
ಬೆಂಗಳೂರು: ರಾಜ್ಯದಲ್ಲಿ 2 ಹಂತದ ಮತದಾನ ಪೂರ್ಣಗೊಂಡಿದ್ದು, ಇದುವರೆಗೆ ಸುಮಾರು ಶೇ. 67.21ರಷ್ಟು ಮತದಾನವಾಗಿದೆ. ಶಿವಮೊಗ್ಗದಲ್ಲಿ ಅತಿಹೆಚ್ಚು 76.26ರಷ್ಟು ಮತದಾನವಾಗಿದೆ. ಕಲಬುರ್ಗಿಯಲ್ಲಿ ಅತಿ ಕಡಿಮೆ ಅಂದರೆ ಶೇ. 57.58ರಷ್ಟು ಮತದಾನ ದಾಖಲಾಗಿದೆ. ರಾಜ್ಯದಲ್ಲಿ ಏ. 18ರಂದು ನಡೆದ ಮೊದಲ ಹಂತದ ಮತದಾನಕ್ಕಿಂತ ಇಂದು ನಡೆದ 2ನೇ ಹಂತದ ಮತದಾನಕ್ಕೆ ತುಸು ಕಡಿಮೆ ಸ್ಪಂದನೆ ಸಿಕ್ಕಿದೆ. ಮೊದಲ ಹಂತದಲ್ಲಿ ಶೇ. 68.80ಯಷ್ಟು ವೋಟಿಂಗ್ ಆಗಿತ್ತು.
ವಿವಿಧ ಕ್ಷೇತ್ರಗಳಲ್ಲಿ ಆದ ಮತದಾನದ ಪ್ರಮಾಣ:
ಚಿಕ್ಕೋಡಿ- ಶೇ. 73.19, ಬೆಳಗಾವಿ- ಶೇ. 66.59, ಬಾಗಲಕೋಟೆ- ಶೇ.69.40, ವಿಜಯಪುರ-ಶೇ.60.28, ಕಲಬುರ್ಗಿ- ಶೇ.57.58, ರಾಯಚೂರು- ಶೇ. 57.85, ಬೀದರ್- ಶೇ. 61.40, ಕೊಪ್ಪಳ- ಶೇ.68.31, ಬಳ್ಳಾರಿ- ಶೇ. 68.08, ಹಾವೇರಿ- ಶೇ. 71.25, ಧಾರವಾಡ- ಶೇ.70.04, ಉತ್ತರಕನ್ನಡ- ಶೇ.74.07, ದಾವಣಗೆರೆ- ಶೇ.72.57, ಶಿವಮೊಗ್ಗ- ಶೇ. 76.26 ರಷ್ಟು ಮತದಾನವಾಗಿದೆ.
ಇವಿಎಂನಲ್ಲಿ ಕೈ ಚಿಹ್ನೆಯಿಲ್ಲವೆಂದು ಗಲಾಟೆಯೆಬ್ಬಿಸಿದ ಮತದಾರರು:
ಈ ಬಾರಿ ಕಾಂಗ್ರೆಸ್- ಜೆಡಿಎಸ್ ಮೈತ್ರಿಯಾಗಿ ಲೋಕಸಭಾ ಚುನಾವಣೆಯನ್ನು ಎದುರಿಸುತ್ತಿರುವುದು ಗೊತ್ತೇ ಇದೆ. ಆದರೆ, ಈ ಮೈತ್ರಿಯೇ ಇಂದು ವಿಜಯಪುರದಲ್ಲಿ ಗಲಾಟೆ ಮತ್ತು ಗೊಂದಲಕ್ಕೆ ಕಾರಣವಾಗಿದೆ. ಮತ ಚಲಾಯಿಸಲು ಬಂದ ಮತದಾರರು ಮತಯಂತ್ರದಲ್ಲಿ ಕೈ ಚಿಹ್ನೆ ಇಲ್ಲದ್ದಕ್ಕೆ ಚುನಾವಣಾ ಸಿಬ್ಬಂದಿ ಜೊತೆ ಗಲಾಟೆ ಮಾಡಿದ ಘಟನೆ ವಿಜಯಪುರ ಮತಗಟ್ಟೆ ಸಂಖ್ಯೆ 31ರಲ್ಲಿ ನಡೆದಿದೆ.
