ಕರಾವಳಿ

ಚಿದು ಬರೆಯುವ ಪ.ಗೋ ಸರಣಿ-14: ಸರ್ಪಸಂಕಲೆ ತುಳು ಚಿತ್ರ ನಿರ್ದೇಶಕ, ಹಿಂದಿ ಚಿತ್ರ ನಟ

Pinterest LinkedIn Tumblr

5

ಪ.ಗೋಪಾಲಕೃಷ್ಣ ಅವರದು ಎಂಥ ಪ್ರತಿಭೆ ಎನ್ನುವುದು ಸ್ವತ: ಅವರಿಗೂ ಗೊತ್ತಿರಲಿಲ್ಲ ಎನ್ನುವುದೇ ಸೂಕ್ತ. ಯಾಕೆಂದರೆ ಅವರು ಬದುಕಿನುದ್ದಕ್ಕೂ ಮಾಡಿದ್ದೆಲ್ಲವೂ ಸಾಹಸ ಮತ್ತು ಪ್ರಯೋಗ. ಹೀಗೆ ಹೇಳುವುದಕ್ಕೆ ನಾನು ಅವರನ್ನು ಹತ್ತಿರದಿಂದ ನೋಡಿದ್ದ ಅವರ ಸಹವಾಸದಲ್ಲಿ ಹೆಚ್ಚು ಕಾಲ ಕಳೆದಿದ್ದ ಕಾರಣಕ್ಕೂ ಹೌದು ಅವರ ಪ್ರತಿಭೆ ಇಂಥದ್ದಕ್ಕೇ ಸೀಮಿತ ಎನ್ನಲಾರೆ.

ಯಾರೂ ಮಾಡದ ಕೆಲಸವನ್ನು ತಾನು ಮಾಡಬೇಕು, ಯಾರೂ ಬರೆಯದಿದ್ದ ಹಾಗೆ ವಿನೂತವಾಗಿ ಬರೆಯಬೇಕು, ಯಾರೂ ಸುಳಿದಾಡದ ಕಡೆ ಸುಳಿದಾಡಬೇಕು ಹೀಗೆ ಪ.ಗೋ ತಮ್ಮದೇ ಸ್ವಂತಿಕೆಯನ್ನು ಕಾರ್ಯದಲ್ಲಿ ಮತ್ತು ಬದುಕಿನಲ್ಲಿ ರೂಪಿಸಿಕೊಳ್ಳಲು ಸದಾ ತುಡಿಯುತ್ತಿದ್ದವರು.

ನಾನು ಮತ್ತು ಪ.ಗೋ ಚೇಷ್ಠೆ ಮಾಡುತ್ತಿದ್ದಷ್ಟು ಬೇರೆ ಯಾರೂ ಸಲುಗೆಯಿಂದ ಅವರೊಂದಿಗೆ ಇರಲು ಸಾಧ್ಯವೇ ಇರಲಿಲ್ಲ. ಅವರ ಸ್ಕೂಟರ್ ನಿಂದ ಹಿಡಿದು ಅವರು ತಲೆಗೆ ಹಾಕಿಕೊಳ್ಳುತ್ತಿದ್ದ ಹೆಲ್ಮೆಟ್ ತನಕ ಛೇಡಿಸುತಿದ್ದೆ. ಮಂಗಳೂರಲ್ಲಿ ಆ ಕಾಲದಲ್ಲೂ ಹೆಲ್ಮೆಟ್ ಕಡ್ಡಾಯ ಇರದಿದ್ದರೂ ಪ.ಗೋ ಕಡ್ಡಾಯವಾಗಿ ಹೆಲ್ಮೆಟ್ ಹಾಕಿಕೊಳ್ಳುತ್ತಿದ್ದರು. ಆದರೆ ಆ ಹೆಲ್ಮೆಟ್ ನಿಂದ ತಲೆಯೂ ಸುರಕ್ಷಿತವಾಗಿರಲು ಸಾಧ್ಯವಿರಲಿಲ್ಲ, ಹಾಕದಿದ್ದರೆ ಗಂಡಾಂತರವೂ ಇರಲಿಲ್ಲ. ಆದರೂ ಪ.ಗೋ ಹೆಲ್ಮೆಟ್ ಹಾಕುವುದನ್ನು ತಮಗೆ ತಾವೇ ಕಡ್ಡಾಯ ಮಾಡಿಕೊಂಡಿದ್ದರು.

