ಕರಾವಳಿ

ಕೊಲ್ಲೂರು ಶ್ರೀ ಮೂಕಾಂಬಿಕ ಸನ್ನಿಧಿಯಲ್ಲಿ ಸಾವಿರಾರು ಮಕ್ಕಳಿಗೆ ಸಾಮೂಹಿಕ ಅಕ್ಷರಭ್ಯಾಸ

Pinterest LinkedIn Tumblr

ಕುಂದಾಪುರ: ಪ್ರಸಿದ್ಧ ಶಕ್ತಿ ಕ್ಷೇತ್ರವಾದ ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನದಲ್ಲಿ ಸಾಮೂಹಿಕ ಅಕ್ಷರಭ್ಯಾಸ ಕಾರ್ಯಕ್ರಮ ವಿಜಯದಶಮಿ ದಿನ ಭರ್ಜರಿಯಾಗಿ ನಡೆಯಿತು. ನವರಾತ್ರಿ ಸಂಭ್ರಮದ ಪ್ರಯುಕ್ತ ಕರ್ನಾಟಕ, ಕೇರಳ ಮತ್ತು ಮಹಾರಾಷ್ಟ್ರ ಸೇರಿದಂತೆ ವಿವಿದೆಡೆಯಿಂದ ಆಗಮಿಸುವ ಸಾವಿರಾರು ಭಕ್ತರು ಮಕ್ಕಳಿಗೆ ವಿದ್ಯಾರಂಭ ಮಾಡಿಸಿ ಭಕ್ತಿಯನ್ನು ಸಮರ್ಪಿಸಿ, ನಂಬಿಕೆಯನ್ನು ಪುನರುಜ್ಜೀವನಗೊಳಿಸಿದರು.

Kolluru_Vidhyaramba_pooja

ವಿದ್ಯಾರಂಭ: ಕುಂದಾಪುರ ತಾಲೂಕಿನ ಕೊಲ್ಲೂರು ಶಿವ ಮತ್ತು ಶಕ್ತಿಯರು ಸಮ್ಮಿಳಿತಗೊಂಡ ಪುಣ್ಯ ಕ್ಷೇತ್ರ. ಕೊಲ್ಲೂರು ಮುಕಾಂಬಿಕಾ ದೇವಸ್ಥಾನ ವಿಜಯದಶಮಿಯಂದು ನಡೆಯುವ ವಿದ್ಯಾರಂಭಪೂಜೆಗೆ ಪ್ರಶಸ್ತ ಸ್ಥಳ. ವಿಜಯದಶಮಿಯ ದಿನದಂದು ಸಾವಿರಾರು ಮಂದಿ ಕೇರಳ ಮತ್ತು ಕರ್ನಾಟಕದ ಭಕ್ತರು ಮೂಕಾಂಬಿಕಾ ದೇವಸ್ಥಾನದಲ್ಲಿ ತಮ್ಮ ಮಕ್ಕಳಿಗೆ ಅಕ್ಷರಭ್ಯಾಸ ನಡೆಸುವುದು ಹಿಂದಿನಿಂದಲೂ ಬಂದ ಸಂಪ್ರದಾಯವಾಗಿದೆ. ಶಾರದಾ ದೇವಿಯ ಮೂರ್ತಿಯ ಎದುರಿನಲ್ಲಿ ಮಕ್ಕಳಿಗೆ ಮೊಟ್ಟಮೊದಲ ಅಕ್ಷರಭ್ಯಾಸ ಮಾಡಲಾಗುತ್ತದೆ. ಮಕ್ಕಳ ನಾಲಿಗೆಯ ಮೇಲೆ ಅರಿಶಿನಕೊಂಬಿನಲ್ಲಿ ಓಂಕಾರ ಬರೆಯಲಾಗುತ್ತೆ. ನಂತರ ಹೆತ್ತವರು ಮಕ್ಕಳ ಕೈ ಹಿಡಿದು ಅಕ್ಕಿಕಾಳಿನಲ್ಲಿ ಓಂಕಾರ ಹಾಗೂ ಗಣೇಶನಾಮ ಹಾಗೂ ತಮ್ಮ ಮಾತ್ರ ಭಾಷೆ, ಎ.ಬಿ,ಸಿ, ಸಂಖ್ಯೆಗಳು, ಅ,ಆ,ಇ ಮುಂತಾದವುಗಳನ್ನು ಬರೆಸುವುದರ ಬರೆಯುವ ಮೂಲಕ ಅಕ್ಷರಭ್ಯಾಸ ಮಾಡಿಸುತ್ತಾರೆ. ಬಳಿಕ ಮಕ್ಕಳ ನಾಲಗೆಯ ಮೇಲೆ ಬಂಗಾರದ ಉಂಗುರದ ಸ್ಪರ್ಶ ಮಾಡಲಾಗುತ್ತದೆ. ಪುರಾಣ ನಂಬಿಕೆಯ ಪ್ರಕಾರ ಹೀಗೆ ಮಾಡುವುದರಿಂದ ಮಕ್ಕಳ ನಾಲಗೆಯ ಮೇಲೆ ಸರ್‍ವತಿ ದೇವಿ ನೆಲೆಸಿ ಮಕ್ಕಳ ಶೈಕ್ಷಣಿಕ ಬದುಕು ಉತ್ತಮವಾಗಿರುತ್ತದೆಂಬ ನಂಬಿಕೆ ಇದೆ.

