ಕರಾವಳಿ

ಚಿದು ಬರೆಯುವ ಪ.ಗೋ ಸರಣಿ-10: ಬೋಳೂರು ನಿವೇಶನಕ್ಕೆ ಬೋಳಾರದ ಕೊಕ್ಕೆ

Pinterest LinkedIn Tumblr

Pa Go caricature 2nd

ಉರಿಯುತ್ತಿದ್ದ ಬೀಡಿಯನ್ನು ನೆಲಕ್ಕೆ ಹಾಕಿ ಕಾಲಿನಿಂದ ಒಸಕಿ ಹಾಕಿದರು. ಪ.ಗೋ ಅವರಿಗೆ ಅಸಾಧ್ಯವಾದ ಸಿಟ್ಟು ಬಂದಿತ್ತು. ಆ ಪತ್ರವನ್ನು ಓದಿದರೆ ಎಂಥವನಿಗೇ ಆದರೂ ಸಿಟ್ಟು ಬರಲೇ ಬೇಕಿತ್ತು.

ಇಷ್ಟಕ್ಕೂ ಸಂಘದ ಮೇಲೆ ಸರ್ಕಾರಕ್ಕೆ ಯಾಕೆ ಸಿಟ್ಟು, ಪಾಲಿಕೆಗೆ ಯಾಕೆ ಮನಸಿಲ್ಲ ಎನ್ನುವುದೇ ಅರ್ಥವಾಗಲಿಲ್ಲ. ಒಂದು ವರ್ಷವೆಲ್ಲಾ ಸುತ್ತಾಡಿ ಪಾಲಿಕೆ ಮಾಸಿಕ ಸಭೆಯಲ್ಲೂ ಸರ್ವಾನುಮತದಿಂದ ನಿವೇಶನ ಮಂಜೂರು ಮಾಡುವ ನಿರ್ಣಯ ಅಂಗೀಕರಿಸಿ ಒಪ್ಪಿಗೆಗಾಗಿ ಬೆಂಗಳೂರಿಗೆ ಹೋಗಿದ್ದ ಫೈಲ್ ವಾಪಸ್ ಬಂದಿದೆ.

ಪಾಲಿಕೆಯಿಂದ ಬಂದಿದ್ದ ಪತ್ರದಲ್ಲಿದ್ದ ಅಂಶವೆಂದರೆ ದ.ಕ.ಕಾರ್ಯನಿರತ ಪತ್ರಕರ್ತರ ಸಂಘ ನಿವೇಶನ ಕೋರಿ ಸಲ್ಲಿಸಿದ್ದ ಅರ್ಜಿ ಹಾಗೂ ಪಾಲಿಕೆ ನಿರ್ಣಯವನ್ನು ಪರಿಶೀಲಿಸಿದ ನಂತರ ಸರ್ಕಾರ ನೀವು ಬಯಸಿದ್ದ ನಿವೇಶನ ಮಂಜೂರು ಮಾಡಲು ಸಾಧ್ಯವಿಲ್ಲವೆಂದು ಹೇಳಿದೆ ಎನ್ನುವುದನ್ನು ನಿಮ್ಮ ಗಮನಕ್ಕೆ ತರಲಾಗುತ್ತಿದೆ.

ಬೆಂಗಳೂರಿನಿಂದ ಬಂದಿದ್ದ ಪತ್ರದ ಆಧಾರದಲ್ಲಿ ಮಂಗಳೂರು ಮಹಾನಗರಪಾಲಿಕೆಯವರು ಸಂಘಕ್ಕೆ ತಿಳಿಸಿದ ಮಾಹಿತಿ ಬಿಟ್ಟರೆ ನಮ್ಮ ಅರ್ಜಿಯನ್ನು ಹಾಗೂ ಮಹಾನಗರಪಾಲಿಕೆ ತೆಗೆದುಕೊಂಡಿದ್ದ ನಿರ್ಣಯವನ್ನು ಯಾವ ಕಾರಣಕ್ಕೆ ಅಂಗೀಕರಿಸಲು ಸಾಧ್ಯವಿಲ್ಲ ಮತ್ತು ನಿರಾಕರಿಸಲಾಗಿದೆ ಎನ್ನುವ ಯಾವ ವಿವರಗಳೂ ಇರಲಿಲ್ಲ.