ಈ ಹೆಲ್ಮೆಟ್ ಹಾಕಿಕೊಂಡರೆ ಏನು ಪ್ರಯೋಜನ ? ಸಹಜವಾಗಿ ಒಮ್ಮೆ ಪ.ಗೋ ಅವರನ್ನು ಕೇಳಿದ್ದೆ. ಅಂಥ ಹೆಲ್ಮೆಟ್ ಅದು. ಅದಕ್ಕೆ ಪ.ಗೋ ಕೊಟ್ಟ ಉತ್ತರ ಹೆಲ್ಮೆಟ್ ಹಾಕಿಕೊಳ್ಳುವುದು ನನ್ನ ತಲೆಗೆ ನಿನ್ನ ತಲೆಗಲ್ಲ. ಪ್ರಯೋಜನ ಆಗಬೇಕಾದದ್ದು ನನಗೆ ನಿನಗಲ್ಲ ನಿನ್ನ ತಲೆಗೂ ಅಲ್ಲ. ಸಾಕಾ ಬೇಕಾ ?.

ಒಂದು ಚೆನ್ನಾಗಿರುವ ಹೆಲ್ಮೆಟ್ ಪರ್ಚೇಸ್ ಮಾಡಿ, ಸುಮ್ಮನೆ ಕುರೆ (ತುಳುವಿನಲ್ಲಿ- ಜಿಪುಣ) ಯಾಕೆ ಎಂದು ಹೇಳಿ ಮತ್ತೂ ರೇಗಿಸಿದೆ. ಮತ್ತೆ ಗೊತ್ತಾಯ್ತು ನನಗೆ ಬೇಡವಾಗಿತ್ತೆಂದು. ಯಾಕೆಂದರೆ ಪ.ಗೋ ನನ್ನ ಕಿಸೆಯನ್ನೆಲ್ಲಾ ಜಾಲಾಡಿ ಹೆಲ್ಮೆಟ್ ಗೆ ಹಣ ಕಸಿದುಕೊಳ್ಳಲು ಯತ್ನಿಸಿ ನನ್ನನ್ನು ಸತಾಯಿಸಿ ಕೊನೆಗೆ ತಪ್ಪಾಯಿತು ಎನ್ನುವವರೆಗೂ ಬಿಡಲಿಲ್ಲ. ಆ ಮೇಲೆ ನಾನು ಅವರನ್ನು ಹಾಗೆ ಕೆಣಕಿದ ತಪ್ಪಿಗೆ ಒಂದು ಚಹಾ ಹಾಗೂ ಒಂದು ಬ್ರಿಸ್ಟಲ್ ಸಿಗರೇಟು ದಂಡದ ರೂಪದಲ್ಲಿ ಕೊಡಿಸಬೇಕಾಯಿತು. ಅವರ ಕಿಸೆಯಲ್ಲಿ ಬೀಡಿ ಕಟ್ಟು ಇತ್ತಾದರೂ ದಂಡವಾಗಿ ಸಿಗರೇಟ್ ಕೊಡಿಸುವ ತನಕ ಬಿಡಲಿಲ್ಲ.

ಇಂಥ ರೋಚಕ, ಆಪ್ತ ಘಟನೆಗಳೂ ನೂರಾರು ಇವೆ. ಪ.ಗೋ ಮೇಧಾವಿಯಾದರೂ ಸಲುಗೆಯಿಂದ ನಡೆದುಕೊಳ್ಳುತ್ತಿದ್ದರು ಮಕ್ಕಳ ಮನಸ್ಸೂ ಅವರಲ್ಲಿತ್ತು, ಹಿರಿತನವಿದ್ದರೂ ಚಿಕ್ಕಮಕ್ಕಳಂತೆ ಕೀಟಲೆ ಮಾಡುವುದು, ತಮಾಷೆ, ಹಾಸ್ಯ ಎಲ್ಲವೂ ಅವರಲ್ಲಿತ್ತು. ಅದು ನಾವು ನಾವೇ ಇದ್ದಾಗ ಮಾತ್ರ, ಕೆಲವೊಂದು ಸಲ ಮಯ್ಯ ಮತ್ತು ನರಸಿಂಹರಾವ್ ಇದ್ದಾಗಲೂ ಇಂಥ ಘಟನೆಗಳು ನಡೆಯುತ್ತಿದ್ದವು.

