ಕರಾವಳಿ

ಅಪರಾಧ ಚಟುವಟಿಕೆಗಳಲ್ಲಿ ಬ್ಯಾರಿ ಸಮುದಾಯದ ಯುವಕರ ಹೆಸರು ಬರುತ್ತಿರುವುದು ಆತಂಕಕಾರಿ ವಿಷಯ : ಮಾಜಿ ಸಚಿವ ಹಾಜಿ ಬಿ. ಎ. ಮೊಹಿದಿನ್

Pinterest LinkedIn Tumblr

beary_kudukatt_1

ಮಂಗಳೂರು, ಅ.8: ಬ್ಯಾರಿ ಭಾಷಾ ಸಪ್ತಾಹದ ಅಂಗವಾಗಿ ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿ ವತಿಯಿಂದ ಹಮ್ಮಿಕೊಳ್ಳಲಾದ ಬ್ಯಾರಿ ಕೂಡುಕಟ್ಟ್ ಮತ್ತು ಸಂವಾದ ಕಾರ್ಯಕ್ರಮ ಶನಿವಾರ ನಗರದ ಹೋಟೆಲ್ ಶ್ರೀನಿವಾಸ್ ಸಭಾಂಗಣದಲ್ಲಿ ನಡೆಯಿತು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದ ಕರ್ನಾಟಕ ಸರ್ಕಾರದ ಮಾಜಿ ಉನ್ನತ ಶಿಕ್ಷಣ ಸಚಿವ ಹಾಜಿ ಬಿ. ಎ. ಮೊಹಿದಿನ್ ಅವರು ನೇರ ಸಂವಾದದವನ್ನುದ್ದೇಶಿಸಿ ಮಾತನಾಡಿ, ಭಾಷೆಗೆ ಯಾವುದೆ ಚೌಕಟ್ಟು ಇಲ್ಲ. ಬ್ಯಾರಿ ಭಾಷೆಯ ಬೆಳವಣಿಗೆಗೆ ಬ್ಯಾರಿ ಬಾಷೆಯನ್ನಾಡುವ ಮಂದಿ ಭಾಷಾಭಿಮಾನವನ್ನು ಹೊಂದಿರಬೇಕು. ಭಾಷಾಭಿಮಾನವಿಲ್ಲದಿದ್ದರೆ ಬ್ಯಾರಿ ಭಾಷೆ ಅಭಿವೃದ್ದಿ ಹೊಂದುವುದಿಲ್ಲ ಎಂದು ಹೇಳಿದರು.

beary_kudukatt_2 beary_kudukatt_3 beary_kudukatt_4 beary_kudukatt_5 beary_kudukatt_6 beary_kudukatt_7

ಬ್ಯಾರಿ ಭಾಷೆ ಅಳಿವಿನಂಚಿನಲ್ಲಿರುವ ಭಾಷೆಯಲ್ಲ. ಅದೊಂದು ಜೀವಂತ ಭಾಷೆ. ಇದು ಎಲ್ಲಾ ಜನರಿಗೂ ಗೊತ್ತಿದೆ. ಭಾಷೆಯ ಬೆಳವಣಿಗೆಗೆ ಶಬ್ದಕೋಶದ ಅಗತ್ಯವಿದೆ. ಈ ಕೆಲಸವನ್ನು ಅಕಾಡಮಿಯು ಮಾಡುತ್ತಿರುವುದು ಶ್ಲಾಘನೀಯ ಎಂದು ಹೇಳಿದ ಅವರು, ಬ್ಯಾರಿ ಭಾಷೆಯಲ್ಲಿಯೂ ಉತ್ಕೃಷ್ಟ ಸಾಹಿತ್ಯ ಬರಬೇಕು. ಈ ನಿಟ್ಟಿನಲ್ಲಿ ಅಕಾಡೆಮಿಯಿಂದ ಇನ್ನಷ್ಟು ಕೆಲಸವಾಗಬೇಕು ಎಂದು ಹೇಳಿದರು.

