ಕರ್ನಾಟಕ

ಭ್ರಷ್ಟಾಚಾರ ಮಾನವ ಹಕ್ಕು ಉಲ್ಲಂಘನೆಗೆ ಸಮಾನ: ಹೈಕೋರ್ಟ್‌; ಜಯಾಗೆ ಸಿಗಲಿಲ್ಲ ಜಾಮೀನು

Pinterest LinkedIn Tumblr

jaya illa

ಬೆಂಗಳೂರು: ಅಕ್ರಮ ಆಸ್ತಿ ಗಳಿಕೆ ಪ್ರಕರಣದಲ್ಲಿ ಸೆರೆ­ವಾಸ ಅನುಭವಿಸುತ್ತಿರುವ ಎಐಎಡಿಎಂಕೆ ನಾಯಕಿ ಜೆ.ಜಯಲಲಿತಾ ಅವರ ಜಾಮೀನು ಅರ್ಜಿ­ಯನ್ನು ಕರ್ನಾಟಕ ಹೈಕೋರ್ಟ್‌ ತಿರಸ್ಕರಿಸಿದೆ. ನ್ಯಾಯಮೂರ್ತಿ ಎ.ವಿ.ಚಂದ್ರಶೇಖರ್‌ ಅವರಿದ್ದ ಏಕಸದಸ್ಯ ನ್ಯಾಯಪೀಠವು ಮಂಗಳ­ವಾರ ಪ್ರಕರಣದ ವಿಚಾರಣೆಯನ್ನು ಕೈಗೆತ್ತಿ­ಕೊಂಡಿತು. ವಾದ ಪ್ರತಿವಾದ ಆಲಿಸಿದ ನಂತರ, ‘ಅರ್ಜಿದಾರರ ಜಾಮೀನು ಅರ್ಜಿಯನ್ನು ವಜಾ ಮಾಡಲಾಗಿದೆ’ ಎಂದು ಪೀಠವು ಹೇಳಿದೆ.

‘ಭ್ರಷ್ಟಾಚಾರ ಎಂಬುದು ಮಾನವ ಹಕ್ಕುಗಳ ನೇರ ಉಲ್ಲಂಘನೆ. ಇದು ಸಮಾಜವನ್ನು ಆರ್ಥಿಕ ಅಪರಾಧಗಳಿಗೆ ಈಡು ಮಾಡುತ್ತದೆ ಹಾಗೂ ಸಾಮಾಜಿಕ ಸ್ವಾಸ್ಥ್ಯಕ್ಕೂ ಮಾರಕ. ಪ್ರಕರಣದ ಮೊದಲ ಆರೋಪಿ ಜಯಲಲಿತಾ ಸಂಸದೆ­ಯಾಗಿ, ಶಾಸಕಿಯಾಗಿ ಮತ್ತು ಮುಖ್ಯ­ಮಂತ್ರಿಯೂ ಆಗಿ ಮಹತ್ವದ ಸಾಂವಿಧಾನಿಕ ಹುದ್ದೆ­ ನಿಭಾಯಿ­ಸಿದವರು. ಅವರ ವಿರುದ್ಧದ ಆರೋಪ ಗುರುತರವಾದದ್ದು ಹಾಗೂ ಈ ಪ್ರಕರಣ ಇಂತಹವರಿಗೆ ಜಾಮೀನು ನೀಡಲು ತಕ್ಕುದಾಗಿಲ್ಲ’ ಎಂದು ನ್ಯಾಯಮೂರ್ತಿಗಳು ಅಭಿಪ್ರಾಯಪಟ್ಟಿದ್ದಾರೆ.

ಜಯಲಲಿತಾ ಪರ ಹಿರಿಯ ವಕೀಲ ರಾಮ್‌ ಜೇಠ್ಮಲಾನಿ ತಮ್ಮ ಸುದೀರ್ಘ ವಾದದ ಮೂಲಕ ವಿಶೇಷ ನ್ಯಾಯಾ­ಲ­ಯದ ಆದೇಶವನ್ನು ಬಲವಾಗಿ ಆಕ್ಷೇಪಿಸಿದರು. ಇದಕ್ಕೆ ಪೂರ­ಕವಾಗಿ ಸುಪ್ರೀಂ ಕೋರ್ಟ್‌ ಮತ್ತು ಹಲವು ಹೈಕೋರ್ಟ್‌ ಆದೇಶಗಳ ಕಂತೆಯನ್ನೇ ನ್ಯಾಯಪೀಠಕ್ಕೆ ಒಪ್ಪಿಸಿದರು.