ಸಿಟ್ಟಿನಿಂದ ಕುದಿಯುತ್ತಿದ್ದ ಪ.ಗೋ ಇದನ್ನು ಉಪ್ಪು ಹಾಕಿ ನೆಕ್ಕಬೇಕು ಅಷ್ಟೇ ಎಂದವರೇ ಬರ್ತೀಯಾ ಮಾರಾಯ ಕೇಳಿದರು ನನ್ನನ್ನು. ಮೂರೂ ಜನ ಕಾರ್ಪೊರೇಷನ್ ಗೆ ಹೋಗುವಾ ಎಂದೆ. ಮಯ್ಯರನ್ನು ಅಲ್ಲಿಗೇ ಬರಲು ಫೋನ್ ಮಾಡು ಎಂದರು ನರಸಿಂಹರಾವ್.

ಮಯ್ಯರಿಗೆ ಫೋನ್ ಮಾಡಿದೆ. ನಾನು ಅರ್ಧಗಂಟೆ ನಂತರ ಬರ್ತೀನಿ ಎಂದದ್ದನ್ನು ತಿಳಿಸಿದೆ, ಯಾರು ಬರ್ತೀರಿ ಬನ್ನಿ, ನಾನು ಹೋಗ್ತಾ ಇದ್ದೀನಿ ಎಂದವರೇ ಎದ್ದು ನಿಂತರು ಪ.ಗೋ. ನೀವು ಸ್ಕೂಟರ್ ನಲ್ಲಿ ಹೋಗಿ ನಾವು ರಿಕ್ಷಾದಲ್ಲಿ ಬರುತ್ತೇವೆಂದು ಹೇಳಿ ಆ ಕಾಗದವನ್ನು ಹಿಡಿದುಕೊಂಡು ರಿಕ್ಷಾ ಹತ್ತಿದೆವು. ಪ.ಗೋ ಒಬ್ಬರೇ ಸ್ಕೂಟರ್ ನಲ್ಲಿ ಹೋದರು.

ನಾವು ಲಾಲ್ ಭಾಗ್ ಮುಟ್ಟುವ ಮೊದಲೇ ಪ.ಗೋ ಅಲ್ಲಿಗೆ ತಲುಪಿ ಬೀಡಿ ಧಮ್ ಎಳೆಯುತ್ತಿದ್ದರು. ನರಸಿಂಹ ರಾವ್ ಯಾರೂ ಸಿಟ್ಟಾಗಿ ಮಾತಾಡಬೇಡಿ ಮೊದಲು ಆ ಫೈಲ್ ನೋಡಬೇಕು, ಅದರಲ್ಲಿ ಏನು ಕಾರಣ ಕೊಟ್ಟಿದ್ದಾರೆಂದು ನೋಡಿದ ಮೇಲೆ ಮೇಯರ್ ಜೊತೆ ಚರ್ಚೆ ಮಾಡಿದರಾಯಿತು ಎಂದರು.

ಇನ್ನೂ ಎಷ್ಟು ವರ್ಷ ಮೇಯರ್ ಕಣಿ ಕೇಳ್ಬೇಕು ಎಂದರು ಪ.ಗೋ ಸಿಟ್ಟಿನಿಂದಲೇ. ನಮ್ಮ ಕೆಲ್ಸ ಆಗಬೇಕಾದ್ರೆ ಕತ್ತೆ ಕಾಲು ಹಿಡೀಬೇಕು ರಾಯರ ಉವಾಚ. ಆಯ್ತು ಕತ್ತೆ ಕಾಲು ಹಿಡಿಯುತ್ತಿರಿ, ಈಗಾಗಲೇ ಒದೆಸಿಕೊಂಡಾಗಿದೆ ಮೆಲ್ಲಗೆ ಗೊಣಗಿದರು ಪ.ಗೋ.