ನಾನು ಪ.ಗೋ ಅವರನ್ನು ಛೇಡಿಸುತ್ತಿದ್ದುದು ಎರಡು ವಿಚಾರಗಳಲ್ಲಿ. ಪ.ಗೋ ತಮ್ಮ ಬಗ್ಗೆ ಅಷ್ಟು ಸುಲಭವಾಗಿ ಯಾರೊಂದಿಗೂ ಹೇಳಿಕೊಳ್ಳುವುದಿಲ್ಲ. ಒಂದೇ ಒಂದು ಸಲ ಅವರು ಬಾಯಿಬಿಟ್ಟು ಅವರ ಗುಟ್ಟು ರಟ್ಟಾಗಿತ್ತು.

ಹೀಗೇ ಮಾತನಾಡುತ್ತಿದ್ದಾಗ ಚಲನಚಿತ್ರ ರಂಗದ ವಿಚಾರ ಬಂತು. ತುಳು ಚಿತ್ರರಂಗದಲ್ಲಿ ಹೆಚ್ಚಿನವರು ಕೈಸುಟ್ಟುಕೊಂಡದ್ದೇ ಹೆಚ್ಚು ಎಂದರು. ಆದರೆ ನಾನು ಬಾಯಿ ಹಾಕಿ ಎಲ್ಲರೂ ಅಲ್ಲ ಅಂದೆ. ನಿನಗೆಷ್ಟು ಗೊತ್ತು ? ಕೇಳಿದರು.

ಆಗ 1981-82 ರಲ್ಲಿರಬೇಕು ಮುಂಬೈ ನ ರಾಮ್ ಶೆಟ್ಟಿ ಅವರು ಬದ್ಕೆರೆಬುಡ್ಲೆ ತುಳು ಚಿತ್ರ ನಿರ್ಮಿಸಿದ್ದರು. ಆ ಚಿತ್ರದ ಪತ್ರಿಕಾ ಪ್ರಚಾರದ ಹೊಣೆ ನಿಭಾಯಿಸಿದ್ದು ನಾನು. ಟೈಟ್ಲ್ ನಲ್ಲಿ ಪತ್ರಿಕಾ ಪ್ರಚಾರ ಯಾರದ್ದೆಂದು ದೊಡ್ಡ ಅಕ್ಷರಗಳಲ್ಲಿ ಬೀಳುತ್ತೆ. ಬೇಕಾದರೆ ಆ ಸಿನಿಮಾ ನೋಡಿ ಸಾಧ್ಯವಾದರೆ ನನ್ನ ಹೆಸರು ಬೀಳುವಾಗ ಜೋರಾಗಿ ಸೀಟಿ ಹಾಕಿ ಎಂದೆ.

ನನ್ನ ಈ ಮಾತಿಗೆ ಪ.ಗೋ ಬಚ್ಚಿಟ್ಟಿದ್ದ ಗುಟ್ಟು ಹೇಳಿದರು. ಮರಿ ನಾನು ಹಿಂದಿ ಚಿತ್ರದಲ್ಲಿ ಡಾಕ್ಟರ್ ಪಾತ್ರ ಮಾಡಿದ್ದೀನಿ. ಒಂದು ತುಳು ಚಿತ್ರವನ್ನು ನಾನೇ ನಿರ್ದೇಶಿಸಿದ್ದೇನೆ.

ಈ ಮಾತು ಕೇಳಿ ನಾನು ಬೆರಗಾಗಿದ್ದು ನಿಜ. ಪ.ಗೋ ಹಿಂದಿ ಚಿತ್ರದಲ್ಲಿ ನಟಿಸಿದ್ದು ಬರೇ ಸುಳ್ಳು ಎಂದು ಕಿಸ್ಸಕ್ಕನೆ ನಕ್ಕೆ. ಆಗ ಅವರು ನನ್ನ ಬೆನ್ನಿಗೆ ಗುದ್ದಿ ಮರೀ ನಾನು ಡಾಕ್ಟರ್ ಪಾತ್ರ ಮಾಡಿದ್ದೀನಿ ಗೊತ್ತಾ? ಕೇಳಿದರು.

