ಕರಾವಳಿ

ಮೂಡುಬಿದಿರೆ: ಬಸದಿಯ ಬೆಳ್ಳಿ ಸಾಮಗ್ರಿಗಳು ಕಳವು

Pinterest LinkedIn Tumblr

7md1

ಮೂಡುಬಿದಿರೆ, ಅ.7: ಇಲ್ಲಿನ ಬೆಟ್ಕೇರಿ ಯಲ್ಲಿರುವ ಅಮ್ಮನವರ ಬಸದಿಗೆ ಮೂಲ ನಾಯಕನಾಗಿರುವ ಶಾಂತಿನಾಥ ಬಸದಿಗೆ ಸೋಮವಾರ ರಾತ್ರಿ ಕಳ್ಳರು ನುಗ್ಗಿ ಅಲ್ಲಿದ್ದ ಸುಮಾರು 50 ಸಾವಿರ ರೂ. ವೌಲ್ಯದ ಬೆಳ್ಳಿಯ ಸಾಮಗ್ರಿ ಮತ್ತು ಕಾಣಿಕೆ ಡಬ್ಬದ ನಗದನ್ನು ಕಳವು ಮಾಡಿದ ಘಟನೆ ನಡೆದಿದೆ. ಅಮ್ಮನವರ ಬಸದಿಗೆ ಹೊಂದಿ ಕೊಂಡಿರುವ ಶಾಂತಿನಾಥ ಬಸದಿಗೆ ಭದ್ರತೆಯಿಲ್ಲದಿರುವುದರಿಂದ ಬಸದಿಯ ಹೊರ ಆವರಣದಲ್ಲಿರುವ ಕಬ್ಬಿಣದ ಬಾಗಿಲಿನ ಬೀಗ ಮುರಿದು ಗರ್ಭಗುಡಿಯ ಒಳ ಪ್ರವೇಶಿಸಿ ಅಲ್ಲಿನ ತೀರ್ಥಮಂಟಪದಲ್ಲಿದ್ದ ಒಂದು ಕೆ.ಜಿ. ತೂಕದ ನಾಗನ 9 ಹೆಡೆಯುಳ್ಳ ಬೆಳ್ಳಿಯ ಆರತಿ ಮತ್ತು ಒಂದು ಬಟ್ಟಲು ಹಾಗೂ ಗಂಧದ ತಟ್ಟೆಯನ್ನು ಕಳವು ಗೈದಿದ್ದಾರೆ.

ಆದರೆ ಕಾಣಿಕೆ ಡಬ್ಬವನ್ನು ಹೊರಗೆ ತಂದು ಚಿಲ್ಲರೆ ಹಣವನ್ನು ಅದರಲ್ಲಿಯೇ ಬಿಟ್ಟು ನೋಟುಗಳನ್ನು ಕಳವುಗೈದಿರುವುದಾಗಿ ತಿಳಿದುಬಂದಿದೆ. ಕ್ಷೇತ್ರದ ಅರ್ಚಕ ಗುಣವರ್ಮ ಇಂದ್ರ ಎಂಬವರ ಮನೆಯು ಬಸದಿಯ ಪಕ್ಕದಲ್ಲಿದ್ದು, ಬಸದಿಗೆ ಪೂಜೆಗೆಂದು ಅವರು ಬೆಳಗ್ಗೆ ಬಂದಾಗ ಕಳವು ನಡೆದಿ ರುವುದು ಬೆಳಕಿಗೆ ಬಂದಿದೆ. ಅಮ್ಮನವರ ಬಸದಿಯಲ್ಲಿ ಅಪಾರ ಬೆಲೆ ಬಾಳುವ ಚಿನ್ನಾಭರಣಗಳಿದ್ದು, ಆರು ತಿಂಗಳ ಹಿಂದೆಯಷ್ಟೇ ಅದನ್ನು ಬ್ಯಾಂಕ್ ಲಾಕರ್ ನಲ್ಲಿ ಇರಿಸಿರುವುದರಿಂದ ಭಾರೀ ಕಳ್ಳತನವಾಗುವುದು ತಪ್ಪಿದೆ.

ಜಿಲ್ಲಾ ಪೊಲೀಸ್ ಆಯುಕ್ತ ಆರ್. ಹಿತೇಂದ್ರ, ಪಣಂಬೂರು ಎಸಿಪಿ ರವಿ ಕುಮಾರ್, ಮೂಡುಬಿದಿರೆ ಸರ್ಕಲ್ ಇನ್ಸ್‌ಪೆಕ್ಟರ್ ಅನಂತ ಪದ್ಮನಾಭ, ಎಸ್.ರಮೇಶ್ ಕುಮಾರ್ ಹಾಗೂ ಕ್ರೈ ವಿಭಾಗದ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಬೆರ ಳಚ್ಚು ತಜ್ಞರು ಹಾಗೂ ಶ್ವಾನದಳದವರು ತಪಾಸಣೆ ನಡೆಸಿದರು.

