ಕರಾವಳಿ

ಬಿಜೈ ರಾಜಾ ಹತ್ಯೆ ಪ್ರಕರಣದ ಇಬ್ಬರು ಆರೋಪಿಗಳು ನೀರುಪಾಲು

Pinterest LinkedIn Tumblr

Marauor_2_nirupalu

ಮಂಗಳೂರು, ಜು..6: ಮದ್ಯಪಾನ ಮಾಡಿ ನೀರಿಗೆ ಇಳಿದಿದ್ದ ಯುವಕರಿಬ್ಬರು ನೀರುಪಾಲಾದ ಘಟನೆ ಕಾವೂರು ಠಾಣಾ ವ್ಯಾಪ್ತಿಯ ಮರವೂರು ಡ್ಯಾಂ ಬಳಿ ಮಂಗಳವಾರ ಸಂಜೆ ಸಂಭವಿಸಿದೆ.

ಮೃತರನ್ನು ಮೂಡುಶೆಡ್ಡೆ ನಿವಾಸಿ ಸಹೋದರ ಸಂಬಂಧಿಗಳಾದ ಅವಿನಾಶ್ (26) ಹಾಗೂ ಜೈಸನ್ ಡಿಸೋಜಾ(24) ಎಂದು ಗುರುತಿಸಲಾಗಿದ್ದು, ನೀರುಪಾಲಾದ ಯುವಕರಿಬ್ಬರು 2012ನೇ ಡಿ.1ರಂದು ನಗರದಲ್ಲಿ ನಡೆದಿದ್ದ ಬಿಜೈ ರಾಜಾ ಹತ್ಯೆ ಪ್ರಕರಣದ ಪ್ರಮುಖ ಆರೋಪಿಳು ಎನ್ನಲಾಗಿದೆ.

ನಿನ್ನೆ ಸಂಜೆ ಆರು ಗಂಟೆಯ ಸುಮಾರಿಗೆ ಜೈಸನ್ ಡಿಸೋಜಾ ಹಾಗೂ ಅವಿನಾಶ್ ಸುಮಾರು ಎಂಟು ಮಂದಿ ಸ್ನೇಹಿತರೊಂದಿಗೆ ಮರವೂರು ಸೇತುವೆ ಬಳಿ ಮಾತುಕತೆಯಲ್ಲಿ ತೊಡಗಿದ್ದರೆನ್ನಲಾಗಿದೆ. ಈ ವೇಳೆ ಮದ್ಯಪಾನ ಕೂಡಾ ಮಾಡಿದ್ದು, ಬಳಿಕ ಎಲ್ಲರೂ ಮನೆಗಳಿಗೆ ತೆರಳಲು ಮುಂದಾಗಿದ್ದರು. ಈ ವೇಳೆ ಜೈಸನ್ ಮುಖ ತೊಳೆಯಲೆಂದು ಡ್ಯಾಂ ನೀರಿಗೆ ಇಳಿದಿದ್ದು ಆತ ಆಯತಪ್ಪಿ ನೀರಿಗೆ ಬಿದ್ದ ಕಾರಣ ಆತನನ್ನು ರಕ್ಷಿಸಲು ಇಳಿದ ಅವಿನಾಶ್ ಕೂಡಾ ನೀರುಪಾಲಾಗಿರಬೇಕೆಂದು ಶಂಕಿಸಲಾಗಿದೆ.

