ಕರ್ನಾಟಕ

ನಾಟಕ ಮಾಡುವವರನ್ನು ಹಿಡಿದಿಟ್ಟುಕೊಳ್ಳಲಾಗುವುದಿಲ್ಲ: ಅಸಮಾಧಾನಿತರ ಕುರಿತು ಕುಮಾರಸ್ವಾಮಿ!

Pinterest LinkedIn Tumblr


ಹಾಸನ /ಧಾರವಾಡ: ಬಿಜೆಪಿಯವರು ಮೇ 23 ರ ನಂತರ ಸರ್ಕಾರ ಬೀಳಲಿದೆ ಎಂದು ನಮಗೆ ಗಡುವು ಕೊಟ್ಟಿದ್ದಾರೆ. ನಮ್ಮೊಟ್ಟಿಗೆ ಡ್ರಾಮ ಮಾಡುವವರನ್ನು ನಮಗೆ ಹಿಡಿದುಕೊಳ್ಳಲು ಆಗಲ್ಲ. ಶಾಸಕ ರಮೇಶ್ ಜಾರಕಿಹೊಳಿ ಕಾಂಗ್ರೆಸ್ ಬಿಡುವ ವಿಚಾರದ ಸುದ್ದಿ ಹೊಸದಲ್ಲ. ಎಲ್ಲರನ್ನೂ ವಿಶ್ವಾಸ ಪಡೆಯೋ ಕೆಲಸ ಮಾಡಲಾಗುವುದು. ಸರ್ಕಾರ ಬೀಳಿಸಲು ಬಿಜೆಪಿಯ ಎಲ್ಲಾ ನಾಯಕರು ಕಾಯುತ್ತಿದ್ದಾರೆ. ನಮ್ಮ ಶಾಸಕರನ್ನು ಉಳಿಸಿಕೊಳ್ಳುವ ಕೆಲಸವನ್ನು ನಾವು ಮಾಡುತ್ತೇವೆ ಎಂದು ಸಿಎಂ ಕುಮಾರಸ್ವಾಮಿ ಹೇಳಿದ್ದಾರೆ.

ಹಾಸನದ ಚನ್ನರಾಯಪಟ್ಟಣದಲ್ಲಿ ಮಾತನಾಡುತ್ತಿದ್ದ ಮುಖ್ಯಮಂತ್ರಿ ಕುಮಾರಸ್ವಾಮಿ, 2ನೇ ಹಂತದ ಚುನಾವಣೆಯಲ್ಲಿ ಮೈತ್ರಿಪಕ್ಷಗಳು ಎಲ್ಲಾ 14 ಸ್ಥಾನಗಳನ್ನೂ ಗೆಲ್ಲುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

“ರಾಜ್ಯದಲ್ಲಿ ಬರಗಾಲ ಇದೆ, ಆ ಬಗ್ಗೆ ಚರ್ಚಿಸಲು 26 ರ ನಂತರ ಅಧಿಕಾರಿಗಳ ಸರಣಿ ಸಭೆ ನಡೆಸುತ್ತೇನೆ. ಸರ್ಕಾರ ಅಸ್ಥಿರಗೊಳಿಸಲು ಯಾರಿಂದಲೂ ಸಾಧ್ಯವಿಲ್ಲ. ಇದಕ್ಕಾಗಿ ಬಿಜೆಪಿಯವರು ನಡೆಸುವ ಹೈಡ್ರಾಮ ನೋಡಿ‌ ಖುಷಿಪಡುವೆ. ಶಿವಮೊಗ್ಗ ಸೇರಿ ಉಳಿದ ಮೂರು ಕಡೆ ನಮ್ಮ ಅಭ್ಯರ್ಥಿಗಳು ಗೆಲ್ಲುತ್ತಾರೆ. ಜೊತೆಗೆ ಇತರ 11 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳೂ ಗೆಲ್ಲುತ್ತಾರೆ. ಫಲಿತಾಂಶದ ನಂತರ ಕೆಲವು ಮಾಧ್ಯಮಗಳಿಗೆ ನಿರಾಶೆ ಕಾದಿದೆ”ಎಂದು ಮಾಧ್ಯಮಗಳನ್ನು ಸಿಎಂ ಕುಮಾರಸ್ವಾಮಿ ಕಿಚಾಯಿಸಿದ್ದಾರೆ.

