ರಾಷ್ಟ್ರೀಯ

ಗುಜರಾತ್​ನ ಈ ಕ್ಷೇತ್ರ ಜಯಿಸಿದ ಪಕ್ಷಕ್ಕೇ ಕೇಂದ್ರದಲ್ಲಿ ಅಧಿಕಾರ!

Pinterest LinkedIn Tumblr


ಅಹ್ಮದಾಬಾದ್: ಭಾರತದಲ್ಲಿ ಮಂಗಳ ಮತ್ತು ಅಮಂಗಳಕರವೆಂದು ಭಾವಿಸಲಾದ ಅನೇಕ ಸಂಗತಿಗಳಿವೆ. ಕಾಕತಾಳೀಯವಾಗಿ ನಡೆಯುವ ಬೆಳವಣಿಗೆಗಳು ಹಲವು ಕೌತುಕಗಳಿಗೆ ಕಾರಣವಾಗುತ್ತವೆ. ಅಂಥ ಒಂದು ಕೌತುಕದ ವಸ್ತು ಗುಜರಾತ್​ನ ವಲ್ಸದ್ ಕ್ಷೇತ್ರವಾಗಿದೆ. ಈ ಲೋಕಸಭಾ ಕ್ಷೇತ್ರವನ್ನು ಮಂಗಳಕರವೆಂದು ಪರಿಗಣಿಸಲಾಗಿದೆ. ಈ ಕ್ಷೇತ್ರದಲ್ಲಿ ಜಯಿಸಿದ ಪಕ್ಷಗಳು ಕೇಂದ್ರದಲ್ಲಿ ಅಧಿಕಾರ ಹಿಡಿಯುತ್ತಾ ಬಂದಿವೆ. ಕಾಕತಾಳೀಯವೋ ಅಲ್ಲವೋ ಒಟ್ಟಿನಲ್ಲಿ ಇದು ಇತಿಹಾಸದ ಸತ್ಯ ಸಂಗತಿಯೂ ಹೌದು.

ವಲ್ಸದ್ ಲೋಕಸಭಾ ಕ್ಷೇತ್ರದಲ್ಲಿ ಈ ಬಾರಿ 74.09% ಮತದಾನವಾಗಿದೆ. ಇದು ಗುಜರಾತ್​ನ 26 ಕ್ಷೇತ್ರಗಳಲ್ಲೇ ಕಂಡು ಬಂದ ಅತ್ಯಧಿಕ ಮತದಾನವಾಗಿದೆ. 2014ರ ಚುನಾವಣೆಯಲ್ಲೂ ಇಲ್ಲಿ 74.88% ಮತದಾನವಾಗಿತ್ತು. ಆಗ ಬಿಜೆಪಿ ವಲ್ಸದ್ ಸೇರಿ ಗುಜರಾತ್​ನ ಎಲ್ಲಾ 26 ಕ್ಷೇತ್ರಗಳನ್ನೂ ಗೆದ್ದುಕೊಂಡಿತ್ತು. ಈ ಬಾರಿ ಬಿಜೆಪಿ ಹಾಲಿ ಸಂಸದ ಡಾ. ಕೆ.ಸಿ. ಪಟೇಲ್ ಅವರನ್ನೇ ಕಣಕ್ಕಿಳಿಸಿದೆ.

ಆದರೆ, ವಲ್ಸದ್ ಕ್ಷೇತ್ರದಲ್ಲಿ ಬಿಜೆಪಿ ಗೆಲುವು ಅಷ್ಟು ಸುಗಮವೇನೂ ಅಲ್ಲ. ಯಾಕೆಂದರೆ ಇಲ್ಲಿ ಕಾಂಗ್ರೆಸ್ ಪಕ್ಷ ಕೂಡ ಬಲಶಾಲಿಯಾಗಿದೆ. 2017ರಲ್ಲಿ ನಡೆದ ಗುಜರಾತ್ ವಿಧಾನಸಭಾ ಚುನಾವಣೆಯಲ್ಲಿ ವಲ್ಸದ್ ಕ್ಷೇತ್ರದ ವ್ಯಾಪ್ತಿಗೆ ಬರುವ 7 ವಿಧಾನಸಭಾ ಕ್ಷೇತ್ರಗಳಲ್ಲಿ ಮೂರರಲ್ಲಿ ಕಾಂಗ್ರೆಸ್ಸಿಗರು ಗೆಲುವು ಸಾಧಿಸಿದ್ದರು. ಮತ್ತೊಂದು ವಿಚಾರವೆಂದರೆ ವಲ್ಸದ್ ಲೋಕಸಭಾ ಕ್ಷೇತ್ರದಲ್ಲಿ ನಗರ ಪ್ರದೇಶಗಳಲ್ಲಿ ಬಿಜೆಪಿಗೆ ಹೆಚ್ಚು ಬೆಂಬಲ ಇದ್ದರೆ, ಗ್ರಾಮೀಣ ಭಾಗದ ಜನರು ಕಾಂಗ್ರೆಸ್​ನ ಕೈ ಹಿಡಿಯುತ್ತಾರೆ. ಇವತ್ತು ನಡೆದ ಚುನಾವಣೆಯಲ್ಲಿ ನಗರದವರಿಗಿಂತ ಗ್ರಾಮೀಣ ಭಾಗದಲ್ಲಿ ಹೆಚ್ಚು ಪ್ರಮಾಣದಲ್ಲಿ ಮತದಾನವಾಗಿದೆ. ಹೀಗಾಗಿ, ಕಾಂಗ್ರೆಸ್ ಪಕ್ಷವು ವಲ್ಸದ್​ನಲ್ಲಿ ಗೆಲ್ಲುವ ಭರವಸೆ ಇಟ್ಟುಕೊಂಡಿದೆ.

Comments are closed.