ಎಸ್ಸಿ ಮೀಸಲು ಕ್ಷೇತ್ರವಾದ ವಿಜಯಪುರವನ್ನು ಕಾಂಗ್ರೆಸ್ ಜೆಡಿಎಸ್ಗೆ ಬಿಟ್ಟುಕೊಟ್ಟಿತ್ತು. ಈ ಕ್ಷೇತ್ರದಿಂದ ಮೈತ್ರಿ ಅಭ್ಯರ್ಥಿಯಾಗಿ ಜೆಡಿಎಸ್ನ ಡಾ. ಸುನಿತಾ ದೇವಾನಂದ ಚೌಹಾಣ್ ಸ್ಪರ್ಧಿಸಿದ್ದಾರೆ. ಆದರೆ, ಈ ಬಗ್ಗೆ ಮಾಹಿತಿಯಿಲ್ಲದೆ ಮತಯಂತ್ರದಲ್ಲಿ ಕಾಂಗ್ರೆಸ್ ಚಿಹ್ನೆ ಇಲ್ಲವೆಂದು ಗಲಾಟೆ ಮಾಡಿರುವ ಘಟನೆ ವಿಜಯಪುರದ ಹಲವು ಮತಗಟ್ಟೆಗಳಲ್ಲಿ ನಡೆದಿದೆ. ಈ ಭಾಗದಲ್ಲಿ ಜೆಡಿಎಸ್ ಪ್ರಾಬಲ್ಯ ಕಡಿಮೆ ಇರುವುದರಿಂದ ಮತದಾರರು ಗೊಂದಲಕ್ಕೊಳಗಾಗಿದ್ದು, ಬಿಜೆಪಿ ಮತ್ತು ಕಾಂಗ್ರೆಸ್ ಪರವಾಗಿ ಮತ ಹಾಕುವ ಮತದಾರರಿಗೆ ಕಾಂಗ್ರೆಸ್ನ ಆಯ್ಕೆಯೇ ಇಲ್ಲದ್ದರಿಂದ ಸಿಬ್ಬಂದಿಯೊಂದಿಗೆ ಗಲಾಟೆ ನಡೆಸಿದ ಘಟನೆ ನಡೆಯಿತು. ಕಾಂಗ್ರೆಸ್ನ ಕಟ್ಟಾ ಬೆಂಬಲಿಗರ ಗುಂಪು ಈ ಬಗ್ಗೆ ಸಿಬ್ಬಂದಿಯೊಂದಿಗೆ ವಾಗ್ವಾದ ನಡೆಸಿದ ಘಟನೆ ನಡೆಯಿತು.
ತೀವ್ರ ಕುತೂಹಲ ಮೂಡಿಸಿದ್ದ ಕಲಬುರ್ಗಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಉಮೇಶ್ ಜಾಧವ್ ತಮ್ಮ ಕಾರಿಗೆ ಬಿಜೆಪಿ ಧ್ವಜವನ್ನು ಕಟ್ಟಿಕೊಂಡು ಬಂದಿದ್ದಕ್ಕೆ ಕಾಂಗ್ರೆಸ್ ಕಾರ್ಯಕರ್ತರು ಕಾರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದ ಘಟನೆ ನಡೆಯಿತು. ಈ ವೇಳೆ ಕಾಂಗ್ರೆಸ್- ಬಿಜೆಪಿ ಕಾರ್ಯಕರ್ತರ ನಡುವೆ ಘರ್ಷಣೆಯೂ ಏರ್ಪಟ್ಟಿತು. ಹಿರಿಯ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಸ್ಥಿತಿಯನ್ನು ತಿಳಿಗೊಳಿಸಿದರು. ಲಿಂಗಸೂಗೂರು ತಾಲೂಕಿನ ಮುದಗಲ್ನ ಬಗಡಿತಾಂಡಾ ಮತಗಟ್ಟೆ ಸೇರಿದಂತೆ ಹಲವು ಮತಗಟ್ಟೆಗಳಲ್ಲಿ ಮತಯಂತ್ರದಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಕೆಲವು ಗಂಟೆಗಳ ಕಾಲ ಮತದಾನ ಸ್ಥಗಿತಗೊಂಡ ಘಟನೆ ನಡೆಯಿತು.