ಫಲಿತಾಂಶ ನಂತರ ಎಲ್ಲವೂ ತಿಳಿಯಲಿದೆ:

ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ 22 ಸ್ಥಾನ ಗೆಲ್ಲಲಿದೆ ಎಂಬ ಬಿಎಸ್ ವೈ ಹೇಳಿಕೆ ವಿಚಾರವಾಗಿ ಮಾತನಾಡಿದ ಸಿಎಂ, ಅವರ ರೀತಿ ಭವಿಷ್ಯ ಹೇಳಲು ನನಗೆ ಬರಲ್ಲ, ಫಲಿತಾಂಶ ನಂತರ ಎಲ್ಲವೂ ತಿಳಿಯಲಿದೆ. ದೇಶದಲ್ಲಿ ಬಿಜೆಪಿಗೆ ಪರ್ಯಾಯ ಸರ್ಕಾರ ರಚನೆಯಾಗಲಿದೆ. ರಾಜ್ಯ ಬಿಜೆಪಿ ನಾಯಕರು ಮೋದಿ‌ ಹೆಸರಲ್ಲಿ ಮತ ಕೇಳಿದರು. ಆದರೆ ಮೋದಿ ಅವರಿಗೇ ವರ್ಚಸ್ಸಿಲ್ಲ ಎಂದ ಮೇಲೆ ಜನ ಬೆಂಬಲ ಎಲ್ಲಿಂದ ಸಿಗಲಿದೆ? ಎಂದು ಕುಮಾರಸ್ವಾಮಿ ಬಿಜೆಪಿಗೆ ವ್ಯಂಗ್ಯವಾಗಿ ಪ್ರಶ್ನಿಸಿದರು.

ರಾಜ್ಯದಲ್ಲಿ ಏಪ್ರಿಲ್ 18ರಂದು ನಡೆದ ಚುನಾವಣೆಯಲ್ಲಿ ಜೆಡಿಎಸ್ ಪಕ್ಷ ಹಾಸನ, ಮಂಡ್ಯ, ತುಮಕೂರು ಮತ್ತು ಉಡುಪಿ-ಚಿಕ್ಕಮಗಳೂರು ಕ್ಷೇತ್ರಗಳಲ್ಲಿ ಸ್ಪರ್ಧಿಸಿತ್ತು. ಇವತ್ತು ನಡೆದ ಚುನಾವಣೆಯಲ್ಲಿ ಶಿವಮೊಗ್ಗ, ವಿಜಯಪುರ ಮತ್ತು ಉತ್ತರ ಕನ್ನಡದಲ್ಲಿ ಜೆಡಿಎಸ್ ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಶಿವಮೊಗ್ಗದಲ್ಲಿ ಮಧು ಬಂಗಾರಪ್ಪ ಅವರನ್ನ ಗೆಲ್ಲಿಸಲು ಕುಮಾರಸ್ವಾಮಿ ಸೇರಿದಂತೆ ಇಡೀ ಜೆಡಿಎಸ್ ತಂಡವೇ ಶ್ರಮ ಹಾಕಿದೆ. ಕಾಂಗ್ರೆಸ್​ನ ರಾಹುಲ್ ಗಾಂಧಿ, ಡಿಕೆ ಶಿವಕುಮಾರ್ ಮೊದಲಾದ ದಿಗ್ಗಜರೂ ಶಿವಮೊಗ್ಗ ಕ್ಷೇತ್ರದಲ್ಲಿ ಮಧು ಬಂಗಾರಪ್ಪ ಪರ ಪ್ರಚಾರ ಮಾಡಿದ್ದರು.

