾರ್ಡ್ ರಮಾಶಂಕರ್ ಅವರನ್ನು ಹತ್ಯೆಗೈದ ಸಿಮಿ ಉಗ್ರರು ಬೆಟ್ ಶೀಟ್, ಹಗ್ಗ ಬಳಸಿ ಬೆಳಗ್ಗಿನ ಜಾವ 3.30ರ ಸುಮಾರಿಗೆ ಜೈಲಿನಿಂದ ಪರಾರಿಯಾಗಿದ್ದರು, ಪರಾರಿಯಾದ ಉಗ್ರರ ಬೆನ್ನತ್ತಿ 12 ಗಂಟೆಯೊಳಗೆ ಎಲ್ಲಾ ಉಗ್ರರು ಎನ್ ಕೌಂಟರ್ ಗೆ ಬಲಿಯಾಗಿದ್ದಾರೆಂದು ಭೋಪಾಲ್ ಪೊಲೀಸ್ ಅಧಿಕಾರಿಗಳು ವಿವರಿಸಿದ್ದಾರೆ.

ಜೈಲಿನಿಂದ ಎಸ್ಕೇಪ್ ಆಗಿ ಎನ್ ಕೌಂಟರ್ ಗೆ ಬಲಿಯಾದ ಉಗ್ರರನ್ನು ಅಮ್ಜದ್, ಝಾಕೀರ್ ಹುಸೈನ್ ಸಾದಿಖ್, ಮೊಹಮ್ಮದ್ ಸಾದಿಕ್, ಮುಜೀಬ್ ಶೇಖ್, ಮೆಹಬೂಬ್ ಗುಡ್ಡು, ಮೊಹಮ್ಮದ್ ಖಾಲಿದ್ ಅಹ್ಮದ್, ಅಖ್ವೀಲ್ ಹಾಗೂ ಮಜೀದ್ ಎಂದು ಗುರುತಿಸಲಾಗಿದೆ.

ನಿಷೇಧಿತ ಉಗ್ರಗಾಮಿ ಸಂಘಟನೆ ಸಿಮಿ(ಸ್ಟೂಡೆಂಟ್ಸ್ ಇಸ್ಲಾಮಿಕ್ ಮೂವ್ ಮೆಂಟ್)ಯ ಎಂಟು ಮಂದಿ ಉಗ್ರರು ಬಿಗಿ ಭದ್ರತೆ ಹೊಂದಿದ್ದ ಜೈಲಿನಿಂದಲೇ ಎಸ್ಕೇಪ್ ಆಗಿರುವ ಘಟನೆ ಮಧ್ಯಪ್ರದೇಶದ ಭೋಪಾಲ್ ನಲ್ಲಿ ನಡೆದಿದೆ ಎಂದು ಈ ಮೊದಲು ಮಾಧ್ಯಮಗಳಲ್ಲಿ ವರದಿ ಪ್ರಕಟವಾಗಿತ್ತು.

ಭೋಪಾಲ್ ನ ಹೈ ಸೆಕ್ಯುರಿಟಿ ಹೊಂದಿರುವ ಜೈಲಿನಲ್ಲಿದ್ದ 8 ಮಂದಿ ಸಿಮಿ ಉಗ್ರರು ಜೈಲಿನ ಗಾರ್ಡ್ ನ ಕುತ್ತಿಗೆಯನ್ನು ಸ್ಟೀಲ್ ಪ್ಲೇಟ್ ನಿಂದ ಕತ್ತರಿಸಿ ಭಾನುವಾರ ರಾತ್ರಿ ಪರಾರಿಯಾಗಿದ್ದಾರೆಂದು ಮಾಧ್ಯಮದ ವರದಿ ತಿಳಿಸಿತ್ತು.

ಈ ಎಂಟು ಮಂದಿ ಉಗ್ರರಿಗೆ ಇಂಡಿಯನ್ ಮುಜಾಹಿದ್ದೀನ್ ಜೊತೆ ಸಂಪರ್ಕ ಇದ್ದಿದ್ದು, ಇವರೆಲ್ಲರ ವಿರುದ್ಧ ಮಹಾರಾಷ್ಟ್ರ, ಗುಜರಾತ್, ಕೇರಳ, ಒಡಿಶಾ, ಉತ್ತರ ಪ್ರದೇಶ, ಚತ್ತೀಸ್ ಗಢ್ ಸೇರಿದಂತೆ ವಿವಿಧ ರಾಜ್ಯಗಳಲ್ಲಿ ದೂರು ದಾಖಲಾಗಿತ್ತು.

Comments are closed.