ನೀರಿಗೆ ಬಿದ್ದ ಜೈಸನ್ ಹಾಗೂ ಅವಿನಾಶ್‌ರನ್ನು ಅಲ್ಲಿದ್ದ ಸ್ನೇಹಿತರು ರಕ್ಷಿಸಲು ಯತ್ನಿಸಿದ್ದಾರೆ. ಅವರನ್ನು ಮೇಲಕ್ಕೆ ಎತ್ತಲು ಮರದ ಗೆಲ್ಲುಗಳನ್ನು ಕಡಿದು ನೀರಿಗೆ ಹಾಕಿದ್ದಾರೆ. ಆದರೆ ನೀರಿನ ಸೆಳೆತ ಹೆಚ್ಚಿದ್ದರಿಂದ ಅದು ಫಲಪ್ರದವಾಗದೇ ಇದ್ದಾಗ ಕೊನೆಗೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ತಕ್ಷಣ ಕಾವೂರು ಹಾಗೂ ಬಜ್ಪೆ ಪೊಲೀಸರು ಸ್ಥಳಕ್ಕೆ ಧಾವಿಸಿದ್ದು, ಜಂಟಿಯಾಗಿ ಸ್ಥಳೀಯರ ಜೊತೆಗೂಡಿ ಕಾರ್ಯಾಚರಣೆ ನಡೆಸಿದ್ದಾರೆ. ಆದರೆ ಮೃತದೇಹಗಳನ್ನು ಇನ್ನೂ ಪತ್ತೆಹಚ್ಚುವುದು ಸಾಧ್ಯವಾಗಿಲ್ಲ.

ಭಾರೀ ಮಳೆಯಾಗುತ್ತಿರುವ ಪರಿಣಾಮ ಫಲ್ಗುಣಿ ನದಿ ಉಕ್ಕಿ ಹರಿಯುತ್ತಿದ್ದು, ಮೃತದೇಹಗಳು ಕೊಚ್ಚಿಕೊಂಡು ಹೋಗಿರಬೇಕೆಂದು ಶಂಕಿಸಲಾಗಿದೆ. ಕಾವೂರು ಠಾಣಾ ಪೊಲೀಸರು, ಅಗ್ನಿಶಾಮಕದಳ ಸಿಬ್ಬಂದಿ ಸ್ಥಳದಲ್ಲಿ ಕಾರ್ಯಾಚರಣೆ ನಡೆಸುತ್ತಿದ್ದು, ಮೃತದೇಹಗಳು ಇನ್ನಷ್ಟೇ ಪತ್ತೆಯಾಗಬೇಕಿವೆ.

ಘಟನೆ ನಡೆದ ಸ್ಥಳ ಕಾವೂರು ಮತ್ತು ಬಜ್ಪೆ ಪೊಲೀಸ್ ಠಾಣೆಯ ಸರಹದ್ದಿನಲ್ಲಿ ಬರುವ ಕಾರಣ ಮೃತದೇಹ ಸಿಕ್ಕ ಬಳಿಕವಷ್ಟೇ ಪ್ರಕರಣ ದಾಖಲಾಗಬೇಕಿದೆ. ಸ್ಥಳದಲ್ಲಿ ಮುಳುಗುತಜ್ಞರು, ಅಗ್ನಿಶಾಮಕದಳ ಸಿಬ್ಬಂದಿ ಬೀಡುಬಿಟ್ಟಿದ್ದು ಮೃತದೇಹಕ್ಕಾಗಿ ಶೋಧಕಾರ್ಯ ಮುಂದುವರಿಸಿದ್ದಾರೆ. ಡ್ಯಾಂನಲ್ಲಿ ಹೊರಹರಿವು ಜಾಸ್ತಿಯಿರುವ ಕಾರಣ ಮೃತದೇಹಗಳು ಬೇರೆಡೆ ಕೊಚ್ಚಿಕೊಂಡು ಹೋಗಿರುವ ಸಾಧ್ಯತೆ ಹೆಚ್ಚಾಗಿದೆ.

ಜಾಮೀನಿನ ಮೇಲೆ ಬಿಡುಗಡೆ..

ಪಾಂಡು ಪೈ ಕೊಲೆ ಪ್ರಕರಣದ ಪ್ರಮುಖ ಆರೋಪಿಯಾಗಿದ್ದ ಬಿಜೈ ರಾಜಾ ಯಾನೆ ಶೈಲೇಶ್‌ನನ್ನು 2012ನೇ ಡಿ.1ರಂದು ಫಳ್ನೀರ್‌ನ ವೆಸ್ಟ್ ಗೇಟ್ ಮುಂಭಾಗ ತಂಡವೊಂದು ಮಾರಕಾಯುಧಗಳಿಂದ ಹಲ್ಲೆಗೈದು ಹತ್ಯೆ ನಡೆಸಿತ್ತು.

