ರಾಷ್ಟ್ರೀಯ

ಕೇರಳ; ಭಾರಿ ಪ್ರಮಾಣದ ಚಿನ್ನ ಕಳ್ಳಸಾಗಣೆ ಪ್ರಕರಣದ ಕಿಂಗ್‌ಪಿನ್‌ ಸ್ವಪ್ನಾ ಸುರೇಶ್‌ಗೆ ಐಸಿಸ್‌ ಉಗ್ರರ ಜತೆ ನಂಟು ! ತನಿಖೆಗಿಳಿದ ಎನ್‌ಐಎ

Pinterest LinkedIn Tumblr

ಕೊಚ್ಚಿ: ರಾಜತಾಂತ್ರಿಕ ರಕ್ಷಣೆ ಹೆಸರಿನಲ್ಲಿ ಭಾರಿ ಪ್ರಮಾಣದ ಚಿನ್ನವನ್ನು ಕಳ್ಳಸಾಗಣೆ ಮಾಡಿರುವುದು ಭಯೋತ್ಪಾದನಾ ಕೃತ್ಯಕ್ಕೆ ಸಮ ಎಂದು ಪ್ರಕರಣದ ತನಿಖೆ ನಡೆಸುತ್ತಿರುವ ರಾಷ್ಟ್ರೀಯ ತನಿಖಾ ದಳ (ಎನ್‌ಐಎ) ಕೇರಳ ಹೈಕೋರ್ಟ್‌ಗೆ ತಿಳಿಸಿದೆ. ಅಲ್ಲದೇ, ಪ್ರಕರಣದ ಕಿಂಗ್‌ಪಿನ್‌ ಸ್ವಪ್ನಾ ಸುರೇಶ್‌ಗೆ ಐಸಿಸ್‌ ಉಗ್ರ ಸಂಘಟನೆ ಜತೆ ನಂಟು ಇದೆ ಎಂದೂ ತಿಳಿಸಿದೆ.

ಸ್ವಪ್ನಾ ಸುರೇಶ್‌ ಜಾಮೀನು ಅರ್ಜಿ ವಿಚಾರಣೆ ವೇಳೆ ವಾದ ಮಂಡಿಸಿದ ಎನ್‌ಐಎ ಪರ ವಕೀಲರು, “ಆರೋಪಿ ವಿರುದ್ಧ ಕಾನೂನುಬಾಹಿರ ಚಟುವಟಿಕೆ (ತಡೆ) ಕಾಯಿದೆ ಅನ್ವಯ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಆರೋಪಿಗೆ ಐಸಿಸ್‌ ಜತೆ ನಂಟು ಇರುವುದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ಹೀಗಾಗಿ ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುವ ಅಗತ್ಯವಿದೆ. ಆದ್ದರಿಂದ ಜಾಮೀನು ನೀಡಬಾರದು,” ಎಂದು ವಾದಿಸಿದರು. ಪ್ರಥಮ ವರ್ತಮಾನ ವರದಿ (ಎಫ್‌ಐಆರ್‌) ಪ್ರತಿ ನೀಡುವಂತೆ ಸ್ವಪ್ನಾ ಪರ ವಕೀಲರು ಮನವಿ ಮಾಡಿದಾಗ, “ಸೂಕ್ಷ್ಮ ಪ್ರಕರಣವಾಗಿರುವುದರಿಂದ ಈ ಹಂತದಲ್ಲಿಎಫ್‌ಐಆರ್‌ ನೀಡಲಾಗದು,” ಎಂದು ಎನ್‌ಐಎ ವಕೀಲರು ವಾದಿಸಿದರು.

ತಿರುವನಂತಪುರಂ ವಿಮಾನ ನಿಲ್ದಾಣದಲ್ಲಿ ಸುಮಾರು 15 ಕೋಟಿ ರೂ. ಮೌಲ್ಯದ 30 ಕೆ.ಜಿ ಚಿನ್ನವನ್ನು ಕಸ್ಟಮ್ಸ್‌ ಅಧಿಕಾರಿಗಳು ಜುಲೈ 5ರಂದು ವಶಪಡಿಸಿಕೊಂಡಿದ್ದಾರೆ. ಆ ಬಳಿಕ ತಲೆ ಮರೆಸಿಕೊಂಡಿರುವ ಸ್ವಪ್ನಾ ಸುರೇಶ್‌, ಆನ್‌ಲೈನ್‌ ಮೂಲಕ ಜಾಮೀನು ಅರ್ಜಿ ಸಲ್ಲಿಸಿದ್ದಾರೆ. ಅರ್ಜಿದಾರರಿಗೂ ವಾದ ಮಂಡಿಸಲು ಅವಕಾಶ ನೀಡಿ ಅರ್ಜಿ ವಿಚಾರಣೆಯನ್ನು ಹೈಕೋರ್ಟ್‌ ಜುಲೈ 16ಕ್ಕೆ ಮುಂದೂಡಿದೆ.

