ರಾಷ್ಟ್ರೀಯ

ಬರ್ತ್‌ಡೇ ಪಾರ್ಟಿಯೊಂದರಲ್ಲಿ ಭಾಗವಹಿಸಿದ್ದ ಒಂದೇ ಕುಟುಂಬದ 19 ಜನರಿಗೆ ಕೊರೊನಾ; ಓರ್ವ ಮಹಿಳೆ ಬಲಿ

Pinterest LinkedIn Tumblr

ಇಂದೋರ್‌ (ಮಧ್ಯಪ್ರದೇಶ): ಬರ್ತ್‌ಡೇ ಪಾರ್ಟಿಯೊಂದರಲ್ಲಿ ಭಾಗವಹಿಸಿದ್ದ ಒಂದೇ ಕುಟುಂಬದ 19 ಜನರಿಗೆ ಕೊರೊನಾ ಸೋಂಕು ತಗುಲಿದ್ದು, ಓರ್ವ ಮಹಿಳೆ ಕೋವಿಡ್‌-19ಗೆ ಬಲಿಯಾಗಿದ್ದಾರೆ. ಇದರಿಂದ ಸ್ಥಳೀಯರಲ್ಲಿ ಆತಂಕ ಹೆಚ್ಚಾಗಿದೆ. ಇಂದೋರ್‌ ಸಮೀಪದ ಸಾನ್ವೇರ್‌ ನಗರದಲ್ಲಿ ಬರ್ತ್‌ ಡೇ ಪಾರ್ಟಿ ನಡೆದಿತ್ತು.

ಬರ್ತ್‌ಡೇ ಪಾರ್ಟಿಯಲ್ಲಿ ಭಾಗವಹಿಸಿ 7 ದಿನದ ನಂತರ ಮೇ 23ರಂದು 70 ವರ್ಷದ ಮಹಿಳೆ ಸಾವನ್ನಪಿರುವುದು ಜನರ ಆತಂಕಕ್ಕೆ ಕಾರಣವಾಗಿದೆ. ಆ ಮಹಿಳೆಗೆ ಕೊರೊನಾ ಪಾಸಿಟಿವ್‌ ದೃಢಪಟ್ಟಿದ್ದು, ಅವರ ಸೋಂಕಿನ ಮೂಲ ಹುಡುಕಿಕಕೊಂಡು ಹೋದ ಅಧಿಕಾರಿಗಳಿಗೆ ಬರ್ತ್‌ಡೇ ಪಾರ್ಟಿಯ ರಹಸ್ಯ ಗೊತ್ತಾಗಿದೆ.

ಬರ್ತ್‌ಡೇ ಪಾರ್ಟಿಯಿಂದ 19 ಜನರಲ್ಲಿ ಕೊರೊನಾ ಸೋಂಕು ತಗುಲಿದೆ. ಇದರಲ್ಲಿ 1 ವರ್ಷ 6 ತಿಂಗಳು ಮಗುವಿಗೆ ಹಾಗೂ 60 ವರ್ಷದ ವೃದ್ಧನಿಗೆ ಕೊರೊನಾ ಇರುವುದು ದೃಢಪಟ್ಟಿದೆ. ಸುಮಾರು 50 ರಿಂದ 60 ಜನ ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು ಎಂದು ಸಾನ್ವೇರ್‌ ಬ್ಲಾಕ್‌ ವೈದ್ಯಕೀಯ ಅಧಿಕಾರಿ ಡಾ.ಹೇಮಂತ್‌ ರಘುವಂಶಿ ಹೇಳಿದ್ದಾರೆ.