ಮೂವರು ನಾವು ಎಡತಾಕುತ್ತಿದ್ದ ಟೇಬಲ್ ಮುಂದೆ ಹಾಜರಾದೆವು. ಆ ವ್ಯಕ್ತಿ ನಿವೃತ್ತಿಯ ಅಂಚಿನಲ್ಲಿದ್ದರು. ಅವರು ನಮ್ಮನ್ನು ನೋಡಿ ಕುಳಿತುಕೊಳ್ಳಿ ಎಂದು ಚೇರ್ ಹಾಕಿಸಿದರು. ನರಸಿಂಹರಾವ್ ಬೆಂಗ್ಳೂರಿಂದ ರಿಜೆಕ್ಟ್ ಮಾಡಿದ್ದಾರೆ ಅಂತ ಕಾಗದ ಕಳಿಸಿದ್ದೀರಿ, ಯಾಕೆ ರಿಜೆಕ್ಟ್ ಆಯ್ತು ಅಂತ ಕೇಳ್ಬಹುದೇ?.

ಅದು ನಮಗೆ ಗೊತ್ತಿಲ್ಲ ಸಾರ್. ಈಗ ಅದರ ಕೇಸ್ ವರ್ಕರ್ ನಾನಲ್ಲ, ನಾನಾಗಿದ್ರೆ ನೋಡಿ ಹೇಳ್ತಿದ್ದೆ. ನನ್ನ ಸೆಕ್ಷನ್ ಬದಲಾಗಿ ಮೂರು ತಿಂಗಳಾಯ್ತು. ಬೆಂಗಳೂರಿಗೆ ಫೈಲ್ ಕಳಿಸಿದ್ದೂ ಕೂಡಾ ನಾನಾಲ್ಲ ಎಂದರು.

ಈಗ ಅದನ್ನು ಹ್ಯಾಂಡ್ಲ್ ಮಾಡ್ತಿರೋದು ಯಾರು ?. ನೋಡಿ ಆ ಟೇಬಲ್ ನಲ್ಲಿ ಕೇಳಬೇಕು ಎಂದವರೇ ಆ ವ್ಯಕ್ತಿಯನ್ನು ಕರೆದು ಇವರು ಪತ್ರಕರ್ತರು. ಅವರ ಸಂಘದ ನಿವೇಶನದ ಬಗ್ಗೆ ಕೇಳ್ತಾ ಇದ್ದಾರೆ.
ಓ ಅದಾ ಸಾರ್ ರಿಜೆಕ್ಟ್ ಆಗಿ ಗೌರ್ಮೆಂಟ್ ನಿಂದ ವಾಪಸ್ ಬಂತು, ನಿಮಗೂ ನೋಟೀಸ್ ಕಳ್ಸಿದ್ದೀನಿ ಸಾರ್ ಎಂದ.
ಅಲ್ಲಿಯತನಕ ಸುಮ್ಮನಿದ್ದ ಪ.ಗೋ ಓಹೋ ನೀವೋ ಆ ಫೈಲ್ ಹ್ಯಾಂಡ್ಲ್ ಮಾಡ್ತಾ ಇರೋ ಮಹಾನುಭಾವರು ಕೇಳಿದರು.

ಸಾರ್ ನನ್ನದೇನೂ ತಪ್ಪಿಲ್ಲ ಸಾರ್, ಗೌರ್ಮೆಂಟ್ ನಲ್ಲೇ ರಿಜೆಕ್ಟ್ ಆಗಿದೆ ಎಂದ. ರಿಜೆಕ್ಟ್ ಆಗಿದೆ ಸರಿ ಯಾಕೆ ಅಂತ ಕಾರಣ ಕೊಟ್ಟಿಲ್ಲವೇ ? ರಾಯರ ಪ್ರಶ್ನೆ.

