ಕರಾವಳಿ

ಪುತ್ತೂರಿಗೆ ಬಂದಾಗ ಕಾಂಗ್ರೆಸ್ ಮುಖಂಡ ಪೂಜಾರಿಗೆ ಕರಿಪತಾಕೆ ಪ್ರದರ್ಶನ : ಕಾವು ಹೇಮನಾಥ ಶೆಟ್ಟಿ

Pinterest LinkedIn Tumblr

Poojary_Hemanath

ಪುತ್ತೂರು, ಜೂ. 7: ರಾಜ್ಯ ಸರಕಾರದ ಮುಖ್ಯಮಂತ್ರಿಗಳು ಹಾಗೂ ಇತರ ಮಂತ್ರಿಗಳ ವಿರುದ್ಧ ಆರೋಪಗಳ ಹೇಳಿಕೆ ನೀಡುತ್ತಾ ಸರಕಾರಕ್ಕೆ ಮತ್ತು ಪಕ್ಷದ ಕಾರ್ಯಕರ್ತರಿಗೆ ಮುಜುಗರ ಉಂಟು ಮಾಡುತ್ತಿರುವ ಪಕ್ಷದ ಹಿರಿಯ ಮುಖಂಡ ಜನಾರ್ದನ ಪೂಜಾರಿಯವರನ್ನು ಮಂಪರು ಪರೀಕ್ಷೆಗೊಳಪಡಿಸಬೇಕು ಎಂದು ಪುತ್ತೂರು ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷ ಕಾವು ಹೇಮನಾಥ ಶೆಟ್ಟಿ ಆಗ್ರಹಿಸಿದ್ದಾರೆ.

ಪುತ್ತೂರಿನಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಉತ್ತಮವಾದ ಜನಪರ ಕಾರ್ಯಕ್ರಮಗಳನ್ನು ನಡೆಸುತ್ತಿದ್ದು, ಸಚಿವ ಸಂಪುಟದ ಎಲ್ಲಾ ಸಚಿವರುಗಳು ಭ್ರಷ್ಟಾಚಾರ ರಹಿತವಾಗಿ ಉತ್ತಮವಾಗಿ ಕೆಲಸ ಮಾಡುತ್ತಿದ್ದಾರೆ. ಆದರೆ ಕೇಂದ್ರದ ಮಾಜಿ ಸಚಿವ ಜನಾರ್ದನ ಪೂಜಾರಿ ಮಾತ್ರ ವಿಪಕ್ಷಗಳ ಜೊತೆ ಒಳ ಒಪ್ಪಂದ ಮಾಡಿರುವ ರೀತಿಯಲ್ಲಿ ಪಕ್ಷದ ಮುಖಂಡರ ವಿರುದ್ಧವೇ ಆರೋಪ ಮಾಡುವ ಮೂಲಕ ಪಕ್ಷಕ್ಕೆ ಮತ್ತು ಸರಕಾರಕ್ಕೆ ಮುಜುಗರ ತರುವ ಕೆಲಸ ಮಾಡುತ್ತಿದ್ದಾರೆ. ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಕುಳಿತು ಪಕ್ಷದ ವಿರುದ್ಧ ಪತ್ರಿಕಾಗೋಷ್ಠಿ ನಡೆಸುತ್ತಿರುವ ಪೂಜಾರಿ, ಅಲ್ಲಿ ರಾಜ್ಯ ಸರಕಾರವನ್ನು ಬೈಯುತ್ತಾರೆ. ಇದರಿಂದ ಪಕ್ಷದ ಪ್ರತಿಯೊಬ್ಬ ಕಾರ್ಯಕರ್ತರೂ ಮುಜುಗರ ಪಡುವಂತಾಗಿದೆ. ಎಂದು ವಿಷಾದ ವ್ಯಕ್ತಪಡಿಸಿದರು.

ಕಳೆದ ಲೋಕಸಭಾ ಚುನಾವಣೆಯಲ್ಲಿ 1.5 ಲಕ್ಷ ಅಧಿಕ ಮತಗಳ ಅಂತರದಿಂದ ಜಿಲ್ಲೆಯ ಜನತೆ ಪೂಜಾರಿ ಅವರನ್ನು ತಿರಸ್ಕರಿಸಿದ್ದಾರೆ. ದ.ಕ. ಜಿಲ್ಲೆಯಲ್ಲಿ ಲೋಕಸಭಾ ಚುನಾವಣೆಯಲ್ಲಿ 5 ಬಾರಿ ಸೋಲಿಸಿರುವ ಜನರು ಇದೀಗ ಅವರನ್ನು ನಾಯಕ ಎಂದು ಒಪ್ಪಿಕೊಳ್ಳುವ ಮನಸ್ಥಿತಿಯಲ್ಲಿ ಯಾರೂ ಇಲ್ಲ. ಪಕ್ಷದಲ್ಲಿ ಹಿಂದೊಮ್ಮೆ ಅತ್ಯುನ್ನತ ಸ್ಥಾನದಲ್ಲಿದ್ದ ಪೂಜಾರಿ ಅವರು ಇದೀಗ ತನ್ನದೇ ಪಕ್ಷವನ್ನು ದೂರುತ್ತಿದ್ದಾರೆ. ನಾಯಕರಾಗಿದ್ದ ಅವರೇ ಅಸಂಬದ್ಧ ಹೇಳಿಕೆ ನೀಡುವುದು ಸರಿಯಲ್ಲ. ಇವರಿಗೆ ಪಕ್ಷದ ವಿರುದ್ದ ಮಾತನಾಡಲೇ ಬೇಕು ಎಂಬ ತುಡಿತವಿದ್ದರೆ ಪಕ್ಷದಿಂದ ಹೊರಹೋಗಿ ಯಾವುದಾದರೂ ಮಠದ ಸ್ವಾಮಿಯಾಗಿ ಮಾತನಾಡಲಿ ಎಂದು ಸಲಹೆ ನೀಡಿದರು.

