ಕರಾವಳಿ

ಮಂಗಳೂರು :ದುಷ್ಕರ್ಮಿಗಳ ತಂಡದಿಂದ ಬಿಜೆಪಿ ಬೆಂಬಲಿತ ಗ್ರಾಮ ಪಂಚಾಯತ್ ಸದಸ್ಯನ ಹತ್ಯೆ

Pinterest LinkedIn Tumblr

ಮಂಗಳೂರು / ಬಂಟ್ವಾಳ, ಜುಲೈ.11: ಅಡ್ಯಾರ್ ಗ್ರಾಮ ಪಂಚಾಯತ್ ನ ಬಿಜೆಪಿ ಬೆಂಬಲಿತ ಸದಸ್ಯರೊಬ್ಬರ ಮೇಲೆ ದುಷ್ಕರ್ಮಿಗಳ ತಂಡವೊಂದು ದಾಳಿ ನಡೆಸಿ ಹತ್ಯೆಗೈದ ಘಟನೆ ಶುಕ್ರವಾರ ಸಂಜೆ ಅಡ್ಯಾರ್ ಸಮೀಪ ನಡೆದಿದೆ.

ದುಷ್ಕರ್ಮಿಗಳ ದಾಳಿಯಿಂದ ಮೃತಪಟ್ಟವರನ್ನು ಅಡ್ಯಾರ್ ಗ್ರಾಮ ಪಂಚಾಯತ್ ಸದಸ್ಯ ಅಡ್ಯಾರ್ ಪದವು ನಿವಾಸಿ ಯಾಕೂಬ್ ಎಂದು ಗುರುತಿಸಲಾಗಿದೆ.

ಶುಕ್ರವಾರ ಸಂಜೆ ಅಡ್ಯಾರ್‌ ಸಮೀಪದಲ್ಲಿ ತಂಡವೊಂದು ಬಿಜೆಪಿ ಬೆಂಬಲಿತ ಅಡ್ಯಾರ್ ಗ್ರಾಮ ಪಂಚಾಯತ್ ಸದಸ್ಯರಾಗಿರುವ ಯಾಕೂಬ್ ಅವರ ಮೇಲೆ ದಾಳಿ ನಡೆಸಿದ್ದು ಗಂಭೀರವಾಗಿ ಗಾಯಗೊಂಡಿದ್ದ ಅವರನ್ನು ನಗರದ ಫಳ್ನೀರ್‌ ಬಳಿಯ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ ಯಾಕೂಬ್‌ ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ.

ರಾತ್ರಿ 9 ಗಂಟೆಯ ಸುಮಾರಿಗೆ ಅಡ್ಯಾರ್ ಸಮೀಪ ತಂಡವೊಂದು ಯಾಕೂಬ್ ಮೇಲೆ ದಾಳಿ ನಡೆಸಿದೆಯೆನ್ನಲಾಗಿದೆ. ತಂಡದಲ್ಲಿದ್ದವರಲ್ಲಿ ಒಬ್ಬ ವ್ಯಕ್ತಿ ಯಾಕೂಬ್ ಅವರಿಗೆ ಪರಿಚಯಸ್ಥನಾಗಿದ್ದು ಕೆಲವು ವರ್ಷಗಳ ಹಿಂದೆ ಆತ ಅಡ್ಯಾರ್ ಪದವಿನಲ್ಲಿ ವಾಸವಿದ್ದು ಪ್ರಸಕ್ತ ಮಂಗಳೂರಿನಲ್ಲಿ ವಾಸವಿದ್ದಾನೆ ಎನ್ನಲಾಗಿದೆ.

ಯಾಕೂಬ್ ಅವರಿಗೆ ತಂಡ ದಾಳಿ ನಡೆಸಿದ ಬಗ್ಗೆ ನಿಖರ ಕಾರಣ ತಿಳಿದು ಬಂದಿಲ್ಲ. ಕೊಲೆಗೆ ವೈಯಕ್ತಿಕ ಹಾಗೂ ರಾಜಕೀಯ ಕಾರಣ ಎಂದು ಹೇಳಲಾಗುತ್ತಿದೆ. ತನ್ನ ಮೇಲೆ ದಾಳಿ ನಡೆದ ಬಳಿಕ ಮನೆಗೆ ಬಂದ ಯಾಕೂಬ್ ಅವರು ಪರಿಚಯಸ್ಥನ ಆಟೋ ರಿಕ್ಷಾದಲ್ಲಿ ಪುತ್ರನೊಂದಿಗೆ ಮಂಗಳೂರು ಖಾಸಗಿ ಆಸ್ಪತ್ರೆಗೆ ತೆರಳಿದ್ದರು. ಅಲ್ಲಿ ಅವರು ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.

ಈ ಬಗ್ಗೆ ಮಂಗಳೂರು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಠಾಣೆಗೆ ನೀಡಿರುವ ದೂರಿನಂತೆ ಪೊಲೀಸರು ಕೊಲೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

Comments are closed.