jaya08

ಸಾಕ್ಷ್ಯದ ವಿಕೃತಿ: ‘ವಿಶೇಷ ನ್ಯಾಯಾಲಯ ಪುರಸ್ಕರಿಸಿರುವ ಸಾಕ್ಷ್ಯಗಳು ನೇರ ಸಾಕ್ಷ್ಯಗಳಲ್ಲ. ನ್ಯಾಯಾಧೀಶರು ಕೇವಲ ಮೌಖಿಕ ಸಾಕ್ಷ್ಯ­ಗಳನ್ನು ಪರಿಗಣಿಸಿದ್ದಾರೆ. ಅಷ್ಟಕ್ಕೂ ಪ್ರಾಸಿ­ಕ್ಯೂಷನ್‌ ಸಲ್ಲಿಸಿದ ಸಾಕ್ಷ್ಯಗಳ ಸಾಚಾತನವೇ ಪ್ರಶ್ನಾರ್ಹವಾಗಿದೆ. ನ್ಯಾಯಾಧೀಶರು ತಮ್ಮ ಆದೇಶದಲ್ಲಿ ಕಲ್ಪನೆಗೇ ಒತ್ತು ನೀಡಿದ್ದಾರೆ. ನನ್ನ ಕಕ್ಷಿದಾರರ ವಿರುದ್ಧದ ಆರೋಪಗಳೆಲ್ಲಾ ಸಂಪೂರ್ಣ ಸುಳ್ಳು’ ಎಂದು ವಾದಿಸಿದರು.

ನ್ಯಾಯಾಧೀಶರೇ ಸಾಕ್ಷಿಯಂತೆ ವರ್ತಿಸಿದ್ದಾರೆ..! : ಸಹ ಆರೋಪಿಗಳಾದ ಶಶಿಕಲಾ ಮತ್ತು ಸುಧಾಕರನ್‌ ಪರ ವಾದ ಮಂಡಿಸಿದ ಬಾಂಬೆ ಹೈಕೋರ್ಟಿನ ಹಿರಿಯ ವಕೀಲ ಅಮಿತ್‌ ದೇಸಾಯಿ, ‘ಪ್ರಕರಣದಲ್ಲಿ ವಿಚಾರಣಾ ನ್ಯಾಯಾಲಯದ ನ್ಯಾಯಾಧೀಶರು ಸ್ವತಃ ಸಾಕ್ಷಿಯಂತೆ ವರ್ತಿಸಿದ್ದಾರೆ. ನನ್ನ ಕಕ್ಷಿದಾರರು ಬೇನಾಮಿಯಾಗಿ ಸಂಪತ್ತು ಸಂಗ್ರಹಿಸಿದ್ದಾರೆ ಎಂಬ ಆರೋಪಕ್ಕೆ ಯಾವುದೇ ನೇರ ಸಾಕ್ಷ್ಯ­ಗಳಿಲ್ಲ. ಅಕ್ರಮ ಆಸ್ತಿ ಎಂದು ಲೆಕ್ಕ ಹಾಕಿರುವ ದಾಖಲೆಗಳು ಸತ್ಯ ಸಂಗತಿಗೆ ಹೊರತಾಗಿವೆ.

‘ಪ್ರಾಸಿಕ್ಯೂಷನ್‌ ಸಲ್ಲಿಸಿದ ದಾಖಲೆ­ಗಳು ಮತ್ತು ಅವುಗಳಲ್ಲಿ ಬಳಸಿರುವ ಶಾಯಿ ಎಲ್ಲವೂ ಆಕ್ಷೇ­ಪಾರ್ಹ ಮತ್ತು ಪ್ರಶ್ನಾರ್ಹ’ ಎಂದು ವಾದಿಸಿದರು. ನಾಲ್ಕನೇ ಆರೋಪಿ ಇಳವರಸಿ ಪರ ವಕೀಲ ಹಸ್ಮತ್‌ ಪಾಷಾ ಅವರು, ‘ನ್ಯಾಯಾ­ಧೀಶರು ಭ್ರಷ್ಟಾಚಾರ ನಿಗ್ರಹ ಕಾಯ್ದೆ ಅಡಿ ಇಳವರಸಿ ಅವರನ್ನು ಶಿಕ್ಷೆಗೆ ಗುರಿಪಡಿಸಿದ್ದಾರೆ. ವಾಸ್ತವದಲ್ಲಿ ಇಳ­ವರಸಿ ಜನಪ್ರತಿನಿಧಿ ಕಾಯ್ದೆ ವ್ಯಾಪ್ತಿಗೆ ಒಳಪಡುವುದಿಲ್ಲ. ಹೀಗಾಗಿ ಕೆಳ ನ್ಯಾಯಾಲಯದ ಆದೇಶ ತಪ್ಪಿನಿಂದ ಕೂಡಿದೆ’ ಎಂದು ವಾದಿಸಿದರು.