ಸಾರ್ ರಿಜೆಕ್ಟ್ ಮಾಡಿದ ಫೈಲ್ ಇದೆ ನೋಡಿ ಬೇಕಾದ್ರೆ ಬನ್ನಿ ಎಂದವರೇ ತನ್ನ ಟೇಬಲ್ ಬಳಿಗೆ ನಮ್ಮನ್ನು ಕರೆದು ಕುರ್ಚಿ ಹಾಕಿಸಿ ಇಡೀ ಕಡತವನ್ನು ನಮ್ಮ ಮುಂದೆ ಇಟ್ಟರು. ಆ ಫೈಲ್ ಮೂರು ನಾಲ್ಕು ವರ್ಷಗಳ ಕಾಲ ಸುತ್ತಾಡಿರುವ ಕಾರಣ ಸಾಕಷ್ಟು ಬೆಳೆದಿತ್ತು.

ನಮ್ಮ ಪತ್ರಕರ್ತರಲ್ಲಿ ಪ.ಗೋ ಮೊದಲು ಪ್ರೆಸ್ ನೋಟ್ ತೆಗೆದುಕೊಂಡು ಅದನ್ನು ಮೊದಲಿನಿಂದ ಕೊನೆತನಕ ಓದುವ ಅಭ್ಯಾಸ. ಹಾಗೆ ಓದುವಾಗ ಡಿಸ್ಟರ್ಬ್ ಆಗಬಾರದು ಅವರಿಗೆ. ಅವರು ಎರಡು ಮೂರುಸಲ ಓದಿ ಅರ್ಥಮಾಡಿಕೊಂಡ ಮೇಲೆ ಅದನ್ನು ಮಡಚಿ ಪಕ್ಕಕ್ಕಿಟ್ಟು ಅದರ ಮೇಲೆ ತಮ್ಮ ಪೆನ್ನು ಹೊರಿಸಿ ನಂತರ ಅಗತ್ಯವಿದ್ದರೆ ಕೇಳಿದರೆ ಮಾತು, ಇಲ್ಲದಿದ್ದರೆ ಏನಾದರೂ ಗೀಚಿಕೊಂಡಿರುವುದು ಅವರ ಸ್ವಭಾವ.

ಇಡೀ ಫೈಲನ್ನು ಸೂಕ್ಷ್ಮವಾಗಿ ಗಮನಿಸಬೇಕಿತ್ತು. ಮೂರೂ ಜನ ಮುಗಿಬಿದ್ದರೆ ಮತ್ತಷ್ಟು ಗೋಜಲಾಗುತ್ತದೆ ಎನ್ನುವ ಕಾರಣಕ್ಕೆ ಇಂಥ ವಿಚಾರದಲ್ಲಿ ಅತ್ಯಂತ ಸೂಕ್ಷ್ಮಮತಿಯಾದ ಪ.ಗೋ ಅವರಿಗೇ ಫೈಲ್ ನೋಡಲು ರಾಯರು ಹೇಳಿದರು.

ಈಗ ಪ.ಗೋ ಕೈಗೆ ಫೈಲ್ ಕೊಟ್ಟಾಯ್ತು. ನಾನು ಮತ್ತು ರಾಯರು ಸುಮ್ಮನೆ ಕುಳಿತೆವು. ಅಷ್ಟರಲ್ಲಿ ಮಯ್ಯರೂ ಎಂಟ್ರಿಕೊಟ್ಟರು. ನಿಮ್ಮನ್ನು ಎಲ್ಲೆಲ್ಲಿ ಹುಡುಕುವುದಯ್ಯಾ ಕೇಳುತ್ತಾ ಮಯ್ಯ ಇನ್ನೊಂದು ಚೇರ್ ಎಳೆದುಕೊಂಡು ಕುಳಿತರು. ಹೌದಯ್ಯಾ ಯಾಕೆ ರಿಜೆಕ್ಟ್ ಕೇಳಿದರು ಮಯ್ಯ. ಅದನ್ನೇ ಹುಡುಕ್ತಾ ಇದ್ದೀನಿ ಪ.ಗೋ ಹೇಳಿದರು.

