ಕರ್ನಾಟಕ

ಊರಿಗೆ ಬಂದರೂ ರೈತರ ಮನೆಗೆ ಹೋಗದ ಸಚಿವ ಅಂಬರೀಷ್‌!

Pinterest LinkedIn Tumblr

ambi

ಮಂಡ್ಯ: ಆತ್ಮಹತ್ಯೆ ಮಾಡಿಕೊಂಡಿರುವ ರೈತ ಕುಟುಂಬಗಳಿಗೆ ಸಾಂತ್ವನ ಹೇಳಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೊಂದಿಗೆ ಬಂದಿದ್ದ ಜಿಲ್ಲಾ ಉಸ್ತುವಾರಿ ಸಚಿವ ಅಂಬರೀಷ್‌ ಒಂದೆಡೆ ಪತ್ರಿಕಾಗೋಷ್ಠಿಗೆ ಬರದಿದ್ದರೆ, ಇನ್ನೊಂದೆಡೆ ರೈತನ ಮನೆಯೊಳಕ್ಕೂ ಕಾಲಿಡಲಿಲ್ಲ.

ತಾಲ್ಲೂಕಿನ ಹೊನ್ನನಾಯಕನಹಳ್ಳಿಯಲ್ಲಿ ಶಿವಲಿಂಗೇಗೌಡರ ಮನೆಗೆ ಭೇಟಿ ನೀಡಿದ ನಂತರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸುದ್ದಿಗಾರರೊಂದಿಗೆ ಮಾತನಾಡಲು ಮುಂದಾದಾಗ, ಅಂಬರೀಷ್‌ ಇಲ್ಲದ್ದನ್ನು ಕಂಡು, ಅವರನ್ನು ಕರೆಯಿರಿ ಎಂದರು. ಆಗ ಎದ್ದು ನಿಂತ ಸಚಿವ ಮಹದೇವಪ್ರಸಾದ್‌ ಅವರು, ಅಂಬರೀಷ್‌ ಎಂದು ಕೂಗಿದರು. ಆಗಲೇ ಮುಂದೆ ನಡೆದಿದ್ದ ಅಂಬರೀಷ್‌ ಅವರು ಮರಳಿ ಬರಲಿಲ್ಲ.

ಶ್ರೀರಂಗಪಟ್ಟಣ ತಾಲ್ಲೂಕಿನ ಚಿನ್ನೇನಹಳ್ಳಿಗೆ ಹೋಗುವಾಗ ಮಲ್ಲೇಗೌಡನಕೊಪ್ಪಲುವಿನಲ್ಲಿ ಮುಖ್ಯಮಂತ್ರಿ ವಿರುದ್ಧ ರೈತರು ಘೋಷಣೆಗಳನ್ನು ಕೂಗಿದರು. ವಾಹನದಿಂದ ಕೆಳಗೆ ಇಳಿದು ಬರುವವರೆಗೂ ಘೋಷಣೆಗಳನ್ನು ಕೂಗುತ್ತಲೇ ಇದ್ದರು. ಅಲ್ಲಿಂದ ಚಿನ್ನೇನಹಳ್ಳಿಗೆ ಬಂದಾಗ ಮುಖ್ಯಮಂತ್ರಿ ಹಾಗೂ ಇತ ರರು ರೈತ ರಾಜೇಂದ್ರ ಅವರ ಮನೆ ಯೊಳಕ್ಕೆ ತೆರಳಿದರು. ಆದರೆ, ಅಂಬರೀಷ್‌ ಅವರು ಮಾತ್ರ ಮನೆಯೊಳಕ್ಕೆ ಹೋಗಲಿಲ್ಲ. ಅಲ್ಲಿಯೇ ಇದ್ದ ಜನರ ಬಳಿಗೆ ತೆರಳಿ ಮಾತನಾಡಲು ಮುಂದಾದರು.

