ಅಂತರಾಷ್ಟ್ರೀಯ

ಅಮೆರಿಕದಲ್ಲಿ ವಿಶ್ವದ ಮೊದಲ ತಲೆಬುರುಡೆ ಕಸಿ

Pinterest LinkedIn Tumblr

boysen

ಹೂಸ್ಟನ್, ಜೂ. 6: ಕ್ಯಾನ್ಸರ್ ಚಿಕಿತ್ಸೆಯಿಂದಾಗಿ ತಲೆಯಲ್ಲಿ ದೊಡ್ಡ ಗಾಯವಾಗಿದ್ದ 55 ವರ್ಷದ ವ್ಯಕ್ತಿಯೊಬ್ಬರಿಗೆ ಅಮೆರಿಕದ ವೈದ್ಯರು ತಲೆಬುರುಡೆ ಕಸಿ ಶಸ್ತ್ರಚಿಕಿತ್ಸೆ ನಡೆಸಿದ್ದಾರೆ. ಇದು ಈ ಮಾದರಿಯ ವಿಶ್ವದ ಮೊದಲ ಶಸ್ತ್ರಚಿಕಿತ್ಸೆಯಾಗಿದೆ.

ತಾವು ಮೇ 22ರಂದು 15 ಗಂಟೆ ಅವಧಿಯ ಶಸ್ತ್ರಚಿಕಿತ್ಸೆಯನ್ನು ನಡೆಸಿದ್ದೇವೆ ಎಂದು ಎಂ.ಡಿ. ಆ್ಯಂಡರ್‌ಸನ್ ಕ್ಯಾನ್ಸರ್ ಸೆಂಟರ್ ಮತ್ತು ಹೂಸ್ಟನ್ ಮೆತಾಡಿಸ್ಟ್ ಆಸ್ಪತ್ರೆಯ ವೈದ್ಯರು ಗುರುವಾರ ಘೋಷಿಸಿದರು.

ಆಸ್ಟಿನ್‌ನ ಸಾಫ್ಟ್‌ವೇರ್ ಡೆವಲಪರ್ ಜೇಮ್ಸ್ ಬಾಯ್ಸನ್‌ರಿಗೆ ಏಕಕಾಲದಲ್ಲಿ ಕ್ಯಾನಿಯೋಫೇಶಿಯಲ್ ಟಿಶ್ಯೂ ಕಸಿ, ಮೂತ್ರಪಿಂಡ ಮತ್ತು ಯಕೃತ್ ಕಸಿಗಳನ್ನು ಹೂಸ್ಟನ್ ಮೆತಾಡಿಸ್ಟ್ ಆಸ್ಪತ್ರೆಯಲ್ಲಿ ನಡೆಸಲಾಯಿತು.

ಶಸ್ತ್ರಚಿಕಿತ್ಸೆಯು ಅತ್ಯಂತ ಸಂಕೀರ್ಣ ಮೈಕ್ರೊವ್ಯಾಸ್ಕುಲರ್ ಪ್ರಕ್ರಿಯೆ ಆಗಿತ್ತು ಎಂದು ಪ್ಲಾಸ್ಟಿಕ್ ಸರ್ಜರಿ ತಂಡದ ನೇತೃತ್ವ ವಹಿಸಿದ್ದ ಡಾ. ಮೈಕಲ್ ಕ್ಲೆಬಕ್ ಮಾಧ್ಯಮಗಳಿಗೆ ತಿಳಿಸಿದರು.

‘‘ಕಾಣೆಯಾಗಿರುವ ತಲೆಬುರುಡೆ ಬೋನಿನ ಜಾಗದಲ್ಲಿ ಇನ್ನೊಂದನ್ನು ಕೂರಿಸಿದೆವು. ಅದರೊಂದಿಗೆ ಅದರ ಮೂಲಕ ಹಾದು ಹೋಗುವ ರಕ್ತನಾಳಗಳನ್ನೂ ಜೋಡಿಸಲಾಗಿದೆ’’ ಎಂದು ಅವರು ತಿಳಿಸಿದರು.

ಬಾಯ್ಸನ್ 1992ರಲ್ಲಿ ಮಧುಮೇಹ ಚಿಕಿತ್ಸೆಯ ಭಾಗವಾಗಿ ಮೂತ್ರಪಿಂಡ ಕಸಿ ಚಿಕಿತ್ಸೆಗೆ ಒಳಗಾದರು. ಆ ಬಳಿಕ ಕಸಿ ಮೂತ್ರಪಿಂಡ ತಿರಸ್ಕೃತಗೊಳ್ಳದಂತೆ ಖಾತರಿಪಡಿಸಲು ಔಷಧಗಳನ್ನು ತೆಗೆದುಕೊಳ್ಳುತ್ತಿದ್ದರು. ಇದು ಅಪರೂಪದ ಲೀಯೊಮಯೊಸರ್ಕೋಮ ಕ್ಯಾನ್ಸರ್‌ಗೆ ದಾರಿ ಮಾಡಿಕೊಟ್ಟಿತು. ಕ್ಯಾನ್ಸರ್‌ಗೆ ಮಾಡಲಾದ ವಿಕಿರಣ ಚಿಕಿತ್ಸೆಯು ಅವರ ತಲೆಯ ಒಂದು ಭಾಗವನ್ನು ನಾಶಪಡಿಸಿತು. ಅದರ ಜಾಗವನ್ನು ತುಂಬಲು ತಲೆಬುರುಡೆ ಕಸಿಯನ್ನು ನಡೆಸಲಾಯಿತು.

Write A Comment