ಅರ್ಧಗಂಟೆ ತಿಣುಕಾಡಿದರೂ ಯಾಕೆ ರಿಜೆಕ್ಟ್ ಆಯ್ತು ಎನ್ನುವ ಕಾರಣ ಸಿಗುತ್ತಿಲ್ಲ. ನಾವು ಹೇಳಿರುವ ಮತ್ತು ಮಹಾನಗರಪಾಲಿಕೆ ಮಂಜೂರು ಮಾಡಿರುವ ನಿರ್ಣಯದ ನಿವೇಶನಕ್ಕೂ ತಾಳೆಯಾಗುತ್ತಿಲ್ಲ. ಒದಗಿಸಿರುವ ಮಾಹಿತಿಯಲ್ಲೂ ಸರಿಯಾದ ದಾಖಲೆಯಿಲ್ಲದ ಕಾರಣ ಸರ್ಕಾರದಿಂದ ರಿಜೆಕ್ಟ್ ಆಗಿದೆ ಎನ್ನುವುದನ್ನು ಬಿಟ್ಟರೆ ಬೇರೆ ಕಾರಣ ಗೊತ್ತಾಗಲಿಲ್ಲ.

ಆದರೆ ನಾವು ಕೇಳಿರುವ ನಿವೇಶನ ಯಾವುದು ಎನ್ನುವುದನ್ನು ನಮ್ಮ ಮೂಲ ಅರ್ಜಿ ನೋಡಿದೆವು. ಗಾಂಧಿನಗರದಲ್ಲಿರುವ ನಿವೇಶನ, ಜೊತೆಗೆ ಅದರ ಸ್ಕೆಚ್ ಕೂಡಾ ಲಗತ್ತಿಸಿತ್ತು.

ಪಾಲಿಕೆ ಸಾಮಾನ್ಯ ಸಭೆಯಲ್ಲಿ ತೆಗೆದುಕೊಂಡ ನಿರ್ಣಯದಲ್ಲಿ ನಮೂದಿಸಿರುವ ನಿವೇಶನ ಸರ್ವೇ ನಂಬರ್ ಕೂಡಾ ನಮ್ಮ ಕೋರಿಕೆಯ ಅರ್ಜಿಗೆ ಸರಿಹೊಂದುತ್ತಿತ್ತು. ಆದರೆ ಯಾವುದು ತಾಳೆಯಾಗುತ್ತಿಲ್ಲ ಎನ್ನುವುದನ್ನು ಪತ್ತೆ ಮಾಡಬೇಕಿತ್ತು.

ಪ.ಗೋ ನನ್ನನ್ನು ಒಂದು ಪೇಪರ್ ತುಂಡು ಕೊಟ್ಟು ನಮ್ಮ ಅರ್ಜಿಯ ಸರ್ವೇ ನಂಬರ್ ಊರು, ಗ್ರಾಮ ಬರೆಯಲು ಹೇಳಿದರು. ಗಾಂಧಿನಗರ, ಸರ್ವೇನಂಬ್ರ, ಬೋಳೂರು ಗ್ರಾಮ ಬರೆದೆ.

ಪಾಲಿಕೆಯಲ್ಲಿ ತೆಗೆದುಕೊಂಡ ನಿರ್ಣಯದ ಪ್ರತಿಯನ್ನು ಓದಿ ಅದರಲ್ಲಿ ಸೂಚಿದ್ದ ನಿವೇಶನ, ಸರ್ವೇ ನಂಬ್ರ, ಊರು, ಗ್ರಾಮ ಓದಿ ಹೇಳಿದರು ಅದನ್ನೂ ಬರೆದೆ. ಪ.ಗೋ ಕೇಸ್ ವರ್ಕರ್ ಕರೆದು ನೀವು ಗೌರ್ಮೆಂಟ್ ಗೆ ಪುಟಪ್ ಮಾಡಿದ ಲೆಟರ್ ಇದರಲ್ಲಿ ಯಾವುದು ಕೇಳಿದರು ಪ.ಗೋ.

