ಕರಾವಳಿ

ಗಂಗೊಳ್ಳಿಯಲ್ಲಿ ಫಿಶಿಂಗ್ ಬೋಟ್ ಮುಷ್ಕರ ; ಬಂದರಿನಲ್ಲಿ ಮೀನುಗಾರಿಕೆ ಸ್ಥಗಿತ

Pinterest LinkedIn Tumblr

Protest

ಫಿಶಿಂಗ್ ಬೋಟ್‌ನ ಮೀನುಗಾರರ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ಸೋಮವಾರ ಗಂಗೊಳ್ಳಿ ಮೀನುಗಾರಿಕಾ ಬಂದರಿನಲ್ಲಿ ಫಿಶಿಂಗ್ ಬೋಟ್ ಮೀನುಗಾರರ ಮೀನುಗಾರಿಕೆ ಸ್ಥಗಿತಗೊಳಿಸಿ ಮುಷ್ಕರ ನಡೆಸಿದರು.

ಗಂಗೊಳ್ಳಿ ಬಂದರಿನ ಮೂಲಕ ಮೀನುಗಾರಿಕೆಗೆ ತೆರಳುವ ಆಳ ಸಮುದ್ರ ಮೀನುಗಾರಿಕೆಯ ಬೋಟ್‌ಗಳಿಂದ ಸಮಸ್ಯೆ ಉದ್ಭವಿಸಿದ್ದು, ಈ ವಿಚಾರದಲ್ಲಿ ಅನೇಕ ಬಾರಿ ಆಳ ಸಮುದ್ರ ಬೋಟ್ ಮಾಲೀಕರೊಂದಿಗೆ ಮಾತುಕತೆ ನಡೆಸಲಾಗಿತ್ತು. ಆದರೆ ಈವರೆಗೆ ಯಾವುದೇ ಕ್ರಮಕೈಗೊಳ್ಳದಿರುವುದರಿಂದ ಆಕ್ರೋಶಗೊಂಡ ಫಿಶಿಂಗ್ ಬೋಟ್‌ನ ಮೀನುಗಾರರು ಬೋಟುಗಳನ್ನು ಗಂಗೊಳ್ಳಿ ಬಂದರಿನಲ್ಲಿ ಲಂಗರು ಹಾಕಿ ಮೀನುಗಾರಿಕೆಗೆ ತೆರಳದೆ ಮುಷ್ಕರ ಆರಂಭಿಸಿದ್ದಾರೆ.

ಬಂದರಿನ ಮೂಲಕ ಮೀನುಗಾರಿಕೆಗೆ ಹೋಗುವ ಆಳ ಸಮುದ್ರ ಬೋಟುಗಳು ಸಮುದ್ರದಲ್ಲಿ ನಾಲ್ಕೈದು ದಿನ ನಿಂತು ಮೀನುಗಾರಿಕೆ ನಡೆಸುತ್ತಿದ್ದು, 10 ಮಾರು ದೂರದ ತನಕ ಆಳ ಸಮುದ್ರ ಬೋಟುಗಳು ಮೀನುಗಾರಿಕೆ ನಡೆಸದಂತೆ ಮನವಿ ಮಾಡಲಾಗಿತ್ತು. ಆದರೆ ಆಳ ಸಮುದ್ರ ಬೋಟುಗಳು ಇದನ್ನು ಉಲ್ಲಂಘಿಸಿ ಐದಾರು ಮಾರು ದೂರದಲ್ಲಿ ಮೀನುಗಾರಿಕೆ ನಡೆಸುವುದರಿಂದ ಫಿಶಿಂಗ್ ಬೋಟುಗಳಿಗೆ ಮೀನು ದೊರೆಯದೆ ಬೋಟುಗಳು ಖಾಲಿಯಾಗಿ ದಡ ಸೇರುತ್ತಿದೆ. ಇದರಿಂದ ದೈನಂದಿನ ಖರ್ಚು ಹೊಂದಿಸಿಕೊಳ್ಳಲು ಕಷ್ಟವಾಗುತ್ತಿದೆ ಎನ್ನುವುದು ಮೀನುಗಾರರ ಆರೋಪ. ಇನ್ನೊಂದೆಡೆ ಆಳ ಸಮುದ್ರ ಬೋಟುಗಳು ಮೀನುಗಾರಿಕೆ ನಡೆಸಿದ ಸಂದರ್ಭ ಉತ್ತಮ ಮೀನುಗಳನ್ನು ಇಟ್ಟುಕೊಂಡು ಉಳಿದ ಹಾಳಾದ ಮೀನುಗಳನ್ನು ಪುನ: ಸಮುದ್ರಕ್ಕೆ ಎಸೆಯುವುದರಿಂದ ಆ ಪ್ರದೇಶದಲ್ಲಿ ಪುನ: ಮೀನುಗಾರಿಕೆ ನಡೆಸಲು ಸಾಧ್ಯವಿಲ್ಲ. ಹೀಗಾಗಿ ಇಂತಹ ಹಾಳಾದ ಮೀನುಗಳನ್ನು ದಡಕ್ಕೆ ತಂದು ವಿಲೇವಾರಿ ಮಾಡುವಂತೆ ಮಾಡಿದ ಮನವಿಗೆ ಸಂಬಂಧಪಟ್ಟ ಬೋಟ್ ಮಾಲೀಕರು ಈವರೆಗೆ ಸ್ಪಂದಿಸಿಲ್ಲ ಎಂದು ಮೀನುಗಾರರು ಆರೋಪಿಸಿದ್ದಾರೆ.