ಆಗ ಕೆಲವರು, ಕಬ್ಬಿನ ಬಾಕಿ ಕೊಡಿಸಬೇಕು. ಕಾರ್ಖಾನೆ ಆರಂಭಿಸಬೇಕು ಎಂಬ ಬೇಡಿಕೆಗಳನ್ನು ಇಟ್ಟರು. ಈ ಬಗ್ಗೆ ಕ್ರಮ ಕೈಗೊಳ್ಳುವುದಾಗಿ ಹೇಳಿದ ಅಂಬರೀಷ್‌ ಅವರು ಬಳಲಿದಂತೆ ಕಂಡು ಬಂದರು. ನಂತರ ಇತರರ ಸಹಾಯ ಪಡೆದುಕೊಂಡು ಕಾರು ಏರಿ ಹೊರಟೇಬಿಟ್ಟರು.

ಗ್ರಾಮದ ದೇವಸ್ಥಾನದ ಸಮೀಪವಿದ್ದ ಜನರ ಬಳಿ ಕಾರು ನಿಲ್ಲಲ್ಲಿಲ್ಲ. ಆಗ ಅಲ್ಲಿದ್ದ ಕೆಲವರೂ ಸಚಿವ ಅಂಬರೀಷ್‌ ವಿರುದ್ಧ ಘೋಷಣೆ ಕೂಗಿದರು. ಅಪೆಕ್ಸ್ ಬ್ಯಾಂಕಿನ ನಿರ್ದೇಶಕರ ಆಯ್ಕೆ ವಿಚಾರದ ಮುನಿಸು ಇನ್ನೂ ಮುಂದುವರಿದಿದೆಯೇ ಎಂಬ ಪ್ರಶ್ನೆ ಅಲ್ಲಿದ್ದವರನ್ನು ಕಾಡಿತು.

ಹಸಿರು ಕಾರ್ಪೆಟ್‌ ಸ್ವಾಗತ!
ಮಂಡ್ಯ: ಆತ್ಮಹತ್ಯೆ ಮಾಡಿಕೊಂಡ ರೈತರ ಮನೆಗೆ ಸಾಂತ್ವನ ಹೇಳಲು ಭಾನುವಾರ ಬಂದಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ತಾಲ್ಲೂಕಿನ ಹೊನ್ನನಾಯಕನಹಳ್ಳಿಯಲ್ಲಿ ಹಸಿರು ಕಾರ್ಪೆಟ್‌ ಹಾಸಿ ಸ್ವಾಗತಿಸಿದ್ದು ಚರ್ಚೆಗೆ ಗ್ರಾಸವಾಗಿತ್ತು.

ಮುಖ್ಯರಸ್ತೆಗೆ ಹೊಂದಿಕೊಂಡೇ ಮೃತ ರೈತ ಶಿವಲಿಂಗೇಗೌಡರ ಮನೆಯಿದೆ. ರಸ್ತೆಯಿಂದ ಮೂವತ್ತು ಅಡಿಯಷ್ಟು ಮಾತ್ರ ದೂರ ಇತ್ತು. ಅಲ್ಲಿ ಹಸಿರು ಕಾರ್ಪೆಟ್‌ ಹಾಸಲಾಗಿತ್ತು.

‘ಇದೇನು ಸಂತೋಷದ ಸಮಾರಂಭವೇ? ರೈತರ ಕುಟುಂಬದವರು ದುಃಖದಲ್ಲಿದ್ದಾರೆ. ಸರಳವಾಗಿ ಬಂದು, ಹೋದರೆ ಸಾಕು. ಅದು ಬಿಟ್ಟು ಕಾರ್ಪೆಟ್‌ ಹಾಕಿ ಸ್ವಾಗತಿಸುವ ಅಗತ್ಯವೇನಿತ್ತು’ ಎಂದು ಗ್ರಾಮದ ಕೃಷ್ಣೇಗೌಡ ಪ್ರಶ್ನಿಸಿದರು..

Write A Comment