ಕರಾವಳಿ

ದುರ್ಗಾ ಪ್ರಸಾದ್ ಶೆಟ್ಟಿ ಕೊಲೆ ಪ್ರಕರಣ : ಪ್ರಮುಖ ಆರೋಪಿಯ ಬಂಧನ

Pinterest LinkedIn Tumblr

Murder_accused_diksit

ಮಂಗಳೂರು, ಅ.28: ತಿಂಗಳ ಹಿಂದೆ ವೆಲೆನ್ಸಿಯಾದಲ್ಲಿ ನಡೆದ ದುರ್ಗಾ ಪ್ರಸಾದ್ ಶೆಟ್ಟಿ ಎಂಬಾತನ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಮಂಗಳೂರು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.

ಮರೋಳಿ ಮೆಸ್ಕಾಂ ಕಚೇರಿಯ ಹಿಂಬದಿಯ ನಿವಾಸಿ ದೀಕ್ಷಿತ್ ಪೂಜಾರಿ (25) ಬಂಧಿತ ಆರೋಪಿ ಎಂದು ಗುರುತಿಸಲಾಗಿದೆ. ಆತ ದುರ್ಗಾಪ್ರಸಾದ್ ಶೆಟ್ಟಿಯ ಕೊಲೆ ಮಾಡಲು ಸಂಚು ರೂಪಿಸಿದ ಪ್ರಮುಖ ಆರೋಪಿ ಎಂದು ಪೊಲೀಸರು ತಿಳಿಸಿದ್ದಾರೆ.

ಸೆ. 22ರಂದು ಮಧ್ಯಾಹ್ನ 2:30ರ ಸುಮಾರಿಗೆ ಮಂಗಳೂರು ನಗರದ ವೆಲೆನ್ಸಿಯಾದಲ್ಲಿ ದುರ್ಗಾಪ್ರಸಾದ್ ನನ್ನು ಸಂತೋಷ್ ಶೆಟ್ಟಿಗಾರ್ ಎಂಬಾತನು ಹಣಕಾಸಿನ ವ್ಯವಹಾರಕ್ಕೆ ಸಂಬಂಧಿಸಿದಂತೆ ಎಕ್ಕೂರಿನ ಸಂದೇಶ್ ಕೋಟ್ಯಾನ್, ಶಕ್ತಿನಗರದ ಪವನ್ ಶೆಟ್ಟಿ, ಕುಲಶೇಖರದ ಹರ್ಷಿತ್ ಶೆಟ್ಟಿ ಎಂಬವರ ಜೊತೆ ಸೇರಿ ಕೊಲೆ ಮಾಡಿದ್ದ ಎಂದು ಆರೋಪಿಸಲಾಗಿತ್ತು. ಪ್ರಕರಣಕ್ಕೆ ಸಂಬಂಧಿಸಿ ಮೂವರನ್ನು ಮಂಗಳೂರು ಸಿಸಿಬಿ ಪೊಲೀಸರು ದಸ್ತಗಿರಿ ಮಾಡಿದ್ದರು. ದೀಕ್ಷಿತ್ ಕೊಲೆ ಕೃತ್ಯದ ನಂತರ ತಲೆಮರೆಸಿಕೊಂಡಿದ್ದು, ಈತನು ಮಂಗಳೂರು ನಗರದ ದೇರೆಬೈಲ್ ಕೊಂಚಾಡಿ ಬಸ್ ನಿಲ್ದಾಣದ ಬಳಿಯಿದ್ದಾನೆಂಬ ಖಚಿತ ಮಾಹಿತಿಯಂತೆ ಅ.26ರಂದು ವಶಕ್ಕೆ ಪಡೆದುಕೊಂಡು ಮುಂದಿನ ಕ್ರಮಕ್ಕಾಗಿ ಮಂಗಳೂರು ದಕ್ಷಿಣ ಪೊಲೀಸ್ ಠಾಣೆಗೆ ಹಸ್ತಾಂತರಿಸಲಾಗಿದೆ.