ಗೊತ್ತಾಯ್ತು ಸಿನಿಮಾಗಳಲ್ಲಿ ಮದುವೆ ಸೀನ್ ಬಂದರೆ ಕವರ್ ಕೊಡಲು ಸಾಲಾಗಿ ನಿಂತಿರುವವರೆಲ್ಲ ಕಾಣುತ್ತಾರೆ ಹಾಗೆ ನೀವೂ ಚಿತ್ರ ನಟ ಎಂದು ಛೇಡಿಸಿದೆ. ತುಂಬಾ ಸೀರಿಯಸ್ಸಾಗಿ ಕೇಳ್ತಾ ಇದ್ದೀನಿ ಯಾವ ಸಿನಿಮಾ ಹೇಳಿ , ನಟನೆ ಯಾವುದರಲ್ಲಿ ನಿರ್ದೇಶನ ಮಾಡಿದ್ದು ಯಾವ ಚಿತ್ರವೆಂದು ಗೋಗರೆದೆ. ಚಹಾ, ಸಿಗರೇಟ್ ತೆಗಿಸಿಕೊಡುವುದಾಗಿಯೂ ಆಮಿಷ ಒಡ್ಡಿದೆ. ಪ.ಗೋ ಜಗ್ಗಲಿಲ್ಲ. ಈಗ ಬಾಯಿ ಮುಚ್ಚು ನಾನೇ ನಿನಗೆ ಚಹಾ ಕುಡಿಸುತ್ತೇನೆಂದು ಬಾಯಿಮುಚ್ಚಿಸಿದ್ದರು. ನಾನು ಆ ದಿನದಿಂದ ಅವರೊಬ್ಬರೇ ಸಿಕ್ಕಿದಾಗ ಒರ ನಟ ಅಂದರೆ ತುಳುವಿನಲ್ಲಿ ಒಮ್ಮೆ ನಟ ಎನ್ನುತ್ತಿದ್ದೆ. ಅವರ ಕೊನೇ ದಿನಗಳ ತನಕವೂ ಅವರನ್ನು ಅದೇ ರೀತಿ ಛೇಡಿಸುತ್ತಿದ್ದೆ ಕೂಡಾ.

ಆದರೆ ಪ.ಗೋ ನಟಿಸಿದ್ದು ಯಾವ ಹಿಂದಿ ಚಿತ್ರ ಮತ್ತು ಅವರು ನಿರ್ದೇಶಿಸಿದ್ದ ತುಳು ಚಿತ್ರ ಯಾವುದು ಎನ್ನುವುದು ಗೊತ್ತಿರದ ಕಾರಣ ಅದರ ಪತ್ತೆಗೆ ಮುಂದಾದೆ. ಹಿರಿಯರಾದ ಯು.ನರಸಿಂಹ ರಾವ್ ಅವರನ್ನು ಈ ವಿಷಯ ತಿಳಿಸುವಂತೆ ಬೆನ್ನು ಹತ್ತಿದೆ. ಆದರೆ ರಾಯರಿಗೆ ಪ.ಗೋ ಅವರ ಹಿಂದಿ ಚಿತ್ರದ ನಟನೆ ಬಗ್ಗೆ ಗೊತ್ತಿರಲಿಲ, ಆದರೂ ಅವನು ಬೊಂಬಾಯಿಯಲ್ಲೆಲ್ಲಾ ಸುತ್ತಾಡಿ ಬಂದಿದ್ದಾನೆ, ಎಲ್ಲೋ ಅವಕಾಶ ಸಿಕ್ಕಿರಬೇಕು ಎಂದಷ್ಟೇ ಹೇಳಿದರು.