ಅಪರಾಧ ಚಟುವಟಿಕೆಗಳಲ್ಲಿ ಬ್ಯಾರಿ ಸಮುದಾಯದ ಕೆಲವು ಯುವಕರು ಕಾಣಿಸಿಕೊಳ್ಳುತ್ತಿರುವುದು ಆತಂಕಕಾರಿ ವಿಷಯವಾಗಿದೆ,. ಹಿಂದೆ ಈ ರೀತಿ ಇರುತ್ತಿರಲಿಲ್ಲ. ಶೀಘ್ರ ದುಡ್ಡು ಮಾಡಬೇಕೆಂಬ ಹಂಬಲದಿಂದ ದಾರಿ ತಪ್ಪುತ್ತಿರುವ ಯುವಕರಿಗೆ ಮನವರಿಕೆ ಮಾಡಬೇಕಾಗಿದೆ. ಅಪ್ರಾಮಾಣಿಕವಾಗಿ ದುಡ್ಡ ಮಾಡಿ ಧಾರ್ಮಿಕ ಕ್ಷೇತ್ರದಲ್ಲಿ ಕೈಯಾಡಿಸುತ್ತಿರುವುದರ ವಿರುದ್ಧ ಯಾರೂ ಧ್ವನಿಯೆತ್ತುತ್ತಿಲ್ಲ. ಯುವಜನಾಂಗಕ್ಕೆ ನಮ್ಮ ಸಂಸ್ಕೃತಿ ,ಭಾಷೆ, ಸಂಸ್ಕಾರ ಕಲಿಸುವಲ್ಲಿ ಮಹಿಳೆಯರ ಪಾತ್ರ ಮಹತ್ವದ್ದಾಗಿದೆ ಎಂದು ಮೊಹಿದಿನ್ ಅವರು ಕಿವಿ ಮಾತು ಹೇಳಿದರು.

beary_kudukatt_9 beary_kudukatt_10 beary_kudukatt_11 beary_kudukatt_13 beary_kudukatt_14 beary_kudukatt_15 beary_kudukatt_16

ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ಬಿ.ಎ.ಮುಹಮ್ಮದ್ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.ಪತ್ರಕರ್ತ ಬಿ.ಎಂ.ಹನೀಫ್ ಸಂವಾದ ನಿರ್ವಹಣೆ ಮಾಡಿದರು. ಬಶೀರ್ ಬೈಕಂಪಾಡಿ, ಕೆ.ಪಿ.ಅಬ್ದುಲ್ ಖಾದರ್ ಕುತ್ತೆತ್ತೂರು, ಮರಿಯಮ್ ಇಸ್ಮಾಯೀಲ್, ನಿಸಾರ್ ಮುಹಮ್ಮದ್, ಹಂಝ ಮಲಾರ್, ಅಬ್ದುಲ್ ರಹಿಮಾನ್ ಕುತ್ತೆತ್ತೂರು, ಸಕೀನ ಯಹ್ಯಾ ಸಂವಾದದಲ್ಲಿ ಭಾಗವಹಿಸಿದ್ದರು.

ಮನಪಾ ಸದಸ್ಯ ಮುಹಮ್ಮದ್ ಕುಂಜತ್ತಬೈಲ್, ದ.ಕ ಜಿಲ್ಲಾ ಪಂಚಾಯತ್ ಸದಸ್ಯ ಎಂ.ಎಸ್. ಮುಹಮ್ಮದ್, ಉದ್ಯಮಿ ಜಲೀಲ್ ಕೃಷ್ಣಾಪುರ, ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿ ಸದಸ್ಯ ಸಂಚಾಲಕ ಟಿ.ಎ. ಆಲಿಯಬ್ಬ ಜೋಕಟ್ಟೆ , ಸದಸ್ಯರಾದ ಕೆ.ಇದಿನಬ್ಬ ಬ್ಯಾರಿ, ಯೂಸುಫ್ ವಕ್ತಾರ್, ಅಬ್ಬಾಸ್ ಕಿರುಗುಂದ, ಮುಹಮ್ಮದ್ ಝಕರಿಯ್ಯ, ಮುಹಮ್ಮದ್ ಶರೀಫ್ ನಿರ್ಮುಂಜೆ ಮುಂತಾದವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿ ರಿಜಿಸ್ಟ್ರಾರ್ ಉಮರಬ್ಬ ಸ್ವಾಗತಿಸಿದರು, ಸದಸ್ಯ ಅಬ್ದುಲ್ ಹಮೀದ್ ಗೋಳ್ತಮಜಲು ವಂದಿಸಿದರು. ಸದಸ್ಯ ಅಬ್ದುಲ್ಲತೀಫ್ ನೇರಳಕಟ್ಟೆ ನಿರೂಪಿಸಿದರು.

Comments are closed.