ಆಕ್ಷೇಪ ಇಲ್ಲ ಎಂದ ಪ್ರಾಸಿಕ್ಯೂಟರ್‌: ನಂತರ ಪ್ರಾಸಿಕ್ಯೂಷನ್‌ (ತಮಿಳುನಾಡು ಸರ್ಕಾರದ) ಪರ ವಿಶೇಷ ವಕೀಲ ಜಿ. ಭವಾನಿ ಸಿಂಗ್‌, ‘ಆರೋಪಿಗಳಿಗೆ ಷರತ್ತು­­­ಬದ್ಧ ಜಾಮೀನು ನೀಡಲು ಯಾವುದೇ ತಕರಾರು ಇಲ್ಲ’ ಎಂದರು. ಕೇವಲ ಎರಡು ನಿಮಿಷಗಳಲ್ಲಿ ತಮ್ಮ ಆಕ್ಷೇ­ಪಣೆಯ ಮಾತುಗಳನ್ನು ಪೂರೈಸಿ ಕೂತರು. ಈ ಹಂತದಲ್ಲಿ ಕೋರ್ಟ್‌ ಸಭಾಂ­ಗಣದಲ್ಲಿ ಗಲಿಬಿಲಿ ಕಂಡು ಬಂದಿತು. ಭವಾನಿ ಸಿಂಗ್ ಏನು ಹೇಳಿ­ದರು ಎಂಬುದೇ ಗೊತ್ತಾಗಲಿಲ್ಲ. ಆಗ ಸ್ವತಃ ನ್ಯಾಯಮೂರ್ತಿಗಳೇ ಅವರ ಮಾತುಗಳನ್ನು ವಿವರಿಸಿ ತಮ್ಮ ಆದೇಶ ಪ್ರಕಟಿಸಿದರು.

ಫೋಟೊ ಕ್ಲಿಕ್ಕಿಸಿದ ವಕೀಲರು: ಮಧ್ಯಾಹ್ನದ ಬಿಡುವಿನ ವೇಳೆಯಲ್ಲಿ ರಾಮ್‌ ಜೇಠ್ಮಲಾನಿ ಅವರ ಜೊತೆ ವಕೀಲರು ತಮ್ಮ ಫೋಟೊಗಳನ್ನು ತೆಗೆಸಿ­ಕೊಳ್ಳಲು ಮುಗಿಬಿದ್ದಿದ್ದರು. ಕೋರ್ಟ್‌ ಸಭಾಂಗಣ­ದಲ್ಲಿ ಛಾಯಾಗ್ರಹಣಕ್ಕೆ ನಿಷೇಧವಿದ್ದರೂ ಇದ್ಯಾವುದರ ಪರಿವೆಯಿಲ್ಲದೆ ವಕೀಲರು ತಮ್ಮ ಮೊಬೈಲ್‌ಗಳಲ್ಲಿ ಫೋಟೊ ಕ್ಲಿಕ್ಕಿಸುವಲ್ಲಿ ನಿರತರಾಗಿ­ದ್ದರು. ಕೋರ್ಟ್‌ ಅಧಿಕಾರಿಗಳು ಫೋಟೊ ತೆಗೆಯ­ದಂತೆ ಮಾಡಿದ ಮನವಿ ಫಲಿಸಲಿಲ್ಲ. ಪೊಲೀಸ್‌ ಅಧಿಕಾರಿಗಳು ಇದಕ್ಕೆ ಮೂಕ ಪ್ರೇಕ್ಷಕರಾಗಿದ್ದರು.

ಮೊಬೈಲ್‌ನಲ್ಲಿ ವಾದ ದಾಖಲು: ಜೇಠ್ಮಲಾನಿ ಮತ್ತು ಅಮಿತ್‌ ದೇಸಾಯಿ ಅವರ ವಾದವನ್ನು ತಮಿಳು­ನಾಡಿನ ವಕೀಲರೊಬ್ಬರು ತಮ್ಮ ಮೊಬೈಲ್‌­ನಲ್ಲಿ ಸಂಪೂರ್ಣವಾಗಿ ಚಿತ್ರಿಸಿಕೊಂಡರು. ನ್ಯಾಯ­ಮೂರ್ತಿಗಳ ಕಣ್ಣಿಗೆ ಬೀಳದಂತೆ ಕೈಗೆ ಹಾಳೆಯ ತುಣುಕೊಂದನ್ನು ಈ ವಕೀಲರು ಅಡ್ಡಹಿಡಿದಿದ್ದರು.

