ಕರಾವಳಿ

ಕರ್ನಾಟಕದಲ್ಲಿ ಮ್ಯಾಗಿ ನೂಡಲ್ಸ್ ಗೆ ತಾತ್ಕಾಲಿಕ ನಿಷೇಧ: ಆರೋಗ್ಯ ಸಚಿವ ಯು.ಟಿ.ಖಾದರ್

Pinterest LinkedIn Tumblr

anushree_maggi

ಬೆಂಗಳೂರು, ಜೂ.6: ನೆಸ್ಲೆ ಇಂಡಿಯಾ ಕಂಪೆನಿಯ ಉತ್ಪನ್ನ ಮ್ಯಾಗಿಯಲ್ಲಿ ವಿಷಕಾರಿ ಅಂಶ ಕಂಡುಬಂದಿರುವ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರದ ಆದೇಶದ ಪ್ರಕಾರ ರಾಜ್ಯದಲ್ಲಿ ಮ್ಯಾಗಿ ಸೇರಿದಂತೆ ಈ ಕಂಪೆನಿಯ ಉತ್ಪನ್ನಗಳನ್ನು ತಾತ್ಕಾಲಿಕವಾಗಿ ನಿಷೇಧಿಸಲಾಗಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಖಾತೆ ಸಚಿವ ಯು.ಟಿ.ಖಾದರ್ ತಿಳಿಸಿದ್ದಾರೆ.

ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮ್ಯಾಗಿಯಲ್ಲಿ ಸೀಸದ ಅಂಶ ಹೆಚ್ಚಿನ ಪ್ರಮಾಣದಲ್ಲಿರುವುದರ ಬಗ್ಗೆ ಆರೋಪಗಳು ಕೇಳಿ ಬಂದಾಗ ಅದನ್ನು ಮೈಸೂರಿನಲ್ಲಿರುವ ಸಿಎಫ್‌ಟಿಆರ್‌ಐಗೆ ಪರೀಕ್ಷೆಗಾಗಿ ಕಳುಹಿಸಿಕೊಡಲಾಗಿತ್ತು. ಆದರೆ ಅವರು ಕಾನೂನು ನೆಪವೊಡ್ಡಿ ಪರೀಕ್ಷಿಸಲು ನಿರಾಕರಿಸಿದ್ದಾರೆ ಎಂದು ಹೇಳಿದರು. ಈ ಹಿನ್ನೆಲೆಯಲ್ಲಿ ಮ್ಯಾಗಿಯ ಪರೀಕ್ಷೆಗಾಗಿ ಪಶ್ಚಿಮ ಬಂಗಾಳದಲ್ಲಿರುವ ಪ್ರಯೋಗಾಲಯಕ್ಕೆ ಕಳುಹಿಸಿಕೊಡಲಾಗಿದ್ದು, ವರದಿ ಬಂದ ನಂತರ ಮ್ಯಾಗಿಯನ್ನು ಸಂಪೂರ್ಣವಾಗಿ ನಿಷೇಧಿಸಬೇಕೇ, ಬೇಡವೇ ಎಂಬ ಬಗ್ಗೆ ರಾಜ್ಯ ಸರ್ಕಾರ ತೀರ್ಮಾನ ತೆಗೆದುಕೊಳ್ಳಲಿದೆ ಎಂದು ಹೇಳಿದ್ದಾರೆ.

ಅಂಗಡಿಗಳು, ಮಾರಾಟ ಮಳಿಗೆಗಳಲ್ಲಿ ಮ್ಯಾಗಿ, ಹಿಪ್ಪಿ ನೂಡಲ್ಸ್ ಇತ್ಯಾದಿ ಉತ್ಪನ್ನಗಳನ್ನು ಮಾರಾಟ ಮಾಡುವಂತಿಲ್ಲ. ಒಂದು ವೇಳೆ ಯಾರಾದರೂ ಮಾರಾಟ ಮಾಡಿದರೆ ಜಿಲ್ಲಾ ಆರೋಗ್ಯಾಧಿಕಾರಿಗಳು ಹಾಗೂ ಆಹಾರ ಸುರಕ್ಷತಾ ಅಧಿಕಾರಿಗಳು ಅಂತಹವರ ವಿರುದ್ಧ ಕಠಿಣ ಕ್ರಮಕೈಗೊಳ್ಳಲಿದ್ದಾರೆ ಎಂದು ಅವರು ಹೇಳಿದರು. ಸ್ಥಳೀಯವಾಗಿ ನಾಗರಬಾವಿಯಲ್ಲಿರುವ ರೋಬೋಸ್ಟ್ ಮೆಟಿರಿಯಲ್ಸ್ ಟೆಕ್ನಾಲಜಿ ಮತ್ತು ಪೀಣ್ಯದಲ್ಲಿರುವ ಟಿವಿಡಿ ಎಸ್‌ಯುವಿ ಕಂಪೆನಿಗಳಿಗೆ ಪರೀಕ್ಷೆಗಾಗಿ ಕಳುಹಿಸಿಕೊಡಲಾಗಿದೆ. ಆ ವರದಿ ಇನ್ನಷ್ಟೇ ಬರಬೇಕಾಗಿದೆ. ಈ ಎಲ್ಲಾ ವರದಿ ಬಂದ ನಂತರ ರಾಜ್ಯ ಸರ್ಕಾರ ಅಂತಿಮವಾಗಿ ನಿರ್ಧಾರ ಕೈಗೊಳ್ಳಲಿದೆ.

