ಕರಾವಳಿ

ಖ್ಯಾತ ಭಾಗವತ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಐರೋಡಿ ರಾಮಗಾಣಿಗ ಇನ್ನಿಲ್ಲ

Pinterest LinkedIn Tumblr

ಕುಂದಾಪುರ:  ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಯಕ್ಷಗಾನ ಭಾಗವತಾರಾಗಿದ್ದ, ನಿವೃತ್ತ ಶಿಕ್ಷಕ ಐರೋಡಿ ರಾಮಗಾಣಿಗ ಅವರು ಅನಾರೋಗ್ಯದಿಂದ ಗುರುವಾರ ತಡರಾತ್ರಿ ಕೋಟೇಶ್ವರದ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.

yakshagana-bhagavata_rama-ganiga_death

ಬಾಲ್ಯದಿಂದಲೇ ಯಕ್ಷಗಾನ ಕಲೆಯ ಬಗ್ಗೆ ಆಸಕ್ತಿಯನ್ನು ಮೈಗೂಡಿಸಿಕೊಂಡು ಅತ್ಯಂತ ಆಸಕ್ತಿದಾಯಕವಾಗಿ ಕಲಿಕೆ ಮಾಡಿಕೊಂಡು ಬಂದ ರಾಮಗಾಣಿಗರು ಹಲವು ವರ್ಷಗಳ ಕಾಲ ಮೇಳದಲ್ಲಿ ಭಾಗವತರಾಗಿ ಸೇವೆ ಸಲ್ಲಿಸಿದ್ದಲ್ಲದೇ ಶಿಕ್ಷಕರಾಗಿಯೂ ಹಲವು ವರ್ಷ ಸೇವೆ ಸಲ್ಲಿಸಿದ್ದರು. ಅಲ್ಲದೇ ಕೇಂದ್ರ ಸರಕಾರದ ಸಾಂಸ್ಕ್ರತಿಕ ಇಲಾಖೆಯು ಗಾಣಿಗರನ್ನು ‘ಗುರು’ ಎಂದು ಮಾನ್ಯ ಮಾಡಿದೆ. ಕಡಲತೀರ ಭಾರ್ಗವ ಡಾ. ಶಿವರಾಮ ಕಾರಂತರೊಂದಿಗೆ 15 ವರ್ಷಗಳಿಗೂ ಅಧಿಕ ಯಕ್ಷಗಾನದ ಸಾಂಗತ್ಯ ಹೊಂದುವ ಅವಕಾಶವೂ ರಾಮ ಗಾಣಿಗರಿಗೆ ಲಭಿಸಿದ್ದು ಅವರೊಂದಿಗೆ ಅಪೂರ್ವ ಒಡನಾಟವನ್ನು ಹೊಂದಿದ್ದರು. ಇನ್ನು ಗೊಂಬೆಯಾಟ ಮೊದಲಾದ ಕಲೆಯಲ್ಲಿ ಇವರು ನಿಷ್ಣಾತರಾಗಿದ್ದ ಇವರನ್ನು ಗುರುತಿಸಿ ಹಲವಾರು ಪ್ರಶಸ್ತಿಗಳು ಅರಸಿಕೊಂಡು ಬಂದಿದ್ದವು.

ಅನಾರೋಗ್ಯದಿಂದ ಬಳಲುತ್ತಿದ್ದ ಐರೋಡಿ ರಾಮಗಾಣಿಗರು ಅನಾರೋಗ್ಯ ಹೊಂದಿದ್ದು ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೇ ಚಿಕಿತ್ಸೆ ಫಲಕಾರಿಯಾಗದೇ ಗುರುವಾರ ರಾತ್ರಿ ಅವರು ಕೊನೆಯುಸಿರೆಳೆದಿದ್ದಾರೆ. ಮೃತ ರಾಮಗಾಣಿಗರು ಪತ್ನಿ, ಇಬ್ಬರು ಪುತ್ರರು, ಮೂವರು ಪುತ್ರಿಯರು, ಮೊಮ್ಮಕ್ಕಳು, ಅಪಾರ ಬಂಧು-ಬಳಗ, ಅಭಿಮಾನಿಗಳನ್ನು ಅಗಲಿದ್ದಾರೆ. ಶುಕ್ರವಾರ ಮಧ್ಯಾಹ್ನ ಕುಂಭಾಸಿಯ ಅವರ ನಿವಾಸದಲ್ಲಿ ಅಂತಿಮ ವಿಧಿ-ವಿಧಾನಗಳು ನಡೆಯಲಿದೆ ಎಂದು ಕುಟುಂಬ ಮೂಲಗಳು ತಿಳಿಸಿದೆ.

ವರದಿ- ಯೋಗೀಶ್ ಕುಂಭಾಸಿ

Comments are closed.