ಆ ಮನುಷ್ಯ ಅದೇ ಫೈಲನ್ನು ತಿರುಗಿಸಿ, ಹೊರಳಿಸಿ ಯಾವುದೆಲ್ಲ ಹಾಳೆ ಮಡಚಿ ನೋಡಿ ಕೊನೆಗೆ ಆ ಕಡತದ ಮಧ್ಯೆ ಇದ್ದ ಹಾಳೆ ತೋರಿಸಿದರು. ಸ್ವಾಮೀ ಇದಲ್ಲಾ ನಗರಪಾಲಿಕೆ ನಿರ್ಣಯ ತೆಗೆದುಕೊಂಡ ಮೇಲೆ ನಮಗೆ ಮಂಜೂರು ಮಾಡಲು ನಿರ್ಧರಿಸಿದ್ದನ್ನು ಮಾನ್ಯ ಮಾಡಿ ಅಂತಲೋ, ರಿಜೆಕ್ಟ್ ಮಾಡಿ ಅಂತಲೋ ಷರಾ ಬರೆದೋ ಮತ್ತೊಂದು ಏನೋ ಬರೆದು ಹೊತ್ತಾಕ್ತೀರಲ್ಲಾ ಅದು ಎಲ್ಲಿ ?.

ಗೌರ್ಮೆಂಟ್ ಗೆ ಕಳಿಸಿದ್ದಾ ಅದು ಇಲ್ಲಿದೆ ಎನ್ನುತ್ತ ಮತ್ತೊಂದು ಕೆಲವೇ ಹಾಳೆಗಳಿದ್ದ ಫೈಲ್ ಕೊಟ್ಟ. ಇದನ್ನು ಯಾಕೆ ಮುಚ್ಚಿಟ್ಕೊಂಡಿದ್ರೀ ಪ.ಗೋ ದುರುಗುಟ್ಟುತ್ತಾ ಕೇಳಿದರು.

ಮಂಗಳೂರು ಮಹಾನಗರಪಾಲಿಕೆಯವರು ಸರ್ಕಾರಕ್ಕೆ ಬರೆದಿದ್ದ ಪತ್ರವನ್ನು ಪ.ಗೋ ಓದುತ್ತಾ ಹೋದರು. ಏನನಿಸಿತೋ ಅರ್ಧಕ್ಕೆ ನಿಲ್ಲಿಸಿ ನಾವು ಅರ್ಜಿಕೊಟ್ಟ ಸೈಟ್ ನಂಬರ್ ಹೇಳು ಎಂದರು, ಹೇಳಿದೆ. ಗ್ರಾಮ ಬೋಳೂರು. ಆದರೆ ಪ.ಗೋ ಓದಿ ಹೇಳಿದರು ಬೋಳಾರ.

ಗಾಂಧಿನಗರದ ಬೋಳೂರು ಗ್ರಾಮದ ಸರ್ವೇ ನಂಬ್ರದ ಸೈಟ್ ಬದಲು ಗಾಂಧಿನಗರದ ಬೋಳಾರ ಗ್ರಾಮದ ಸರ್ವೇ ನಂಬರ್ ಸೈಟ್ ಎಂದಿತ್ತು.

ಇಲ್ಲಿದೆ ನೋಡೀ ಕೊಕ್ಕೆ ಪ.ಗೋ ಹಿಡಿದರು. ನಮ್ಮ ಸೈಟ್ ಇರುವುದು ಬೋಳೂರು ಗ್ರಾಮದಲ್ಲಿ, ಪಾಲಿಕೆ ಮಂಜೂರು ಮಾಡಿದ್ದೂ ಬೋಳೂರು ಗ್ರಾಮದ ಸೈಟ್, ಆದರೆ ಸರ್ಕಾರಕ್ಕೆ ಇವರು ಬರೆದು ಕಳುಹಿಸಿದ್ದು ಬೋಳಾರ ಗ್ರಾಮದ ಸೈಟ್. ಆಗಿರುವ ಪ್ರಮಾದ ಗ್ರಾಮದ ಹೆಸರನ್ನು ತಪ್ಪಾಗಿ ನಮೂದಿಸಲಾಗಿದೆ ಬೋಳೂರು ಬದಲು ಬೋಳಾರ ಆಗಿದೆ, ಇದು ರೆವೆನ್ಯೂ ದಾಖಲೆಗಳ ಪ್ರಕಾರ ನಮ್ಮ ಅರ್ಜಿ, ಪಾಲಿಕೆ ಮಂಜೂರು ಮಾಡಿದ್ದು ಮತ್ತು ಪಾಲಿಕೆ ನಂತರ ಸರ್ಕಾರಕ್ಕೆ ಬರೆದ ಪತ್ರದಲ್ಲಿನ ಸೈಟ್ ಹಾಗೂ ಗ್ರಾಮ ತಾಳೆಯಾಗದ ಕಾರಣಕ್ಕೆ ರಿಜೆಕ್ಟ್.

