ಅಂತರಾಷ್ಟ್ರೀಯ

ಆಲಿವ್ ಎಣ್ಣೆ ಮತ್ತು ದೀರ್ಘಾಯುಷ್ಯ…

Pinterest LinkedIn Tumblr

olive oil on wooden table

ಅದು ತೀರಾ ಅವಿವೇಕ ಹಾಗೂ ಕುಚೋದ್ಯ ಎನಿಸಿತು. ಆಲಿವ್ ಎಣ್ಣೆಯನ್ನು ವ್ಯಾಪಕವಾಗಿ ಬಳಸಿ ಪಥ್ಯ ಮಾಡುವ ನನ್ನ ಒಂದು ವಾರದ ಪ್ರಯತ್ನ ಸರಾಗವಾಗಲೇ ಇಲ್ಲ. ಆಗ ಬೆಳಗ್ಗೆ ಎಂಟು ಗಂಟೆಯ ಸಮಯ. ಖಾಲಿ ಹೊಟ್ಟೆಗೆ ಒಂದು ಸಣ್ಣಲೋಟದ ತುಂಬಾ ಹಳದಿಬಣ್ಣದ ಪರಿಶುದ್ಧ ಆಲಿವ್ ಎಣ್ಣೆ ಸೇವಿಸುವ ನನ್ನ ಸಾಹಸದಲ್ಲಿ ಅರ್ಧವನ್ನಷ್ಟೇ ಪೂರೈಸಿದ್ದೆ. ನನ್ನ ಸ್ಪೇನ್ ಮಿತ್ರರು ನನಗಾಗಿಯೇ ವಿಶೇಷವಾಗಿ ಪರಿಶುದ್ಧ ಆಲಿವ್ ಎಣ್ಣೆಯನ್ನು ಆಯ್ಕೆ ಮಾಡಿದ್ದರು. ಕುರುಕಲು ಹಾಗೂ ಬಿಸಿ ಬ್ರೆಡ್‌ನಲ್ಲಿ ಮುಳುಗಿಸಿ, ಸಂಜೆಯ ಊಟಕ್ಕಿಂತ ಮುನ್ನ ಸೇವಿಸುವುದು ಒಂದು ಬಗೆ. ಅದನ್ನು ಸರಾಗವಾಗಿ ಮುಂಜಾನೆ ಕುಡಿಯುವುದು ಇನ್ನೊಂದು ವಿಧ.

ವಿಜ್ಞಾನದ ಕಾರಣಕ್ಕಾಗಿ ಹಾಗೂ ನನ್ನ ಪುಸ್ತಕಕ್ಕಾಗಿ ಇಂಥ ಮೂರ್ಖ ಮೀನುಗಾರರ ಆಹಾರಪಥ್ಯವನ್ನು ನಾನು 1960ರ ದಶಕದಿಂದಲೇ ಅನುಸರಿಸಲು ಮುಂದಾಗಿದ್ದೆ. ದಿನವಿಡೀ ಮೀನುಗಾರಿಕೆಯಿಂದ ಅಥವಾ ಕುರಿ ಮೇಯಿಸುವುದರಿಂದ ದಣಿಯುವ ದೇಹಕ್ಕೆ ಬೆಳಗ್ಗೆ ಉಪಾಹಾರಕ್ಕಿಂತ ಮೊದಲು ಒಂದು ಲೋಟ ಆಲಿವ್ ಎಣ್ಣೆ ಸೇವಿಸುತ್ತಾರೆ ಎಂದು ಕೇಳಿದ್ದೆ. ಹೀಗೆ ಅಧಿಕ ಪ್ರಮಾಣದಲ್ಲಿ ಆಲಿವ್ ಎಣ್ಣೆ ಸೇವಿಸುವುದು ಅವರ ದೀರ್ಘಾಯುಷ್ಯದ ಗುಟ್ಟು ಎಂದು ಹೇಳಲಾಗುತ್ತಿತ್ತು. ಭಾರೀ ಪ್ರಮಾಣದಲ್ಲಿ ಸಂಪೂರ್ಣ ಆರ್ದ್ರವಾದ ಕೊಬ್ಬಿನ ಅಂಶವನ್ನು ಅವರು ಸೇವಿಸಿದರೂ, ದೀರ್ಘಾಯುಷಿಗಳಾಗುತ್ತಾರೆ ಎನ್ನುವುದು ಸೋಜಿಗವಾಗಿತ್ತು.

