ಕರಾವಳಿ

ಕೋಟ ಚಿನ್ನದಂಗಡಿ ದರೋಡೆ ಪ್ರಕರಣ; ಇನ್ನೋರ್ವ ಆರೋಪಿ ಬಂಧನ; ಚಿನ್ನಾಭರಣ ವಶ

Pinterest LinkedIn Tumblr

* ಯೋಗೀಶ್ ಕುಂಭಾಸಿ

ಕುಂದಾಪುರ: ಕೋಟ ರಾಷ್ಟ್ರೀಯ ಹೆದ್ದಾರಿ ಹಾಗೂ ಕೋಟದ ಮುಖ್ಯ ಪೇಟೆಯ ಸಮೀಪದಲ್ಲಿಯೇ ಇದ್ದ ಜ್ಯುವೆಲರ್ಸ್ ಶಾಪ್‌ಗೆ ನುಗ್ಗಿ ಮಾಲಿಕನಿಗೆ ಮಾರಣಾಂತಿಕ ಹಲ್ಲೆ ನಡೆಸಿ ಚಿನ್ನಾಭರಣಗಳನ್ನು ದರೋಡೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಇನ್ನೋರ್ವ ಆರೋಪಿಯನ್ನು ಪೊಲೀಸರು ವಶಕ್ಕೆ ಪಡೆದು ತನಿಖೆ ನಡೆಸುತ್ತಿದ್ದಾರೆ.

Kota Robbary_Accused_Arrest (1) Kota Robbary_Accused_Arrest (2)

ಗೋವಾ ಮೂಲದ ಪ್ರಥಮೇಶ್(21) ಎಂಬಾತನನ್ನು ಗೋವ ಪೊಲೀಸರಿಂದ ಕೋಟ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಪ್ರಕರಣಕ್ಕೆ ಸಂಬಂದಿಸಿದ ಮೂವರು ಆರೋಪಿಗಳ ಪೈಕಿ ಚಂದ್ರಕಾಂತ ಎಂಬ ಆರೋಪಿಯನ್ನು ಇತ್ತೀಚೆಗೆ ಗೋವಾ ಪೊಲೀಸರಿಂದ ಕೋಟ ಪೊಲೀಸರು ತಮ್ಮ ವಶಕ್ಕೆ ಪಡೆದು ಪೊಲೀಸ್ ಕಸ್ಟಡಿಗೆ ಪಡೆದು ವಿಚಾರಣೆ ನಡೆಸಿದ್ದರು. ಪ್ರಕರಣದ ಮತ್ತೋರ್ವ ಆರೋಪಿ ತಲೆಮರೆಸಿಕೊಂಡಿದ್ದು ಅನ್ಯರಾಜ್ಯದಲ್ಲಿ ಆತನ ಚಲನವಲನ ಇರುವ ಬಗ್ಗೆ ಪೊಲೀಸರು ಮಾಹಿತಿ ಕಲೆಹಾಕಿದ್ದಾರೆ.

ಪ್ರಕರಣದ ವಿವರ: ಮೇ.21 ಶನಿವಾರದಂದು ಕೋಟದ ದುರ್ಗಾ ಜ್ಯುವೆಲರ್‍ಸ್‌ಗೆ ಗ್ರಾಹಕರ ಸೋಗಿನಲ್ಲಿ ಬಂದ ಮೂರು ಮಂದಿ ಯುವಕರು ಅಂಗಡಿಯೊಳಕ್ಕೆ ಹೊಕ್ಕು ಶಟರ್ ಮುಚ್ಚಿ ಮಾಲೀಕ ರವೀಂದ್ರ ಆಚಾರ್ಯ ಅವರಿಗೆ ಮಾರಕಾಸ್ತ್ರಗಳಿಂದ ಮಾರಣಾಂತಿಕವಾಗಿ ಹಲ್ಲೆ ನಡೆಸಿ ಚಿನ್ನದಂಗಡಿಯೊಳಗಿದ್ದ ಚಿನ್ನಾಭರಣಗಳನ್ನು ದೋಚಿದ್ದರು. ರವೀಂದ್ರ ಆಚಾರ್ಯ ಅವರು ಹಲ್ಲೆಯಿಂದಾಗಿ ಕೂಗಿಕೊಂಡಾಗ ಪಕ್ಕದ ಅಂಗಡಿಯವರು ಬಾಗಿಲು ತೆರದು ರಕ್ಷಣೆಗೆ ಮುಂದಾಗಿದ್ದರು. ಕೂಡಲೇ ಎಚ್ಚೆತ್ತುಕೊಂಡ ದರೋಡೆಕೋರರ ಪೈಕಿ ಇಬ್ಬರು ತಾವು ತಂದಿದ್ದ ಬೈಕನ್ನೇರಿ ಪರಾರಿಯಾದರೇ ಇನ್ನೋರ್ವ ಮಾತ್ರ ಬೈಕ್ ಅಲ್ಲಿಯೇ ಬಿಟ್ಟು ಪಕ್ಕದ ಬೀದಿಯಲ್ಲಿ ಓಡಿ ಹೋಗಿದ್ದ. ಆರೋಪಿಗಳು ಪರಾರಿಯಾಗುವ ಧಾವಂತದಲ್ಲಿ ಬಿಟ್ಟುಹೋಗಿದ್ದ ಗೋವಾ ನೋಂದಣಿ ಸಂಖ್ಯೆಯ ಹಳದಿ ಬಣ್ಣದ ಬೈಕ್ ಹಾಗೂ ಕುಂದಪುರದ ಕೆಲವು ಚಿನ್ನದಂಗಡಿಗಳ ಸಿ.ಸಿ. ಕ್ಯಾಮೆರಾ ಚಿತ್ರಗಳನ್ನು ಸುಳಿವಾಗಿಸಿಕೊಂಡು ಪೊಲೀಸರು ತನಿಖೆ ಚುರುಕುಗೊಳ್ಸಿದಾಗ ಮೂವರು ಆರೋಪಿಗಳ ಪತ್ತೆಯಾಗಿತ್ತು. ಆದರೇ ಈ ಪೈಕಿ ಮೂವರೂ ಗೋವಾ ಠಾಣೆಯ ಕೊಲೆ ಪ್ರಕರಣವೊಂದಕ್ಕೆ ಬೇಕಾಗಿದ್ದವರು. ಇವರಲ್ಲಿ ಓರ್ವ ತಲೆಮರೆಸಿಕೊಂಡಿದ್ದು ಇನ್ನಿಬ್ಬರು ಗೋವಾ ಪೊಲೀಸರ ವಶದಲ್ಲಿದ್ದು ತನಿಖೆ ನಡೆಯುತ್ತಿತ್ತು. ಕೋಟ ರಾಬರಿ ಪ್ರಕರಣಕ್ಕೆ ಸಂಬಂದಪಟ್ಟ ಹಾಗೆ ಇಬ್ಬರು ಆರೋಪಿಗಳ ತನಿಖೆ ನಡೆದಿದೆ.