ಆ ಕೇಸ್ ವರ್ಕರ್ ಕಕ್ಕಾಬಿಕ್ಕಿಯಾದ. ನಾವು ನಾಲ್ಕೂ ಮಂದಿ ಕಡತ ಜಾಲಾಡುತ್ತಿರುವುದನ್ನು ಅಲಿನ ಸಿಬಂದಿಗಳು ಕೂಡಾ ಕುತೂಹಲದಿಂದಲೇ ಗಮನಿಸುತ್ತಿದ್ದರು. ಸಾಮಾನ್ಯವಾಗಿ ಇಂಥ ಸೂಕ್ಷ್ಮ ಕೊಕ್ಕೆಗಳು ಎಂಥಾ ಗಂಡಾಂತರ ಒಡ್ಡುತ್ತವೆ ಎನ್ನುವ ಅರಿವಾದದ್ದೇ ಆಗ.

ಈಗ ಪ.ಗೋ ಕಿಡಿಯಾದರು. ನಾವು ಕೇಳಿದ್ದು ಬೋಳೂರು ಗ್ರಾಮದ ಸೈಟ್, ನೀವು ಸರ್ಕಾರ ಬರೆದಿರೋದು ಬೋಳಾರ ಗ್ರಾಮದ ಸೈಟ್. ನೀವು ಬೇಕೂಂತಲೇ ಕೊಕ್ಕೆ ಹಾಕಿದ್ದೀರಿ ಪ.ಗೋ ಕೇಸ್ ವರ್ಕರ್ ಮೇಲೆ ರೇಗಾಡಿದರು. ರಾಯರು ಸಮಾಧಾನ ಪಡಿಸಿದರು. ನಾನು ಇಲ್ಲೇ ಇರ್ತೀನಿ ನೀವು ಮೇಯರ್ ಚೇಂಬರ್ ಗೆ ಹೋಗಿ ವಿಷ್ಯ ತಿಳಿಸಿ, ಎಲ್ಲರೂ ಹೋದರೆ ಈ ಫೈಲ್ ಗೆ ಕೈಕಾಲು ಬಂದು ಎಲ್ಲಿಗಾದರೂ ಹಾರಿಬಿಡಬಹುದು ಎಂದರು ಪ.ಗೋ.

ನಾನು ಮತ್ತು ರಾಯರು ಮೇಯರ್ ಚೇಂಬರ್ ಗೆ ಹೋಗಿ ಫೈಲ್ ಕತೆ ಹೇಳಿ ಪ.ಗೋ ಕೇಸ್ ವರ್ಕರ್ ಮುಂದೆ ಫೈಲ್ ಜೊತೆಗಿದ್ದಾರೆ ಎಂದೆವು. ಮೇಯರ್ ಅಜಿತ್ ಕುಮಾರ್ ಎಲ್ಲಾ ಫೈಲ್ ತರಲು ಹೇಳಿದರು. ಪ.ಗೋ, ಕೇಸ್ ವರ್ಕರ್ ಪಜಿಲ್ ಸಮೇತ ಬಂದು ಮೇಯರ್ ಗೂ ಆಗಿರುವ ತಪ್ಪನ್ನು ತೋರಿಸಿದರು.

