ರಾಷ್ಟ್ರೀಯ

ಶಸ್ತ್ರಾಸ್ತ್ರ ಖರೀದಿಯಲ್ಲಿ ಮುಂಚೂಣಿಯಲ್ಲಿದ್ದ ಭಾರತ ಇದೀಗ ಎಷ್ಟನೇ ಸ್ಥಾನದಲ್ಲಿದೆ ನೋಡಿ…!

Pinterest LinkedIn Tumblr

ನವದೆಹಲಿ: ಅಂತಾರಾಷ್ಟ್ರೀಯ ಶಸ್ತ್ರಾಸ್ತ್ರ ಮಾರುಕಟ್ಟೆಯಲ್ಲಿ ಶಸ್ತ್ರಾಸ್ತ್ರ ಖರೀದಿಯಲ್ಲಿ ಮುಂಚೂಣಿ ರಾಷ್ಟ್ರವಾಗಿದ್ದ ಭಾರತ ಇದೀಗ 2ನೇ ಸ್ಥಾನಕ್ಕೆ ಕುಸಿದಿದ್ದು, ಸೌದಿ ಅರೇಬಿಯಾ ಇದೀಗ ಅಗ್ರ ಸ್ಥಾನಕ್ಕೇರಿದೆ.

ಸ್ಟಾಕ್ ಹೋಮ್‌ ಇಂಟರ್ ನ್ಯಾಷನಲ್‌ ಪೀಸ್‌ ರಿಸರ್ಚ್‌ ಇನ್ ಸ್ಟಿಟ್ಯೂಟ್‌(ಎಸ್‌ಐಪಿಆರ್‌ಐ) ಸೋಮವಾರ ಪ್ರಕಟಿಸಿರುವ ವರದಿಯಲ್ಲಿ ಈ ಅಂಶ ತಿಳಿದು ಬಂದಿದ್ದು, 2014 ರಿಂದ 18ರಲ್ಲಿ ಶಸ್ತ್ರಾಸ್ತ್ರ ಖರೀದಿಯಲ್ಲಿ ಭಾರತ ವಿಶ್ವದಲ್ಲಿ ಎರಡನೇ ಸ್ಥಾನಕ್ಕೆ ಕುಸಿದಿದೆ. ಜಾಗತಿಕ ಒಟ್ಟು ಶಸ್ತ್ರಾಸ್ತ್ರ ಖರೀದಿಯಲ್ಲಿ ಭಾರತ ಶೇ 9.5ರಷ್ಟು ಪಾಲು ಹೊಂದಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ.

ಇನ್ನು 2009ರಿಂದ 2013 ಮತ್ತು 2014 ರಿಂದ18ರ ನಡುವೆ ಭಾರತದ ಶಸ್ತ್ರಾಸ್ತ್ರ ಆಮದು ಪ್ರಮಾಣ ಶೇ 24ರಷ್ಟು ಇಳಿಕೆಯಾಗಿದೆ. ಈ ವರದಿಯ ಅನ್ವಯ ರಷ್ಯಾದಿಂದ 2001ರಲ್ಲಿ ಯುದ್ಧ ವಿಮಾನಗಳಿಗೆ ಹಾಗೂ 2008ರಲ್ಲಿ ಫ್ರಾನ್ಸ್‌ ನಿಂದ ಸಬ್‌ ಮರೀನ್‌ಗಳ ಖರೀದಿಗೆ ಇಡಲಾದ ಬೇಡಿಕೆ ಪೂರೈಕೆಯಾಗುವಲ್ಲಿ ನಿಧಾನವಾಗಿರುವ ಕಾರಣದಿಂದಲೂ ಆಮದು ಪ್ರಮಾಣ ಕಡಿತಗೊಂಡಿದೆ ಎಂದು ಹೇಳಲಾಗಿದೆ. ಅಂತೆಯೇ ಮೇಕ್ ಇನ್ ಇಂಡಿಯಾ ಎಫೆಕ್ಟ್ ಮತ್ತು ಸ್ವದೇಶಿ ನಿರ್ಮಿತ ಶಸ್ತ್ರಾಸ್ತ್ರಗಳ ಬಳಕೆಗೆ ಮುಂದಾಗಿರುವ ಭಾರತ ಸರ್ಕಾರದ ನಡೆ ಕೂಡ ಈ ಪ್ರಮಾಣದಲ್ಲಿ ಅಲ್ಪ ಪ್ರಮಾಣದ ಪ್ರಭಾವ ಬೀರಿದೆ ಎನ್ನಲಾಗಿದೆ.

