ರಾಷ್ಟ್ರೀಯ

ಕಾವಲುಗಾರ ಬೇಕಿದ್ದರೆ ನೇಪಾಳದಿಂದ ಕರೆತರುತ್ತೇವೆ; ಮೋದಿ ಕುರಿತು ಹಾರ್ದಿಕ್ ಪಟೇಲ್

Pinterest LinkedIn Tumblr


ನವದೆಹಲಿ: ತಮ್ಮನ್ನು ಚೌಕಿದಾರ್​ ಎಂದು ಕರೆದುಕೊಳ್ಳುವ ಪ್ರಧಾನಮಂತ್ರಿ ನರೇಂದ್ರ ಮೋದಿ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿರುವ ಕಾಂಗ್ರೆಸ್​ ಯುವ ನಾಯಕ ಹಾರ್ದಿಕ್ ಪಟೇಲ್, ನಮಗೆ ಕಾವಲುಗಾರ ಬೇಕೆಂದರೆ ನೇಪಾಳಕ್ಕೆ ಹೋಗಿ ಕರೆತರುತ್ತೇವೆ. ಆದರೆ, ನಮಗೆ ಬೇಕಿರುವುದು ದೇಶವನ್ನು ಸಮರ್ಥವಾಗಿ ಮುನ್ನಡೆಸುವ ಪ್ರಧಾನಮಂತ್ರಿಯೇ ಹೊರತು ಕಾವಲುಗಾರನಲ್ಲ ಎಂದು ಹೇಳಿದ್ದಾರೆ.

ಇಂದು ಗುಜರಾತ್​ನ ವೀರಾಂಗಮ್​ನಲ್ಲಿ ಮತ ಚಲಾಯಿಸಿದ ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿರುವ ಹಾರ್ದಿಕ್ ಪಟೇಲ್, ನಮ್ಮ ದೇಶವನ್ನು ಆರ್ಥಿಕ, ಯುವಜನತೆ, ಶಿಕ್ಷಣ ಮತ್ತು ಸೈನಿಕರನ್ನು ಪ್ರಬಲಗೊಳಿಸುವ ಪ್ರಧಾನಮಂತ್ರಿ ಬೇಕಾಗಿದ್ದಾರೆ ಎಂದು ಹಾರ್ದಿಕ್ ಪಟೇಲ್ ಹೇಳಿದ್ದಾರೆ. ಅವರ ಈ ಹೇಳಿಕೆಗೆ ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ವಿರೋಧಗಳು ವ್ಯಕ್ತವಾಗಿವೆ.

ಭಾರತದಲ್ಲಿರುವ ಗೂರ್ಖ ಅಥವಾ ಕಾವಲುದಾರರಲ್ಲಿ ಬಹುತೇಕರು ನೇಪಾಳದವರೇ ಆಗಿರುವುದರಿಂದ ಹಾರ್ದಿಕ್ ಪಟೇಲ್ ನೀಡಿರುವ ಈ ಹೇಳಿಕೆ ಇದೀಗ ತೀವ್ರ ಚರ್ಚೆಗೊಳಗಾಗಿದೆ. ಹಾರ್ದಿಕ್ ಪಟೇಲ್ ಈ ರೀತಿ ವಿವಾದಾತ್ಮಕ ಹೇಳಿಕೆ ನೀಡುತ್ತಿರುವುದು ಇದೇ ಮೊದಲೇನಲ್ಲ. ಕಳೆದ ವಾರವಷ್ಟೆ ಸುರೇಂದ್ರನಗರದಲ್ಲಿ ಚುನಾವಣಾ ಪ್ರಚಾರದಲ್ಲಿ ಪಾಲ್ಗೊಂಡಿದ್ದ ವೇಳೆ ಭಾಷಣ ಮಾಡುತ್ತಿದ್ದಾಗ ವೇದಿಕೆಯಲ್ಲೇ ಕಾರ್ಯಕರ್ತನೊಬ್ಬ ಹಾರ್ದಿಕ್ ಪಟೇಲ್ ಕೆನ್ನೆಗೆ ಬಾರಿಸಿದ್ದ. ಆ ವಿಡಿಯೋ ಭಾರೀ ವೈರಲ್ ಆಗಿತ್ತು.

ಪಾತಿದಾರ್​ ಮೀಸಲಾತಿ ಹೋರಾಟದ ಮುಂದಾಳತ್ವ ವಹಿಸಿದ್ದ ಹಾರ್ದಿಕ್ ಪಟೇಲ್ ಆ ಕಾರಣದಿಂದಾಗಿಯೇ ದೇಶದೆಲ್ಲೆಡೆ ಗುರುತಿಸಿಕೊಂಡಿದ್ದರು. ಕಳೆದ ತಿಂಗಳು ಕಾಂಗ್ರೆಸ್​ ಸೇರಿದ್ದರು. ಇಂದಿಗೆ ಗುಜರಾತ್​ನ 26 ಲೋಕಸಭಾ ಕ್ಷೇತ್ರಗಳ ಚುನಾವಣೆಯೂ ಮುಗಿದಿದೆ.

Comments are closed.