ಕರಾವಳಿ

ಬೈಂದೂರು ಆ‘ರಕ್ಷಕ’ ಠಾಣೆಯ ದುಸ್ಥಿತಿ..!

Pinterest LinkedIn Tumblr

ಕುಂದಾಪುರ: ಜನಪ್ರತಿನಿಧಿಗಳ ಇಚ್ಛಾಶಕ್ತಿ ಕೊರತೆ ಮತ್ತು ಸರಕಾರದ ಆಡಳಿತ ವ್ಯವಸ್ಥೆಗೆ ಕನ್ನಡಿಹಿಡಿದಂತಿರುವ ಈ ಕಛೇರಿಯಲ್ಲಿ ಕೇವಲ ಐದುಜನ ಮಾತ್ರ ಸಲೀಸಾಗಿ ಓಡಾಡಬಹುದು. ಆರನೆಯವರಿಗೆ ಸ್ಥಳದ ಅಭಾವ ಹಾಗಾಗಿ ಸಂದರ್ಶಕರು ಹೊರಗೆ ನಿಲ್ಲುವ ಅನಿವಾರ್ಯತೆ. ಇದೊಂದು ಗುಬ್ಬಚ್ಚಿಗೂಡಿನಂತಿರುವ ಸರಕಾರಿ ಕಛೇರಿಯ ದುಸ್ಥಿತಿ.

ಇದು ಬೈಂದೂರು, ಕೊಲ್ಲೂರು ಹಾಗೂ ಗಂಗೊಳ್ಳಿ ಈ ಮೂರು ವಲಯದ ಹಾಗೂ ತಾಲೂಕು ಕೇಂದ್ರವಾಗುತ್ತಿರುವ ಬೈಂದೂರಿನಲ್ಲಿರುವ ವೃತ್ತ ನಿರೀಕ್ಷಕರ ಕಛೇರಿ ಹಾಗೂ ಆರಕ್ಷಕ ಠಾಣೆಯ ಕಥೆ-ವ್ಯಥೆ.

Byndooru_Police_Station (1)

ಅತೀ ಚಿಕ್ಕದಾದ ಒಳಾಂಗಣ ಅದರಲ್ಲಿ ಒಂದು ಭಾಗ ವೃತ್ತ ನಿರೀಕ್ಷಕರ ಕ್ಯಾಬೀನು, ಅದರ ಮಗ್ಗುಲಲ್ಲಿ ಕಂಪ್ಯೂಟರ್ ರೂಮ್ ದೂರು ಕೊಡಲು ಬಂದವರು ಅಲ್ಲಿಯೇ ಇರುವ ಸ್ವಲ್ಪ ಸ್ಥಳದಲ್ಲಿ ನಿಂತು ದೂರು ದಾಖಲಿಸಬೇಕು. ಕುಳಿತುಕೊಳ್ಳುವ ಅವಕಾಶ ಇಲ್ಲ. ನಿರೀಕ್ಷಕರು ಕರೆಯುವವರೆಗೆ ಹೊರಗೆ ನಿಲ್ಲಬೇಕು. ಅಲ್ಲಿಯೇ ಇದ್ದರೆ ಅಲ್ಲಿದ್ದವರಿಗೆ ಓಡಾಡಲು ಸ್ಥಳ ಇರುವುದಿಲ್ಲ. ಆದ್ದರಿಂದ ಕಛೇರಿಯ ಹೊರಗೆ ಒಂದು ಬೆಂಚು ಇಡಲಾಗಿದೆ. ಬಂದವರು ಅಲ್ಲಿಯೇ ಕುಳಿತುಕೊಳ್ಳಬೇಕಾಗುತ್ತದೆ. ಈ ಬಗ್ಗೆ ಸಿಬ್ಬಂದಿಗಳಿಗೂ ಬೇಸರವಿದೆ. ಆದರೆ ಅವರು ಈ ವಿಷಯದಲ್ಲಿ ಅಸಹಾಯಕರು. ಊರಿನ ಪರಿಸ್ಥಿಯಲ್ಲಿ ಸ್ವಲ್ಪ ಏರುಪೇರಾದರೂ ಆರಕ್ಷಕರ ಸಹಾಯಬೇಕು. ಆದರೆ ಇವರಿಗೆ ಸಮಸ್ಯೆ ಎದುರಾದರೆ ಕೇಳುವವರೇ ಇಲ್ಲ. ಇವರು ತಮ್ಮ ಕಷ್ಟಗಳನ್ನೂ ಯಾರಲ್ಲಿಯೂ ಹೇಳಿಕೊಳ್ಳುತ್ತಿಲ್ಲ.

ಇನ್ನೂ ಆರಕ್ಷಕ ಠಾಣೆಯ ಪರಿಸ್ಥಿತಿ ಇದಕ್ಕಿಂತ ಭಿನ್ನವಾಗಿಲ್ಲ. ಅಲ್ಲಿಯೂ ಕೂಡ ಇದೇ ಗೋಳು. ಮಹಿಳಾ ಸಿಬ್ಬಂದಿ ಹಾಗೂ ಪುರುಷ ಸಿಬ್ಬಂದಿಗಳಿಗೆ ಯೂನಿಫಾರ್ಮ್ ಬದಲಾಯಿಸಲು ಸೂಕ್ತ ಸ್ಥಳ ಇಲ್ಲ. ವಿಶ್ರಾಂತಿ ಕೊಠಡಿ ಇಲ್ಲವೇ ಇಲ್ಲ. ಇಷ್ಟೆಲ್ಲ ಸಮಸ್ಯೆಗಳ ನಡುವೆಯೂ ಪ್ರಾಮಾಣಿಕವಾಗಿ ತಮ್ಮ ಕರ್ತವ್ಯ ನಿಭಾಯಿಸುತ್ತಿದ್ದಾರೆ ಬೈಂದೂರು ಠಾಣೆಯ ಆರಕ್ಷಕರು.