ಬಿಗಿ ಬಂದೋಬಸ್ತ್: ಕಲಾಪ ನಡೆಯುತ್ತಿದ್ದ ಕೋರ್ಟ್‌ ಸಭಾಂಗಣ 28ರ ಬಳಿ ಬೆಳಿಗ್ಗೆ 9 ಗಂಟೆಗೇ ಸಾಕಷ್ಟು ಸಂಖ್ಯೆಯ ವಕೀಲರು ಜಮಾವಣೆಗೊಂಡಿದ್ದರು. ಕಲಾಪ ಆರಂಭವಾದ ಮೇಲಂತೂ ಈ ಸಂಖ್ಯೆ ಹೆಚ್ಚಾಗಿ ಹೊರಗೆ ಪದೇ ಪದೇ ನೂಕು ನುಗ್ಗಲು ಉಂಟಾಗಿ ಅಡ್ಡಿಯುಂಟಾ­ಯಿತು. ಸ್ವತಃ ನ್ಯಾಯಮೂರ್ತಿಗಳೇ ಹಲವು ಬಾರಿ ಶಾಂತಿ ಕಾಪಾಡುವಂತೆ ಸೂಚಿಸಬೇಕಾಯಿತು.

ಸಾರ್ವಜನಿಕ ಹಿತಾಸಕ್ತಿ ಅರ್ಜಿ: ಬೆಳಿಗ್ಗೆ ಮುಖ್ಯ ನ್ಯಾಯಮೂರ್ತಿ ಡಿ.ಎಚ್.ವಘೇಲಾ ಮತ್ತು ಆರ್‌.ಬಿ.ಬೂದಿಹಾಳ್‌ ಅವರಿದ್ದ ವಿಭಾಗೀಯ ಪೀಠವು ತನ್ನ ಕಲಾಪ ಆರಂಭಿಸುತ್ತಿದ್ದಂತೆಯೇ ಅನಿ­ರೀಕ್ಷಿತ ಪ್ರಸಂಗವೊಂದು ನಡೆಯಿತು. ತಮಿಳು­ನಾ­ಡಿನ ಮಧ್ಯವಯಸ್ಕ ವಕೀಲರೊಬ್ಬರು ಪೀಠದ ಎದುರು ಹಾಜರಾಗಿ ‘ಜಯಲಲಿತಾ ಅವರ ಪ್ರಕ­ರಣ­ದಿಂದ ತಮಿಳುನಾಡಿನಲ್ಲಿ ಕಾನೂನು ಸುವ್ಯ­ವಸ್ಥೆಗೆ ಧಕ್ಕೆಯಾಗಿದೆ. ಆದ್ದರಿಂದ ಅವರ ಬಿಡುಗಡೆ ಮಾಡಬೇಕು’ ಎಂಬ ಮೌಖಿಕ ಮನವಿ ಸಲ್ಲಿಸಿ­ದರು. ‘ಈ ಕುರಿತಂತೆ ನಾನು ಸಾರ್ವಜನಿಕ ಹಿತಾಸಕ್ತಿ ಅರ್ಜಿ ದಾಖಲಿಸುತ್ತಿದ್ದೇನೆ’ ಎಂದೂ ಹೇಳಿದರು. ಇದಕ್ಕೆ ಮುಖ್ಯ ನ್ಯಾಯಮೂರ್ತಿಗಳು, ‘ಮೊದಲು ಅರ್ಜಿ ಹಾಕಿ ಆಮೇಲೆ ನೋಡೋಣ’ ಎಂದು ಹೇಳಿದರು.

ಮಾಧ್ಯಮಗಳ ಅವಸರ
ಅರ್ಜಿದಾರರ ಪರ ವಾದ ಸರಣಿ ಮುಗಿದ ಬಳಿಕ ಮಧ್ಯಾಹ್ನ ಸುಮಾರು 3.45ರ ವೇಳೆಗೆ ಪ್ರಾಸಿಕ್ಯೂಷನ್ ಪರ ವಿಶೇಷ ವಕೀಲ ಜಿ.ಭವಾನಿ ಸಿಂಗ್‌ ಅವರು, ‘ಷರತ್ತು ಬದ್ಧ ಜಾಮೀನಿಗೆ ಪ್ರಾಸಿಕ್ಯೂಷನ್‌ ತಕರಾರು ಇಲ್ಲ’ ಎಂದು ಹೇಳುತ್ತಿದ್ದಂತೆಯೇ ಕೋರ್ಟ್‌ ಸಭಾಂಗಣದಲ್ಲಿದ್ದ ಕೆಲವು ಪತ್ರಕರ್ತರು ‘ಜಯಾಗೆ ಜಾಮೀನು ಸಿಗಬಹುದು’ ಎಂದು ಊಹೆ ಮಾಡಿದರು.