ಪ್ರತಿಯೊಬ್ಬರಿಗೂ ನೊಟೀಸ್, ಶಿಸ್ತು ಎಂದು ಹೇಳುವ ಹೈಕಮಾಂಡ್, ಜನಾರ್ದನ ಪೂಜಾರಿಯವರ ವಿರುದ್ಧ ಯಾವುದೇ ಕ್ರಮ ಕೈಗೊಳ್ಳಲು ಮುಂದಾಗುತ್ತಿಲ್ಲ. ಟೀಕೆ ಮಾಡಲೆಂದೇ ಬಿಟ್ಟಿದೆಯೇ ಎಂಬ ಅನುಮಾನವೂ ಕಾಡುತ್ತಿದೆ. ಅಶಿಸ್ತನ್ನು ಸರಿಪಡಿಸುವ ಕೆಲಸ ಇದುವರೆಗೆ ನಡೆದಿಲ್ಲ. ಇವರ ಅಸಂಬದ್ದ ಹೇಳಿಕೆಗೆ ಕಡಿವಾಣ ಹಾಕುವ ಅಗತ್ಯವಿದೆ. ಈ ಹಿನ್ನೆಲೆಯಲ್ಲಿ ಕೆಪಿಸಿಸಿಗೆ ದೂರು ನೀಡಲಾಗುವುದು ಎಂದು ಹೇಳಿದರು.

ಪುತ್ತೂರಿಗೆ ಬಂದಾಗ ಪೂಜಾರಿಗೆ ಕರಿಪತಾಕೆ..!

ಕಾಂಗ್ರೆಸ್ ಪಕ್ಷದ ಕಚೇರಿಯಲ್ಲೇ ಕುಳಿತು ಕಾಂಗ್ರೆಸ್ ನೇತೃತ್ವದ ರಾಜ್ಯ ಸರಕಾರಕ್ಕೆ ಬೈಯ್ಯುವುದರಿಂದ ಪಕ್ಷದ ಪ್ರತಿಯೊಬ್ಬರು ಮುಜುಗರಕ್ಕೆ ಈಡಾಗುವಂತಾಗಿದೆ. ಆದ್ದರಿಂದ ಇವರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳುವ ಅಗತ್ಯವಿದೆ. ಇಂತಹ ಮಾತು ಮುಂದುವರಿದರೆ ಮುಂದೆ ಜನಾರ್ದನ ಪೂಜಾರಿಗೆ ಕಪ್ಪು ಪತಾಕೆ ಹಿಡಿಯಲಾಗುವುದು ಪೂಜಾರಿ ವಿರುದ್ಧ ಹೈಕಮಾಂಡ್ ಯಾವುದೇ ಕ್ರಮ ಕೈಗೊಳ್ಳದಿದ್ದಲ್ಲಿ ಪೂಜಾರಿ ಅವರು ಪುತ್ತೂರಿಗೆ ಆಗಮಿಸಿದಾಗ ಅವರಿಗೆ ಕರಿಪತಾಕೆ ಪ್ರದರ್ಶನ ಮಾಡಲಾಗುವುದು ಎಂದು ಹೇಳಿದರು.

ಜಿಲ್ಲಾ ಕಾರ್ಮಿಕ ಘಟಕದ ಅಧ್ಯಕ್ಷ ಲೋಕೇಶ್ ಹೆಗ್ಡೆ, ನಗರ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಸ್ವರ್ಣಲತಾ ಹೆಗ್ಡೆ, ನಗರ ಕಾಂಗ್ರೆಸ್ ಅಧ್ಯಕ್ಷ ಲ್ಯಾನ್ಸಿ ಮಸ್ಕರೇನಸ್, ಬ್ಲಾಕ್ ಕಾಂಗ್ರೆಸ್ ಮಾಜಿ ಕಾರ್ಯದರ್ಶಿ ರವಿಪ್ರಸಾದ್ ಶೆಟ್ಟಿ ಮುಂತಾದವರು ಈ ವೇಳೆ ಉಪಸ್ಥಿತರಿದ್ದರು.

Comments are closed.