ತಿರುವನಂತಪುರಂ: ಕೊರೋನಾದಿಂದ ಕೆಲಸ ಕಳೆದುಕೊಂಡು ತೀವ್ರ ಸಂಕಷ್ಟದಲ್ಲಿದ್ದ ಬ್ರಿಟನ್ ನ ನಾಟಿಂಗ್ಹ್ಯಾಮ್ ನಲ್ಲಿ ನೆಲೆಸಿರುವ ಕೇರಳ ಮೂಲದ ಶಿಬು ಪಾಲ್ ಮತ್ತು ಲಿನೆಟ್ ಜೋಸೆಫ್ ದಂಪತಿ ರಾತ್ರೋರಾತ್ರಿ ಕೋಟ್ಯಾಧಿಶರಾಗಿದ್ದು, ಬರೋಬ್ಬರಿ 1.84 ಕೋಟಿ ರೂ. ಬೆಲೆಯ ಐಷಾರಾಮಿ ಲಾಂಬೋರ್ಗಿನಿ ಕಾರು ಮತ್ತು 18. 94 ಲಕ್ಷ ರೂಪಾಯಿ ನಗದು ಗೆದ್ದಿದ್ದಾರೆ.
ಕನಸಿನ ಕಾರು ಮತ್ತು ಜೀವನಶೈಲಿ ಸ್ಪರ್ಧೆಯ ಕಂಪನಿಯಾದ ‘ಬೆಸ್ಟ್ ಆಫ್ ದಿ ಬೆಸ್ಟ್’ (ಬಿಒಟಿಬಿ) ಆಯೋಜಿಸಿದ ಜೀವನಶೈಲಿ ಸ್ಪರ್ಧೆಯಲ್ಲಿ ಶಿಬು ಅವರು ಲ್ಯಾಂಬೋರ್ಗಿನಿ ಕಾರು ಮತ್ತು ನಗದು ಬಹುಮಾನ ಗೆದ್ದಿದ್ದಾರೆ.
ಸ್ಪರ್ಧೆ ಆಯೋಜಿಸಿದ್ದ ಪ್ರತಿನಿಧಿಗಳು ಶಿಬು ಮನೆಗೆ ಲ್ಯಾಂಬೋರ್ಗಿನಿ ಕಾರು ತಲುಪಿಸಿದ್ದು, ಕೊರೋನಾ ವೈರಸ್ ಸಾಂಕ್ರಾಮಿಕದ ಮಧ್ಯೆ ಕೆಲಸ ಕಳೆದುಕೊಂಡಿದ್ದ ಶಿಬು, ಕಾರಿನ ಬಾಗಿಲು ತೆರೆದಾಗ ಅವನ ಕಣ್ಣುಗಳನ್ನು ನಂಬಲಾಗಲಿಲ್ಲ. ಕಾರಿನಲ್ಲಿ ಬಹುಮಾನದ ಹಣವಾಗಿ 18.94 ಲಕ್ಷ ರೂ. ನಗದು ಇತ್ತು.
ಕೊಟ್ಟಾಯಂ ಜಿಲ್ಲೆಯ ಪಿರಾವೋಮ್ ಬಳಿಯ ವೆಲ್ಲೂರು ಮೂಲದ 31 ವರ್ಷದ ಶಿಬು ಅವರು ಕೊಚ್ಚಿಯ ಪ್ರಮುಖ ಸ್ಟುಡಿಯೋವೊಂದರಲ್ಲಿ ಸೌಂಡ್ ಎಂಜಿನಿಯರ್ ಆಗಿ ಕೆಲಸ ಮಾಡಿ, ನಂತರ ಒಂದು ವರ್ಷದ ಹಿಂದೆ ಬ್ರಿಟನ್ ಗೆ ತೆರಳಿದ್ದರು. ಆರಂಭದಲ್ಲಿ, ದಂಪತಿಗಳು ಕೇಂಬ್ರಿಡ್ಜ್ ನಲ್ಲಿ ವಾಸಿಸುತ್ತಿದ್ದರು. ಆದರೆ ಅಲ್ಲಿನ ದುಬಾರಿ ಜೀವನ ವೆಚ್ಚದ ಕಾರಣ ನಾಟಿಂಗ್ಹ್ಯಾಮ್ಗೆ ಹೋಗಿ ನೆಲಸಿದ್ದರು. ಅವರ ಪತ್ನಿ ಲಿನೆಟ್ ಪ್ರಸ್ತುತ ನಾಟಿಂಗ್ಹ್ಯಾಮ್ ಸಿಟಿ ಆಸ್ಪತ್ರೆಯಲ್ಲಿ ಸ್ಟಾಫ್ ನರ್ಸ್ ಆಗಿ ಕೆಲಸ ಮಾಡುತ್ತಿದ್ದಾರೆ.
ಶಿಬು ಉದ್ಯೋಗಕ್ಕಾಗಿ ಹಲವು ಕಂಪನಿಗಳ ಸಂದರ್ಶನಗಳಿಗೆ ಹಾಜರಾಗಿ ಕೆಲಸದ ಕರೆಗಾಗಿ ಕಾಯುತ್ತಿದ್ದರು. ಈ ಮಧ್ಯೆ ಬಿಒಟಿಬಿ ಮೂರು ಟಿಕೆಟ್‌ಗಳನ್ನು ಖರೀದಿಸಿದ್ದರು. ಬಿಒಟಿಬಿ 1999 ರಿಂದ ಯುಕೆ ಪ್ರಮುಖ ವಿಮಾನ ನಿಲ್ದಾಣಗಳಲ್ಲಿ ಕಾರ್ಯನಿರ್ವಹಿಸುತ್ತಿದೆ. ಇದೀಗ ಬಿಒಟಿಬಿ ಮೂಲಕ ಅದೃಷ್ಟ ಒಲಿದು ಬಂದಿದೆ.
Comments are closed.