ಮಾದರಿಯಾದ ಮತದಾರರು:
ದಾವಣಗೆರೆಯ ಪಿಜೆ ಬಡಾವಣೆಯ ಮಾಯಾಬಾಯಿ ಎಂಬ ವೃದ್ಧೆ ಆ್ಯಂಬುಲೆನ್ಸ್ನಲ್ಲಿ ಬಂದು ಮತ ಚಲಾಯಿಸಿದ್ದಾರೆ. ನಿನ್ನೆಯಷ್ಟೇ ಆಪರೇಷನ್ಗೆ ಒಳಗಾಗಿದ್ದ ವೃದ್ಧೆ ಆಸ್ಪತ್ರೆಯಿಂದ ನೇರವಾಗಿ ಮತಗಟ್ಟೆಗೆ ಬಂದು ಮತ ಚಲಾಯಿಸುವ ಮೂಲಕ ಮಾದರಿಯಾದರು. ಉಳಿದಂತೆ, ಸಿಂಗಾಪುರದಲ್ಲಿ ಇಂಜಿನಿಯರ್ ಆಗಿರುವ ವಿಜಯ ರೆಡ್ಡಿ ಬಸವನ ಬಾಗೇವಾಡಿಗೆ ಬಂದು ಮತ ಚಲಾಯಿಸಿದ್ದಾರೆ. ಕೊಪ್ಪಳ ಜಿಲ್ಲೆಯ ಬೂದಗುಂಪಾ ಗ್ರಾಮದಲ್ಲಿ ಕೂಡ ಅಮೆರಿಕದ ಅಭಿಷೇಕ್ ಪಾಟೀಲ್ ಚುನಾವಣೆಗೆಂದೇ ಆಗಮಿಸಿದ್ದರು. ಹುಬ್ಬಳ್ಳಿಯ ಮಂಜುನಾಥ ನಗರದ ಸರ್ಕಾರಿ ಶಾಲೆಯ ಮತಗಟ್ಟೆಯಲ್ಲಿ ಇಟಲಿಯ ಮಿಲಾನ್‌ನಲ್ಲಿ ಎಂಎಸ್ ಓದುತ್ತಿರುವ ಪದ್ಮನಾಭ ಕಂಚಿ ಮತ ಚಲಾವಣೆ ಮಾಡಿದ್ದಾರೆ. ನೆದರ್ಲೆಂಡ್ನಲ್ಲಿ ಸಾಫ್ಟ್ವೇರ್ ಇಂಜಿನಿಯರ್ ಆಗಿರುವ ಅಶೋಕ್ ಹಟ್ಟಿ ಕೂಡ ಇಂದು ಸ್ವಗ್ರಾಮದಲ್ಲಿ ಮತ ಚಲಾಯಿಸಿದ್ದಾರೆ.
