ಕರಾವಳಿ

ಸಾಲಿಗ್ರಾಮದಲ್ಲಿ ಯುವಕನ ಅನುಮಾಸ್ಪದ ಸಾವು

Pinterest LinkedIn Tumblr

BMR_FEB2_6

ಕೋಟ: ಸಾಲಿಗ್ರಾಮ ಪಟ್ಟಣ ಪಂಚಾಯಿತಿ ವ್ಯಾಪ್ತಿಯ ಕಾರ್ಕಡ ಗ್ರಾಮದಲ್ಲಿ ಸೋಮವಾರ ಮಧ್ಯಾಹ್ನ ಒರ್ವ ಯುವಕನ ಅನುಮಾಸ್ಪದ ಸಾವು ಸಂಭವಿಸಿದೆ. ಘಟನೆಯ ಬಗ್ಗೆ ಸಾರ್ವಜನಿಕ ಊಹಾಪೋಹೆಗಳೆ ಹೆಚ್ಚಾಗಿದ್ದು ಪ್ರತ್ಯಕ್ಷದರ್ಶಿಗಳು ಇದ್ದಾರೋ, ಕೊಲೆಯೋ, ಸಹಜ ಸಾವು ಒಂದು ಕೂಡ ತಿಳಿದುಬಂದಿಲ್ಲ. ಮೃತ ವ್ಯಕ್ತಿಯನ್ನು ಕಾರ್ಕಡ ನಿವಾಸಿ ವಿಜಯ ಕಾರಂತ (31) ಎನ್ನಲಾಗಿದೆ.

ಸೋಮವಾರ ಮಧ್ಯಾಹ್ನ 1.30ರ ಸುಮಾರಿಗೆ ಈ ಘಟನೆ ನಡೆದಿದೆ ಎನ್ನಲಾಗಿದೆ. ವಿಜಯ ಕಾರಂತ ಅವರ ಪಕ್ಕದ ಮನೆಯ ಜಲಜ ಪೂಜಾರ್ತಿ ಅವರು ತಮ್ಮ ತಂಗಿಯ ಮಗ ಶರತ ಎನ್ನುವವನಿಗೆ ವಿಜಯ ಕಾರಂತ ರಸ್ತೆಯಲ್ಲಿ ಮಲಗಿರುವದಾಗಿ ತಿಳಿಸಿದ್ದರು ಎನ್ನಲಾಗಿದೆ. ಮೊದಲೇ ಕುಡಿತದ ಚಟ ಅಂಟಿಸಿಕೊಂಡಿದ್ದ ಪಕ್ಕದ ಮನೆಯಾತ ರಸ್ತೆಯಲ್ಲಿ ಬಿದ್ದಿದ್ದ ಎನ್ನುವುದನ್ನು ಕೇಳಿ ಬೇಸರಿಸಿ, ವಿಜಯ ಕಾರಂತ ಮಲಗಿರವ ಕಡೆ ತೆರಳಿ ನೀರು ಕುಡಿಸಿ, ಮುಖಕ್ಕೆ ನೀರು ಎರೆಚಿರುವುದಾಗಿ ಶರತ್ ಪತ್ರಿಕೆ ತಿಳಿಸಿದ್ದಾರೆ.

BMR_FEB2_7

ಆದರೆ ಊರಿನವರು ತಿಳಿಸುವಂತೆ ಆದಿತ್ಯವಾರ ರಾತ್ರಿ ಉದ್ಯಾವರದಲ್ಲಿ ನಡೆದ ಕ್ರಿಕೆಟ್ ಪಂದ್ಯಾಟದಲ್ಲಿ ಕಾರ್ಕಡ ತಂಡ ಜಯ ಗಳಿಸಿತ್ತು, ಅಲ್ಲದೇ ಗೆದ್ದ ಖುಷಿಗೆ ಪಾರ್ಟಿ ಆಯೋಜಿಸಲಾಗಿತ್ತು. ಸೋಮವಾರ ಬೆಳಿಗ್ಗೆಯು ಕೂಡ ಕುಡಿದು ತೂರಾಡುತ್ತಿದ್ದ ವಿಜಯ ಕಾರಂತ ಮತ್ತು ಪಕ್ಕದ ಮನೆಯೋರ್ವರ ನಡುವೆ ಹುಡುಗಿಯ ವಿಚಾರವಾಗಿ ವಾಗ್ವಾದ ನಡೆದು, ಹಲ್ಲೆ ನಡೆದಿದೆ ಎನ್ನಲಾಗಿದೆ. ವಿಜಯ ಕಾರಂತ ಮೃತ ದೇಹದ ಎಡ ಭಾಗದ ಎದೆಗೂಡಿಗೆ ರಾಡ್ ಹೊಕ್ಕ ರೀತಿಯಲ್ಲಿ ಗಾಯವಾಗಿತ್ತು, ಶರತ್ ಅವರ ಮನೆಯಲ್ಲಿ ರಕ್ತದ ಕಲೆಯಿದ್ದು, ಸಾರ್ವಜನಿಕರು ಬರುವ ಮೊದಲೇ ರಕ್ತ ಕಲೆ ಅಳಿಸಲಾಗಿತ್ತು ಎನ್ನಲಾಗಿದೆ. ಸ್ಥಳೀಯರ ನೆರವಿನಿಂದ ಮಣಿಪಾಲ ಖಾಸಗಿ ಆಸ್ಪತ್ರೆಗೆ ಸಾಗಿಸುವ ದಾರಿಯಲ್ಲಿ ಬ್ರಹ್ಮಾವರ ಖಾಸಗಿ ಆಸ್ಪತ್ರೆಯಲ್ಲಿ ಪರೀಕ್ಷೆ ನಡೆಸಿದಾಗ, ಚೂಪಾದ ಆಯುಧವು ಶ್ವಾಸಕೋಶವನ್ನು ತೂರಿಕೊಂಡು ಹೋದ ಪರಿಣಾಮ ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ.