ಭೂಗತ ಪಾತಕಿ ವಿಕ್ಕಿ ಶೆಟ್ಟಿಯ ಸಹಚರ:

ಆರೋಪಿ ದೀಕ್ಷಿತ್‌ ಪೂಜಾರಿ ಭೂಗತ ಪಾತಕಿ ವಿಕ್ಕಿ ಶೆಟ್ಟಿಯ ಸಹಚರನಾಗಿದ್ದು, ಈ ಹಿಂದೆ ಉದ್ಯಮಿ ವಿಜಯೇಂದ್ರ ಭಟ್‌ ಶೂಟೌಟ್‌ ಪ್ರಕರಣ, ವಕೀಲರಾದ ಪ್ರಕಾಶ್‌ ಅಪಹರಣ ಮತ್ತು ಕೊಲೆ ಸಂಚು ರೂಪಿಸಿದ ಪ್ರಕರಣ, ಮಣ್ಣಗುಡ್ಡೆಯ ಜಾನ್‌ಪಿಂಟೋ ಕೊಲೆ ಪ್ರಕರಣ ಹಾಗೂ ಅಕ್ರಮ ಶಸ್ತ್ರಾಸ್ತ್ರ ಹೊಂದಿದ ಪ್ರಕರಣದಲ್ಲಿ ಭಾಗಿಯಾಗಿದ್ದನು.

ಈ ಹಿಂದೆ 2014 ಜೂನ್‌ ತಿಂಗಳಲ್ಲಿ ಶ್ರೀಮಂತ ಉದ್ಯಮಿಗಳನ್ನು ಹಾಗೂ ಕೊಟ್ಟಾರದ ಚಂದು ಯಾನೆ ಚಂದ್ರಹಾಸ ಶೆಟ್ಟಿ, ಭರತೇಶ್‌ ಎಂಬವರ ಕೊಲೆಗೆ ಸಂಚು ರೂಪಿಸಿ ಪಿಸ್ತೂಲ್‌ ಹಾಗೂ ತಲವಾರನ್ನು ಹೊಂದಿದ್ದ ವೇಳೆ ಈತನನ್ನು ಮಂಗಳೂರು ಸಿಸಿಬಿ ಪೊಲೀಸರು ದಸ್ತಗಿರಿ ಮಾಡಿದ್ದರು. ಈತ 2014ರ ಸೆಪ್ಟೆಂಬರ್‌ನಲ್ಲಿ ನ್ಯಾಯಾಲಯದಿಂದ ಜಾಮೀನು ಪಡೆದು ಜೈಲ್‌ನಿಂದ ಬಿಡುಗಡೆಗೊಂಡು ಬಂದ ಒಂದು ವಾರದಲ್ಲಿ ದುರ್ಗಾಪ್ರಸಾದ್‌ ಶೆಟ್ಟಿಯ ಕೊಲೆಗೆ ಸಂಚು ರೂಪಿಸಿ ಇತರ ಆರೋಪಿಗಳ ಜೊತೆ ಸೇರಿ ಕೊಲೆ ಕೃತ್ಯ ಎಸಗಿದ್ದಾನೆ.

ಪೊಲೀಸ್‌ ಆಯುಕ್ತ ಆರ್‌.ಹಿತೇಂದ್ರ ಅವರ ಆದೇಶದಂತೆ ಡಿ.ಸಿ.ಪಿ ಗಳಾದ ಡಾ| ಜಗದೀಶ್‌ ಮತ್ತು ವಿಷ್ಣುವರ್ಧನ. ಎನ್‌ ಅವರ ಮಾರ್ಗದರ್ಶನದಲ್ಲಿ ಸಿ.ಸಿ.ಬಿ ಇನ್ಸ್‌ಪೆಕ್ಟರ್‌ ವೆಲೆಂಟೈನ್‌ ಡಿ’ಸೋಜಾ ಪಿಎಸ್‌ಐ ಶ್ಯಾಂ ಸುಂದರ್‌ ಹಾಗೂ ಸಿಬಂದಿ ಈ ಪತ್ತೆ ಕಾರ್ಯದಲ್ಲಿ ಭಾಗವಹಿಸಿದ್ದರು.

Write A Comment