ಪ.ಗೋ ನಿರ್ದೇಶಿಸಿದ್ದ ತುಳು ಚಿತ್ರದ ಬಗ್ಗೆ ವಿವರ ಅವರಿಗೂ ಗೊತ್ತಿತ್ತು. ಸರ್ಪಸಂಕಲೆ ಎನ್ನುವ ತುಳು ಚಿತ್ರವನ್ನು ಪ.ಗೋ ಬಂಡವಾಳ ಹೂಡಿಕೆ ಮಾಡಿಸಿ ತಾವೇ ನಿರ್ದೇಶಿಸಿದ್ದರಂತೆ. ಸಿನಿಮಾ ನಿರ್ಮಿಸುವುದಕ್ಕೆ ಹಣ ಹಾಕಲು ಸ್ನೇಹಿತರಿಗೆ ಮನವಿ ಮಾಡಿಕೊಂಡು ಲಾಭ ಬಂದರೆ ಹಣ ವಾಪಸ್, ನಷ್ಟವಾದರೆ ಸಾಲ ವಾಪಸ್ ಕೊಡುವುದಿಲ್ಲ. ಈ ಕಂಡೀಷನ್ ಗೆ ಒಪ್ಪಿದರೆ ಹಣ ಕೊಡಿ ಎಂದು ಹಣ ಸಂಗ್ರಹಿಸಿ ಸಿನಿಮಾ ತಯಾರು ಮಾಡಿದ್ದರಂತೆ. ಆದರೆ ಈ ಸಿನಿಮಾದಲ್ಲಿ ಯಾರೆಲ್ಲಾ ನಟಿಸಿದ್ದರು ಎನ್ನುವುದು ಅವರಿಗೂ ಗೊತ್ತಿರಲಿಲ್ಲ. ಆದರೆ ಸೆನ್ಸಾರ್ ಸಂದರ್ಭದಲ್ಲಿ ತಕರಾರು ತೆಗೆದರಂತೆ. ಪ.ಗೋ ಅವರ ತಕರಾರಿಗೆ ಬಗ್ಗಲಿಲ್ಲ. ಸ್ವಲ್ಪ ಅಡ್ಜೆಸ್ಟ್ ಮಾಡಿದ್ದರೂ ಸಿನಿಮಾ ಬೆಳ್ಳಿ ತೆರೆಗೆ ಬರುತ್ತಿತ್ತು. ಪ.ಗೋ ಮೊಂಡುತನ ಸಮ್ ಥಿಂಗ್ ಕೊಡಲು ನಿರಾಕರಿಸಿದ ಕಾರಣ ಸರ್ಪಸಂಕಲೆ ಡಬ್ಬದಿಂದ ಹೊರಬರಲಿಲ್ಲವಂತೆ. ಈಗ ಅದರ ನೆಗೆಟಿವ್ ಕೂಡಾ ಇಲ್ಲವಂತೆ.

ನನಗೆ ಇಷ್ಟು ಮಾಹಿತಿ ಸಿಕ್ಕಿದ ತಕ್ಷಣವೇ ಪ.ಗೋ ಅವರಿಗೆ ಫೋನ್ ಮಾಡಿ ಕೇಳಿಸಿಕೊಂಡು ಬಂದಿದ್ದ ಎಲ್ಲವನ್ನೂ ಹೇಳಿದೆ. ಹಿಂದಿ ಚಿತ್ರದ್ದೂ ಗೊತ್ತಿದೆ ಹೇಳಬೇಕೇ ? ಕೇಳಿದೆ.

ಈಗ ಪ.ಗೋ ಗೂ ಡೌಟ್ ಬರಲು ಶುರುವಾಗಿರಬೇಕು. ಮರೀ ನರಸಿಂಹರಾವ್ ಅವರನ್ನು ಮಾತನಾಡಿಸಿ ಕದ್ದುತಂದ ಸರಕು ಬಿಡು. ನೋಡುವಾ ಹಿಂದಿ ಚಿತ್ರ ಯಾವುದು ಹೇಳು? ಸವಾಲು ಹಾಕಿದರು.

ನನಗೇ ಗೊತ್ತಿಲ್ಲ, ಅವರಿಗೇನು ಹೇಳಲಿ, ಆದರೂ ನನ್ನ ಮರುಸವಾಲು, ಹೇಳಿದರೆ ಏನು ಕೊಡುತ್ತೀರಿ. ನೀನು ಕೇಳಿದ್ದು ಕೊಡುತ್ತೇನೆಂದರು. ಈಗ ಬೇಡ ನಮ್ಮ ಆಫೀಸ್ ಗೆ ಬನ್ನಿ ಆಗ ಹೇಳುತ್ತೇನೆಂದು ಬಚಾವ್ ಆದೆ. ಸಂಜೆ ಪ.ಗೋ ಬಂದರು. ನನ್ನ ಮುಂದೆ ಕುರ್ಚಿ ಎಳೆದು ಕುಳಿತುಕೊಂಡು ಏನೆಲ್ಲಾ ಗೊತ್ತಿದೆ ಈಗ ಕಕ್ಕು ಕಕ್ಕು ಎಂದು ಮೇಜು ಗುದ್ದಿದರು.