ಕೆಟ್ಟಿರುವ ಸೈರನ್, ಭದ್ರತೆ ಇಲ್ಲ: ಕಳೆದ ಬಾರಿ ಸಿದ್ಧಾಂತ ಮಂದಿರದಿಂದ ಕೋಟ್ಯಂತರ ರೂ. ಬೆಲೆಬಾಳುವ ಮೂರ್ತಿಗಳು ಕಳವಾಗಿ ರಾಷ್ಟ್ರಮಟ್ಟದಲ್ಲಿ ಸುದ್ದಿಯಾಗಿತ್ತು. ಅದರ ನಂತರ ಎಲ್ಲಾ ಬಸದಿಗಳಿಗೂ ಸೈರನ್, ಸಿಸಿ ಕ್ಯಾಮೆರಾ ಅಳವಡಿಸಬೇಕು ಮತ್ತು ವಾಚ್‌ಮೆನ್ ಗಳನ್ನು ನೇಮಿಸಬೇಕೆಂದು ಪೊಲೀಸ್ ಅಧಿಕಾರಿಗಳು ಸೂಚಿಸಿದ್ದರು. ಆದರೆ ಇನ್ನೂ ಕೂಡಾ ಈ ಎಲ್ಲಾ ವ್ಯವಸ್ಥೆಗಳನ್ನು ಬಸದಿಗಳಿಗೆ ಸಂಬಂಧಪಟ್ಟವರು ಮಾಡದೆ ಇರುವುದರಿಂದಲೇ ಮತ್ತೆ ಮತ್ತೆ ಬಸದಿಗಳಲ್ಲಿ ಇಂತಹ ಕಳ್ಳತನ ನಡೆ ಯಲು ಕಾರಣವಾಗಿದೆ ಎಂದು ಸಾರ್ವ ಜನಿಕರು ಅಭಿಪ್ರಾಯಪಟ್ಟಿದ್ದಾರೆ.

ಮೂಡುಬಿದಿರೆಯಲ್ಲಿರುವ 18 ಬಸದಿಗಳ ಪೈಕಿ ಮೊದಲು ನಿರ್ಮಾಣ ಗೊಂಡಿರುವ ಬಸದಿ ಇದಾಗಿದ್ದು. ಇದಕ್ಕೆ ಮೂರು ಸಾವಿರ ವರ್ಷಗಳ ಇತಿಹಾಸವಿದೆ ಎಂದು ತಿಳಿದು ಬಂದಿದೆ. ಹಿಂದಿನಕಾಲದಲ್ಲಿ ಮಠದ ಬಾಗಿಲು ಗಳಿಗೆ ಒಳಗಿನಿಂದ ಚಿಲಕ ಮಾಡಿ ಬಾಗಿಲು ಮುಚ್ಚಿದ ಬಳಿಕ ಕಬ್ಬಿಣದ ವಿಶಿಷ್ಟ ಸಾಧನದ ಮೂಲಕ ಹೊರಗಿನಿಂದ ಬಾಗಿಲಿನ ಒಳಚಿಲಕವನ್ನು ಹಾಕುವ ತಂತ್ರಜ್ಞಾನದ ಬೀಗವನ್ನು ನಿರ್ಮಿಸಲಾಗಿತ್ತು. ಪೂಜೆ ಮಾಡುವ ಅರ್ಚಕರು ಕಬ್ಬಿಣದ ಸಾಧನದ ಮೂಲಕ ಈ ಬೀಗವನ್ನು ತೆಗೆಯುತ್ತಿದ್ದರು. ನಂತರ ಬೀಗ ಹಾಕಿದ ಬಳಿಕ ಆ ಸಾಧನವನ್ನು ತಮ್ಮ ಮನೆಯಲ್ಲಿ ಇರಿಸುತ್ತಿದ್ದರು.

ಆದರೆ ಇಂದು ಕಳ್ಳರು ಬಾಗಿಲನ್ನು ತೆಗೆಯಲು ಅಂತಹ ಕಬ್ಬಿಣದ ವಿಶಿಷ್ಟ ಸಾಧನವನ್ನೇ ಬಳಸಿ ಬಾಗಿಲು ತೆಗೆದಿರುವುದರಿಂದ ಈ ಸಾಧನ ಹಾಗೂ ಬಾಗಿಲಿನ ಬಗ್ಗೆ ತಿಳಿದಿರುವವರಿಂದಲೇ ಈ ಕೃತ್ಯ ನಡೆದಿರಬಹುದೆಂದು ಪೊಲೀಸರು ಶಂಕಿಸಿದ್ದಾರೆ.

Write A Comment