ಕರಾವಳಿ

ಕಪ್ಪೆ ಬೊಂಡಾಸ್ ಮೀನುಗಾರಿಕೆ ಅವ್ಯಾಹತವಾಗಿ ನಡಸುತ್ತಿರುವ ಅನ್ಯರಾಜ್ಯದ ಮೀನುಗಾರರು

Pinterest LinkedIn Tumblr
ಕುಂದಾಪುರ: ಕಳೆದ ಹಲವು ದಿನಗಳಿಂದ ತಮಿಳುನಾಡು ಮೂಲದ ಮೀನುಗಾರರು ಗಂಗೊಳ್ಳಿಯಲ್ಲಿ ಅವ್ಯಾಹತವಾಗಿ ಕಪ್ಪೆ ಬೊಂಡಾಸ್ ಮೀನುಗಾರಿಕೆ ನಡೆಸುತ್ತಿರುವುದಕ್ಕೆ ಸ್ಥಳೀಯ ಮೀನುಗಾರರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕಳೆದ ಕೆಲವು ವರ್ಷಗಳ ಹಿಂದೆ ಕಪ್ಪೆ ಬೊಂಡಾಸ್ ಮೀನುಗಾರಿಕೆ ನಡೆಸದಂತೆ ಮಲ್ಪೆ ಬಂದರಿನಲ್ಲಿ ವ್ಯಾಪಕ ಪ್ರತಿಭಟನೆ ವ್ಯಕ್ತವಾಗಿತ್ತು. ಹೀಗಾಗಿ ಮಲ್ಪೆ ಬಂದರಿನಲ್ಲಿ ಕಪ್ಪೆ ಬೊಂಡಾಸ್ ಮೀನುಗಾರಿಕೆ ಸ್ಥಗಿತಗೊಂಡಿತ್ತು. ಇದೀಗ ಈ ವ್ಯವಹಾರ ಗಂಗೊಳ್ಳಿಯಲ್ಲಿ ನಡೆಸಲಾಗುತ್ತಿದೆ ಎಂದು ಸ್ಥಳೀಯ ಮೀನುಗಾರರು ದೂರಿದ್ದಾರೆ.

Gangolli Harbour

ತಮಿಳುನಾಡು ಮೂಲದ ಮೀನುಗಾರರು ಅನ್ಯರಾಜದ ನೋಂದಣಿ ಹೊಂದಿದ ಬೋಟ್ ಮೂಲಕ ಈ ವ್ಯವಹಾರ ನಡೆಸುತ್ತಿದ್ದಾರೆ. ಅನ್ಯ ರಾಜ್ಯದ ಬೋಟುಗಳು ಈ ಭಾಗದಲ್ಲಿ ಮೀನುಗಾರಿಕೆ ನಡೆಸಬಾರದೆಂಬ ಆದೇಶ ಇದ್ದರೂ, ಆದೇಶ ಉಲ್ಲಂಘಿಸಿ ಗಂಗೊಳ್ಳಿ ಬಂದರಿನ ಮೂಲಕ ಮೀನುಗಾರಿಕೆ ನಡೆಸಲಾಗುತ್ತಿದೆ. ಸಂಬಂಧಪಟ್ಟ ಇಲಾಖೆ ಯಾವುದೇ ಕ್ರಮಕ್ಕೆ ಮುಂದಾಗುತ್ತಿಲ್ಲ. ಕಪ್ಪೆ ಬೊಂಡಾಸ್ ಮೀನುಗಾರಿಕೆ ನಡೆಸುತ್ತಿರುವವರು ಸಾಕಷ್ಟು ಮಂಜುಗಡ್ಡೆ ಖರೀದಿಸುತ್ತಿರುವುದರಿಂದ ಮಂಜುಗಡ್ಡೆಯ ಅಭಾವ ತಲೆದೋರಿದ್ದು, ಇದರಿಂದ ಮತ್ಸ್ಯೋದ್ಯಮಿಗಳು ಮೀನು ಕೊಂಡುಕೊಳ್ಳಲು ಹಿಂದೇಟು ಹಾಕುತ್ತಿದ್ದಾರೆ. ಈ ಭಾಗದ ಸಾಂಪ್ರದಾಯಿಕ ಮೀನುಗಾರಿಕೆಗೆ ಬಲವಾದ ಹೊಡೆತ ಬಿದ್ದಿದೆ.

ಆರಂಭದಲ್ಲಿ ಒಂದು ಬೋಟು ಮಾತ್ರ ಗಂಗೊಳ್ಳಿಗೆ ಬಂದು ಕಪ್ಪೆಬೊಂಡಾಸ್ ಖಾಲಿ ಮಾಡಿ ಹೋಗುತ್ತಿತ್ತು. ಆದರೆ ಇದೀಗ ಗಂಗೊಳ್ಳಿ ಬಂದರಿಗೆ ಪ್ರವೇಶಿಸುವ ಅನ್ಯ ರಾಜ್ಯದ ಬೋಟುಗಳು ಸಂಖ್ಯೆ ಗಣನೀಯವಾಗಿ ಹೆಚ್ಚಾಗಿದೆ. ಬಂದರಿನಲ್ಲಿ ಸ್ಥಳೀಯ ನಾಡದೋಣಿ ಹಾಗೂ ಬೋಟುಗಳಿಗೆ ನಿಲ್ಲಲು ಸ್ಥಳಾವಕಾಶ ಕಡಿಮೆಯಾಗಿದೆ ಎಂಬ ಆರೋಪವಿದೆ.

ಕಪ್ಪೆಬೊಂಡಾಸ್ ಹಿಡಿಯಲು ಚೂರಿ ಹಾಕಬಾರದೆಂಬ ಆದೇಶ ಇದೆ. ಆದರೆ ಚೂರ್‍ಇ ಬಳಸದೇ ಕಪ್ಪೆಬೊಂಡಾಸ್ ಮೀನುಗಾರಿಕೆ ನಡೆಸಲು ಸಾಧ್ಯವಿಲ್ಲ. ಹೀಗಾಗಿ ಗಂಗೊಳ್ಳಿಯಲ್ಲಿ ಕಪ್ಪೆಬೊಂಡಾಸ್ ಮೀನುಗಾರಿಕೆಯನ್ನು ಸಂಪೂರ್ಣವಾಗಿ ನಿಷೇಧಿಸಬೇಕು. ನಿಷೇಧಿಸದಿದ್ದಲ್ಲಿ ಉಗ್ರ ಹೋರಾಟ ಕೈಗೆತ್ತಿಕೊಳ್ಳಲಾಗುವುದು ಗಂಗೊಳ್ಳಿ ಮೀನುಗಾರರು ತಿಳಿಸಿದ್ದಾರೆ.

Write A Comment