ಅವರು ಮತ್ತೆ ಮತ್ತೆ ಕೆಣಕಿದರಾದರೂ ನನ್ನಲ್ಲಿ ಹೇಳಲು ಏನೂ ಉಳಿದಿರಲಿಲ್ಲ. ತಪ್ಪಾಯ್ತು ಈಗ ನೀವೇ ಹೇಳಿ ಎಂದೆ. ಬಾ ಬಾ ಎಂದವರೇ ನನ್ನನ್ನು ಎಳೆದುಕೊಂಡು ಸಿಟಿ ಆಸ್ಪತ್ರೆ ಕ್ಯಾಂಟೀನ್ ಗೆ ಕರೆದೊಯ್ದು ಚಹಾ, ನೀರುಳ್ಳಿ ಬಜ್ಜಿ ತಿಂದು, ಬ್ರಿಸ್ಟಲ್ ಸಿಗರೇಟ್ ತೆಗಿಸಿಕೊಂಡು ಇದು ನಿನಗೆ ದಂಡ ಎಂದರು. ಪರವಾಗಿಲ್ಲ ಇನ್ನೊಂದು ನೀರುಳ್ಳಿ ಬಜ್ಜಿ ತೆಗೆಸಿಕೊಡ್ತೇನೆ ಹಿಂದಿ ಚಿತ್ರದ ಬಗ್ಗೆ ಹೇಳಿ ಎಂದು ಪೀಡಿಸಿದೆ. ಆದರೆ ಪ.ಗೋ ಬಾಯಿ ಬಿಡಲಿಲ್ಲ. ಆ ದಿನ ಆಕಸ್ಮಾತ್ ಹೇಳಿದೆ, ಇಲ್ಲದಿದ್ರೆ ಇವೆಲ್ಲಾ ನಿನಗೆಲ್ಲಿ ಗೊತ್ತಾಗಬೇಕು ಎಂದು ನಕ್ಕರು.

ಪ.ಗೋ ಕೊನೆತನಕವೂ ಅವರು ನಟಿಸಿದ್ದ ಹಿಂದಿ ಚಿತ್ರದ ಬಗ್ಗೆ ಗುಟ್ಟು ಬಿಡಲಿಲ್ಲ. ಅವರು ನಿಧನರಾದ ಮೇಲೆ ಮರಕ್ಕಿಣಿಯವರು ಹೊರತಂದ ಪ.ಗೋ ಸಂಸ್ಮರಣೆ ಪುಸ್ತಕದಲ್ಲಿ ಸೇಸಪ್ಪಾಚಾರ್ಯ ಎನ್ನುವವರು ತಮ್ಮ ಅನುಭವ ಹೇಳಿಕೊಂಡಿದ್ದಾರೆ.

ಆ ಬರಹದಲ್ಲಿ 1958ರಲ್ಲಿ ಅಡ್ಯನಡ್ಕದಿಂದ ಪುತ್ತೂರಿನ ಅರುಣಾ ಥಿಯೇಟರ್ ಗೆ ಸಿನಿಮಾ ನೋಡಲು ಕಾರು ಮಾಡಿಕೊಂಡು ಹೋಗುತ್ತಿದ್ದರಂತೆ. ಆ ದಿನ ಆ ಥಿಯೇಟರ್ ನಲ್ಲಿ ಸಮಾಧಿ ಎನ್ನುವ ಹಿಂದಿ ಚಿತ್ರ ಪ್ರದರ್ಶನವಾಗುತ್ತಿತ್ತಂತೆ. ವಿಶೇಷವೆಂದರೆ ಆ ಚಿತ್ರದಲ್ಲಿ ಪ.ಗೋಪಾಲಕೃಷ್ಣ ಭಟ್ಟರು ಡಾಕ್ಟರ್ ಪಾತ್ರ ಮಾಡಿದ್ದರು ಎಂದು ಹೇಳಿದ್ದಾರೆ.

ಇದನ್ನು ಓದಿದ ಮೇಲೆ ಅನ್ನಿಸಿತು ಮೊದಲೇ ನನಗೆ ಈ ಮಾಹಿತಿ ಸಿಕ್ಕಿದ್ದರೆ ಪ.ಗೋ ಅವರಿಂದ ನಾನು ಕೇಳಿದ್ದು ಸಿಗುತ್ತಿತ್ತು, ಛಾನ್ಸ್ ಹೋಯಿತು. ಅವರೇ ಇಲ್ಲವಾದ ಮೇಲೆ ನನಗೆ ಈಗ ಯಾರು ಕೊಟ್ಟರೂ ಬೇಡವೆನಿಸುತ್ತಿದೆ.

-ಚಿದಂಬರ ಬೈಕಂಪಾಡಿ

Write A Comment