ಈ ನಂಬಿಕೆಯನ್ನು ಪರೀಕ್ಷಿಸುವ ಸಲುವಾಗಿ ನಾನು ನನ್ನ ಮೊಸರು ಹಾಗೂ ಹಣ್ಣಿನ ಉಪಾಹಾರದ ಜಾಗದಲ್ಲಿ ಈ ಹಳದಿ ಪಾನೀಯವನ್ನು ಸೇವಿಸಲು ಆರಂಭಿಸಿದೆ. ಮೂವತ್ತು ನಿಮಿಷಗಳ ಬಳಿಕ ನಾನು ಕ್ಷೌರಿಕನ ಅಂಗಡಿಯಲ್ಲಿ ಮೂರ್ಚೆ ತಪ್ಪಿ ನೆಲದ ಮೇಲೆ ಬಿದ್ದಿದ್ದೆ. ಬಹುಶಃ ಇದು ಕಾಕತಾಳೀಯವಾಗಿರಲು ಸಾಧ್ಯವಿಲ್ಲ. ನಾನು ವಾಸ್ತವವಾಗಿ ಖಾಲಿ ಹೊಟ್ಟೆಯಲ್ಲಿರಬೇಕಿತ್ತು. ಇದನ್ನು ತಿಳಿದುಕೊಳ್ಳದೇ ನಾನು ನನ್ನ ಹೊಸ ಸಾಹಸಕ್ಕೆ ಕೈಹಾಕಿದ್ದೆ.

ಬ್ರಿಟನ್ ಹಾಗೂ ಅಮೆರಿಕದಲ್ಲಿ ಜನ ಸರಾಸರಿ ವರ್ಷಕ್ಕೆ ಒಂದು ಲೀಟರ್ ಆಲಿವ್ ಎಣ್ಣೆ ಸೇವಿಸುತ್ತಾರೆ. ವಾರ್ಷಿಕ 13 ಲೀಟರ್ ಆಲಿವ್ ಎಣ್ಣೆ ಸೇವಿಸುವ ಗ್ರೀಕ್, ಇಟೆಲಿ ಮತ್ತು ಸ್ಪೇನ್ ಜನತೆಗೆ ಹೋಲಿಸಿದರೆ ಖಂಡಿತವಾಗಿಯೂ ಇದು ಅಧಿಕವಲ್ಲ. ಆಲಿವ್ ಎಣ್ಣೆಯಲ್ಲಿ ಅಧಿಕ ಕ್ಯಾಲೋರಿ ಇರುವ ಜತೆಗೆ ಆರ್ದ್ರವಾದ ಹಾಗೂ ಆರ್ದ್ರವಲ್ಲದ ಕೊಬ್ಬನ್ನೂ ಹೊಂದಿರುತ್ತದೆ. ಈ ಕಾರಣದಿಂದ ಬಹುತೇಕ ವೈದ್ಯರು ಖಚಿತವಾಗಿ ಇದನ್ನು ಅನಾರೋಗ್ಯಕರ ಆಹಾರ ಎಂದೇ ಪರಿಗಣಿಸುತ್ತಾರೆ. ಆದರೆ ಯೂರೋಪಿಯನ್ ಜನತೆಯ ಆರೋಗ್ಯ ಸಮೀಕ್ಷೆಯನ್ನು ಕೈಗೊಂಡಾಗ, ದಕ್ಷಿಣ ಯೂರೋಪ್‌ನ ಜನ ಅಧಿಕ ಕೊಬ್ಬು ಸೇವಿಸಿದರೂ ದೀರ್ಘಾಯುಷಿಗಳು ಹಾಗೂ ಹೃದ್ರೋಗ ಪ್ರಮಾಣ ಇವರಲ್ಲಿ ಕಡಿಮೆ ಎನ್ನುವುದು ಸ್ಪಷ್ಟವಾಗುತ್ತದೆ. ಇದಕ್ಕೆ ತಾರ್ಕಿಕ ಕಾರಣವೆಂದರೆ ಆಲಿವ್ ಎಣ್ಣೆ.