Kolluru_Vidhyaramba_pooja (1)

ಕೊಲ್ಲೂರು ಮುಕಾಂಬಿಕಾ ಕ್ಷೇತ್ರಕ್ಕೆ ಸಾವಿರಾರು ಸಂಖ್ಯೆಯಲ್ಲಿ ಬಂದು ಅಕ್ಷರಭ್ಯಾಸ ನಡೆಸುವವರು ಕೇರಳದ ಭಕ್ತರು. ಕೊಲ್ಲೂರು ಶ್ರೀ ಮೂಕಾಂಬಿಕೆಯ ಸನ್ನಿಧಿಯಲ್ಲಿ ಮಕ್ಕಳಿಗೆ ವಿದ್ಯಾರಂಭ ಮಾಡಿಸುವುದರಿಂದ ಮಕ್ಕಳಿಗೆ ಉಜ್ವಲ ಭವಿಷ್ಯ ಇದೆ ಅನ್ನೋದು ಕೇರಳಿಗರ ಭಕ್ತಿ ಮತ್ತು ನಂಬಿಕೆ. ಕೇರಳ ವಿದ್ಯೆಯ ವಿಷಯದಲ್ಲಿ ಉನ್ನತ ಸ್ಥಾನದಲ್ಲಿರೋದಕ್ಕೆ ಮೂಕಾಂಬಿಕೆಯ ಆಶೀರ್ವಾದವೇ ಕಾರಣ ಅನ್ನುವ ಮಾತೂ ಇದೆ. ವಿಜಯದಶಮಿ ಎಲ್ಲ ಆರಂಭಗಳಿಗೂ ಸೂಕ್ತವಾದ ದಿನ. ಹೀಗಾಗಿ ವಿಜಯದಶಮಿಯ ವಿದ್ಯಾರಂಭಕ್ಕೆ ವಿಶೇಷವಾದ ಮಹತ್ವ ಬಂದಿದೆ. ವರ್ಷಂಪ್ರತಿ ಈ ದಿನದಂದು ಬೆಳಗ್ಗೆ 3 ಗಂಟೆಯಿಂದಲೇ ಸಾವಿರಾರು ಭಕ್ತರು ವಿದ್ಯಾರಂಭಕ್ಕೆ ಕಾದು ಕುಳಿತಿರುತ್ತಾರೆ. ಈ ಪ್ರಕ್ರಿಯೆ ಮಧ್ಯಾಹ್ನ 1.30 ರ ವರೆಗೂ ನಡೆಯುತ್ತದೆ.
ಕೊಲ್ಲೂರಿನಲ್ಲಿ ನಡೆಯುವ ಈ ಅಕ್ಷರಭ್ಯಾಸ ಶ್ರಂಗೇರಿ ಶಾರದಾಂಬಾ ಕ್ಷೇತ್ರವನ್ನ ಹೊರತುಪಡಿಸಿ ಬೇರೆಲ್ಲಿಯೂ ನಡೆಯೋದಿಲ್ಲ ಅನ್ನೋದು ಇಲ್ಲಿನ ವಿಶೇಷತೆ.

ನವ ಅನ್ನ ಪ್ರಾಶನ: ಕೊಲ್ಲೂರು ಭಾಗದಲ್ಲಿ ವಿಜಯ ದಶಮಿಯಂದು ಹೊಸ್ತು ಹಬ್ಬವನ್ನು ಆಚರಿಸುವುದು ಪದ್ದತಿ.ಮದ್ಯಾಹ್ನದ ಸುಮಾರಿಗೆ ತಾಯಿ ಸನ್ನಿಧಿಯಲ್ಲಿ ನಡೆಯುವ ಕದಿರು ಪೂಜೆಯ ನಂತರ ಊರಿನವರಿಗೆ ಕದಿರು ವಿತರಣೆಯ ಶಾಸ್ತ್ರ ನಡೆಯುತ್ತದೆ. ದೇವಳದಲ್ಲಿ ಕದಿರು ನೀಡಿ ಹೊಸ್ತು ಆಚರಿಸುವ ದಿನದಂದೇ ಕೊಲ್ಲೂರಿನ ಎಲ್ಲಾ ಮನೆಗಳಲ್ಲಿ ಹೊಸ್ತು ಆಚರಿಸಲಾಗುತ್ತದೆ.

ಪ್ರತಿ ವರ್ಷ ಈ ವಿದ್ಯಾರಂಭ ಪ್ರಕ್ರಿಯೆ ಈ ಕ್ಷೇತ್ರದಲ್ಲಿ ನಡೆಯುತ್ತಿದ್ದು, ಈ ವರ್ಷ ೨,೦೦೦ಕ್ಕೂ ಅಧಿಕ ಮಕ್ಕಳು ಪಾಲ್ಘೋಳ್ಳುತ್ತಾರೆ, ತಾಯಿಯ ಸನ್ನಿಧಿಯಲ್ಲಿ ವಿಧ್ಯಾರಂಭ ಮಾಡಿಸುವುದರಿಂದ ವಿದ್ಯೆಯಲ್ಲಿ ಮಕ್ಕಳಿಗೆ ಉಜ್ವಲ ಭವಿಷ್ಯ ಸಿಗುತ್ತದೆ ಎನ್ನುವುದು ಕ್ಷೇತ್ರದಲ್ಲಿ ಅಕ್ಷರಾಭ್ಯಾಸ ಮಾಡಲು ಬರುವ ಜನರ ಧಾರ್ಮಿಕ ನಂಬಿಕೆ.
– ಕೃಷ್ಣಪ್ರಸಾದ ಅಡ್ಯಂತಾಯ (ಕೊಲ್ಲೂರು ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ)

Write A Comment