ಕಾಸರಗೋಡು, ಸೆ.18: ಮಹಿಳೆಯನ್ನು ಪುತ್ರ, ಸೊಸೆ ಮತ್ತು ಮೊಮ್ಮಗ ಸೇರಿ ಕೊಲೆಗೈದ ಘಟನೆ ಬೇಡದ್ಕದಲ್ಲಿ ನಡೆದಿದ್ದು, ಕೃತ್ಯಕ್ಕೆ ಸಂಬಂಧಪಟ್ಟಂತೆ ಮೂವರನ್ನು ಕಾಸರಗೋಡು ಡಿವೈಎಸ್ ಪಿ.ಟಿ.ಪಿ. ರಂಜಿತ್ ನೇತೃತ್ವದ ಪೊಲೀಸ್ ತಂಡ ಬಂಧಿಸಿದೆ.
ಬಂಧಿತರನ್ನು ಪೆರ್ಲಡ್ಕ ಚೆಪ್ಪಿನಡ್ಕದ ಕಮಲಾಕ್ಷ (47), ಆತನ ಪತ್ನಿ ಅಂಬಿಕಾ (40) ಮತ್ತು ಮೊಮ್ಮಗ ಶರತ್ (20) ಎಂದು ಗುರುತಿಸಲಾಗಿದೆ. ತಾಯಿ ಅಮ್ಮಾಳು ಅಮ್ಮಾ (65) ಅವರ ಕೊಲೆಗೆ ಸಂಬಂಧಪಟ್ಟಂತೆ ಆರೋಪಿಗಳನ್ನು ಬಂಧಿಸಲಾಗಿದೆ. ಕೋರೆ ಕಾರ್ಮಿಕೆಯಾಗಿದ್ದ ಅಮ್ಮಾಳು ಅವರ ಕೊಲೆ ಬುಧವಾರ ನಡೆದಿತ್ತು. ಆದರೆ ಇದು ಕೊಲೆ ಎಂದು ತಡವಾಗಿ ಬೆಳಕಿಗೆ ಬಂದಿದ್ದು, ಬುಧವಾರದಂದು ಮನೆಯಲ್ಲಿ ನೇಣು ಬಿಗಿದು ಮೃತಪಟ್ಟ ಸ್ಥಿತಿಯಲ್ಲಿ ಮೃತದೇಹ ಕಂಡುಬಂದಿತ್ತು.
ಸುದ್ದಿ ತಿಳಿದು ಸ್ಥಳಕ್ಕೆ ಆಗಮಿಸಿದ ಸಂಬಂಧಿಕರು ಮತ್ತು ಸ್ಥಳೀಯರು ಸಂಶಯ ವ್ಯಕ್ತಪಡಿಸಿದ್ದರಿಂದ ಪರಿಯಾರಂ ವೈದ್ಯಕೀಯ ಕಾಲೇಜ್ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಲಾಗಿತ್ತು. ಇದರಿಂದ ಕೊಲೆ ಎಂದು ಬಯಲಾಗಿದ್ದು, ಕತ್ತು ಹಿಸುಕಿ ಕೊಲೆಗೈದಿರುವುದು ಮರಣೋತ್ತರ ಪರೀಕ್ಷಾ ವರದಿಯಿಂದ ಬೆಳಕಿಗೆ ಬಂದಿದೆ. ಈ ಹಿನ್ನೆಲೆಯಲ್ಲಿ ಪುತ್ರ, ಸೊಸೆ ಮತ್ತು ಮೊಮ್ಮಗನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಸತ್ಯ ಬೆಳಕಿಗೆ ಬಂದಿದ್ದು, ಆಸ್ತಿ ವಿವಾದ ಕೃತ್ಯಕ್ಕೆ ಕಾರಣ ಎಂದು ಪೊಲೀಸರು ತಿಳಿಸಿದ್ದಾರೆ.
ಮಂಗಳವಾರ ರಾತ್ರಿ ಮಲಗಿದ್ದ ಅಮ್ಮಾಳುರನ್ನು ಅಂಬಿಕಾ ಕತ್ತು ಹಿಸುಕಿ ಕೊಲೆ ಮಾಡಿದ್ದು, ಬಳಿಕ ಕಮಲಾಕ್ಷ ಮತ್ತು ಶರತ್ ಸೇರಿ ಮೃತದೇಹವನ್ನು ಮನೆಯಲ್ಲಿ ನೆತಾಡಿಸಿದ್ದಾಗಿ ಬಂಧಿತರು ತಪ್ಪೊಪ್ಪಿಕೊಂಡಿದ್ದಾರೆ. ಅಮ್ಮಾಳುರಿಗೆ ಕಮಲಾಕ್ಷ ಒಬ್ಬನೇ ಪುತ್ರನಾಗಿದ್ದು, ಅಮ್ಮಳುರ ಜಾಗವನ್ನು ಇವರು ಮಾರಾಟ ಮಾಡಿ ಇನ್ನೊಂದು ಸ್ಥಳವನ್ನ ಖರೀದಿಸಿದ್ದರು. ಮನೆಯನ್ನು ಸೊಸೆ ಮತ್ತು ಸ್ಥಳವನ್ನು ಕಮಲಾಕ್ಷನ ಹೆಸರಲ್ಲಿ ಮಾಡಲಾಗಿತ್ತು. ಸೊಸೆ ಹೆಸರಲ್ಲಿರುವ ಮನೆಯನ್ನು ತನ್ನ ಹೆಸರಲ್ಲಿ ಮಾಡುವಂತೆ ಅಮ್ಮಾಳು ಒತ್ತಾಯಿ ಸುತ್ತಿದ್ದು, ಈ ಕಾರಣದಿಂದ ದಿನಂಪ್ರತಿ ಜಗಳ ನಡೆಯುತ್ತಿತ್ತು ಎನ್ನಲಾಗಿದೆ.
ಇದು ತಾರಕ್ಕಕ್ಕೇರಿ ಕೊನೆಗೆ ಕೊಲೆ ನಡೆಸಲು ಉದ್ದೇಶಿಸಿದ್ದರೆನ್ನಲಾಗಿದೆ. ಬುಧವಾರ ಮಧ್ಯಾಹ್ನ ಸಾವಿನ ಸುದ್ದಿ ತಿಳಿದು ಬಂದಿದ್ದು, ಮನೆಯವರ ಚಲನವಲನ ಸ್ಥಳೀಯರು ಮತ್ತು ಸಂಬಂಧಿಕರಿಗೆ ಸಂಶಯ ಬರಲು ಕಾರಣವಾಗಿತ್ತು. ಶರತ್ ಖಾಸಗಿ ಕಾಲೇಜಿನ ಬಿಎಸ್ಸಿ ಕಂಪ್ಯೂಟರ್ ವಿದ್ಯಾರ್ಥಿ ಎಂದು ತಿಳಿದುಬಂದಿದೆ.