2009–13ರಲ್ಲಿ ರಷ್ಯಾದಿಂದ ಭಾರತ ಶೇ 76ರಷ್ಟು ಶಸ್ತ್ರಾಸ್ತ್ರ ಆಮದು ಮಾಡಿಕೊಂಡಿದ್ದರೆ, 2014–18ರಲ್ಲಿ ಶೇ 58ರಷ್ಟು ಆಮದು ಮಾಡಿಕೊಂಡಿತ್ತು. 2014–18ರಲ್ಲಿ ಇಸ್ರೇಲ್‌, ಅಮೆರಿಕ ಹಾಗೂ ಫ್ರಾನ್ಸ್‌ ನಿಂದ ಭಾರತಕ್ಕೆ ಶಸ್ತ್ರಾಸ್ತ್ರ ರಫ್ತು ಪ್ರಮಾಣ ಹೆಚ್ಚಿದೆ. ಇತ್ತೀಚೆಗೆ ಭಾರತ ರಷ್ಯಾದೊಂದಿಗೆ ಬೃಹತ್‌ ಪ್ರಮಾಣದ ಶಸ್ತ್ರಾಸ್ತ್ರ ಖರೀದಿಗೆ ಒಪ್ಪಂದ ಮಾಡಿಕೊಂಡಿದ್ದು, ಮುಂದಿನ ಐದು ವರ್ಷಗಳಲ್ಲಿ ಆಮದು ಪ್ರಮಾಣ ಏರಿಕೆಯಾಗಲಿದೆ. ಎಸ್‌–400 ಕ್ಷಿಪಣಿ(ವಾಯು ರಕ್ಷಣಾ ವ್ಯವಸ್ಥೆ), ನಾಲ್ಕು ಯುದ್ಧ ನೌಕೆಗಳು, ಎಕೆ–203 ರೈಫಲ್‌ ಗಳು, ಗುತ್ತಿಗೆ ಆಧಾರದಲ್ಲಿ ಪರಮಾಣು ಆಕ್ರಮಣಕಾರಿ ಸಬ್‌ ಮರೀನ್‌, ಕಮೋವ್‌–226ಟಿ ಹೆಲಿಕಾಪ್ಟರ್‌ ಗಳು, ಎಂಐ–17 ಹೆಲಿಕಾಪ್ಟರ್‌ ಗಳು ಹಾಗೂ ವಾಯು ರಕ್ಷಣಾ ವ್ಯವಸ್ಥೆಗಳಿಗಾಗಿ ಭಾರತ ಈಗಾಗಲೇ ಒಪ್ಪಂದ ಮಾಡಿಕೊಂಡಿದೆ.

ಅಂತೆಯೇ ಭಾರತ ಮತ್ತು ಪಾಕಿಸ್ತಾನ ಉಭಯ ರಾಷ್ಟ್ರಗಳ ಆಮದು ಖರೀದಿ ಪ್ರಮಾಣ 2014–18ರಲ್ಲಿ ಕಡಿಮೆಯಾಗಿದೆ. ಜಾಗತಿಕ ಖರೀದಿ ಪ್ರಮಾಣದಲ್ಲಿ ಶೇ 2.7ರಷ್ಟು ಪಾಲು ಹೊಂದಿರುವ ಪಾಕಿಸ್ತಾನ, ಆಮದು ಪ್ರಮಾಣದಲ್ಲಿ ವಿಶ್ವದಲ್ಲಿ 11ನೇ ಸ್ಥಾನದಲ್ಲಿದೆ. ಚೀನಾದಿಂದ ಅತಿ ಹೆಚ್ಚುಅಂದರೆ ಶೇ 70ರಷ್ಟು ಶಸ್ತ್ರಾಸ್ತ್ರಗಳನ್ನು ಪಾಕಿಸ್ತಾನ ಆಮದು ಮಾಡಿಕೊಳ್ಳುತ್ತಿದೆ. ಇದರೊಂದಿಗೆ ಅಮೆರಿಕದಿಂದ ಶೇ 8.9 ಹಾಗೂ ರಷ್ಯಾದಿಂದ ಶೇ 6ರಷ್ಟು ಶಸ್ತ್ರಾಸ್ತ್ರ ಆಮದು ಮಾಡಿಕೊಳ್ಳುತ್ತದೆ.