ಮಹಿಳೆಗೆ ಶೀತ, ಕೆಮ್ಮು ಹಾಗೂ ಜ್ವರ ಬಂದಿದ್ದರಿಂದ ಮೇ 21ರಂದು ಸಾನ್ವೇರ್‌ ಆಸ್ಪತ್ರೆಗೆ ಅವರ ಮಗ ಮಹಿಳೆಯನ್ನು ಆಸ್ಪತ್ರೆಗೆ ದಾಖಲಿಸಿದ್ದ. ಆ ಮಹಿಳೆ ಇಂದೋರ್‌ನ ಧಾರ್‌ ರೋಡ್‌ ನಿವಾಸಿಯಾಗಿದ್ದು, ಆಕೆ ಮೇ 16ರಂದು ಬಾಡೋದಿಯಖಾನ್‌ ಗ್ರಾಮದ ಸಂಬಂಧಿಕರ ಮನೆಯಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು ಎಂದು ರಘುವಂಶಿ ಹೇಳಿದ್ದಾರೆ.

ಕೊರೊನಾ ರೋಗ ಲಕ್ಷಣಗಳು ಇದ್ದ ಕಾರಣ ಮಹಿಳೆಯನ್ನು ಇಂದೋರ್‌ನ ಎಂವೈ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅಲ್ಲಿಯೇ ಮೇ 23ರಂದು ಮಹಿಳೆ ಸಾವನ್ನಪ್ಪಿದ್ದಾರೆ. ಮಹಿಳೆ ಸಾವಿನ ಬಳಿಕ ಅವರಿಗೆ ಕೊರೊನಾ ಇರುವುದು ದೃಢಪಟ್ಟಿತ್ತು. ಇದರಿಂದ ಬರ್ತ್‌ಡೇ ಪಾರ್ಟಿಯಲ್ಲಿ ಭಾಗವಹಿಸಿದವರನ್ನು ಪತ್ತೆ ಹಚ್ಚುವ ಕಾರ್ಯವನ್ನು ಆರೋಗ್ಯ ಸಿಬ್ಬಂದಿ ಮಾಡಿದ್ದರು.

ಜನ್ಮದಿನದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಮಹಿಳೆಯ ಸಂಬಂಧಿಕರಲ್ಲಿ 19 ಜನ ಮೇ 23ರಂದು ಎಂವೈ ಆಸ್ಪತ್ರೆಯಲ್ಲಿ ಸ್ಯಾಂಪಲ್‌ ನೀಡಿದ್ದರು. ಆದರೆ, ಈಗ ಅವರ ವರದಿಗಳೆಲ್ಲಾ ಪಾಸಿಟಿವ್‌ ಬಂದಿವೆ ಎಂದು ರಘುವಂಶಿ ಹೇಳಿದ್ದಾರೆ. ಬಹುತೇಕರು ರೋಗ ಲಕ್ಷಣಗಳನ್ನು ಹೊಂದಿದ್ದಿಲ್ಲ. 17 ಜನರನ್ನು ಎಂಆರ್‌ಟಿಬಿ ಆಸ್ಪತ್ರೆಗೆ ವರ್ಗಾಯಿಸಿದ್ದರೆ, ಇಬ್ಬರನ್ನು ಸೇವಾಕಂಜ್‌ ಆಸ್ಪತ್ರೆಗೆ ದಾಖಲಿಸಲಾಗಿದೆ.

6 ಆರೋಗ್ಯ ತಂಡಗಳನ್ನು ರಚಿಸಿದ್ದು, ಆ ಪ್ರದೇಶದಲ್ಲಿರುವ 500 ಮನೆಗಳನ್ನು ಸಮೀಕ್ಷೆ ಮಾಡಲಾಗುತ್ತಿದೆ. 13 ಜನರನ್ನು ಕೊರೊನಾ ಶಂಕಿತರೆಂದು ಗುರುತಿಸಿ ಅವರ ಸ್ಯಾಂಪಲ್‌ಗಳನ್ನು ಸಂಗ್ರಹಿಸಲಾಗಿದೆ ಎಂದು ಉಪ ವಿಭಾಗಾಧಿಕಾರಿ ರವೀಶ್‌ ಶ್ರೀವಾಸ್ತಾ ಹೇಳಿದ್ದಾರೆ.

Comments are closed.