Byndooru_Police_Station

ಸರಕಾರ, ಇಲಾಖೆ ಸ್ಪಂದಿಸಿದರೆ ಈ ಎಲ್ಲಾ ಸಮಸ್ಯೆಗಳನ್ನು ಪರಿಹರಿಸಲು ಸಾಧ್ಯವಿದೆ. ಗಾಂಧಿ ಮೈದಾನದ ಬಳಿ ನೂತನವಾದ ಪೋಲಿಸ್ ವಸತಿ ಸಮುಚ್ಚಯ ಈಗಾಗಲೇ ನಿರ್ಮಾಣಗೊಂಡಿದೆ. ಠಾಣೆಯ ಪಕ್ಕದಲ್ಲಿರುವ ಪೋಲೀಸ್ ವಸತಿಗೃಹ ಸಂಪೂರ್ಣ ಜೀರ್ಣಾವಸ್ಥೆಯಲ್ಲಿರುವುದರಿಂದ ಅದನ್ನು ಅರ್ಧ ಕೆಡವಲಾಗಿದೆ. ಇದನ್ನು ಸಂಪೂರ್ಣ ನೆಲಸಮ ಮಾಡಿದರೆ ಅಲ್ಲಿಯೇ ಇರುವ ವಿಶಾಲವಾದ ಸ್ಥಳವನ್ನು ಬಳಸಿಕೊಂಡು ಒಂದು ಸುಂದರ ಹಾಗೂ ವಿಶಾಲವಾದ ವೃತ್ತನಿರೀಕ್ಷಕರ ಕಛೇರಿ ಹಾಗೂ ಉಳಿದ ಜಾಗದಲ್ಲಿ ವಿಶ್ರಾಂತಿ ಗೃಹ ಹಾಗೂ ಯುನಿಫಾರಂ ಬದಲಿಸಲು ಪ್ರೈವೆಸ್ಸಿ ಕೊಠಡಿ ಮಾಡಬಹುದು. ಆದರೆ ಸ್ಥಳಿಯ ಜನಪ್ರತಿನಿಧಿಗಳು, ಇಲಾಖೆ ಹಾಗೂ ಸಚಿವರು ಮನಸ್ಸು ಮಾಡಬೇಕಾಗಿದೆ. ಇರುವ ಎರಡು ವಾಹನಗಳನ್ನು ಅಧಿಕಾರಿಗಳು (ಪಿ‌ಎಸ್‌ಐ ಹಾಗೂ ಸಿಪಿ‌ಐ) ಏರಿ ಹೋದಾಗ ತುರ್ತುಕಾಲಕ್ಕೆ ಇಲ್ಲಿ ಯಾವೂದೇ ವಾಹನದ ವ್ಯವಸ್ಥೆ ಇಲ್ಲ. ಮಾರುತಿ ಒಮ್ನಿಯಲ್ಲಿ ನೈಟ್ ಬೀಟ್ ಮಾಡುವ ಪರಿಸ್ಥಿತಿಯಿದ್ದು, ಅಗತ್ಯವಾಗಿರುವ ಹೊಯ್ಸಳ ವಾಹನವನ್ನೂ ಇಲ್ಲಿ ಪೂರೈಸಲಾಗಿಲ್ಲ.

ಕಾನೂನು ಸುವ್ಯವಸ್ಥೆಗಾಗಿ ಮತ್ತು ಎಲ್ಲರ ಕಷ್ಟ ಸುಖಕ್ಕಾಗಿ ಹಗಲು ರಾತ್ರಿ ಎನ್ನದೆ ಆರಕ್ಷಕರು ದುಡಿಯುತ್ತಿದ್ದಾರೆ. ಇಂತಹ ಆರಕ್ಷಕರ ಕಷ್ಟಕ್ಕೆ ಈ ಪ್ರಜಾಪ್ರಭುತ್ವ ದೇಶದಲ್ಲಿ ಮಾನವೀಯತೆಯಿಂದ ಸ್ಪಂದಿಸದಿದ್ದರೆ ಆ ದೇವರೂ ಮೆಚ್ಚಲಾರ..

ನಾಗರೀಕರಿಗೆ ನಮ್ಮ ಸಮಸ್ಯೆ ಅರ್ಥವಾಗುತ್ತದೆ. ಉತ್ತಮವಾಗಿ ಅವರು ಸ್ಪಂದಿಸುತ್ತಿದ್ದಾರೆ. ಈ ಬಗ್ಗೆ ಇಲಾಖೆ ಹೊರತು ಪಡಿಸಿ ಬೇರೆಯವರಿಗೆ ಏನೂ ಮಾಡಲು ಸಾಧ್ಯವಿಲ್ಲ. ಅಲ್ಲದೇ ನಮಗೆ ಪ್ರತಿಭಟಿಸಲು ಅವಕಾಶವಿಲ್ಲ. ಕಷ್ಟವೋ ಸುಖವೋ ಸಂದರ್ಭಕ್ಕೆ ಹೊಂದಿಕೊಂಡು ಕರ್ತವ್ಯಮಾಡುತ್ತಿದ್ದೇವೆ. – ಆರಕ್ಷಕ.

Write A Comment