ವಿಡಿಯೋ ಮಾಡಿದ ಮತದಾರ:
ಧಾರವಾಡದ ಬೋವಿ ಗಲ್ಲಿ ನಿವಾಸಿ ಮೀನಾಜ್ ಸಯ್ಯದ್ ಮದುವೆಯ ಸಂಭ್ರಮದ ನಡುವೆಯೂ ಮತ ಚಲಾಯಿಸಿದ್ದಾರೆ. ಇಂದು ಬಹುತೇಕ ಮತಗಟ್ಟೆಗಳಲ್ಲಿ ವಿದ್ಯುತ್ ಸಂಪರ್ಕವಿಲ್ಲದ ಕಾರಣದಿಂದ ಮತ ಚಲಾಯಿಸಲು ಜನರು ಪರದಾಡುವಂತಾಯಿತು. ಇದರ ನಡುವೆ ಹಲವು ಮತಗಟ್ಟೆಗಳಲ್ಲಿ ಮತ ಚಲಾಯಿಸಿದ ಯುವಕರು ತಾವು ಯಾರಿಗೆ ಮತ ಹಾಕಿದ್ದೇವೆಂದು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟ ಘಟನೆಯೂ ನಡೆಯಿತು. ಮತಗಟ್ಟೆಯೊಳಗೆ ಮೊಬೈಲ್ ತೆಗೆದುಕೊಂಡು ಹೋಗಲು ಅವಕಾಶವಿಲ್ಲದಿದ್ದರೂ ನೀತಿ ಸಂಹಿತೆ ಉಲ್ಲಂಘಿಸಿ ಮೊಬೈಲ್ನಲ್ಲಿ ವಿಡಿಯೋ ಚಿತ್ರೀಕರಿಸಿದ ಘಟನೆ ನಡೆದರೂ ಅಧಿಕಾರಿಗಳು ಆರೋಪಿಗಳ ವಿರುದ್ಧ ಕ್ರಮ ಕೈಗೊಳ್ಳದ್ದಕ್ಕೆ ಸ್ಥಳೀಯರು ಅಸಮಾಧಾನ ವ್ಯಕ್ತಪಡಿಸಿದ ಘಟನೆಯೂ ನಡೆಯಿತು.
ಮಳೆರಾಯನ ಅಬ್ಬರದಿಂದ ಕ್ಷೀಣಿಸಿದ ಮತದಾನ:
ಮಲೆನಾಡು ಭಾಗಗಳಾದ ಉತ್ತರ ಕನ್ನಡ, ಶಿವಮೊಗ್ಗ, ದಾವಣಗೆರೆಗಳಲ್ಲಿ ದಿಢೀರ್ ಎಂದು ಭಾರೀ ಮಳೆಯಾದ ಹಿನ್ನೆಲೆಯಲ್ಲಿ ಮತದಾರರು ಮನೆಯಿಂದ ಹೊರಬರಲು ಪರದಾಡುವಂತಾಯಿತು. ಶಿರಸಿ, ಮುಂಡಗೋಡ, ಭದ್ರಾವತಿ, ಶಿಕಾರಿಪುರ, ಶಿರಾಳಕೊಪ್ಪ, ಸಾಗರ, ಹೊಸನಗರ, ತೀರ್ಥಹಳ್ಳಿಯಲ್ಲಿ ಭಾರೀ ಮಳೆಯಾಗಿದ್ದು, ಹಲವು ಕಡೆ ಮರಗಳು ಧರೆಗುರುಳಿವೆ. ಮಳೆಯಿಂದಾಗಿ ಹಲವು ಕಡೆ ವಿದ್ಯುತ್ ಕಡಿತವಾಗಿದ್ದರಿಂದ ವಿದ್ಯುತ್ ಇಲ್ಲದೆ ಮತಗಟ್ಟೆಗಳಲ್ಲಿ ಸಮಸ್ಯೆ ಎದುರಾಯಿತು.
ಏಪ್ರಿಲ್ 18ರಂದು ದಕ್ಷಿಣ ಕರ್ನಾಟಕದ 14 ಕ್ಷೇತ್ರಗಳಿಗೆ ನಡೆದ ಚುನಾವಣೆಯಲ್ಲಿ ಒಟ್ಟಾರೆ 68.80% ಮತದಾನವಾಗಿತ್ತು. ಬೆಂಗಳೂರು ನಗರದ 3 ಕ್ಷೇತ್ರಗಳನ್ನು ಹೊರತುಪಡಿಸಿ ಉಳಿದ ಕಡೆ ಮತದಾರರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿತ್ತು.
Comments are closed.