ವಿಜಯಕಾರಂತ ಮೂರು ವರ್ಷಗಳ ಹಿಂದೆಯಷ್ಟೆ ಸಾಸ್ತಾನ ಸಮೀಪದ ದೀಪಾ(25) ಎನ್ನುವವಳನ್ನು ಮದುವೆಯಾಗಿದ್ದ. ಇವರ ವೈವಾಹಿಕ ಜೀವನದ ಬಗ್ಗೆ ಸಾಕಷ್ಟು ಅಪಸ್ವರಗಳಿದ್ದವು ಎನ್ನಲಾಗಿದೆ. ಸೋಮವಾರ ಕೂಡ ವಿಜಯ ಕಾರಂತ ಮನೆಯಲ್ಲಿ ಓರ್ವನೇ ಇದ್ದ ಎನ್ನಲಾಗಿದೆ. ಮೃತನ ತಂದೆ ಬಾಸ್ಕರ್ ಕಾರಂತ ಅವರು ಅಡಿಗೆ ವೃತ್ತಿಯವರಾಗಿದ್ದು ಮಂಗಳೂರಿಗೆ ಕೆಲಸಕ್ಕೆ ತೆರಳಿದ್ದರು, ಅಣ್ಣ ಉಮೇಶ್ ಕಾರಂತ ಸುರತ್ಕಲ್ ಸಮೀಪದ ದೇವಸ್ಥಾನವೊಂದರಲ್ಲಿ ಅರ್ಚಕ ವೃತ್ತಿ ಮಾಡುತ್ತಿದ್ದರು ಎನ್ನಲಾಗಿದೆ. ಮೃತ ವಿಜಯ ಕಾರಂತ ಉತ್ತಮ ಕ್ರಿಕೆಟ್ ಆಟಗಾರನಾಗಿದ್ದು, ಕ್ಯಾಟರಿಂಗ್‌ಗೆ ವೃತ್ತಿ ನಡೆಸುತ್ತಿದ್ದರು.

ಘಟನೆಯ ಬಗ್ಗೆ ಸರಿಯಾದ ಮಾಹಿತಿ ಲಭ್ಯವಾಗದ ಹಿನ್ನೆಲೆಯಲ್ಲಿ ಕೋಟ ಪೊಲೀಸ್‌ರು ಮಾಹಿತಿ ಕಲೆ ಹಾಕುತ್ತಿದ್ದಾರೆ. ಪ್ರಾರಂಭದಲ್ಲಿ ಕುಡಿದು ತೂರಾಡುತ್ತಿದ್ದ ವಿಜಯ ಕಾರಂತ ಮೇಲಿನ ಕೆಳಗೆ ಬಿದ್ದು ಮೃತಪಟ್ಟಿದ್ದ ಎನ್ನುವ ಮಾತು ಕೂಡ ಕೇಳಿ ಬಂದಿತ್ತು, ಸಂಜೆಯಾಗುತ್ತಿದ್ದಂತೆ ಹೊಡೆದಾಟ ನಡೆದು ಮೃತಪಟ್ಟ ಎನ್ನುವ ಗಾಳಿ ಸುದ್ದಿ ಸಾರ್ವಜನಿಕ ವಲಯದಲ್ಲಿ ಹರಿದಾಡುತ್ತಿದೆ.

Write A Comment