ಇನ್ನು ಬಂಧಿತ ಆರೋಪಿಯ ಬಳಿಯಲ್ಲಿದ್ದ ಚಿನ್ನದಂಗಡಿ ದರೋಡೆಯಲ್ಲಿನ ಮೂರು ಲಕ್ಷ ಅಂದಾಜು ಮೌಲ್ಯದ ಚಿನ್ನಾಭರಣಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆನ್ನಲಾಗಿದೆ.

ಕೋಟ ಪೊಲೀಸರ ಕಾರ್‍ಯಾಚರಣೆ:
ಪ್ರಕರಣದ ಆರೋಪಿಗಳಿಬ್ಬರನ್ನು ಬಂಧಿಸಿ ಅವರಿಂದ ಸೊತ್ತು ವಶಕ್ಕೆ ಪಡೆದು ಪ್ರಕರಣವನ್ನು ಒಂದು ಮಟ್ಟಿಗೆ ಭೇದಿಸುವಲ್ಲಿ ಕೋಟ ಪೊಲೀಸರು ಯಶಸ್ವಿಯಾಗಿದ್ದಾರೆ. ಇನ್ನೋರ್ವ ಆರೋಪಿಗಾಗಿ ಶೋಧ ನಡೆಸುತ್ತಿದ್ದಾರೆ. ಬ್ರಹ್ಮಾವರ ವೃತ್ತ ನಿರೀಕ್ಷಕ ಅರುಣ್ ಬಿ.ನಾಯಕ್ ಮಾರ್ಗದರ್ಶನದಂತೆ, ಕೋಟ ಠಾಣಾಧಿಕಾರಿ ಕಬ್ಬಳ್‌ರಾಜ್ ಅವರ ತಂಡದವರು ಈ ಯಶಸ್ವಿ ಕಾರ್‍ಯಚರಣೆ ನಡೆಸಿದ್ದಾರೆ. ಕೋಟ ಠಾಣೆ ಸಿಬಂದಿಗಳಾದ ಸಂತೋಷ, ವಿಶ್ವನಾಥ ಖಾರ್ವಿ, ಸುರೇಶ, ಸತೀಶ್ ಹಂದಾಡಿ, ಜಯಂತ್ ಮುಂತಾದವರು ಆರೋಪಿಗಳನ್ನು ಬಂಧಿಸಿದ ತಂಡದಲ್ಲಿ ಕಾರ್‍ಯ ನಿರ್ವಹಿಸಿದ್ದಾರೆ.

ಇದನ್ನೂ ಓದಿರಿ:

ಕೋಟ: ಜ್ಯುವೆಲರ್ಸ್ ದರೋಡೆ ಪ್ರಕರಣ ಓರ್ವ ಆರೋಪಿ ಬಂಧನ: 4 ದಿನ ಪೊಲೀಸ್ ಕಸ್ಟಡಿಗೆ

ಕೋಟ: ಗ್ರಾಹಕರ ಸೋಗಿನಲ್ಲಿ ಬಂದ ಆಗಂತುಕರು; ಚಿನ್ನದಂಗಡಿ ಮಾಲೀಕನಿಗೆ ಮಾರಣಾಂತಿಕ ಹಲ್ಲೆ, ದರೋಡೆ

 

Comments are closed.