ಮೆಡಿಟರೇನಿಯನ್ ಆಹಾರಪದ್ಧತಿ ಮತ್ತು ಕಡಿಮೆ ಕೊಬ್ಬು
ಹತ್ತುವರ್ಷಗಳ ಹಿಂದೆ ಒಂದು ವಿಶಿಷ್ಟ ಹಾಗೂ ಮಹತ್ವಾಕಾಂಕ್ಷಿ ಪ್ರಯೋಗಶೀಲ ಸಂಶೋಧನೆ ಸ್ಪೇನ್‌ನಲ್ಲಿ ಆರಂಭವಾಯಿತು. ಸುಮಾರು 60 ವರ್ಷ ವಯಸ್ಸಿನ, ಹೃದ್ರೋಗ ಮತ್ತು ಮಧುಮೇಹದ ಅಪಾಯ ಇರುವ 7500 ಮಂದಿ ತುಸು ಅಧಿಕ ತೂಕದ ಪುರುಷರು ಹಾಗೂ ಮಹಿಳೆಯರ ಬಗ್ಗೆ ಅಧ್ಯಯನ ಕೈಗೊಳ್ಳಲಾಯಿತು. ಇವರಿಗೆ ಎರಡು ಬಗೆಯ ಆಹಾರಪದ್ಧತಿಯನ್ನು ಸೂಚಿಸಲಾಯಿತು. ಒಂದಷ್ಟು ಮಂದಿಗೆ ಬಹುತೇಕ ಪಾಶ್ಚಿಮಾತ್ಯ ದೇಶಗಳ ವೈದ್ಯರು ಸಲಹೆ ಮಾಡುವಂತೆ ಕಡಿಮೆ ಕೊಬ್ಬಿನ ಅಂಶವಿರುವ ಆಹಾರ ಹಾಗೂ ಉಳಿದವರಿಗೆ ಮೆಡಿಟರೇನಿಯನ್ ಆಹಾರ ಪದ್ಧತಿ ಎನಿಸಿದ ಅಧಿಕ ಆಲಿವ್ ಎಣ್ಣೆ ಹಾಗೂ ಬೀಜಗಳನ್ನು ಒಳಗೊಂಡ ಅಧಿಕ ಕೊಬ್ಬಿನ ಆಹಾರ ಪದ್ಧತಿ.

ಈ ವಿಶಿಷ್ಟ ಅಧ್ಯಯನದ ವರದಿಯನ್ನು 2013ರಲ್ಲಿ ನ್ಯೂ ಇಂಗ್ಲೆಂಡ್ ಜರ್ನಲ್ ಆಫ್ ಮೆಡಿಸಿನ್‌ನಲ್ಲಿ ಪ್ರಕಟಿಸಲಾಯಿತು. ಇದರಲ್ಲಿ ಕಂಡು ಬಂದ ಅಂಶವೆಂದರೆ ಮೆಡಿಟರೇನಿಯನ್ ಆಹಾರಪದ್ಧತಿ ಅನುಸರಿಸಿದ ವ್ಯಕ್ತಿಗಳಲ್ಲಿ ಹೃದ್ರೋಗ, ಮಧುಮೇಹ ಹಾಗೂ ಪಾರ್ಶ್ವವಾಯು ಸಾಧ್ಯತೆಗಳು ಕಡಿಮೆ ಕೊಬ್ಬಿನ ಆಹಾರ ಸೇವಿಸಿದ ಗುಂಪಿನ ಜನರಿಗಿಂತ ಮೂರನೆ ಒಂದರಷ್ಟು ಕಡಿಮೆ. ಇವರು ಸ್ವಲ್ಪಮಟ್ಟಿಗೆ ದೇಹದ ತೂಕ ಕಳೆದುಕೊಂಡಿದ್ದರು ಹಾಗೂ ಸ್ಮರಣಶಕ್ತಿ ಕಳೆದುಕೊಳ್ಳುವ ಪ್ರಮಾಣವೂ ಕಡಿಮೆ ಇತ್ತು. ತೀರಾ ಇತ್ತೀಚಿನ ಅಧ್ಯಯನಗಳ ಪ್ರಕಾರ, ಈ ಆಹಾರ ಪದ್ಧತಿಯನ್ನು ಅನುಸರಿಸುವವರಿಗೆ ಸ್ತನ ಕ್ಯಾನ್ಸರ್ ಸಾಧ್ಯತೆಯೂ ಕಡಿಮೆ.