2014–18ರಲ್ಲಿ ಅತಿ ಹೆಚ್ಚು ಶಸ್ತ್ರಾಸ್ತ್ರ ರಫ್ತು ಮಾಡಿರುವ ರಾಷ್ಟ್ರಗಳ ಪಟ್ಟಿಯಲ್ಲಿ ಅಮೆರಿಕ, ರಷ್ಯಾ, ಫ್ರಾನ್ಸ್‌, ಜರ್ಮನಿ ಹಾಗೂ ಚೀನಾ ಅಗ್ರಗಣ್ಯ ರಾಷ್ಟ್ರಗಳವಾಗಿವೆ. ಅಂತೆಯೇ ಜಾಗತಿಕವಾಗಿ ಒಟ್ಟು ರಫ್ತು ಪ್ರಮಾಣದಲ್ಲಿ ಈ ಐದು ರಾಷ್ಟ್ರಗಳು ಒಟ್ಟು ಶೇ 75ರಷ್ಟು ವಹಿವಾಟು ನಡೆಸಿವೆ. ಮಧ್ಯ ಪ್ರಾಚ್ಯ ರಾಷ್ಟ್ರಗಳಿಗೆ ಶಸ್ತ್ರಾಸ್ತ್ರ ರಫ್ತು ಪ್ರಮಾಣ ಏರಿಕೆಯಾಗಿದ್ದು, ಉಳಿದ ಭಾಗಗಳಲ್ಲಿ ಇಳಿಕೆಯಾಗಿದೆ ಎಂದು ವರದಿ ಹೇಳಿದೆ.

ಇನ್ನು ಪಟ್ಟಿಯಲ್ಲಿ ಸೌದಿ ಅರೇಬಿಯಾ ಅತಿ ಹೆಚ್ಚು ಶಸ್ತ್ರಾಸ್ತ್ರ ಆಮದು ಮಾಡಿಕೊಳ್ಳುವ ರಾಷ್ಟ್ರವಾಗಿದ್ದು, ಒಟ್ಟು ಶಸ್ತ್ರಾಸ್ತ್ರ ರಫ್ತಿನಲ್ಲಿ ಚೀನಾ ಶೇ 2.7ರಷ್ಟು ವಹಿವಾಟು ನಡೆಸುವ ಮೂಲಕ ಪ್ರಮುಖ ಶಸ್ತ್ರಾಸ್ತ್ರ ರಫ್ತುದಾರ ರಾಷ್ಟ್ರವಾಗಿ ಹೊರಹೊಮ್ಮಿದೆ. ಪಾಕಿಸ್ತಾನ ಹಾಗೂ ಬಾಂಗ್ಲಾದೇಶ ಚೀನಾದ ಪ್ರಮುಖ ಗ್ರಾಹಕ ರಾಷ್ಟ್ರಗಳಾಗಿವೆ.

ಶಸ್ತ್ರಾಸ್ತ್ರ ಆಮದು ಪ್ರಮಾಣ (2014–18) ಪಟ್ಟಿಯಲ್ಲಿ ಶೇ.12 ಆಮದು ಪ್ರಮಾಣ ಹೊಂದಿರುವ ಸೌದಿ ಅರೇಬಿಯಾ ಅಗ್ರ ಸ್ಥಾನದಲ್ಲಿದ್ದು, ಶೇ 9.5ರಷ್ಟು ಆಮದು ಪ್ರಮಾಣ ಹೊಂದಿರುವ ಭಾರತ 2ನೇ ಸ್ಥಾನದಲ್ಲಿದೆ, ಉಳಿದಂತೆ ಈಜಿಪ್ಟ್‌, (ಶೇ 5.1), ಆಸ್ಟ್ರೇಲಿಯಾ(ಶೇ 4.6), ಅಲ್ಜಿರಿಯಾ (ಶೇ 4.4), ಚೀನಾ (ಶೇ 4.2), ಯು.ಎ.ಇ (ಶೇ 3.7), ಇರಾಕ್‌ (ಶೇ 3.7), ದಕ್ಷಿಣ ಕೊರಿಯಾ (ಶೇ 3.1) ಮತ್ತು ವಿಯೆಟ್ನಾಂ (ಶೇ 2.9) ರಾಷ್ಟ್ರಗಳು ನಂತರದ ಸ್ಥಾನದಲ್ಲಿವೆ.

Comments are closed.