ಕರಾವಳಿ

ಮುಂಗಾರು ಆರ್ಭಟ ; ಉಡುಪಿ ಜಿಲ್ಲೆ, ತೀರ್ಥಹಳ್ಳಿ, ಹೊಸನಗರ ತಾಲ್ಲೂಕಿನಲ್ಲಿ ಶಾಲಾ–ಕಾಲೇಜುಗಳಿಗೆ ರಜೆ

Pinterest LinkedIn Tumblr

rain

ಬೆಂಗಳೂರು: ಎರಡು ವಾರಗಳಿಂದ ಕ್ಷೀಣವಾಗಿದ್ದ ಮುಂಗಾರು ಮಳೆ ರಾಜ್ಯದಲ್ಲಿ ಮತ್ತೆ ಆರ್ಭಟಿಸತೊಡಗಿದೆ. ಕರಾವಳಿ, ಮಲೆನಾಡು ಭಾಗದಲ್ಲಿ ಧಾರಾಕಾರ ಮಳೆಯಾಗುತ್ತಿದೆ. ಭಟ್ಕಳ ತಾಲ್ಲೂಕಿನಲ್ಲಿ ಯುವಕನೊಬ್ಬ ಮಳೆ ನೀರಿನಲ್ಲಿ ಕೊಚ್ಚಿಹೋಗಿದ್ದಾನೆ. ಉಡುಪಿ ಜಿಲ್ಲೆ ಮತ್ತು ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ಹಾಗೂ ಹೊಸನಗರ ತಾಲ್ಲೂಕುಗಳಲ್ಲಿ ಶಾಲಾ ಕಾಲೇಜುಗಳಿಗೆ ಸೋಮವಾರ ರಜೆ ಘೋಷಿಸಲಾಗಿದೆ.

ಚಾರ್ಮಾಡಿ ಘಾಟಿಯಲ್ಲಿ ರಸ್ತೆ ಮೇಲೆ ಗುಡ್ಡಕುಸಿದು ಸುಮಾರು ಮೂರು ಗಂಟೆ ಸಂಚಾರ ಅಸ್ತವ್ಯಸ್ತವಾಗಿತ್ತು. ಕುಕ್ಕೆ ಸುಬ್ರಹ್ಮಣ್ಯ ಪರಿಸರದಲ್ಲಿ ಧಾರಾಕಾರ ಮಳೆಯಿಂದ ಕುಮಾರಧಾರ ಸೇತುವೆ ಮುಳುಗಿ ಸಂಚಾರಕ್ಕೆ ಅಡಚಣೆ ಉಂಟಾಯಿತು. ಸೇತುವೆ ಕೆಳಗಿನ ಸ್ನಾನ ಘಟ್ಟವೂ ಜಲಾವೃತಗೊಂಡಿತ್ತು.

ಚಿಕ್ಕಮಗಳೂರು ಜಿಲ್ಲೆ ಕಳಸ–ಹೊರನಾಡು ಹೆದ್ದಾರಿಯ ಹೆಬ್ಬೊಳೆಯಲ್ಲಿ ಭದ್ರಾ ನದಿಯ ನೀರು ಭಾನುವಾರ ಸಂಜೆ ಉಕ್ಕಿ ಸೇತುವೆಯನ್ನು ಜಲಾವೃತಗೊಳಿಸಿದೆ. ಹೊರನಾಡಿಗೆ ಬಂದಿದ್ದ ಪ್ರವಾಸಿಗರು ಒಂದು ಗಂಟೆಗೂ ಹೆಚ್ಚು ಕಾಲ ನದಿಯ ಎರಡೂ ದಂಡೆಯಲ್ಲೇ ಉಳಿಯಬೇಕಾಯಿತು. ಶೃಂಗೇರಿಯಲ್ಲಿ ಭಾರಿ ಮಳೆಯಾಗುತ್ತಿದ್ದು, ತುಂಗಾ ನದಿಯಲ್ಲಿ ಪ್ರವಾಹದ ಭೀತಿ ಎದುರಾಗಿದೆ.

ಶಿವಮೊಗ್ಗ–ತೀರ್ಥಹಳ್ಳಿ ನಡುವಿನ ಮಂಡಗದ್ದೆಯಲ್ಲಿ ರಸ್ತೆ ಮೇಲೆ ಎರಡು ಅಡಿ ನೀರು ನಿಂತಿದ್ದು, ಸಂಚಾರಕ್ಕೆ ತೊಂದರೆಯಾಗಿದೆ. ಕೊಡಗಿನಲ್ಲಿ ಕಳೆದೆರಡು ದಿನಗಳಿಂದ ಧಾರಾಕಾರ ಮಳೆಯಾಗುತ್ತಿದೆ. ಭಾಗಮಂಡಲದ ತ್ರಿವೇಣಿ ಸಂಗಮದಲ್ಲಿ ರಸ್ತೆ ಮೇಲೆ 4–5 ಅಡಿ ನೀರು ನಿಂತಿದ್ದರಿಂದ ಸಂಚಾರಕ್ಕೆ ಅಡಚಣೆಯಾಯಿತು.

ಪ್ರಸಿದ್ಧ ಜೋಗ ಜಲಪಾತಕ್ಕೆ ಹೆಚ್ಚು ನೀರು ಬರುತ್ತಿರುವುದರಿಂದ ಜಲಪಾತವು ನಿಧಾನವಾಗಿ ತನ್ನ ವೈಭವವನ್ನು ಮರಳಿ ಪಡೆಯುತ್ತಿದೆ. ಶರಾವತಿ ಜಲಾನಯನ ಪ್ರದೇಶದಲ್ಲಿ ಭಾರಿ ಮಳೆಯಾಗುತ್ತಿದ್ದು, ಲಿಂಗನಮಕ್ಕಿ ಅಣೆಕಟ್ಟೆಗೆ ನೀರಿನ ಒಳಹರಿವು ಹೆಚ್ಚಾಗಿದೆ.