ತಮ್ಮ ಮೊಬೈಲ್‌ಗಳಿಂದ ‘ಜಯಾಗೆ ಜಾಮೀನು ಮಂಜೂರು’ ಎಂಬ ಎಸ್‌ಎಂಎಸ್‌ ರವಾನಿಸಿದರು. ಆಗಿನ್ನೂ ನ್ಯಾಯ ಮೂರ್ತಿಗಳು ಆದೇಶದ ಉಕ್ತ ಲೇಖನ ನೀಡುತ್ತಿದ್ದರು. ಆದರೆ 4.06 ವೇಳೆಗೆ ‘ಜಾಮೀನು ಅರ್ಜಿ ವಜಾಗೊಳಿಸಲಾಗಿದೆ’ ಎಂದು ನ್ಯಾಯಮೂರ್ತಿ ಗಳು ಆದೇಶದ ಆಖೈರು ಸಾಲನ್ನು ಪ್ರಕಟಿಸುತ್ತಿದ್ದಂತೆಯೇ ತಪ್ಪು ಮಾಹಿತಿ ರವಾನೆಯಾಗಿ ಹೋಗಿತ್ತು. ಜಾಮೀನು ಸಿಕ್ಕಿದೆ ಎಂಬ ಸುದ್ದಿಯಿಂದಾಗಿ ಕೋರ್ಟ್‌ ಆವರಣದ ಹೊರಗೆ ನೆರೆದಿದ್ದ ಜಯಾ ಅಭಿಮಾನಿಗಳು ಸಂಭ್ರಮ ಪಟ್ಟಿದ್ದರು. ಆದರೆ, ಸಂಭ್ರಮ ಕ್ಷಣಿಕವಾಗಿತ್ತು.

ಉಲ್ಟಾ ಹೊಡೆದ ಭವಾನಿ
ಈ ಮೊದಲು ಅರ್ಜಿದಾರರ ಮನವಿಗೆ ಲಿಖಿತ ಆಕ್ಷೇಪಣೆ ಸಲ್ಲಿಸಿದ್ದ ಪ್ರಾಸಿಕ್ಯೂಷನ್‌ ಪರ ವಕೀಲ ಭವಾನಿ ಸಿಂಗ್‌ ಅವರು ಇದ್ದಕ್ಕಿದ್ದಂತೆ ‘ಷರತ್ತು ಬದ್ಧ ಜಾಮೀನಿಗೆ ನನ್ನ ತಕರಾರಿಲ್ಲ’ ಎಂದು ಹೇಳುವ ಮೂಲಕ ಅಚ್ಚರಿ ಮೂಡಿಸಿದರು. ಈ ನಡೆಯನ್ನು ನ್ಯಾಯಮೂರ್ತಿ­ಗಳು ತಮ್ಮ ಆದೇಶದಲ್ಲಿ ಸ್ಪಷ್ಟವಾಗಿ ನಮೂದಿಸಿದರು.

‘ಮೇಲ್ಮನವಿ ಸಲ್ಲಿಕೆ’
ಗುರುವಾರ ಆದೇಶದ ಪ್ರತಿ ಲಭ್ಯವಾ­ಗಲಿದೆ. ಶುಕ್ರವಾರ ಸುಪ್ರೀಂನಲ್ಲಿ ಮೇಲ್ಮನವಿ ಸಲ್ಲಿಸಲಾ­ಗು­ವುದು. –ಹಸ್ಮತ್‌ ಪಾಷಾ

‘ಜಯಾ ನಿರ್ಧರಿಸುತ್ತಾರೆ’
ಮೇಲ್ಮನವಿ ಕುರಿತಂತೆ ನನ್ನ ಕಕ್ಷಿದಾ­ರರಾದ ಜಯಲಲಿತಾ ನಿರ್ಧರಿಸಲಿದ್ದಾರೆ.
ರಾಮ್‌ ಜೇಠ್ಮಲಾನಿ
(ಪ್ರಜಾವಾಣಿ)

Write A Comment