ಪ್ರದೀಪ್ ಮೆಂಡನ್, ಕಿರಣ್ ಅಲಿಯಾಸ್ ಅಚ್ಯುತ, ಚಂದ್ರ ಶೆಟ್ಟಿ ಅಲಿಯಾಸ್ ಚಂದು, ದೀಕ್ಷಿತ್ ದೇವಾಡಿಗ, ರಿತೇಶ್, ಅವಿನಾಶ್ ಹಾಗೂ ಜೈಸನ್ ಡಿ’ಸೋಜಾ ಅವರಿದ್ದ ತಂಡ ಕೃತ್ಯವೆಸಗಿತ್ತು. ಆರೋಪಿಗಳನ್ನು ಬಂಧಿಸಿದ್ದ ಪೊಲೀಸರು ಜೈಲಿಗಟ್ಟಿದ್ದರು. ಇವರಲ್ಲಿ ಅವಿನಾಶ್, ಜೈಸನ್ ಸೇರಿದಂತೆ ಕೆಲವರು ಜಾಮೀನಿನ ಮೇಲೆ ಬಿಡುಗಡೆಗೊಂಡಿದ್ದರೆ ಪ್ರಮುಖ ಆರೋಪಿಗಳು ಇನ್ನೂ ಜೈಲಿನಲ್ಲಿದ್ದಾರೆ.

ಇವರು ಆಗಾಗ್ಗೆ ಡ್ಯಾಂನಲ್ಲಿ ಗುಂಡು-ತುಂಡಿನ ಪಾರ್ಟಿಯಲ್ಲಿ ತೊಡಗುತ್ತಿದ್ದರು ಎಂದು ಸ್ಥಳೀಯರು ತಿಳಿಸಿದ್ದಾರೆ. ಡ್ಯಾಂ ನೀರಿನಲ್ಲಿ ಮೀನು ಹಿಡಿಯುವ ಹವ್ಯಾಸ ಬೆಳೆಸಿಕೊಂಡಿದ್ದ ಜೈಸನ್ ನಿನ್ನೆಯೂ ಮೀನು ಹಿಡಿಯಲೆಂದು ತನ್ನ ತಂಡದೊಂದಿಗೆ ಬಂದಿರಬೇಕು ಎನ್ನಲಾಗುತ್ತಿದೆ.

ಮದ್ಯಪಾನ ಮಾಡಿ ಡ್ಯಾಂ ನೀರಿಗಿಳಿದ್ದರಿಂದ ಅಮಲಿನಲ್ಲಿ ನೀರಿಗೆ ಬಿದ್ದಿರಬೇಕೆಂಬ ಶಂಕೆಯೂ ವ್ಯಕ್ತವಾಗಿದೆ. ಜೈಸನ್ ಹಾಗೂ ಅವಿನಾಶ್ ಜೊತೆಗಿದ್ದ ಇತರರನ್ನು ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ‘ಮೃತದೇಹ ಇನ್ನೂ ಪತ್ತೆಯಾಗದ ಕಾರಣ ಪ್ರಕರಣ ದಾಖಲಾಗಿಲ್ಲ. ಅಸಹಜ ಸಾವು ಎಂದು ಮೇಲ್ನೋಟಕ್ಕೆ ಹೇಳಬಹುದಾದರೂ ಈ ಬಗ್ಗೆ ದೂರು ನೀಡಿದ ಬಳಿಕವಷ್ಟೇ ತನಿಖೆ ಮುಂದುವರಿಸಲಾಗುವುದು ಎಂದು ಬಜ್ಪೆ ಠಾಣಾ ಪೊಲೀಸರು ತಿಳಿಸಿದ್ದಾರೆ.

Comments are closed.