ಮ್ಯಾಗಿ ಸೇರಿದಂತೆ ಇತರ ಎಂಟು ಉತ್ಪನ್ನಗಳನ್ನು ಪರೀಕ್ಷೆಗೊಳಪಡಿಸಲಾಗುತ್ತಿದ್ದು, ಅವುಗಳಲ್ಲಿ ವಿಷಕಾರಿ ಅಂಶಗಳು ಕಂಡು ಬಂದರೆ ಅವುಗಳನ್ನೂ ನಿಷೇಧಿಸಲಾಗುವುದು. ಇದರ ಜೊತೆ ಎನರ್ಜಿ ಡ್ರಿಂಕ್ಸ್,ನ್ಯೂಟ್ರಿಷಿಯಸ್ ಫುಡ್, ಪ್ರೋಟೀನ್ ಫುಡ್ ಮುಂತಾದವುಗಳನ್ನು ಕೂಡ ಪರೀಕ್ಷೆಗೆ ಒಳಪಡಿಸಲಾಗುವುದು. ಅಷ್ಟರಲ್ಲಿ ಕಂಪೆನಿಗಳೇ ಈ ಬಗ್ಗೆ ಪರೀಕ್ಷೆ ನಡೆಸಿ ಅವುಗಳಲ್ಲಿ ವಿಷಕಾರಿ ಅಂಶವಿದ್ದರೆ ವಾಪಸ್ ಪಡೆದರೆ ಉತ್ತಮ, ಇಲ್ಲವಾದರೆ ನಾವೇ ಪರೀಕ್ಷೆ ನಡೆಸಿ ಮುಂದಿನ ಕ್ರಮತೆಗೆದುಕೊಳ್ಳುತ್ತೇವೆ ಎಂದು ಹೇಳಿದರು. ಬೇರೆ ಕಂಪೆನಿಗಳ ನೂಡಲ್ಸ್‌ಗಳು ಕೂಡ ಮಾರುಕಟ್ಟೆಯಲ್ಲಿ ಲಭ್ಯವಿದೆ. ಆ ಎಲ್ಲಾ ಉತ್ಪನ್ನಗಳನ್ನು ಪರೀಕ್ಷೆಗೊಳಪಡಿಸಲಾಗುವುದು ಎಂದರು. 108 ಆಂಬುಲೆನ್ಸ್ ನೌಕರರ ಮುಷ್ಕರ ಬಗ್ಗೆ ಪ್ರಸ್ತಾಪಿಸಿದ ಅವರು ಸದ್ಯಕ್ಕೆ ಅಂತಹ ಸಂದರ್ಭ ಇಲ್ಲ ಏಪ್ರಿಲ್‌ನಿಂದ ಅವರ ವೇತನಗಳು ನಿಂತಿದ್ದವು. ಈಗ ಜೂನ್ ತಿಂಗಳವರೆಗೆ ವೇತನ ಬಿಡುಗಡೆ ಮಾಡಲಾಗಿದೆ. ಹಾಗಾಗಿ 108 ಮುಷ್ಕರ ಸದ್ಯಕ್ಕಿಲ್ಲ ಎಂದರು. ಇದುವರೆಗೂ 108 ಆಂಬುಲೆನ್ಸ್‌ಗಳು ಸಮಯಕ್ಕೆ ತಕ್ಕಂತೆ ಲಭ್ಯವಿಲ್ಲ ಎಂಬ ಯಾವುದೇ ದೂರುಗಳು ಕೇಳಿ ಬಂದಿಲ್ಲ ಎಂದು ಹೇಳಿದರು.

Write A Comment