ಶಾಸಕ ರಮೇಶ್ ಜಾರಕಿಹೊಳಿಯವರು ರಾಜೀನಾಮೆ ಕೊಡಬೇಕು ಎಂದು ತೀರ್ಮಾನ ಮಾಡಿದ್ದಾರೆ. ಇದನ್ನು ಹಗುರವಾಗಿ ತೆಗೆದುಕೊಳ್ಳಬಾರದು, ಅವರ ಸಂಪರ್ಕದಲ್ಲಿ ಹಲವು ಶಾಸಕರು ಇರುವ ಮಾಹಿತಿ ಇದೆ. ರಮೇಶ್ ಜಾರಕಿಹೊಳಿ ಅಸಮಾಧಾನ ಸರಿಪಡಿಸಲು ಕಾಂಗ್ರೆಸ್‌ನ ಯಾರೊಬ್ಬರು ಯಾಕೆ ಮುಂದಾಗಲಿಲ್ಲ? ಕಾಂಗ್ರೆಸ್ ನಾಯಕರ ಈ ನಡೆ ನಮಗೂ ಸರಿ ಎನಿಸುತ್ತಿಲ್ಲ ಎಂದು ಜೆಡಿಎಸ್​ನ ವಿಧಾನ ಪರಿಷತ್ ಸದಸ್ಯ ಬಸವರಾಜ್​​ ಹೊರಟ್ಟಿ ಗುಡುಗಿದ್ದಾರೆ.

ಮೈತ್ರಿ ನಾಯಕರು ರಮೇಶ್ ಜೊತೆ‌ ಮಾತನಾಡಬೇಕಿತ್ತು. ಆದರೆ, ಈಗ ಕಾಲ‌ ಮೀರಿ ಹೋಗುತ್ತಿದೆ. ಈಗಲಾದ್ರೂ ಸಿಎಂ ಹೆಚ್​​.ಡಿ ಕುಮಾರಸ್ವಾಮಿ ಹಾಗೂ ಕಾಂಗ್ರೆಸ್ ನಾಯಕರು ಸಮಸ್ಯೆ ಪರಿಹಾರಕ್ಕೆ ಮುಂದಾಗಬೇಕು. ಬಿಜೆಪಿಯವರು ಮೈತ್ರಿ ಸರ್ಕಾರ ಅಸ್ಥಿರ ಮಾಡುವುದು ಸರಿಯಲ್ಲ. ಒಂದು ವೇಳೆ ಸಂಧಾನ ಮಾಡದಿದ್ದಲ್ಲಿ ಸಾರ್ವಜನಿಕರಿಗೆ ತೊಂದರೆಯಾಗುತ್ತೆ. ನಮ್ಮ ಹತ್ತಿರ ಕೂಡ ರಮೇಶ್​ ಅಸಮಾಧಾನ ತೋಡಿಕೊಂಡಿದ್ದಾರೆ. ನಮ್ಮನ್ನು ತುಂಬಾನೇ ನೆಗ್ಲೆಕ್ಟ್​ ಮಾಡುತ್ತಿದ್ದಾರೆ ಅಂತ ರಮೇಶ್​​ ನನಗೆ ಹೇಳಿದ್ದರು. ಕೂಡಲೇ ಮೈತ್ರಿ‌ ಪಕ್ಷದ ನಾಯಕರು ರಮೇಶ್​ ಅವರನ್ನು ಸಮಾಧಾನಪಡಿಸಬೇಕು ಎಂದು ಹೊರಟ್ಟಿ ಹೇಳಿದ್ದಾರೆ.

ಭಾರತೀಯ ರಾಯಭಾರಿ ಜೊತೆ ಸಂಪರ್ಕದಲ್ಲಿದ್ದೇವೆ – ಸಿಎಂ
ಶ್ರೀಲಂಕಾ ಬಾಂಬ್ ಸ್ಪೋಟ ಘಟನೆಯಲ್ಲಿ ನಮ್ಮ ಪ್ರವಾಸಿಗರು ಸಾವಿಗೀಡಾಗಿದ್ದಾರೆ. ಭಾರತೀಯ ರಾಯಭಾರಿ ಜೊತೆ ಸಂಪರ್ಕದಲ್ಲಿದ್ದೇವೆ. ನಮ್ಮ ಪಕ್ಷದ ಶಾಸಕರು, ಮಾಜಿ ಶಾಸಕರು ಶ್ರೀಲಂಕಾಕ್ಕೆ ಹೋಗಿದ್ದಾರೆ. ಎಲ್ಲಾ ಮೃತದೇಹಗಳನ್ನು ಒಮ್ಮೆಗೇ ತರಲು ಸಾಧ್ಯವಿಲ್ಲ ಎಂದಿದ್ದಾರೆ, ಸರ್ಕಾರದ ಕಡೆಯಿಂದ ಎಲ್ಲಾ ಪ್ರಯತ್ನ ಮಾಡಲಾಗುತ್ತಿದೆ.

Comments are closed.