ಮಿಯಾಮಿ: ಮ್ಯಾಥ್ಯೂ ಚಂಡಮಾರುತದಿಂದ ತತ್ತರಿಸಿರುವ ಕೆರಿಬಿಯನ್ ದ್ವೀಪ ರಾಷ್ಟ್ರ ಹೈಟಿಯಲ್ಲಿ ಸತ್ತವರ ಸಂಖ್ಯೆ 800ರ ಗಡಿ ದಾಟಿದೆ. ಬಡ ರಾಷ್ಟ್ರ ಹೈಟಿಯ ದಕ್ಷಿಣ ಭಾಗದ ಮೇಲೆ ಅಪ್ಪಳಿಸಿರುವ ಪ್ರಬಲ ಚಂಡ ಮಾರುತಕ್ಕೆ ಶೇ.80ರಷ್ಟು ಹಳ್ಳಿ, ಪಟ್ಟಣಗಳು ಸಂಪೂರ್ಣ ಜಲ ಸಮಾಧಿಯಾಗಿವೆ.
ಸಾವಿರಾರು ಮನೆಗಳು, ಲಕ್ಷಾಂತ ಎಕರೆ ಬೆಳೆ ನೀರಿನಲ್ಲಿ ಕೊಚ್ಚಿ ಹೋಗಿದೆ. ರಕ್ಷಣಾ ಕಾರ್ಯದಲ್ಲಿ ತೊಡಗಿರುವವರು ಹೆಚ್ಚು ಒಳಭಾಗಕ್ಕೆ ಹೋದಂತೆಲ್ಲ ಮೃತದೇಹಗಳು ಪತ್ತೆಯಾಗುತ್ತಿವೆ.
ರಸ್ತೆ, ಸೇತುವೆ, ದೂರವಾಣಿ ಸೇರಿದಂತೆ ಎಲ್ಲಾ ಸಂಪರ್ಕ ಕಡಿತಗೊಂಡಿದೆ. ಈ ನಡುವೆ ಅಟ್ಲಾಂಟಿಕ್ ಸಾಗರದಿಂದ ಅಮೆರಿಕದ ಕರಾವಳಿ ನಗರಗಳ ಮೇಲೆ ಅಪ್ಪಳಿಸಿರುವ ಚಂಡಮಾರುತವು ಫ್ಲೋರಿಡಾ, ಜಾರ್ಜಿಯಾ ಸೇರಿದಂತೆ ವಿವಿಧ ನಗರಗಳಲ್ಲಿ ಭೀತಿ ಸೃಷ್ಟಿಸಿದೆ.
ಮಳೆ ಜೊತೆಗೆ 130 ಕಿ.ಲೋ ಮೀಟರ್ ವೇಗದಲ್ಲಿ ಬಿರುಗಾಳಿ ಬೀಸುತ್ತಿದ್ದು, 30 ಲಕ್ಷ ಜನರನ್ನ ಬೇರೆಡೆಗೆ ಸ್ಥಳಾಂತರಿಸಲಾಗಿದೆ. ಅಮೆರಿಕ ಅಧ್ಯಕ್ಷ ಬರಾಕ್ ಒಬಾಮಾ ಈ ಪ್ರದೇಶಗಳಲ್ಲಿ ತುರ್ತುಪರಿಸ್ಥಿತಿ ಘೋಷಿಸಿದ್ದು ಪರಿಹಾರ ತಂಡಗಳು ಸ್ಥಳಕ್ಕೆ ಧಾವಿಸಿವೆ.
2007ರಲ್ಲಿ ಇಲ್ಲಿ ಭಾರೀ ಚಂಡಮಾರುತ ಬೀಸಿತ್ತು. ಈ ಬಾರಿ ಫ್ಲಾರಿಡಾ, ಬಹಾಮಾ, ಜಾರ್ಜಿಯಾ, ಜಾಕ್‍ಸೋನ್‍ವಿಲೆ, ಸವನ್ಹಾ ಹಾಗೂ ಸೌತ್ ಕೆರೊಲಿನಾದಲ್ಲಿ ಲಕ್ಷಾಂತರ ನಿವಾಸಿಗಳಿಗೆ ಸುರಕ್ಷಿತ ಪ್ರದೇಶಗಳಿಗೆ ತೆರಳುವಂತೆ ಮುನ್ನೆಚ್ಚರಿಕೆ ನೀಡಲಾಗಿದೆ.