ಗಂಗೊಳ್ಳಿಯಲ್ಲಿ ಬಂದರಿಗೆ ರಜೆ ನೀಡಿದ ಸಂದರ್ಭದಲ್ಲಿ ಕೂಡ ಆಳ ಸಮುದ್ರ ಬೋಟುಗಳು ಮೀನುಗಾರಿಕೆ ನಡೆಸುತ್ತಿವೆ. ಇದರಿಂದ ಮೀನುಗಾರಿಕೆಯನ್ನೇ ನೆಚ್ಚಿಕೊಂಡಿರುವ ಫಿಶಿಂಗ್ ಬೋಟುಗಳು ಮೀನುಗಾರಿಕೆ ಇಲ್ಲದೆ ತೊಂದರೆಗೆ ಸಿಲುಕಿದ್ದಾರೆ. ಫಿಶಿಂಗ್ ಬೋಟುಗಳು ಮೀನುಗಾರಿಕೆ ತೆರಳುವ ಮೊದಲೇ ಇಂತಹ ಆಳ ಸಮುದ್ರ ಮೀನುಗಾರಿಕೆ ಬೋಟುಗಳು ಮೀನುಗಾರಿಕೆಗೆ ತೆರಳಿ ಕೆಲವೇ ದೂರದಲ್ಲಿ ಮೀನುಗಾರಿಕೆ ನಡೆಸುತ್ತಿದ್ದು ಇದರಿಂದ ಫಿಶಿಂಗ್ ಬೋಟುಗಳು ನಷ್ಟ ಅನುಭವಿಸಿ ಮೀನುಗಾರರು ಆರ್ಥಿಕ ಸಂಕಷ್ಟಕ್ಕೆ ಸಿಲುಕುವಂತಾಗಿದೆ. ಹೀಗಾಗಿ ಫಿಶಿಂಗ್ ಬೋಟ್‌ಗಳು ಎದುರಿಸುತ್ತಿರುವ ಇಂತಹ ಜ್ವಲಂತ ಸಮಸ್ಯೆಗಳನ್ನು ಆಳ ಸಮುದ್ರ ಬೋಟ್‌ಗಳ ಮಾಲೀಕರ ಗಮನಕ್ಕೆ ತರಲಾಗಿದ್ದರೂ, ಈವರೆಗೆ ಯಾವುದೇ ಪ್ರಯೋಜನವಾಗಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿರುವ ಮೀನುಗಾರರು, ಸಮಸ್ಯೆ ಬಗೆಹರಿಯುವವರೆಗೆ ಮೀನುಗಾರಿಗೆ ಸ್ಥಗಿತಗೊಳಿಸುವ ತೀರ್ಮಾನ ಕೈಗೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.

ಎಸ್‌ಐ ಮಧ್ಯಸ್ಥಿಕೆಯಲ್ಲಿ ರಾಜಿ ಮಾತುಕತೆ : ಇದೇ ಸಂದರ್ಭ ಗಂಗೊಳ್ಳಿ ಪೊಲೀಸ್ ಠಾಣಾ ಉಪನಿರೀಕ್ಷಕ ಸುಬ್ಬಣ್ಣ, ಎರಡೂ ಕಡೆಯ ಮೀನುಗಾರರೊಂದಿಗೆ ಮಾತುಕತೆ ನಡೆಸಿ ರಾಜಿ ಮಾಡಿಸುವ ಪ್ರಯತ್ನ ನಡೆಸಿದರು. ಠಾಣಾಧಿಕಾರಿಗಳ ಮಾತಿಗೆ ಬೆಲೆ ನೀಡಿದ ಆಳ ಸಮುದ್ರ ಬೋಟ್ ಮಾಲೀಕರು ಬಳಿಕ ತಮ್ಮ ರಾಗ ಬದಲಿಸಿದ್ದಾರೆ ಎಂದು ಹೇಳಲಾಗುತ್ತಿದೆ. ಹೀಗಾಗಿ ಫಿಶಿಂಗ್ ಬೋಟ್ ಮೀನುಗಾರರು ನಡೆಸುತ್ತಿರುವ ಮುಷ್ಕರ ಮುಂದುವರೆದಿದೆ.

ಗಂಗೊಳ್ಳಿ ಬಂದರಿನಲ್ಲಿ ತಲೆದೋರಿರುವ ಸಮಸ್ಯೆಯಿಂದ ಬಂದರಿನಲ್ಲಿ ಫಿಶಿಂಗ್ ಬೋಟ್ ಮೀನುಗಾರಿಕೆ ಸ್ಥಗಿತಗೊಂಡಿದ್ದು, ಮೀನುಗಾರರು, ಮಹಿಳೆಯರು ಹಾಗೂ ಕಾರ್ಮಿಕರು ಕೆಲಸವಿಲ್ಲದೆ ಪರಿತಪಿಸುವಂತಾಗಿದೆ.

Write A Comment