ನಾಲ್ವರ ವಿರುದ್ಧ ಎಫ್‌ಐಆರ್‌
ಕೇರಳ ಸರಕಾರದ ಮಾಹಿತಿ ತಂತ್ರಜ್ಞಾನ ಇಲಾಖೆಯಲ್ಲಿ ಗುತ್ತಿಗೆ ಆಧಾರದಲ್ಲಿಎಂಜಿನಿಯರ್‌ ಆಗಿ ಕಾರ್ಯನಿರ್ವಹಿಸುತ್ತಿದ್ದ ಸ್ವಪ್ನಾ ಸುರೇಶ್‌, ಯುಎಇ ರಾಯಭಾರ ಕಚೇರಿ ಮಾಜಿ ಸಾರ್ವಜನಿಕ ಸಂಪರ್ಕಾಧಿಕಾರಿ ಸರಿತ್‌ ಕುಮಾರ್‌, ಸಂದೀಪ್‌ ನಾಯರ್‌ ಮತ್ತು ಫಜಿಲ್‌ ಫರೀದ್‌ ವಿರುದ್ಧ ಎನ್‌ಐಎ ಚಿನ್ನ ಕಳ್ಳಸಾಗಣೆಗೆ ಸಂಬಂಧಿಸಿ ಎಫ್‌ಐಆರ್‌ ದಾಖಲಿಸಿದೆ. ಈ ಪೈಕಿ ಸರಿತ್ ‌ಕುಮಾರ್‌ನನ್ನು ಬಂಧಿಸಲಾಗಿದೆ. ವಿಚಾರಣೆ ವೇಳೆ ಆತ ಮುಖ್ಯಮಂತ್ರಿಯವರ ಪ್ರಧಾನ ಕಾರ್ಯದರ್ಶಿಯೂ ಆಗಿದ್ದ ಮಾಹಿತಿ ತಂತ್ರಜ್ಞಾನ ಇಲಾಖೆ ಪ್ರಧಾನ ಕಾರ್ಯದರ್ಶಿ ಎಂ.ಶಿವಶಂಕರ್‌ ಸೇರಿ ಹಲವರ ಹೆಸರು ಹೇಳಿದ್ದಾನೆ ಎಂದು ತಿಳಿದುಬಂದಿದೆ. ಇನ್ನು ಸಂದೀಪ್‌ ನಾಯರ್‌ ಪತ್ನಿಯು ಸ್ವಪ್ನಾ ಮತ್ತು ಸರಿತ್‌ ಅವರಿಂದ ಚಿನ್ನ ಪಡೆದು ಸಂಬಂಧಿಸಿದವರಿಗೆ ತಲುಪಿಸುವಂತೆ ಪತಿ ಮೇಲೆ ಒತ್ತಡ ಹೇರಿದ್ದಳು ಎನ್ನಲಾಗಿದೆ.

ಸಿಎಂ ವಿರುದ್ಧ ಪ್ರತಿಭಟನೆ
ಪ್ರಕರಣದಲ್ಲಿ ಮುಖ್ಯಮಂತ್ರಿ ಕಾರ್ಯಾಲಯದ ಅಧಿಕಾರಿಗಳ ಹೆಸರೂ ಕೇಳಿಬಂದಿರುವ ಹಿನ್ನೆಲೆಯಲ್ಲಿ ಸಿಎಂ ಪಿಣರಾಯಿ ವಿಜಯನ್‌ ರಾಜೀನಾಮೆಗೆ ಆಗ್ರಹಿಸಿ ಕೇರಳ ಸ್ಟುಡೆಂಟ್ಸ್‌ ಯೂನಿಯನ್‌, ಮುಸ್ಲಿಂ ಯೂತ್‌ ಲೀಗ್‌, ಬಿಜೆಪಿ ಯುವಮೋರ್ಚಾ ಕಾರ್ಯಕರ್ತರು ರಾಜ್ಯದ ವಿವಿಧೆಡೆ ಶನಿವಾರ ಪ್ರತಿಭಟನೆ ನಡೆಸಿದ್ದಾರೆ.

Comments are closed.