ಲಿಂಗನಮಕ್ಕಿ ಜಲಾಶಯಕ್ಕೆ 17,500 ಕ್ಯುಸೆಕ್ ನೀರು ಹರಿದುಬರುತ್ತಿದ್ದು, ನೀರಿನ ಮಟ್ಟ 1,775.40 ಅಡಿ ತಲುಪಿದೆ. ಭದ್ರಾ ಜಲಾಶಯಕ್ಕೆ 17,240 ಕ್ಯುಸೆಕ್ ನೀರು ಹರಿದು ಬಂದಿದ್ದು, ಜಲಾಶಯ ಮಟ್ಟ 159.2 ಅಡಿಗೆ ತಲುಪಿದೆ.

ಕಾವೇರಿ ಜಲಾನಯನ ಪ್ರದೇಶದಲ್ಲಿ ಭಾರಿ ಮಳೆಯಾಗುತ್ತಿರುವುದರಿಂದ ಕೆಆರ್‌ಎಸ್‌ಗೆ ಹೆಚ್ಚಿನ ನೀರು ಹರಿದುಬರುತ್ತಿದೆ. ಇಂದಿನ ಮಟ್ಟ 107.60 ಅಡಿ ಇತ್ತು.

ಗಂಜಿ ಕೇಂದ್ರ: ಮಡಿಕೇರಿಯಲ್ಲಿ ಈಗಾಗಲೇ ಐದು ಗಂಜಿ ಕೇಂದ್ರಗಳನ್ನು ತೆರೆಯಲಾಗಿದ್ದು, ಭಟ್ಕಳದಲ್ಲಿಯೂ ಗಂಜಿ ಕೇಂದ್ರ ತೆರೆಯಲು ಸಿದ್ಧತೆ ನಡೆಲಾಗಿದೆ.

ಪ್ರವಾಹದಲ್ಲಿ ಕೊಚ್ಚಿಹೋದ ಯುವಕ
ಕಾರವಾರ ವರದಿ: ಉತ್ತರ ಕನ್ನಡ ಜಿಲ್ಲೆಯಾದ್ಯಂತ ಬೀಳುತ್ತಿದ್ದ ತುಂತುರು ಮಳೆ ಭಾನುವಾರ ಬಿರುಸುಗೊಂಡಿದೆ. ಕರಾವಳಿಯ ಭಟ್ಕಳ ತಾಲ್ಲೂಕಿನ ಮುಂಡಳ್ಳಿಯ ಶರಾಬಿ ಹೊಳೆಗೆ ನದಿಯಲ್ಲಿ ನೆರೆ ಉಂಟಾಗಿ ಯುವಕನೊಬ್ಬ ಕೊಚ್ಚಿಕೊಂಡು ಹೋಗಿದ್ದಾನೆ.

ಪಟ್ಟಣದ ಗೌಸಿಯಾ ಸ್ಟ್ರೀಟ್‌ನ ನಿವಾಸಿ ಜುಲ್ಕಿಫಲ್‌ ಅಲ್ಲಾಹು (25) ಸ್ನೇಹಿತರೊಡಗೂಡಿ ನದಿಯಲ್ಲಿ ಈಜಲು ಹೋಗಿದ್ದ. ಈ ಸಂದರ್ಭದಲ್ಲಿ ಇದಕ್ಕಿದಂತೆ ನೆರೆ ಬಂದಿದ್ದರಿಂದ ಆತ ನೀರಿನ ಸೆಳೆತಕ್ಕೆ ಸಿಕ್ಕಿ ಕೊಚ್ಚಿಕೊಂಡು ಹೋಗಿದ್ದಾನೆ.

ನೆರೆಯಿಂದ ತಾಲ್ಲೂಕಿನ ಪುರವರ್ಗದಲ್ಲಿ ಚರ್ಚ್‌ ಹಾಗೂ ಗೊರಟೆಯಲ್ಲಿ ಸೇತುವೆ ಮುಳುಗಡೆಯಾಗಿದೆ. ಮಳೆಯ ಆರ್ಭಟಕ್ಕೆ ತಾಲ್ಲೂಕಿನ 30ಕ್ಕೂ ಹೆಚ್ಚು ಮನೆಗಳಿಗೆ ಹಾನಿಯಾಗಿದೆ. ತಗ್ಗುಪ್ರದೇಶದಲ್ಲಿನ ಹಲವು ಮನೆಗಳಿಗೆ ನೀರು ನುಗ್ಗಿದೆ.

ಕರಾವಳಿಯ ಹೊನ್ನಾವರ, ಕುಮಟಾ, ಅಂಕೋಲಾ ಹಾಗೂ ಮಲೆನಾಡಿನ ಶಿರಸಿ, ಸಿದ್ದಾಪುರ, ಯಲ್ಲಾಪುರದಲ್ಲಿ ಧಾರಾಕಾರ ಮಳೆಯಾಗಿದೆ. ಅರೆಬಯಲುಸೀಮೆಯ ಹಳಿಯಾಳ, ಮುಂಡಗೋಡ ಹಾಗೂ ಜೊಯಿಡಾದಲ್ಲಿ ಸಾಧಾರಣ ಮಳೆಯಾಗಿದ್ದು, ಕಾರವಾರದಲ್ಲಿ ಕೆಲ ಹೊತ್ತು ತುಂತುರು ಮಳೆಯಾಗಿದೆ

Write A Comment