ಈ ಅಧ್ಯಯನದಲ್ಲಿ ವ್ಯಕ್ತವಾದ ಅಂಶಗಳಿಂದ ಆಯ್ಕೆ ಮಾಡಬಹುದಾದ ಇನ್ನೊಂದು ಅಂಶವೆಂದರೆ, ಹೆಚ್ಚುವರಿ ಆಲಿವ್ ಎಣ್ಣೆ ಸೇವಿಸಿದವರು, ಅಧಿಕ ಎಣ್ಣೆಬೀಜ ಸೇವಿಸಿದವರಿಗಿಂತಲೂ ಉತ್ತಮ ಆರೋಗ್ಯ ಹೊಂದಿದ್ದರು. ಆದರೆ ಈ ಎರಡೂ ವರ್ಗದವರು ಕಡಿಮೆ ಕೊಬ್ಬಿನ ಆಹಾರ ಸೇವಿಸುವವರಿಗಿಂತ ಉತ್ತಮ ಆರೋಗ್ಯ ಹೊಂದಿದ್ದರು. ಈ ಸಂಶೋಧನೆ ಇತರ ಎಲ್ಲ ಆಹಾರಕ್ರಮದ ಅಧ್ಯಯನಗಳಿಗಿಂತಲೂ ಹೆಚ್ಚು ನಂಬಲರ್ಹ ಅಧ್ಯಯನ. ಏಕೆಂದರೆ ಈ ಅಧ್ಯಯನಕ್ಕೆ ಯಾದೃಚ್ಛಿಕವಾಗಿ ಆಯ್ಕೆ ಮಾಡಲಾಗಿತ್ತು. ಜತೆಗೆ ಅಧಿಕ ಸಂಖ್ಯೆಯ ಜನರನ್ನು ಸುದೀರ್ಘ ಅವಧಿಯವರೆಗೂ ಅಧ್ಯಯನಕ್ಕೆ ಗುರಿಪಡಿಸಲಾಗಿತ್ತು. ಕೇವಲ ಕೆಲವು ದಿನ ಅಥವಾ ಕೆಲ ವಾರಗಳ ಕಾಲವಷ್ಟೇ ಆಹಾರಪದ್ಧತಿಯ ಮೇಲೆ ನಿಗಾ ಇರಿಸಿದ ಅಧ್ಯಯನ ಇದಾಗಿರಲಿಲ್ಲ.

