ಕರಾವಳಿ

ಕೋಟ ಪೊಲೀಸರ ಕ್ಷಿಪ್ರ ಕಾರ್ಯಾಚರಣೆ: ಚಿನ್ನದ ಸರ ಕದ್ದ ಮೂವರು ಕಳ್ಳರು ಜೈಲಿಗೆ…!

Pinterest LinkedIn Tumblr

ಕುಂದಾಪುರ: ಸೆ. 12ರಂದು ತೆಕ್ಕಟ್ಟೆ ಕೊಮೆ ರಸ್ತೆಯಲ್ಲಿ ವ್ಯಕ್ತಿಯೋರ್ವರನ್ನು ಅಡ್ಡಗಟ್ಟಿ, ಚಿನ್ನದ ಸರ ಎಳೆದುಕೊಂಡು ಪರಾರಿಯಾಗಿದ್ದ ಮೂವರು ಆರೋಪಿ ಯುವಕರನ್ನು ಘಟನೆ ನಡೆದು 6 ದಿನಗಳ ಅಂತರದಲ್ಲಿ ಪೊಲೀಸರು ಬಂಧಿಸಿದ್ದಾರೆ.

ಮಣೂರು ಪಡುಕರೆ ನಿವಾಸಿ ಪ್ರಶಾಂತ(25), ಸುನೀಲ್(20) ಪ್ರಮೋದ ಮೊಗವೀರ(19) ಅವರನ್ನು ಬಂಧಿಸಿ, ಸುಮಾರು 20 ಸಾವಿರ ಮೌಲ್ಯದ ಚಿನ್ನಾಭರಣ, 10 ಸಾವಿರ ನಗದು ಮತ್ತು ಕಳ್ಳತನಕ್ಕೆ ಬಳಸಿದ 60 ಸಾವಿರ ಮೌಲ್ಯದ ಅಪಾಚಿ ಬೈಕ್ ಸೇರಿ ಒಟ್ಟು 90 ಸಾವಿರ ಮೌಲ್ಯದ ಸ್ವತ್ತನ್ನು ವಶ ಪಡಿಸಿಕೊಂಡಿದ್ದಾರೆ.

Kota Crime News-1

ತೆಕ್ಕಟ್ಟೆ ಕೊಮೆ ರಸ್ತೆಯಲ್ಲಿ ರಾತ್ರಿ 9.45ರ ಸುಮಾರಿಗೆ ಸ್ಕೂಟರ್‌ನಲ್ಲಿ ತೆರಳುತ್ತಿದ್ದ ಆನಂದ್ ಪುತ್ರನ್ ಅವರನ್ನು ಮೂರು ಮಂದಿಯ ತಂಡವೊಂದು ರಸ್ತೆಗೆ ಅಡ್ಡ ಬಂದು ನಿಲ್ಲುವಂತೆ ಸೂಚಿಸಿದ್ದರು. ಸ್ಕೂಟರ್ ನಿಧಾನವಾಗಿಸಿದ ವೇಳೆ ಕಳ್ಳರು ಸ್ಕೂಟರ್‌ನ್ನು ತಳ್ಳಿ, ಕೆಳಗೆ ಬಿದ್ದ ಆನಂದ್ ಪುತ್ರನ್ ಅವರ ಕುತ್ತಿಗೆಯಲ್ಲಿದ್ದ ಒಂದೂವರೆ ಪವನ್ ತೂಕದ ಸುಮಾರು 30 ಸಾವಿರ ಮೌಲ್ಯದ ಚಿನ್ನದ ಸರ ಎಗರಿಸಿ ಪರಾರಿಯಾಗಿದ್ದರು. ಈ ಕುರಿತು ಆನಂದ್ ಪುತ್ರನ್ ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು.

ಆಧುನಿಕ ತಂತ್ರಜ್ಞಾನ ಬಳಕೆ: ಪ್ರಕರಣದ ಜಾಡು ಹಿಡಿದು ಹೊರಟ ಉಡುಪಿ ಎಸ್‌ಪಿ ರಾಜೇಂದ್ರ ಪ್ರಸಾದ್, ಉಡುಪಿ ಜಿಲ್ಲಾ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಸಂತೋಷ್ ಕುಮಾರ್ ಇವರ ಮಾರ್ಗದರ್ಶನದಲ್ಲಿ ಉಡುಪಿ ಉಪವಿಭಾಗದ ಪೊಲೀಸ್ ಉಪಾಧೀಕ್ಷಕ ಡಾ. ಪ್ರಭುದೇವ ಮಾನೆ ಅವರ ಉಸ್ತುವಾರಿಯಲ್ಲಿ ಬ್ರಹ್ಮಾವರ ಪೊಲೀಸ್ ವೃತ್ತ ನಿರೀಕ್ಷಕ ಅರುಣ ಬಿ. ನಾಯಕ್ ಅವರ ನೇತೃತ್ವದಲ್ಲಿ ತನಿಖೆ ಮುಂದುವರಿಸಿ ಕೋಟ ಠಾಣಾಧಿಕಾರಿ ಕೆ.ಆರ್.ನಾಯಕ್ ಹಾಗೂ ಬ್ರಹ್ಮಾವರ ವತ್ತ ನಿರೀಕ್ಷಕರ ಅಪರಾಧ ಪತ್ತೆದಳದ ಸಿಬ್ಬಂದಿಗಳಾದ ಸುಧೇಶ್ ಶೆಟ್ಟಿ, ಜೀವನ್, ರಮೇಶ್, ಪ್ರಸಾದ್ ಶೆಟ್ಟಿ ಮತ್ತು ಕೋಟ ಪೊಲೀಸ್ ಠಾಣಾ ಸಿಬ್ಬಂದಿಗಳಾದ ಪ್ರದೀಪ್ ನಾಯಕ್, ರಾಘವೇಂದ್ರ, ಗೋಪಾಲ ಪೂಜಾರಿ, ಬಸವರಾಜ್ ಹಾಗೂ ಬ್ರಹ್ಮಾವರ ವತ್ತ ನಿರೀಕ್ಷಕರ ಕಛೇರಿಯ ನಾಗರಾಜ, ರಾಘವೇಂದ್ರ ಕೆ., ಅರುಣ್ ಮತ್ತು ಜಯಂತ್ ಶೆಟ್ಟಿ ಇವರುಗಳನ್ನೊಳಗೊಂಡ ತಂಡವು ಕತ್ಯದಲ್ಲಿ ಭಾಗಿಯಾದವರ ಬಗ್ಗೆ ಆಧುನಿಕ ತಂತ್ರಜ್ಞಾನ ಸಹಾಯದಿಂದ ಮಾಹಿತಿ ಸಂಗ್ರಹಿಸಿ ಬಂಧಿಸಲಾಗಿದೆ.

ಈ ಕ್ಷಿಪ್ರ ಕಾರ್ಯಾಚರಣೆ ಬಗ್ಗೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

Write A Comment