ಅಂತರಾಷ್ಟ್ರೀಯ

ಪಾಕಿಸ್ಥಾನ: 26/11 ದಾಳಿಕೋರ ಸಯೀದ್‌ ಅನುಚರರ ಬಿಡುಗಡೆ

Pinterest LinkedIn Tumblr


ಲಾಹೋರ್‌: 2008ರಲ್ಲಿ ಮುಂಬಯಿ ಮೇಲೆ ದಾಳಿ ನಡೆಸಿದ ಪ್ರಧಾನ ಸಂಚುಕೋರ ಹಫೀಜ್‌ ಸಯೀದ್‌ನ ನಾಲ್ವರು ಅನುಚರರನ್ನು ಬಿಡುಗಡೆ ಮಾಡಲಾಗಿದೆ. ಪಾಕಿಸ್ಥಾನದ ಪಂಜಾಬ್‌ ಪ್ರಾಂತ್ಯದ ಜೈಲಿನಲ್ಲಿ ಅವರನ್ನು ಮುನ್ನೆಚ್ಚರಿಕಾ ಕ್ರಮವಾಗಿ ಬಂಧಿಸಲಾಗಿತ್ತು. ಪಂಜಾಬ್‌ ಸರಕಾರದ ನ್ಯಾಯಾಂಗ ಪರಿಶೀಲನಾ ಮಂಡಳಿ ಬಂಧಿತರ ಅವಧಿಯ ವಿಸ್ತರಣೆಗೆ ಯಾವುದೇ ರೀತಿಯಲ್ಲಿ ಒಪ್ಪದೇ ಇದ್ದುದರಿಂದ ಅವರನ್ನು ಬಿಡುಗಡೆ ಮಾಡಲಾಗಿದೆ ಎಂದು ಹೇಳಲಾಗಿದೆ.

ಈ ವರ್ಷದ ಜನವರಿ 31ರಂದು ಜಮಾತ್‌ ಉದ್‌ ದಾವಾ ಉಗ್ರ ಸಂಘಟನೆಯ ನಾಯಕ ಸಯೀದ್‌ ಮತ್ತು ಇತರ ನಾಲ್ವರನ್ನು ಮುನೆಚ್ಚರಿಕಾ ಕ್ರಮವಾಗಿ ಬಂಧಿಸಲಾಗಿತ್ತು. ಮೊದಲ ಹಂತದಲ್ಲಿ ಅವರನ್ನು ಉಗ್ರ ನಿಗ್ರಹ ಕಾಯ್ದೆಯಡಿ 90 ದಿನಗಳ ಕಾಲ ಬಂಧಿಸಲಾಗಿತ್ತು. ಇದಾದ ಬಳಿಕ ಬಂಧನ ಅವಧಿಯನ್ನು ಮತ್ತಷ್ಟು ವಿಸ್ತರಿಸಲಾಗಿತ್ತು. ಈಗಾಗಲೇ ಎರಡು ಬಾರಿ ಬಂಧನ ಅವಧಿ ವಿಸ್ತರಣೆ ಮಾಡಿದ್ದರಿಂದ ನ್ಯಾಯಾಂಗ ಪರಿಶೀಲನಾ ಮಂಡಳಿಗೆ ಮತ್ತೂಮ್ಮೆ ವಿಸ್ತರಣೆಯ ಅಗತ್ಯವನ್ನು ಮನವರಿಕೆ ಮಾಡಿಕೊಡುವಲ್ಲಿ ವಿಫ‌ಲವಾಯಿತು. ಹೀಗಾಗಿ ಅವರನ್ನು ಬಿಡುಗಡೆ ಮಾಡಲಾಗಿದೆ.

ಕೊಲ್ಲಲು ಸಂಚು: ಮತ್ತೂಂದು ಮಹತ್ವದ ಬೆಳವಣಿಗೆಯಲ್ಲಿ ಉಗ್ರ ಹಫೀಜ್‌ ಸಯೀದ್‌ನನ್ನು ವಿದೇಶಿ ಸಂಸ್ಥೆಯೊಂದು ಕೊಲ್ಲಲು ಸಂಚು ಹೂಡಿದೆ ಎಂದು ಪಾಕಿಸ್ಥಾನದ ಗುಪ್ತಚರ ಸಂಸ್ಥೆಗಳು ಆರೋಪ ಮಾಡಿವೆ. ಅದಕ್ಕಾಗಿ 80 ಮಿಲಿಯ ರೂ.ಗಳನ್ನು ಪಡೆದುಕೊಳ್ಳಲಾಗಿದೆ ಎಂದು ಅವು ದೂರಿವೆ. ಹೀಗಾಗಿ, ಆತನಿಗೆ ನೀಡಲಾಗಿರುವ ಭದ್ರತೆಯನ್ನು ಮತ್ತಷ್ಟು ಬಿಗಿಗೊಳಿಸಲಾಗಿದೆ ಎಂದು ಪಾಕಿಸ್ಥಾನದ ಉಗ್ರ ನಿಗ್ರಹ ಪ್ರಾಧಿಕಾರಕ್ಕೆ ಬರೆಯಲಾಗಿರುವ ಪತ್ರದಲ್ಲಿ ವಿವರಿಸಲಾಗಿದೆ.

-ಉದಯವಾಣಿ

Comments are closed.