ಇದರ ಪ್ರಯೋಜನವನ್ನು ಕೇವಲ ಒಂದು ಆಹಾರ ಅಥವಾ ಒಂದು ಅಂಶಕ್ಕೆ ಸೀಮಿತಗೊಳಿಸುವಂತಿಲ್ಲ. ಬದಲಾಗಿ ಸಾರ್ವತ್ರಿಕವಾದ ಪ್ರಯೋಜನ ಇದಾಗಿದೆ. ಅಧಿಕ ನಾರಿನ ಅಂಶ, ವೈವಿಧ್ಯಮಯ ಶ್ರೇಣಿಯ ಹಣ್ಣು ಮತ್ತು ತರಕಾರಿ, ಇಡೀ ಕಾಳುಗಳು ಮತ್ತು ಬೇಳೆಗಳು, ಮೊಸರು ಹಾಗೂ ಚೀಸ್, ಸ್ವಲ್ಪಪ್ರಮಾಣದ ಮೀನು ಮತ್ತು ಮಾಂಸ, ವೈನ್, ಬೀಜಗಳು, ಉತ್ತಮ ಗುಣಮಟ್ಟದ ಆಲಿವ್ ಎಣ್ಣೆ ಎಲ್ಲವೂ ತಮ್ಮ ಪಾತ್ರವನ್ನು ನಿರ್ವಹಿಸಿವೆ. ಆದರೆ ಅಧ್ಯಯನಕಾರರು ಮಾತ್ರ, ಆಲಿವ್ ಎಣ್ಣೆ ಅಧಿಕವಾಗಿ ಸೇವಿಸಿದ ಒಂದು ಅಂಶಕ್ಕೇ ಹೆಚ್ಚಿನ ಒತ್ತು ನೀಡಿದರು.

ಅಗ್ಗದ ಆಲಿವ್ ಎಣ್ಣೆಯಿಂದ ಯಾವ ಪ್ರಯೋಜನವೂ ಆಗಲಿಲ್ಲ. ಆಲಿವ್ ಎಣ್ಣೆ ಹೆಚ್ಚು ಪರಿಶುದ್ಧವಾಗಿರುವುದು ಅಗತ್ಯ. ಎರಡು ಗುಣಮಟ್ಟದ ಎಣ್ಣೆಯ ನಡುವಿನ ವ್ಯತ್ಯಾಸ ಕೇವಲ ಕಡಿಮೆ ಆಮ್ಲತೆ, ತಾಜಾತನ, ಅಧಿಕ ರುಚಿಯಂಥ ಅಂಶವನ್ನಷ್ಟೇ ಹೊಂದಿಲ್ಲ. ಬದಲಾಗಿ, ಅದು ಬಿಡುಗಡೆ ಮಾಡುವ ಪಾಲಿಫಿನೋಲ್ಸ್ ಎಂಬ ರಾಸಾಯನಿಕಗಳ ಸಂಖ್ಯೆಯನ್ನು ಆಧರಿಸಿರುತ್ತದೆ. ಅಧಿಕ ಗುಣಮಟ್ಟದ ಪರಿಶುದ್ಧ ಎಣ್ಣೆ, ಅದರಲ್ಲೂ ಮುಖ್ಯವಾಗಿ ತಂಪು ವಿಧಾನದಿಂದ ಹೊರತೆಗೆದ ಆಲಿವ್ ಎಣ್ಣೆ ಸುಮಾರು 30 ಪಾಲಿಫಿನಾಲ್‌ಗಳನ್ನು ಹೊಂದಿದ್ದು, ಇವು ಆಮ್ಲಜನಕದ ಜತೆ ಸಂಯೋಗವಾಗುವುದನ್ನು ತಡೆಯುವ ಗುಣ ಹೊಂದಿರುತ್ತವೆ. ಇದರ ಪರಿಣಾಮವಾಗಿ ಉರಿಯುವಿಕೆ ಪ್ರಮಾಣ ಕಡಿಮೆಯಾಗುತ್ತದೆ ಹಾಗೂ ಹೃದಯ ಮತ್ತು ಮೆದುಳಿನ ವಯಸ್ಸಾಗುವಿಕೆಗೆ ಕಾರಣವಾಗುವ ಪರಿಣಾಮವನ್ನು ತಡೆಯುತ್ತದೆ.