ಮತ್ತೆ ಇದೇ ತಿಂಗಳಲ್ಲಿ ನಡೆಯುವ ಮಾಸಿಕ ಸಭೆಯಲ್ಲಿ ಕಡತ ಮಂಡಿಸಿ ಮಂಜೂರು ಮಾಡಿ ಸರ್ಕಾರ ಮರು ಮನವಿ ಮಾಡುವ ಭರವಸೆ ಕೊಟ್ಟರು ಮೇಯರ್. ಅವರು ನುಡಿದಂತೆ ನಡೆದುಕೊಂಡರು ಕೂಡಾ. ತಾವೇ ಖುದ್ದು ಬೆಂಗಳೂರಿಗೆ ಹೋಗಿ ಅಲ್ಲಿನ ಅಧಿಕಾರಿಗಳ ಜೊತೆ ಮಾತನಾಡಿ ದ.ಕ.ಕಾರ್ಯನಿರತ ಪತ್ರಕರ್ತರ ಸಂಘಕ್ಕೆ ಐದು ಸೆಂಟ್ಸ್ ನಿವೇಶನವನ್ನು ಮಂಜೂರು ಮಾಡಿಸಿಕೊಟ್ಟರು.

ಆದರೆ ಪತ್ರಕರ್ತರ ಸಂಘಕ್ಕೆ ಈ ನಿವೇಶನ ಸಿಗಬಾರದೆನ್ನುವ ಕಾರಣಕ್ಕೆ ಕೊನೇ ಕ್ಷಣದಲ್ಲೂ ಹಾಕಿದ್ದ ಕೊಕ್ಕೆಯನ್ನು ಪ.ಗೋ ಪತ್ತೆ ಹಚ್ಚಿದರು. ಮೇಯರ್ ಅಜಿತ್ ಕುಮಾರ್, ಆಗಿನ ಕಮಿಷನರ್ ಬಿ.ಎಸ್.ರಾಮ್ ಪ್ರಸಾದ್. ಪತ್ರಕರ್ತರ ನಿವೇಶನದ ನೋಂದಣಿ ಹಾಗೂ ಪಾಲಿಕೆ ಜೊತೆಗಿನ ಒಡಂಬಡಿಕೆಗೆ ಸಂಘದ ಪ್ರಧಾನ ಕಾರ್ಯದರ್ಶಿಯಾಗಿ ಸಹಿ ಮಾಡುವ ಭಾಗ್ಯ ನನ್ನ ಪಾಲಿಗೆ, ಸರ್ಕಾರದ ಪರವಾಗಿ ಬಿ.ಎಸ್.ರಾಮ್ ಪ್ರಸಾದ್ ಸಹಿ ಹಾಕಿದರು. ಇಷ್ಟೆಲ್ಲಾ ಶ್ರಮಕ್ಕೆ ಸಾಕ್ಷಿಗಳು ಅಳಿದುಹೋಗಿವೆ, ದಾಖಲೆಯಲ್ಲಿ ಜೀವಂತ ಇದೆ.

ಸುಂದರ ಕಟ್ಟಡ ಪತ್ರಿಕಾಭವನ ನಿರ್ಮಾಣವಾಗಿದೆ. ಅದು ಕಣ್ಣಿಗೆ ಕಾಣುತ್ತದೆ ಇದರ ಹಿಂದೆ ಯಾರಿದ್ದಾರೆನ್ನುವುದಕ್ಕೆ ಅಲ್ಲಿನ ಶಿಲಾಕಲ್ಲುಗಳಲ್ಲಿ ಸಾಕ್ಷಿಗಳಿವೆ. ಆದರೆ ಕಟ್ಟಡ ನಿಂತಿರುವ ಭೂಮಿ ಸಿಗುವಂತೆ ಮಾಡಿದ್ದಕ್ಕೆ ಸಾಕ್ಷಿಗಳಿಲ್ಲ. ಆದ್ದರಿಂದ ಯಾರು ಎನ್ನುವುದು ಯಾರಿಗೂ ಗೊತ್ತಿಲ್ಲ. ಭೂಮಿಯಿದ್ದರಲ್ಲವೇ ಕಟ್ಟಡ ಎನ್ನುವುದನ್ನು ಯಾರು ಯಾರಿಗೆ ಹೇಳಬೇಕು ಗೊತ್ತಿಲ್ಲ, ಪ.ಗೋ ಕ್ಷಮಿಸಿ.

Chidambara-Baikampady

-ಚಿದಂಬರ ಬೈಕಂಪಾಡಿ

Write A Comment