ತೀರಾ ಇತ್ತೀಚಿನವರೆಗೂ ಇಂಥ ಆಮ್ಲಜನಕದೊಂದಿಗೆ ಸಂಯೋಗ ಹೊಂದುವುದನ್ನು ತಡೆಯುವ ಪಾಲಿಫಿನೋಲ್ ರಾಸಾಯನಿಕ ನೇರವಾಗಿ ವರ್ಣತಂತುಗಳು ಹಾಗೂ ರಕ್ತನಾಳಗಳ ಮೇಲೆ ಪ್ರಭಾವ ಬೀರುತ್ತದೆ ಎಂದು ನಂಬಲಾಗಿತ್ತು. ಆದರೆ ಇದೀಗ ಇವು ಮೈಕ್ರೋಬ್‌ಗಳ ಮೇಲೆಯೂ ಪರಿಣಾಮ ಬೀರಿ ಮೈಕ್ರೊಬಿನ್‌ಗಳನ್ನು ಉತ್ಪತ್ತಿಮಾಡುತ್ತದೆಯೆಂಬುದು ತಿಳಿದು ಬಂದಿದೆ. ದಶಸಹಸ್ರ ಕೋಟಿ ಪ್ರಮಾಣದಲ್ಲಿರುವ ಬ್ಯಾಕ್ಟೀರಿಯಾಗಳು ನಮ್ಮ ದೊಡ್ಡ ಕರುಳಿನಲ್ಲಿ ವಾಸವಾಗಿರುತ್ತವೆ. ಇವು ಹಲವಾರು ಪಾಲಿಫಿನೋಲ್‌ಗಳನ್ನು ಮತ್ತು ಹೆಚ್ಚಿನ ಸಣ್ಣ ರಾಸಾಯನಿಕಗಳನ್ನು ಪೂರೈಸುತ್ತಿರುತ್ತವೆ. ಅಲ್ಪಸರಣಿಯ ಕೊಬ್ಬಿನ ಆಮ್ಲಗಳು ಕೂಡಾ ಇದರಲ್ಲಿ ಸೇರಿದ್ದು, ಇವು ದಹಿಸುವಿಕೆಯನ್ನು ಕಡಿಮೆ ಮಾಡಿ ನಮ್ಮ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತವೆ.

ಹೆಚ್ಚು ದೋಷ ಉತ್ತಮ ಸಂಕೀರ್ಣವಾದ ಅಧಿಕ ಪರಿಶುದ್ಧ ಆಲಿವ್ ಎಣ್ಣೆಯಂಥ ಕೊಬ್ಬಿನ ಆಹಾರಗಳನ್ನು, ಅಧಿಕ ಪಾಲಿಫಿನೋಲ್ ಅಂಶದ ಆಹಾರದ ಜೊತೆ ಸೇವಿಸಿದಾಗ ಅದು ಅಧಿಕ ಹಾಗೂ ವೈವಿಧ್ಯಮಯ ಮೈಕ್ರೋಬ್‌ಗಳ ಉತ್ಪತ್ತಿಗೆ ಕಾರಣವಾಗುತ್ತದೆ. ಇಂಥ ವೈವಿಧ್ಯತೆ ನಮ್ಮ ಆರೋಗ್ಯಕ್ಕೆ ಅಗತ್ಯ ಎನ್ನುವುದು ಸಾಬೀತಾಗಿದೆ. ಮೂಲ ಅಧ್ಯಯನದಲ್ಲಿ ಇಂಥ ಮೈಕ್ರೋಬ್‌ಗಳ ಬಗ್ಗೆ ನೇರವಾಗಿ ಸಂಶೋಧನೆ ಕೈಗೊಂಡಿರಲಿಲ್ಲ. ಆದರೆ ಮೆಡಿಟರೇನಿಯನ್ ಆಹಾರಪದ್ಧತಿಯ ಬಗೆಗಿನ ಪ್ರಯೋಜನಗಳು ಅದರಲ್ಲೂ ಪ್ರಮುಖವಾಗಿ ತೀರಾ ಪರಿಶುದ್ಧ ಆಲಿವ್ ಎಣ್ಣೆಯ ಪ್ರಯೋಜನವನ್ನಷ್ಟೇ ಅಧ್ಯಯನ ಮಾಡಲಾಗಿತ್ತು.

ಆದರೆ ಆಲಿವ್ ಎಣ್ಣೆಯ ವಿರೋಧಿಗಳು, ಸಾಮಾನ್ಯವಾಗಿ ಪರೀಕ್ಷೆಗೆ ಒಳಪಡಿಸದ ಪರ್ಯಾಯಗಳನ್ನು ಮುಂದಿಡುತ್ತಾರೆ. ಅವುಗಳನ್ನು ಕಡಿಮೆ ಶಾಖದಲ್ಲಿ ಕುದಿಸುವಂತೆ ಸಲಹೆ ಮಾಡುತ್ತಾರೆ. ಇದರಿಂದ ಅಡುಗೆಯಲ್ಲಿ ಕಡಿಮೆ ಪ್ರಮಾಣದ ಕಾರ್ಸಿನೊಜೆನ್‌ಗಳನ್ನು ಉತ್ಪತ್ತಿ ಮಾಡುತ್ತದೆ ಎಂದು ಅಭಿಪ್ರಾಯಪಡುತ್ತಾರೆ. ಆದರೆ ಈ ಅಧ್ಯಯನದಲ್ಲಿ ಪಾಲ್ಗೊಂಡಿದ್ದ ಸ್ಪೇನ್ ಜನತೆ ತಮ್ಮ ಅಡುಗೆಗೆ ಅಧಿಕ ಎಣ್ಣೆ ಬಳಸುತ್ತಿದ್ದರು. ಆದರೆ ಆರೋಗ್ಯದ ಮೇಲೆ ಯಾವುದೇ ಅಡ್ಡ ಪರಿಣಾಮಗಳು ಕಂಡುಬರಲಿಲ್ಲ.

ಸ್ಪೇನ್‌ನ ವಯಸ್ಕರಲ್ಲಿ ಅಧಿಕ ಪರಿಶುದ್ಧ ಆಲಿವ್ ಎಣ್ಣೆಯನ್ನು ವೈವಿಧ್ಯಮಯ ಮೆಡಿಟರೇನಿಯನ್ ಆಹಾರಪದ್ಧತಿಯಾಗಿ ಬಳಸುವುದರಿಂದ ಖಂಡಿತವಾಗಿಯೂ ಪ್ರಯೋಜನವಿದೆ. ಇದಕ್ಕೆ ಆ ಪ್ರತ್ಯೇಕವಾದ ವರ್ಣತಂತುಗಳು ಒಂದು ಕಾರಣವಾಗಿದ್ದರೂ, ಇತರ ಸಂಸ್ಕೃತಿ ಅಥವಾ ಜನರಲ್ಲಿ ಇದು ಕೆಲಸ ಮಾಡುವುದಿಲ್ಲ ಎಂದು ತಳ್ಳಿಹಾಕುವಂತಿಲ್ಲ. ಅತ್ಯಧಿಕ ಗುಣಮಟ್ಟದ ಪರಿಶುದ್ಧ ಆಲಿವ್ ಎಣ್ಣೆಯನ್ನು ಬಳಸುವ ಬಗ್ಗೆ ಜನಸಾಮಾನ್ಯರಲ್ಲಿ ಅರಿವು ಮೂಡಿಸಿದರೆ, ಅದನ್ನು ಔಷಧ ಅಥವಾ ಶಿಕ್ಷೆ ಎಂಬ ಅರ್ಥದಲ್ಲಿ ಬಳಸುವುದು ಕಡಿಮೆಯಾಗಬಹುದು. ಇದರಿಂದ ಜನಾರೋಗ್ಯ ಸುಧಾರಿಸಬಹುದು. ಆದರೆ ಈ ವಿಚಾರದಲ್ಲಿ ಗ್ರೀಕರಿಗೆ ಸರಿಸಾಟಿಯಾಗುವುದು ಸಾಧ್ಯವಿಲ್ಲ.
(ಲೇಖಕರು ಲಂಡನ್‌ನ ಕಿಂಗ್ಸ್ ಕಾಲೇಜಿನಲ್ಲಿ ಜೆನೆಟಿಕ್ ಎಪಿಡೆಮಿಯೊಲಜಿ ಪ್ರಾಧ್ಯಾಪಕರು)
(ಕೃಪೆ: ದ ಕನ್ವರ್‌ಸೇಷನ್)

Write A Comment